Sun Plasma: ಸೂರ್ಯನ ಮೇಲೆ ಒಂದು ಲಕ್ಷ ಕಿ.ಮೀ ಎತ್ತರದ 'ಪ್ಲಾಸ್ಮಾ ಗೋಡೆ': 8 ಭೂಮಿ ಜೋಡಿಸುವಷ್ಟು ಪ್ರದೇಶವೆಲ್ಲಾ ಅಯೋಮಯ!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sun Plasma: ಸೂರ್ಯನ ಮೇಲೆ ಒಂದು ಲಕ್ಷ ಕಿ.ಮೀ ಎತ್ತರದ 'ಪ್ಲಾಸ್ಮಾ ಗೋಡೆ': 8 ಭೂಮಿ ಜೋಡಿಸುವಷ್ಟು ಪ್ರದೇಶವೆಲ್ಲಾ ಅಯೋಮಯ!

Sun Plasma: ಸೂರ್ಯನ ಮೇಲೆ ಒಂದು ಲಕ್ಷ ಕಿ.ಮೀ ಎತ್ತರದ 'ಪ್ಲಾಸ್ಮಾ ಗೋಡೆ': 8 ಭೂಮಿ ಜೋಡಿಸುವಷ್ಟು ಪ್ರದೇಶವೆಲ್ಲಾ ಅಯೋಮಯ!

ಅರ್ಜೆಂಟೈನಾದ ಖಗೋಳ ಛಾಯಾಗ್ರಾಹಕ ಎಡ್ವರ್ಡೊ ಸ್ಕಾಬರ್ಗರ್ ಪೌಪಿ ಅವರು, ಸೂರ್ಯನ ಮೇಲ್ಮೈಯಲ್ಲಿ ಪ್ಲಾಸ್ಮಾದ ಗೋಡೆಯಂತೆ ಕಾಣುವ ರಚನೆಯನ್ನು ಸೆರೆಹಿಡಿದಿದ್ದಾರೆ. ಪ್ಲಾಸ್ಮಾ ಗೋಡೆಯು ಸೌರ ಮೇಲ್ಮೈಯಿಂದ ಸುಮಾರು 100,000 ಕಿ.ಮೀ. (62,000 ಮೈಲುಗಳು) ಎತ್ತರಕ್ಕೆ ಚಿಮ್ಮಿದೆ ಎಂದು ಪೌಪಿ ಹೇಳಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ..

ಪ್ಲಾಸ್ಮಾ ಗೋಡೆ
ಪ್ಲಾಸ್ಮಾ ಗೋಡೆ (Verified Instagram)

ನಮ್ಮ ಸೌರಮಂಡಲದ ಅಧಿಪತಿ ಸೂರ್ಯ ಅಗಾಧ ಶಕ್ತಿ ಹೊಂದಿರುವ ಸುಡುವ ಬೆಂಕಿ ಚೆಂಡು. ಭಾಸ್ಕರನ ಆಂತರ್ಯದಲ್ಲಿ ನಡೆಯುವ ಬೆಳವಣಿಗೆಗಳು, ಸಕಲ ಜೀವರಾಶಿಗಳ ಆವಾಸ ಸ್ಥಾನವಾಗಿರುವ ಭೂಮಿಯ ಮೇಲೂ ನೇರ ಪರಿಣಾಮ ಬೀರಬಲ್ಲದು. ಅದರಲ್ಲೂ ಸೌರ ಮಾರುತಗಳು ಭೂಮಿಯ ಮೇಲಿನ ಸಂವಹನ ವ್ಯವಸ್ಥೆಯನ್ನೇ ಬುಡಮೇಲು ಮಾಡಬಲ್ಲ ಸಾಮರ್ಥ್ಯ ಹೊಂದಿವೆ.

ಅದೇ ರೀತಿ ಸೂರ್ಯನ ಮೇಲ್ಮೈ ಮೇಲೆ ಆಗುವ ಬದಲಾವಣೆಗಳು ಖಗೋಳಶಾಸ್ತ್ರಜ್ಞರನ್ನು ಸೂಜಿಗದಂತೆ ಸೆಳೆಯುತ್ತವೆ. ಅದರಂತೆ ಅರ್ಜೆಂಟೈನಾದ ಖಗೋಳ ಛಾಯಾಗ್ರಾಹಕ ಎಡ್ವರ್ಡೊ ಸ್ಕಾಬರ್ಗರ್ ಪೌಪಿ ಅವರು, ಸೂರ್ಯನ ಮೇಲ್ಮೈಯಲ್ಲಿ ಪ್ಲಾಸ್ಮಾದ ಗೋಡೆಯಂತೆ ಕಾಣುವ ರಚನೆಯನ್ನು ಸೆರೆಹಿಡಿದಿದ್ದಾರೆ.

