Auto News: ಗಂಟೆಗೆ 288 ಕಿಮೀ ವೇಗದಲ್ಲಿ ಬಿಎಂಡಬ್ಲ್ಯು ಕಾರು ಚಲಾಯಿಸಿದ 19 ವರ್ಷದ ಯುವಕ, ಇಲ್ಲಿದೆ ವಿವರ
Automobile safety: ಗಂಟೆಗೆ ಗರಿಷ್ಠ 88 ಕಿ.ಮೀ. ವೇಗದಲ್ಲಿ ಸಾಗಬಹುದಾದ ರಸ್ತೆಯಲ್ಲಿ 19 ವರ್ಷದ ಯುವಕನೊಬ್ಬ ಗಂಟೆಗೆ 288 ಕಿ.ಮೀ. ವೇಗದಲ್ಲಿ ಸಾಗಿ ಪೊಲೀಸರ ಅತಿಥಿಯಾಗಿದ್ದಾನೆ. ಈತನಿಗೆ 1100 ಡಾಲರ್ ಫೈನ್ ವಿಧಿಸಲಾಗಿದೆ. ಜತೆಗೆ, ಮುಂದಿನ ಆರು ತಿಂಗಳು ಈತನ ಚಾಲನಾ ಪರವಾನಿಗೆಯನ್ನು ರದ್ದುಗೊಳಿಸಲಾಗಿದೆ.
ವಾಷಿಂಗ್ಟನ್: ಬಹುತೇಕರಿಗೆ ವಾಹನವೆಂದರೆ ಕ್ರೇಜ್. ಅದರಲ್ಲಿಯೂ ಯುವ ಜನತೆಗೆ ಕಾರಿನ ಕುರಿತು ಮೋಹ ತುಸು ಜಾಸ್ತಿ. ಆಕ್ಸಿಲೇಟರ್ ಅದುಮಿ ವೇಗದ ಆವೇಗಕ್ಕೆ ಸೆಡ್ಡು ಹೊಡೆದು ಸಾಗಿದರೆ ಏನೋ ರೋಮಾಂಚನ. ಇಂತಹ ಸ್ಪೀಡ್ ಕ್ರೇಜ್‌ನಿಂದ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅತಿವೇಗದಲ್ಲಿ ಕಾರು ಚಾಲಕ ಮಾತ್ರವಲ್ಲದೆ ರಸ್ತೆಯಲ್ಲಿರುವ ಅಮಾಯಕರೂ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಇದೇ ಕಾರಣಕ್ಕೆ ರಸ್ತೆಯಲ್ಲಿ ನಿರ್ದಿಷ್ಟ ವೇಗಮಿತಿ ನಿಗದಿಪಡಿಸಲಾಗಿರುತ್ತದೆ. ವಾಷಿಂಗ್ಟನ್‌ನ ಒರೆಗಾನ್‌ನಿಂದ ಬಂದ ಸುದ್ದಿಯೊಂದರ ಪ್ರಕಾರ 19 ವರ್ಷದ ಯುವಕನೊಬ್ಬ ಗಂಟೆಗೆ ಗರಿಷ್ಠ 88 ಕಿ.ಮೀ. ವೇಗದಲ್ಲಿ ಸಾಗಬಹುದಾದ ರಸ್ತೆಯಲ್ಲಿ ಗಂಟೆಗೆ 288 ಕಿ.ಮೀ. ವೇಗದಲ್ಲಿ ಸಾಗಿ ಪೊಲೀಸರ ಅತಿಥಿಯಾಗಿದ್ದಾನೆ. ಇದು ವಿದೇಶದ ಅಥವಾ ದೂರದೂರಿನ ಸುದ್ದಿಯಾಗಿದ್ದರೂ ವಾಹನ ಹೊಂದಿರುವ ಎಲ್ಲರಿಗೂ ಒಂದು ಪಾಠವಾಗಬಲ್ಲದು.
ಈ ಯುವಕನು 2016 BMW M3 ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ಇಂತಹ ಸೂಪರ್ ಲಗ್ಷುರಿ ಕಾರಿನಲ್ಲಿ ಕುಳಿತ ಈತನಿಗೆ ಇನ್ನಷ್ಟು ಆಕ್ಸಿಲರೇಟರ್ ಅದುಮಬೇಕೆನಿಸಿದೆ. ಅದು ಕೂಡ, ಗಂಟೆಗೆ 80 ಕಿ.ಮೀ. ವೇಗಮಿತಿ ಇರುವಂತಹ ರಸ್ತೆಯಲ್ಲಿ. ಈ ವೇಗಮಿತಿ ಇರುವ ವಲಯದಲ್ಲಿ ಮೂರಕ್ಕೂ ಹೆಚ್ಚು ಬಾರಿ ಈತ ಅತಿವೇಗದಲ್ಲಿ ಸಾಗಿದ್ದಾನೆ. ಈತ ಈ ರೀತಿ ಅತಿವೇಗದಲ್ಲಿ ಸಾಗಿರುವುದನ್ನು ವಾಷಿಂಗ್ಟನ್‌ನ ಕೌಂಟಿ ಶೆರಿಫ್ ಆಫೀಸ್ ಗಮನಿಸಿದೆ. ರಸ್ತೆಯಲ್ಲಿ ಯಾರೋ ಅತಿವೇಗದಲ್ಲಿ ಕಾರು ಚಲಾಯಿಸುತ್ತಿರುವ ಕುರಿತು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ತಲುಪಿದೆ. ಇದೇ ಸಮಯದಲ್ಲಿ ಎಕ್ಸಿಟ್ ರಾಂಪ್‌ನಲ್ಲಿ ಈತ ಸಾಗುತ್ತಿರುವುದನ್ನು ಪೊಲೀಸರು ಗಮನಿಸಿದ್ದಾರೆ.
