ಮಹಾರಾಷ್ಟ್ರ ಚುನಾವಣೆ; ನಾಗಪುರ ನೈಋತ್ಯದಿಂದ ಡಿಸಿಎಂ ದೇವೇಂದ್ರ ಫಡ್ನವಿಸ್ ಸ್ಪರ್ಧೆ, ಮೈತ್ರಿ ನಿರ್ಲಕ್ಷಿಸಿ ಮೊದಲ ಪಟ್ಟಿ ಬಿಡುಗಡೆ ಆಯಿತಾ?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಹಾರಾಷ್ಟ್ರ ಚುನಾವಣೆ; ನಾಗಪುರ ನೈಋತ್ಯದಿಂದ ಡಿಸಿಎಂ ದೇವೇಂದ್ರ ಫಡ್ನವಿಸ್ ಸ್ಪರ್ಧೆ, ಮೈತ್ರಿ ನಿರ್ಲಕ್ಷಿಸಿ ಮೊದಲ ಪಟ್ಟಿ ಬಿಡುಗಡೆ ಆಯಿತಾ?

ಮಹಾರಾಷ್ಟ್ರ ಚುನಾವಣೆ; ನಾಗಪುರ ನೈಋತ್ಯದಿಂದ ಡಿಸಿಎಂ ದೇವೇಂದ್ರ ಫಡ್ನವಿಸ್ ಸ್ಪರ್ಧೆ, ಮೈತ್ರಿ ನಿರ್ಲಕ್ಷಿಸಿ ಮೊದಲ ಪಟ್ಟಿ ಬಿಡುಗಡೆ ಆಯಿತಾ?

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು 99 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, 10 ಸಚಿವರು, 71 ಹಾಲಿ ಶಾಸಕರ ಸ್ಥಾನ ಗಟ್ಟಿಯಾಗಿರುವುದನ್ನು ದೃಢಪಡಿಸಿದೆ. ಈ ನಡುವೆ, ಮಹಾಯುಟಿ ಮೈತ್ರಿಯ ಸೀಟು ಹಂಚಿಕೆ ಅಂತಿಮಗೊಳ್ಳದೇ ಬಿಜೆಪಿ ಟಿಕೆಟ್ ಘೋಷಣೆ ಮಾಡಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮುಖ್ಯಸ್ಥ ರಾಮದಾಸ್ ಅಠವಳೆ ಜೊತೆ ಮಾತುಕತೆ ನಡೆಸಿದರು.
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮುಖ್ಯಸ್ಥ ರಾಮದಾಸ್ ಅಠವಳೆ ಜೊತೆ ಮಾತುಕತೆ ನಡೆಸಿದರು. (PTI)

ಮುಂಬಯಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಕಣ ರಂಗೇರತೊಡಗಿದ್ದು, ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೆಸರು ಕೂಡ ಇದ್ದು ಅವರು ನಾಗಪುರ ನೈಋತ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 99 ಅಭ್ಯರ್ಥಿಗಳ ಪಟ್ಟಿಯಲ್ಲಿ 10 ಸಚಿವರೂ ಇದ್ದಾರೆ. ಬಿಜೆಪಿಯ ಮೊದಲ ಪಟ್ಟಿಯಲ್ಲಿ 71 ಹಾಲಿ ಶಾಸಕರು, 10 ಸಚಿವರು ಕೂಡ ಇದ್ದಾರೆ. ಬಿಜೆಪಿ ರಾಜ್ಯ ಅಧ್ಯಕ್ಷ ಚಂದ್ರಶೇಖರ ಬವಾನ್‌ಕುಲೆ ಅವರಿಗೂ ಈ ಬಾರಿ ಟಿಕೆಟ್ ಸಿಕ್ಕಿದೆ. 2019ರ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಇದೇ ವೇಳೆ, "ಪಕ್ಷದ ನಾಯಕತ್ವ ಮತ್ತು ನನ್ನ ಕ್ಷೇತ್ರದ ನಾಗರಿಕರು ಮತ್ತು ಮಹಾರಾಷ್ಟ್ರದ ಜನರು ತೋರಿದ ನಂಬಿಕೆಯನ್ನು ಉಳಿಸಿಕೊಳ್ಳಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ" ಎಂದು ಫಡ್ನವಿಸ್ ಹೇಳಿದರು.