ಮಾರ್ಚ್ 9ರಂದು ಎಡ್ವರ್ಡೊ ಸ್ಕಾಬರ್ಗರ್ ಪೌಪಿ ಕ್ಲಿಕ್ಕಿಸಿದ ಸೂರ್ಯನ ಚಿತ್ರಗಳಲ್ಲಿ, ಮೇಲ್ಮೈಯಿಂದ ಅಗಾಧ ಪ್ರಮಾಣದ ಪ್ಲಾಸ್ಮಾ ಚಿಮ್ಮುತ್ತಿರುವುದನ್ನು ನೋಡಬಹುದಾಗಿದೆ. ಈ ಕುರಿತು ಲೈವ್‌ಸೈನ್ಸ್‌ನಲ್ಲಿ ವರದಿ ಪ್ರಕಟವಾಗಿದ್ದು, ಪ್ಲಾಸ್ಮಾದ ಅಗಾಧ ಗೋಡೆಯು ಸೂರ್ಯನ ಮೇಲ್ಮೈಗೆ ವೇಗವಾಗಿ ಬೀಳುತ್ತಿದೆ ಎಂದು ಹೇಳಲಾಗಿದೆ.

ಪೌಪಿಯು ಈ ಗಮನಾರ್ಹವಾದ ಮತ್ತು ಅಪರೂಪದ ಚಿತ್ರವನ್ನು ಸೆರೆಹಿಡಿಯಲು ವಿಶೇಷವಾದ ಕ್ಯಾಮೆರಾ ಉಪಕರಣಗಳನ್ನು ಬಳಸಿದ್ದಾರೆ. "ಪ್ಲಾಸ್ಮಾ ಗೋಡೆಯು ಸೌರ ಮೇಲ್ಮೈಯಿಂದ ಸುಮಾರು 100,000 ಕಿ.ಮೀ. (62,000 ಮೈಲುಗಳು) ಎತ್ತರಕ್ಕೆ ಚಿಮ್ಮಿರುವುದನ್ನು ನಾವು ಈ ಚಿತ್ರದಲ್ಲಿ ಕಾಣಬಹುದಾಗಿದ್ದು, ಇದು ಸುಮಾರು ಎಂಟು ಭೂಮಿಯನ್ನು ಒಂದರ ಮೇಲೊಂದು ಜೋಡಿಸಿರುವಷ್ಟು ಎತ್ತರವಾಗಿದೆ.." ಎಂದು ಪೌಪಿ ಹೇಳಿದ್ದಾರೆ.

"ನನ್ನ ಕಂಪ್ಯೂಟರ್ ಪರದೆಯಲ್ಲಿ, ನೂರಾರು ಪ್ಲಾಸ್ಮಾ ಎಳೆಗಳು ಗೋಡೆಯ ಕೆಳಗೆ ತೊಟ್ಟಿಕ್ಕುತ್ತಿರುವಂತೆ ತೋರುತ್ತಿದೆ.. ಇದು ಸುಮಾರು ಒಂದು ಲಕ್ಷ ಕಿ.ಮೀ.ವರೆಗೂ ವ್ಯಾಪಿಸಿದೆ. ನಾವು ಸೂರ್ಯನ ಅಗಾಧ ಶಕ್ತಿಯನ್ನು ಊಹಿಸುವುದೂ ಕಷ್ಟ.." ಎಂದು ಪೌಪಿ ಅಭಿಪ್ರಾಯಪಟ್ಟಿದ್ದಾರೆ.

ಈ ಅಗಾಧ ಪ್ಲಾಸ್ಮಾ ಗೋಡೆಗಳು ಸೂರ್ಯನ ಮೇಲ್ಮೈ ಮೇಲೆ ಈ ಹಿಂದೆಯೂ ಕಂಡುಬಂದಿವೆ. ಸೂರ್ಯನ ಧ್ರುವಗಳ ಸುತ್ತ ಉಂಗುರದ ಆಕಾರದಲ್ಲಿ ಈ ಪ್ಲಾಸ್ಮಾ ಗೋಡೆಗಳು ಕಂಡುಬರುತ್ತವೆ. ಇವುಗಳನ್ನು "ಪೋಲಾರ್ ಕ್ರೌನ್ ಪ್ರಾಮಿನೆನ್ಸ್ (ಪಿಸಿಪಿ)" ಎಂದು ಕರೆಯಲಾಗುತ್ತದೆ.

