2024ರಲ್ಲಿ 43 ಲಕ್ಷ ಕಾರು ಮಾರಾಟ, ಎಸ್‌ಯುವಿ ಖರೀದಿಗೆ ಮುಗಿಬಿದ್ದ ಗ್ರಾಹಕ, ಯಾವ ಕಾರಿಗೆ ಬೇಡಿಕೆ ಹೆಚ್ಚು? ಇಲ್ಲಿದೆ ಮಾರಾಟದ ಲೆಕ್ಕ
ಕಳೆದ ವರ್ಷ ಭಾರತದ ಪ್ರಯಾಣಿಕ ವಾಹನಗಳ ಮಾರಾವು 43 ಲಕ್ಷ ಯೂನಿಟ್‌ಗೆ ತಲುಪಿದೆ. ಮಾರುತಿ ಸುಜುಕಿ ಕಂಪನಿಯು ಅತ್ಯಧಿಕ ಕಾರುಗಳನ್ನು ಮಾರಾಟ ಮಾಡಿದೆ. 2024ರಲ್ಲಿ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚಾಗಿತ್ತು.
ಬೆಂಗಳೂರು: ಭಾರತೀಯ ಪ್ರಯಾಣಿಕ ವಾಹನ ಮಾರುಕಟ್ಟೆಯು 2024ರಲ್ಲಿ 3 ಲಕ್ಷ ಯುನಿಟ್ ಮಾರಾಟದ ದಾಖಲೆ ಮಾಡಿದೆ. ಈ ಮೂಲಕ ಪ್ರಯಾಣಿಕ ಕಾರು ಮಾರಾಟದಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದೆ. ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್, ಟೊಯೋಟಾ ಮತ್ತು ಕಿಯಾ ಮುಂತಾದ ಪ್ರಮುಖ ಕಂಪನಿಗಳು ತಮ್ಮ ಕಾರು ಮಾರಾಟವನ್ನು ಈ ಅವಧಿಯಲ್ಲಿ ಗಮನಾರ್ಹವಾಗಿ ಹೆಚ್ಚಿಸಿಕೊಂಡಿವೆ.
"ಕಳೆದ ವರ್ಷ ಕಾರು ಮಾರಾಟ ಹೆಚ್ಚಳಕ್ಕೆ ಪ್ರಮುಖವಾಗಿ ಎರಡು ಕಾರಣಗಳು ಇದ್ದವು. ಮೊದಲನೆಯದಾಗಿ ಎಸ್‌ಯುವಿಗಳಿಗ ಬೇಡಿಕೆ. ಎರಡನೆಯದ್ದು ಗ್ರಾಮೀಣ ಜನರಿಂದ ಕಾರು ಖರೀದಿ ಹೆಚ್ಚಾಗಿರುವುದು. ಈ ಮೂಲಕ 2023ರ 41.1 ಕಾರು ಮಾರಾಟದ ದಾಖಲೆಯನ್ನು 2024 ಮೀರಿಸಿದೆ" ಎಂದು ಮಾರುತಿ ಸುಜುಕಿಯ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಹೇಳಿದ್ದಾರೆ.
ಮಾರುಕಟ್ಟೆಯಲ್ಲಿ ಮಾರುತಿ ಕಾರಿಗೆ ಹೆಚ್ಚಿದ ಬೇಡಿಕೆ
ಮಾರುತಿ ಸುಜುಕಿ ತನ್ನ ಆರು ವರ್ಷಗಳ ಹಳೆಯ ದಾಖಲೆಯನ್ನು ಕಳೆದ ವರ್ಷ ಮುರಿದಿದೆ. 2024ರಲ್ಲಿ ಕಂಪನಿಯು ಒಟ್ಟು 17,90,977 ಕಾರುಗಳನ್ನು (ಸಗಟು) ಮಾರಾಟ ಮಾಡಿದೆ. 2018ರಲ್ಲಿ ಕಂಪನಿಯು 17,51,919 ಯೂನಿಟ್ ಮಾರಾಟ ಮಾಡಿದೆ. ಈ ಮೂಲಕ ತನ್ನ ಹಳೆಯ ದಾಖಲೆಯನ್ನು ಮುರಿದಿದೆ.
