ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧ; ಸದ್ಯವೇ ಜಾರಿಯಾಗಲಿದೆ ಹೊಸ ಕಾನೂನು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧ; ಸದ್ಯವೇ ಜಾರಿಯಾಗಲಿದೆ ಹೊಸ ಕಾನೂನು

ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧ; ಸದ್ಯವೇ ಜಾರಿಯಾಗಲಿದೆ ಹೊಸ ಕಾನೂನು

ಅತಿಯಾದ ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಆಸ್ಟ್ರೇಲಿಯಾದಲ್ಲಿ ಯುವ ಸಮುದಾಯ ತಮ್ಮ ಬದುಕಿಗೆ ಕಂಟಕ ತಂದುಕೊಳ್ಳುತ್ತಿರುವ ಅಭಿಪ್ರಾಯಗಳ ನಡುವೆ ನಿಷೇಧದ ಹೊಸ ಕಾನೂನು ತರಲು ಆಸ್ಟ್ರೇಲಿಯಾ ಸರ್ಕಾರ ಮುಂದಾಗಿದೆ.

ಆಸ್ಟ್ರೇಲಿಯಾ ದೇಶವು ಅಲ್ಲಿ ಯುವ ಸಮುದಾಯ ಸಾಮಾಜಿಕ ಮಾಧ್ಯಮ ಬಳಸದಂತೆ ಹೊಸ ಕಾನೂನು ಜಾರಿಗೊಳಿಸಲು ಮುಂದಾಗಿದೆ.
ಆಸ್ಟ್ರೇಲಿಯಾ ದೇಶವು ಅಲ್ಲಿ ಯುವ ಸಮುದಾಯ ಸಾಮಾಜಿಕ ಮಾಧ್ಯಮ ಬಳಸದಂತೆ ಹೊಸ ಕಾನೂನು ಜಾರಿಗೊಳಿಸಲು ಮುಂದಾಗಿದೆ.

ಸಿಡ್ನಿ: 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮ ಬಳಕೆ ಮಾಡುವುದನ್ನು ನಿಷೇಧಿಸಲು ಆಸ್ಟ್ರೇಲಿಯಾ ಅಗತ್ಯವಾದ ಕಾನೂನುಗಳನ್ನು ತರಲು ಮುಂದಾಗಿದೆ. ಇದಕ್ಕಾಗಿ ಅಲ್ಲಿನ ಕಾನೂನು ತಜ್ಞರು, ಸಾಮಾಜಿಕ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದವರ ಸಲಹೆಗಳನ್ನು ಆಧರಿಸಿ ಹೊಸ ಕಾನೂನುಗಳನ್ನು ಸದ್ಯದಲ್ಲಿಯೇ ಜಾರಿಗೊಳಿಸುವುದು ಆಸ್ಟೇಲಿಯಾದ ಉದ್ದೇಶ. ಇದು ಜಾರಿಯಾದರೆ ಸಾಮಾಜಿಕ ಮಾಧ್ಯಮಗಳ ಮಿತಿ ಹೇರಿದ ಮೊದಲ ದೇಶವೂ ಆಸ್ಟ್ರೇಲಿಯಾ ಎನ್ನಿಸಲಿದೆ. ಸಾಮಾಜಿಕ ಮಾಧ್ಯಮಗಳ ಮಿತಿ ಮೀರಿದ ಬಳಕೆಯಿಂದ 16 ವರ್ಷದೊಳಗಿನ ಮಕ್ಕಳು ತಮ್ಮ ಖಾಸಗಿ ಬದುಕನ್ನೇ ಕಳೆದುಕೊಳ್ಳುತ್ತಿದ್ದು. ಅತಿಯಾದ ಅವಲಂಬನೆ ಮುಂದೆ ದೇಶದ ಪ್ರಗತಿಗೂ ಮಾರಕವಾಗಬಹುದು ಎನ್ನುವ ಆಂಶ ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ.

ಪ್ರಧಾನಿ ಹೇಳೋದೇನು

ಈ ಕುರಿತು ಮಾತನಾಡಿರುವ ಆಸ್ಟ್ರೇ,ಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ಕುರಿತು ನವೆಂಬರ್ ಅಂತ್ಯದಲ್ಲಿ ಸಂಸತ್ತಿಗೆ ಪರಿಚಯಿಸುವ ಮೊದಲು ಹೊಸ ಕಾನೂನುಗಳನ್ನು ಈ ವಾರ ರಾಜ್ಯ ಮತ್ತು ಪ್ರಾಂತ್ಯದ ನಾಯಕರ ಎದುರು ಪ್ರಸ್ತುತಪಡಿಸಲಾಗುವುದು. ಅವರ ಸಲಹೆ, ಸೂಚನೆ ಆಧರಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆಸ್ಟ್ರೇಲಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆ ಕುರಿತು ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಯುವ ಸಮುದಾಯ ಇದಕ್ಕೆ ಹೆಚ್ಚು ವ್ಯಸನಿಗಳಾಗಿರುವುದು ಕೂಡ ಚರ್ಚೆಯ ವಿಷಯವೇ ಆಗಿದೆ.

