ಕನ್ನಡ ಸುದ್ದಿ  /  Nation And-world  /  Apple Complaints Iphone Users Complain Of Poor Battery Life After Ios 16.5 Update Tech News In Kannada Pcp

Iphone complaint: 16.5 ಅಪ್ಡೇಟ್‌ ಬಳಿಕ ಐಫೋನ್‌ ಬಳಕೆದಾರರಿಗೆ ಹೊಸ ತಲೆನೋವು, ಆಪಲ್‌ ಫೋರಮ್‌ಗಳಲ್ಲಿ ಹೆಚ್ಚಾಗಿದೆ ಗ್ರಾಹಕರ ದೂರು

Apple Iphone iOS 16.5 update: ನೀವು ಆಪಲ್‌ ಐಫೋನ್‌ ಹೊಂದಿರುವಿರಾ? ಇತ್ತೀಚಿನ ಐಒಎಸ್‌ 16.5 ಅಪ್ಡೇಟ್‌ ಮಾಡಿರುವಿರಾ? ಈ ರೀತಿ ಆಪರೇಟಿಂಗ್‌ ಸಿಸ್ಟಮ್‌ ಅಪ್‌ಡೇಟ್‌ ಮಾಡಿದ ಬಳಿಕ ಬ್ಯಾಟರಿ ಬಾಳ್ವಿಕೆಯ ತೊಂದರೆ ಕಾಣಿಸಿಕೊಂಡಿದೆಯಾ? ಹಾಗಾದರೆ, ಈ ಪ್ರಾಬ್ಲಂ ನಿಮ್ಮದು ಮಾತ್ರವಲ್ಲ. ಬಹುತೇಕರಿಗೆ ಈ ಸಮಸ್ಯೆ ಉಂಟಾಗಿದೆ.

16.5 ಅಪ್ಡೇಟ್‌
16.5 ಅಪ್ಡೇಟ್‌ (Unsplash)

ಕೆಲವು ದಿನಗಳ ಕಾಲ ಆಪಲ್‌ ಕಂಪನಿಯು iOS 16.5 ಅಪ್‌ಡೇಟ್‌ನ ಬೀಟಾ ಟೆಸ್ಟಿಂಗ್‌ ಮಾಡಿ ಬಳಿಕ ಅದನ್ನು ಬಿಡುಗಡೆ ಮಾಡಿದೆ. ಈಗ ಬಹುತೇಕ ಐಫೋನ್‌ ಬಳಕೆದಾರರು ಈ ಅಪ್‌ಡೇಟ್‌ ಅನ್ನು ತಮ್ಮ ಐಫೋನ್‌ಗಳಲ್ಲಿ ಸ್ಥಾಪಿಸಿದ್ದಾರೆ. ಈ ಅಪ್ಡೇಟ್‌ನಲ್ಲಿ ಐಫೋನ್‌ನ ಹಲವು ಭದ್ರತಾ ತೊಂದರೆಗಳು ಮತ್ತು ಬಗ್‌ ತೊಂದರೆಗಳನ್ನು ಸರಿಪಡಿಸಲಾಗಿದೆ ಎಂದು ಆಪಲ್‌ ಕಂಪನಿ ತಿಳಿಸಿದೆ. ಆದರೆ, ಈ ಅಪ್ಡೇಟ್‌ನ ಅನುಕೂಲ ಹಲವಿದ್ದರೂ, ಸಾಕಷ್ಟು ಮಂದಿಗೆ ತಲೆನೋವು ಉಂಟಾಗಿದೆ. ವಿಶೇಷವಾಗಿ, ಐಫೋನ್‌ನ ಬ್ಯಾಟರಿ ಬಾಳ್ವಿಕೆ ಮೇಲೆ ಈ ಅಪ್ಡೇಟ್‌ ಕೆಟ್ಟ ಪರಿಣಾಮ ಉಂಟು ಮಾಡಿದೆ ಎಂದು ಗ್ರಾಹಕರು ದೂರಿದ್ದಾರೆ. ಗ್ರಾಹಕರ ತಕರಾರು ಅನ್ನು ಕಂಪನಿ ಗಂಭೀರವಾಗಿ ಪರಿಗಣಿಸಿ ಹೊಸ ಅಪ್ಡೇಟ್‌ ಬಿಡುಗಡೆ ಮಾಡುವುದೇ ಕಾದು ನೋಡಬೇಕಿದೆ. ಈಗಾಗಲೇ ಆಪಲ್‌ ಕಂಪನಿಯು iOS 16.6 ಅಪ್‌ಡೇಟ್‌ನ ಬೀಟಾ ಆವೃತ್ತಿಯನ್ನು ಟೆಸ್ಟ್‌ ಮಾಡುತ್ತಿದೆ ಎಂದು ಕೆಲವು ವರದಿಗಳು ತಿಳಿಸಿವೆ.