ಮಹಾಯುಟಿ ಮೈತ್ರಿ ಸೀಟು ಹಂಚಿಕೆಗೂ ಮೊದಲೇ ಬಿಜೆಪಿ ಪಟ್ಟಿ ಪ್ರಕಟ

ಬಿಜೆಪಿ, ಏಕನಾಥ ಶಿಂಧೆ ಅವರ ಶಿವಸೇನಾ, ಅಜಿತ್ ಪವಾರ್ ಅವರ ಎನ್‌ಸಿಪಿ ಜೊತೆಗಿರುವ ಮಹಾಯುಟಿ ಮೈತ್ರಿ ಒಟ್ಟಾಗಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತಿವೆ. ಸೀಟು ಹಂಚಿಕೆ ಅಂತಿಮವಾಗುವ ಮೊದಲೇ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿಯ ನಡೆ ಕುತೂಹಲ ಕೆರಳಿಸಿದ್ದು, ಮಹಾಯುಟಿ ಮೈತ್ರಿಯಲ್ಲಿ ಬಿರುಕು ಮೂಡಿದೆಯೇ ಎಂಬ ಸಂದೇಹಕ್ಕೂ ಕಾರಣವಾಗಿದೆ.

ಬಿಜೆಪಿಯ ಮೊದಲ ಪಟ್ಟಿಯಲ್ಲಿರುವ ಪ್ರಕಾರ ಫಡ್ನವಿಸ್‌ ಹೊರತಾಗಿ, ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಶಿರಡಿಯಿಂದ, ಬುಡಕಟ್ಟು ಅಭಿವೃದ್ಧಿ ಸಚಿವ ವಿಜಯಕುಮಾರ್ ಗವಿಟ್ ಅವರು ನಂದೂರ್‌ಬರ್‌ನಿಂದ, ಅರಣ್ಯ ಸಚಿವ ಸುಧೀರ್‌ ಮುನ್‌ಗನಟಿಂವಾರ್‌ ಬಲ್ಲಾರ್‌ಪುರದಿಂದ, ಪ್ರವಾಸೋದ್ಯಮದ ಸಚಿವ ಗಿರೀಶ್‌ ಮಹಾಜನ್ ಜಾಮ್ನರ್‌ನಿಂದ, ಉನ್ನತ ಶಿಕ್ಷಣ ಸಚಿವ ಚಂದ್ರಕಾಂತ್ ಪಾಟೀಲ್ ಕೊತ್ರೂಡ್‌ನಿಂದ ಕೌಶಲ ಅಭಿವೃದ್ಧಿ ಸಚಿವ ಮಂಗಲ್ ಪ್ರಭಾತ್ ಲೋಧಾ ಮಲಬಾರ್ ಹಿಲ್‌ನಿಂದ, ಲೋಕೋಪಯೋಗಿ ಸಚಿವ ರವೀಂದ್ರ ಚೌಹಾಣ್‌ ದೊಂಬಿವಿಲಿಯಿಂದ, ವಸತಿ ಸಚಿವ ಅತುಲ್ ಸವೆ ಔರಂಗಾಬಾದ್ ಪೂರ್ವ ಮತ್ತು ಸಚಿವ ಸುರೇಶ್ ಖಡೆ ಮಿರಾಜ್‌ನಿಂದ ಸ್ಪರ್ಧಿಸುತ್ತಿದ್ದಾರೆ.