ಸಾಮಾಜಿಕ ಮಾಧ್ಯಮಗಳ ಬಳಕೆಗೆ ಮಿತಿ ಹೇರಬೇಕು ಎನ್ನುವ ಸಲಹೆಗಳೂ ಕೇಳಿ ಬಂದಿವೆ. ಅದರಲ್ಲೂ ಯುವ ಸಮುದಾಯ ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯಿಂದ ದೂರ ಸರಿದು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಬೇಕು ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ಆಸ್ಟ್ರೇಲಿಯಾದಲ್ಲಿ ವ್ಯಾಪಕ ಚರ್ಚೆ

ಈಗಾಗಲೇ ಹಲವಾರು ವೇದಿಕೆಗಳಲ್ಲಿ ಈ ವಿಚಾರ ಅಲ್ಲಿ ಚರ್ಚೆಯಲ್ಲಿದೆ. ಸಾಮಾಜಿಕ ಮಾಧ್ಯಮ ವಯಸ್ಸಿನ ಮಿತಿಯನ್ನು ಪರಿಚಯಿಸುವ ಹಿಂದಿನ ಪ್ರಸ್ತಾಪಗಳು ಆಸ್ಟ್ರೇಲಿಯಾದಲ್ಲಿ ವಿಶಾಲವಾದ ಉಭಯಪಕ್ಷೀಯ ಬೆಂಬಲವನ್ನು ಪಡೆದಿವೆ. ಹೆಚ್ಚಿನ ಜನರು ಇಂತಹ ಕಾಯಿದೆಗಳು ಬೇಕಾಗಿವೆ. ಈಗಲೇ ಎಚ್ಚರ ವಹಿಸಿದರೆ ಯುವ ಸಮುದಾಯವನ್ನು ಈ ಪಿಡುಗಿನಿಂದ ತಡೆಯಬಹುದು ಎಂದು ಹೇಳುತ್ತಿದ್ದಾರೆ. ಇದೇ ಕಾರಣದಿಂದ ಆಸ್ಟ್ರೇಲಿಯಾ ಸರ್ಕಾರವೂ ಬೇಗನೇ ಕಾಯಿದೆ ಜಾರಿಗೊಳಿಸಲು ಉತ್ಸುಕವಾಗಿದೆ.

ನಿಷೇಧ ಏಕೆ, ಹೇಗೆ

ಸಾಮಾಜಿಕ ಮಾಧ್ಯಮಗಳಿಗೆ ದಾಸರಾಗಿ ಹಲವಾರು ಮಕ್ಕಳು ಅನಾರೋಗ್ಯಕ್ಕೂ ಒಳಗಾಗಿದೆ. ಪೋಷಕರು ಕೂಡ ಇದರಿಂದ ಮಕ್ಕಳನ್ನು ಹೇಗೆ ಪಾರುಮಾಡಬೇಕು ಎನ್ನುವ ಚಿಂತನೆಯಲ್ಲಿದ್ದಾರೆ. ಐಟಿ ದಿಗ್ಗಜರಿಗೆ ಇದ್ಯಾವುದು ಬೇಕಾಗಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗುತ್ತದೆ.

ಮಕ್ಕಳನ್ನು ಈ ಜಾಲದಿಂದ ಪಾರು ಮಾಡುವುದು, ಪೋಷರಿಗೆ ಎದುರಾಗಿರುವ ಆತಂಕವನ್ನು ಪಾರು ಮಾಡುವುದು. ಭವಿಷ್ಯದ ಪೀಳಿಗೆಯನ್ನು ಈಗಿನಿಂದಲೇ ಸಶಕ್ತ ಚಟುವಟಿಕೆಯಲ್ಲಿ ತೊಡಗಿಸುವುದು ನಮ್ಮ ಉದ್ದೇಶ. ಹೊಸ ಕಾಯಿದೆಗಳಲ್ಲಿ ಸಾಕಷ್ಟು ಅಂಶಗಳು ಇರಲಿವೆ ಎನ್ನುವುದು ಪ್ರಧಾನಿ ಆಂಥೋನಿ ಅಲ್ಬನೀಸ್ ನೀಡಿದ ವಿವರಣೆ.

ಮಾದರಿ ಕಾನೂನಿನ ನಿರೀಕ್ಷೆ

ಬಳಕೆ ಮಾಡುವವರು, ಇದಕ್ಕೆ ಪ್ರೋತ್ಸಾಹ ನೀಡುವವರಿಗೆ ಮೊದಲ ಹಂತದಲ್ಲಿ ಜಾಗೃತಿ ಮೂಡಿಸಬೇಕು. ಇಂತಿಷ್ಟು ಸಮಯ ನಿಗದಿ ಮಾಡಿ ಆನಂತರ ಸಂಪೂರ್ಣವಾಗಿ ಬಳಕೆ ತಪ್ಪಿಸಬೇಕು. ಇದರ ನಂತರವೂ ಬಳಕೆ ಮಾಡಿದರೆ ದಂಡ ವಿಧಿಸುವುದು ಅಥವಾ ಇತರೆ ಕ್ರಮ ಕೈಗೊಳ್ಳುವ ಕುರಿತು ಯೋಚಿಸಲಾಗುತ್ತದೆ. ಇದೊಂದು ಮಾದರಿ ಕಾನೂನು ಆಗಲಿದೆ. ನಿಧಾನವಾಗಿ ಇತರೆ ಕಡೆಯೂ ಇದರ ಜಾರಿಗೆ ಒಲವು ವ್ಯಕ್ತವಾಗಿ ಯುವ ಸಮುದಾಯದ ಪರವಾಗಿ ಎಲ್ಲರೂ ನಿಲ್ಲಬಹುದು ಎನ್ನುವ ವಿಶ್ವಾಸ ಆಸ್ಟ್ರೇಲಿಯಾ ಸರ್ಕಾರದ್ದು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.