ಐಒಎಸ್‌ 16.5ನ ತೊಂದರೆಗಳು

ಐಒಎಸ್‌ 16.5ನಲ್ಲಿ ಹಲವು ಹೊಸ ಫೀಚರ್‌ಗಳು ಆಗಮಿಸಿವೆ. ಬಗ್‌ ತೊಂದರೆಗಳು ಕಡಿಮೆಯಾಗಿವೆ. ಇದೇ ಸಮಯದಲ್ಲಿ ಕೆಲವೊಂದು ತೊಂದರೆಗಳೂ ಕಂಡು ಬಂದಿವೆ. ವಿಶೇಷವಾಗಿ ಇದರ ಬ್ಯಾಟರಿ ಬಾಳ್ವಿಕೆ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಆಪಲ್‌ನ ಕಮ್ಯುನಿಟಿ ಫೋರಮ್‌ನಲ್ಲಿ ಹಲವು ಜನರು ಈ ಕುರಿತು ದೂರು ಸಲ್ಲಿಸಿದ್ದಾರೆ. ಈ ಸಮಸ್ಯೆ ಹಳೆಯ ಐಫೋನ್‌ಗಳಲ್ಲಿ ಮಾತ್ರವಲ್ಲ, ಇತ್ತೀಚೆಗೆ ಬಿಡುಗಡೆಯಾದ ಹೊಸ ಐಫೋನ್‌ಗಳಲ್ಲಿಯೂ ಉಂಟಾಗಿದೆ.

"ಐಒಎಸ್‌ 16.5 ನಾಟಕೀಯವಾಗಿ ಬ್ಯಾಟರಿಯನ್ನು ಅತಿಬೇಗ ಖಾಲಿ ಮಾಡುತ್ತದೆ. ನನ್ನ ಐಫೋನ್‌ 14 ಪ್ರೊದಲ್ಲಿ ಕನಿಷ್ಠ ಶೇಕಡ 80 ಚಾರ್ಜ್‌ ಆಗಿರುವುದನ್ನು ಖಾತ್ರಿಪಡಿಸಿಕೊಂಡೇ ರಾತ್ರಿ ಮಲಗುತ್ತೇನೆ. ನಾನು ಇಂದು ಪೂರ್ತಿ ಚಾರ್ಜ್‌ ಮಾಡಿಟ್ಟಿದೆ. ಒಂದು ಗಂಟೆ ಬಳಸಿದ ಬಳಿಕ ನೋಡಿದಾಗ ಬ್ಯಾಟರಿ ಶೇಕಡ 18ರಷ್ಟು ಖಾಲಿಯಾಗಿತ್ತು" ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