ಲೈವ್‌ಸೈನ್ಸ್ ಪ್ರಕಾರ, ಪಿಸಿಪಿಗಳು ಸಾಮಾನ್ಯ ಸೌರ ಮಾರುತಗಳನ್ನು ಹೋಲುತ್ತವೆ, ಅವುಗಳು ಪ್ಲಾಸ್ಮಾ ಅಥವಾ ಅಯಾನೀಕೃತ ಅನಿಲದ ಲೂಪ್‌ಗಳಾಗಿವೆ. ಅವು ಸೌರ ಮೇಲ್ಮೈಯಿಂದ ಕಾಂತೀಯ ಕ್ಷೇತ್ರಗಳಿಂದ ಹೊರಹಾಕಲ್ಪಡುತ್ತವೆ. ಆದಾಗ್ಯೂ, 60 ಮತ್ತು 70 ಡಿಗ್ರಿ ಉತ್ತರ ಮತ್ತು ದಕ್ಷಿಣದ ನಡುವಿನ ಅಕ್ಷಾಂಶಗಳಲ್ಲಿ, ಸೂರ್ಯನ ಕಾಂತೀಯ ಧ್ರುವಗಳ ಬಳಿ ಪಿಸಿಪಿಗಳು ಸಂಭವಿಸುತ್ತವೆ.

ಸೂರ್ಯನ ಧ್ರುವಗಳ ಬಳಿ ಕಾಂತೀಯ ಕ್ಷೇತ್ರಗಳು ಹೆಚ್ಚು ಬಲವಾಗಿರುವುದರಿಂದ, ಈ ಪಿಸಿಪಿ ಹೆಚ್ಚಾಗಿ ಸೂರ್ಯನ ಕಡೆಗೆ ಮತ್ತೆ ಕುಸಿಯುತ್ತವೆ. ನಾಸಾ ಪ್ರಕಾರ ಸೂರ್ಯನ ಮೇಲ್ಮೈಗೆ ಮರಳಿ ಕುಸಿದು ಬೀಳುವ ಈ ಪ್ರಕ್ರಿಯೆಯನ್ನು "ಪ್ಲಾಸ್ಮಾ ಜಲಪಾತಗಳು" ಎಂದು ಕರೆಯಲಾಗುತ್ತದೆ. ಈ ಪ್ಲಾಸ್ಮಾ ಗಂಟೆಗೆ ಸುಮಾರು 22,370 ಮೈಲುಗಳ ಪ್ರಚಂಡ ವೇಗದಲ್ಲಿ ಕೆಳಗೆ ಬೀಳುತ್ತವೆ.

ಒಟ್ಟಿನಲ್ಲಿ ಸೂಋಯನ ಮೇಲ್ಮೈ ಮೇಲೆ ಕಂಡುಬಂದಿರುವ ಈ ಅಗಾಧ ವ್ಯಾಸದ ಪ್ಲಾಸ್ಮಾ ಗೋಡೆ, ಜಾಗತಿಕ ಖಗೋಳಪ್ರಿಯರನ್ನು ಸೆಳೆದಿದ್ದು, ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಸಂಬಂಧಿತ ಸುದ್ದಿ

The Sun: ಕಳಚಿ ಬಿತ್ತು ಸೂರ್ಯನ ಬೃಹತ್‌ ಭಾಗ: ಭಾಸ್ಕರನ ಕೋಪ ಕಂಡು ವಿಜ್ಞಾನಿಗಳ ಎದೆ ನಡುಗಿದಾಗ...!

ಸೂರ್ಯನಲ್ಲಾದ ಹೊಸ ಬೆಳವಣಿಗೆಯೊಂದು ಜಾಗತಿಕ ಖಗೋಳ ವಿಜ್ಞಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ಸೂರ್ಯನ ಒಂದು ದೊಡ್ಡ ಭಾಗವು ಅದರ ಮೇಲ್ಮೈಯಿಂದ ಕಳಚಿ ಬಿದ್ದಿದೆ. ಈ ಭಾಗ ಸೂರ್ಯನ ಉತ್ತರ ಧ್ರುವದ ಸುತ್ತ ಬೃಹತ್ ಸುಂಟರಗಾಳಿ‌ಯನ್ನು ಸೃಷ್ಟಿಸಿದೆ. ಈ ಆಶ್ಚರ್ಯಕರ ವಿದ್ಯಮಾನ ಹೇಗೆ ಸಂಭವಿಸಿತು ಎಂಬುದನ್ನು ವಿಶ್ಲೇಷಿಸಲು ಖಗೋಳ ವಿಜ್ಞಾನಿಗಳು ಈಗ ಪ್ರಯತ್ನಿಸುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.