ತಕ್ಷಣ ಪೊಲೀಸರು ಆ ಕಾರನ್ನು ಸುತ್ತುವರೆದಿದ್ದಾರೆ. ಪೊಲೀಸರು ಹಾಕಿದ ನಾಕಾಬಂದಿಗೆ ಆತ ಕಾರು ನಿಲ್ಲಿಸಲೇಬೇಕಾಯಿತು. ಆತ ಕಾರಿನಿಂದ ಇಳಿದು ಓಡಿಹೋಗದಂತೆ ಬೇಕಾದ ಬಂದೋಬಸ್ತ್ ಮಾಡಲಾಯಿತು. ಆತನನ್ನು ಹೇಗೋ ಪೊಲೀಸರು ಬಂಧಿಸಿದ್ದಾರೆ. ತನಿಖೆಯ ವೇಳೆ ಆತ ಸಹಕರಿಸಿದ. ಕಾರಿನ ವೇಗವು 294 ಕಿ.ಮೀ.ಗೆ ತಲುಪಿರುವುದನ್ನು ಗಮನಿಸಿದ್ದೆ ಎಂದು ಆತ ಒಪ್ಪಿಕೊಂಡಿದ್ದಾನೆ.. ಬಿಎಂಡಬ್ಲ್ಯುನ ಈ ಕಾರು ಗರಿಷ್ಠ ಇಷ್ಟು ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿತ್ತು.
ಇಷ್ಟು ಚಿಕ್ಕ ವಯಸ್ಸಿನ ಯುವಕನು ಸಾರ್ವಜನಿಕ ರಸ್ತೆಯಲ್ಲಿ ಇಷ್ಟೊಂದು ವೇಗದಲ್ಲಿ ವಾಹನ ಚಲಾಯಿಸುವುದನ್ನು ತಾವು ಇಲ್ಲಿಯವರೆಗೆ ನೋಡಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. "ನೀವು ಇಂತಹ ವೇಗದಲ್ಲಿ ವಾಹನ ಚಲಾಯಿಸಿದರೆ, ನೀವು ಯಾವುದಕ್ಕಾದರೂ ಡಿಕ್ಕಿ ಹೊಡೆಯುವಿರಿ ಅಥವಾ ಇತರರು ನಿಮ್ಮ ಕಾರಿಗೆ ಸಿಲುಕಿ ಮೃತಪಡಬಹುದು" ಎಂದು ಆ ಪೊಲೀಸ್ ಅಧಿಕಾರಿಯು ಯುವಕನಿಗೆ ತಿಳಿಹೇಳಿದ್ದಾರೆ. ರಸ್ತೆಯಲ್ಲಿ ಅತಿಯಾದ ವೇಗದಲ್ಲಿ ಸಾಗಲು ಬಯಸುವ ಪ್ರತಿಯೊಬ್ಬ ವಾಹನ ಚಾಲಕರೂ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಎಕ್ಸ್‌ಪ್ರೆಸ್ ವೇ ಹೈವೇ ಇತ್ಯಾದಿಗಳಲ್ಲಿ ಜನರು ಅತಿಯಾದ ವೇಗದಲ್ಲಿ ಸಾಗುತ್ತಾರೆ. ಇತ್ತೀಚೆಗೆ ಉದ್ಘಾಟನೆಯಾದ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅತಿವೇಗದಿಂದ ಪ್ರತಿನಿತ್ಯ ಅಪಘಾತಗಳು ವರದಿಯಾಗುತ್ತಿವೆ.
ವಾಷಿಂಗ್ಟನ್‌ನ ಈ ಯುವಕನಿಗೆ ಅತಿವೇಗದಲ್ಲಿ ಕಾರು ಚಲಾಯಿಸಿದ್ದಕ್ಕೆ 1,100 ದಂಡ ವಿಧಿಸಲಾಗಿದೆ. ಆತನ ಕಾರಿನ ಚಾಲನಾ ಪರವಾನಿಗೆಯನ್ನು ಆರು ತಿಂಗಳ ಕಾಲ ರದ್ದು ಪಡಿಸಲಾಗಿದೆ.
ಆ ಯುವಕ ಚಲಾಯಿಸುತ್ತಿದ್ದದ್ದು 2016 BMW M3 F80 ಕಾರು. ಇದು 3.0 ಲೀಟರ್‌ನ ಅವಳಿ ಟರ್ಬೊ ಚಾರ್ಜ್ಡ್ ಎಸ್ ಇನ್‌ಲೈನ್ 6 ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್ ಗರಿಷ್ಠ 425 ಅಶ್ವಶಕ್ತಿ ಬಿಡುಗಡೆ ಮಾಡುತ್ತದೆ. ಈ ಕಾರು ಆರು ಸ್ಪೀಡ್‌ನ ಮ್ಯಾನುಯಲ್ ಗಿಯರ್ ಅಥವಾ ಏಳು ಸ್ಪೀಡ್‌ನ ಡ್ಯೂಯೆಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯಲ್ಲಿ ಲಭ್ಯ. ಈ ಕಾರು ಸ್ಪೋರ್ಟ್ಸ್ ಆವೃತ್ತಿಯಲ್ಲಿಯೂ ಲಭ್ಯ.