ನಮ್ಮ ಅನುಭವ

ಹಿಂದೂಸ್ತಾನ್‌ ಟೈಮ್ಸ್‌ನ ಟೆಕ್‌ ಬರಹಗಾರರೂ ಐಫೋನ್‌ನ ಬ್ಯಾಟರಿ ಸಮಸ್ಯೆಯ ಕುರಿತು ಪರಿಶೀಲಿಸಿದ್ದಾರೆ. ಎಚ್‌ಟಿ ಟೆಕ್‌ನ ಪರಿಶೀಲನೆಯಲ್ಲಿ ಬ್ಯಾಟರಿ ಪ್ರಾಬ್ಲಂ ತೊಂದರೆ ಇರುವುದು ಖಚಿತವಾಗಿದೆ. ನಮ್ಮ ಐಫೋನ್‌ 14ರಲ್ಲಿಯೂ ಅಪ್‌ಡೇಟ್‌ ಬಳಿಕ ಬ್ಯಾಟರಿ ಲೈಫ್‌ ಕಡಿಮೆಯಾಗಿದೆ. ಬಿಸಿಲು ಹೆಚ್ಚಿರುವ ನಮ್ಮ ಪ್ರದೇಶದಲ್ಲಿ ಫೋನ್‌ ಕೂಡ ಹೆಚ್ಚು ಹೀಟ್‌ ಆಗುತ್ತಿದೆ. ಇದು ಕೂಡ ಬ್ಯಾಟರಿ ಬಾಳ್ವಿಕೆ ಮೇಲೆ ತೊಂದರೆ ನೀಡುತ್ತಿದೆ. ಕೆಲವೊಂದು ಸಂದರ್ಭದಲ್ಲಿ ಬ್ಯಾಟರಿ ಚಾರ್ಜ್‌ ಆಗೋದು ಸಡನ್‌ ಆಗಿ ಸ್ಥಗಿತವಾಗುವಂತಹ ಮತ್ತು ಆ ಸಮಯದಲ್ಲಿ "ಚಾರ್ಜಿಂಗ್‌ ಆನ್‌ ಹೋಲ್ಡ್‌, ಚಾರ್ಜಿಂಗ್‌ ವಿಲ್‌ ರೆಸ್ಯೂಂ ಆಫ್ಟರ್‌ ಐಫೋನ್‌ ರಿಟರ್ನ್‌ ಟು ನಾರ್ಮಲ್‌ ಟೆಂಪರೇಚರ್‌" ಎಂಬ ನೋಟಿಫಿಕೇಷನ್‌ ಬರುತ್ತಿದೆ. ತುರ್ತಾಗಿ ಆಪಲ್‌ ಕಂಪನಿಯು ಈ ತೊಂದರೆಯನ್ನು ಸರಿಪಡಿಸಬೇಕಿದೆ.

ಐಒಎಸ್‌ 17 ಅಪ್‌ಡೇಟ್‌

ಈಗಾಗಲೇ ಆಪಲ್‌ ಕಂಪನಿಯು ಐಒಎಸ್‌ 17 ಅಪ್‌ಡೇಟ್‌ಗೆ ಸಂಬಂಧಪಟ್ಟಂತೆ ಕಾರ್ಯನಿರತವಾಗಿದೆ. ಇದರ ಕುರಿತು ಜೂನ್‌ನಲ್ಲಿ ಆರಂಭವಾಗುವ Apple WWDC 2023ನಲ್ಲಿ ಆಪಲ್‌ ಪ್ರಕಟಿಸಲಿದೆ. ಆಪಲ್‌ನ ಮುಂದಿನ ಅಪ್‌ಡೇಟ್‌ನಲ್ಲಿ ಅತ್ಯುತ್ತಮ ಫೀಚರ್‌ಗಳು ಗ್ರಾಹಕರಿಗೆ ದೊರಕಲಿದೆ ಎಂದು ಆಪಲ್‌ ವಿಶ್ಲೇಷಕ ಮಾರ್ಕ್‌ ಗುರ್ಮನ್‌ ಹೇಳಿದ್ದಾರೆ.

IPL_Entry_Point