ಮಾರುತಿ ಸುಜುಕಿ ಕಂಪನಿಯು ನೆಕ್ಸಾ ಮಳಿಗೆಗಳನ್ನು ಸಣ್ಣ ನಗರಗಳಿಗೆ ವಿಸ್ತರಿಸಿರುವುದು, ಫೇಸ್‌ಲಿಫ್ಟ್ ಮಾದರಿಗಳನ್ನು ಪರಿಚಯಿಸಿರುವುದು ಸೇರಿದಂತೆ ಹಲವು ಉಪಕ್ರಮಗಳ ಮೂಲಕ ಮಾರಾಟ ಹೆಚ್ಚಿಸಿಕೊಂಡಿದೆ.
ಹ್ಯುಂಡೈ ಮತ್ತು ಕಿಯಾ ಫಲಿತಾಂಶ
ಹ್ಯುಂಡೈ ಮೋಟಾರ್ ಇಂಡಿಯಾ 2024ರಲ್ಲಿ 6,05,433 ಕಾರುಗಳನ್ನು ದೇಶೀಯವಾಗಿ ಮಾರಾಟ ಮಾಡಿದೆ. ಕಂಪನಿಯ ಒಟ್ಟು ಮಾರಾಟಕ್ಕೆ ಎಸ್‌ಯುವಿಗಳು ಗಮನಾರ್ಹವಾದ ಕೊಡುಗೆ ನೀಡಿವೆ. ಅಂದರೆ, ಹ್ಯುಂಡೈನ ಒಟ್ಟು ಮಾರಾಟದಲ್ಲಿ ಶೇಕಡ 67.6 ಪಾಲು ಎಸ್‌ಯುವಿಗಳದ್ದು.
ಕಿಯಾ ಇಂಡಿಯಾದ ಮಾರಾಟವು 2,55,038 ಯೂನಿಟ್‌ಗೆ ತಲುಪಿದೆ. ಇದಕ್ಕೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಮಾರಾಟವನ್ನು ಶೇಕಡ 6ರಷ್ಟು ಹೆಚ್ಚಿಸಿಕೊಂಡಿದೆ.
ಟಾಟಾ ಮೋಟಾರ್ಸ್ ಮತ್ತು ಟೊಯೋಟಾ ಮಾರಾಟ
ಟಾಟಾ ಮೋಟಾರ್ಸ್ 5.65 ಲಕ್ಷ ಯುನಿಟ್ ಮಾರಾಟ ಮಾಡಿದೆ. ಮೂಲಕ ಸತತ ನಾಲ್ಕನೇ ವರ್ಷದ ದಾಖಲೆ ಮಾರಾಟವನ್ನು ಸಾಧಿಸಿದೆ.
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) 2023ರಲ್ಲಿ 2,33,346 ಯುನಿಟ್ ಮಾರಾಟ ಮಾಡಿತ್ತು. ಕಳೆದ ವರ್ಷ 3,26,329 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಮಾರಾಟದಲ್ಲಿ ಶೇಕಡಾ 40 ರಷ್ಟು ಜಿಗಿತವನ್ನು ದಾಖಲಿಸಿದೆ.
ಇತರೆ ಕಂಪನಿಗಳ ಮಾರಾಟ ಹೀಗಿತ್ತು
ಮಹೀಂದ್ರಾ & ಮಹೀಂದ್ರಾ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಶೇಕಡಾ 18 ರಷ್ಟು ಏರಿಕೆ ದಾಖಲಿಸಿದೆ. ಡಿಸೆಂಬರ್‌ನಲ್ಲಿ 41,424 ಯುನಿಟ್ ಮಾರಾಟ ಮಾಡಿದೆ. ವಾರ್ಷಿಕ ಮಾಹಿತಿ ಲಭ್ಯವಿಲ್ಲ.
ಜೆಎಸ್‌ಡಬ್ಲ್ಯು ಎಂಜಿ ಮೋಟಾರ್ ಇಂಡಿಯಾ ಡಿಸೆಂಬರ್ ಮಾರಾಟದಲ್ಲಿ ಶೇಕಡಾ 55ರಷ್ಟು ಏರಿಕೆ ದಾಖಲಿಸಿದೆ.
ನಿಸ್ಸಾನ್ ಮೋಟಾರ್ ಇಂಡಿಯಾ ಡಿಸೆಂಬರ್ ಸಗಟು ಮಾರಾಟದಲ್ಲಿ ಶೇಕಡಾ 51 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ತಿಂಗಳು 11,676 ಕಾರುಗಳನ್ನು ಮಾರಾಟ ಮಾಡಿದೆ.
ಆಡಿ ಇಂಡಿಯಾದ ಮಾರಾಟವು ಕಳೆದ ವರ್ಷ ಶೇಕಡ 26.6 ಕುಸಿದಿದೆ.