ಸ್ವಜನ ಪಕ್ಷಪಾತ ಇಲ್ಲ; ಅರ್ಹತೆ ಆಧರಿಸಿ ಟಿಕೆಟ್‌

ಸ್ವಜನಪಕ್ಷಪಾತದ ವಿಷಯದ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಬಿಜೆಪಿ ವಕ್ತಾರ ಮತ್ತು ಶಾಸಕ ಅತುಲ್ ಭಟ್ಕಳಕರ್, “ಕೆಲವು ಅಭ್ಯರ್ಥಿಗಳು ಹಾಲಿ ಶಾಸಕರು ಅಥವಾ ಪಕ್ಷದ ನಾಯಕರ ಕುಟುಂಬಕ್ಕೆ ಸೇರಿದವರಾಗಿದ್ದರೂ, ಅವರು ರಾಜಕೀಯ ಕುಟುಂಬಗಳಿಗೆ ಸೇರಿದವರು ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಲಾಗಿಲ್ಲ. ಕಳೆದ ಹಲವು ವರ್ಷಗಳಿಂದ ಸಕ್ರಿಯವಾಗಿ ಪಕ್ಷಕ್ಕಾಗಿ ದುಡಿದು ಅರ್ಹತೆ ಸಾಬೀತು ಪಡಿಸಿದ ಕಾರಣ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿಯಲ್ಲಿ ‘ಪರಿವಾರವಾದ’ (ಸ್ವಜನಪಕ್ಷಪಾತ) ಪ್ರಶ್ನೆಯೇ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.

ಮುಂಬಯಿಯಲ್ಲಿರುವ ಬಹುತೇಕ ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡಿದೆ. ಆಶಿಶ್ ಶೆಲಾರ್ (ಬಾಂದ್ರಾ ವೆಸ್ಟ್), ರಾಹುಲ್ ನಾರ್ವೇಕರ್ (ಕೊಲಾಬಾ), ಕಾಳಿದಾಸ್ ಕೊಲಂಬ್ಕರ್ (ವಡಾಲಾ), ಕ್ಯಾಪ್ಟನ್ ಆರ್ ತಮಿಳ್ ಸೆಲ್ವನ್ (ಸಿಯಾನ್-ಕೋಲಿವಾಡ), ರಾಮ್ ಕದಮ್ (ಘಾಟ್ಕೋಪರ್ ವೆಸ್ಟ್), ಪರಾಗ್ ಅಲ್ವಾನಿ (ವಿಲೆ ಪಾರ್ಲೆ), ವಿದ್ಯಾ ಠಾಕೂರ್ (ಗೋರೆಗಾಂವ್), ಯೋಗೇಶ್ ಸಾಗರ್ (ಚಾರ್ಕೋಪ್), ಅತುಲ್ ಭಟ್ಖಾಲ್ಕರ್ (ಕಾಂದಿವಲಿ ಪೂರ್ವ), ಮಿಹಿರ್ ಕೊಟೆಚಾ (ಮುಲುಂಡ್), ಮನೀಶಾ ಚೌಧರಿ (ದಹಿಸರ್) ಮತ್ತು ಅಮೀತ್ ಸತಮ್ (ಅಂಧೇರಿ ಪಶ್ಚಿಮ) ಮತ್ತೆ ಸ್ಪರ್ಧಿಸಲಿದ್ದಾರೆ.

ಆದರೆ, ಮೊದಲ ಪಟ್ಟಿಯಲ್ಲಿ ಮುಂಬೈನ ಸುನಿಲ್ ರಾಣೆ (ಬೊರಿವಲಿ), ಪರಾಗ್ ಶಾ (ಘಾಟ್ಕೋಪರ್ ಪೂರ್ವ), ಭಾರತಿ ಲವೇಕರ್ (ವರ್ಸೋವಾ) ಸೇರಿ ಕೆಲವು ಶಾಸಕರ ಹೆಸರು ಪ್ರಕಟವಾಗಿಲ್ಲ. 2019 ರ ವಿಧಾನಸಭಾ ಚುನಾವಣೆಯಲ್ಲಿ ಚುನಾಯಿತರಾದ ಒಟ್ಟು ಬಿಜೆಪಿ ಶಾಸಕರ ಸಂಖ್ಯೆ 105, ಆದರೆ ಇಬ್ಬರು ಶಾಸಕರು-ರಾಜೇಂದ್ರ ಪಟ್ನಿ (ಕಾರಂಜಾ) ಮತ್ತು ಗೋವರ್ಧನ್ ಶರ್ಮಾ (ಅಕೋಲಾ ವೆಸ್ಟ್) - ಲೋಕಸಭೆ ಚುನಾವಣೆಯ ಮೊದಲು ನಿಧನರಾದರು. ಇದರೊಂದಿಗೆ ಒಟ್ಟು ಸಂಖ್ಯೆ 103ಕ್ಕೆ ಇಳಿಯಿತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.