ಮಾರುತಿ ಸುಜುಕಿ, ಹ್ಯುಂಡೈ ಮಾರುಕಟ್ಟೆ ಪಾಲು ದಿಢೀರ್ ಕುಸಿತ; ಇನ್ಮುಂದೆ ಮಹೀಂದ್ರ, ಟೊಯೊಟಾ, ಟಾಟಾ ಆಟ?
ಮಾರುತಿ ಸುಜುಕಿ ಮತ್ತು ಹ್ಯುಂಡೈ ಕಂಪನಿಯ ಮಾರುಕಟ್ಟೆ ಪಾಲು 12 ವರ್ಷದ ಹಿಂದಿನ ಕೆಳಮಟ್ಟಕ್ಕೆ ಕುಸಿದಿದೆ. ಇದೇ ಸಮಯದಲ್ಲಿ ಮಹೀಂದ್ರ ಮತ್ತು ಟೊಯೊಟಾ ಕಂಪನಿಗಳು ಭಾರತದ ವಾಹನ ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ಗಮನಾರ್ಹವಾಗಿ ಹೆಚ್ಚಿಸಿಕೊಂಡಿವೆ.
ಬೆಂಗಳೂರು: ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಭಾರತದ ಎರಡು ಬೃಹತ್ ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ ಮತ್ತು ಹ್ಯುಂಡೈಗಳ ಮಾರುಕಟ್ಟೆ ಪಾಲು ಗಮನಾರ್ಹವಾಗಿ ಇಳಿಕೆ ಕಂಡಿದೆ. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಈ ಕಂಪನಿಗಳ ಮಾರುಕಟ್ಟೆ ಪಾಲು 12 ವರ್ಷದ ಕೆಳಮಟ್ಟಕ್ಕೆ ಕುಸಿದಿವೆ. ಇತರೆ ಕಾರು ಕಂಪನಿಗಳು ವಾಹನ ಮಾರುಕಟ್ಟೆಯಲ್ಲಿ ಪ್ರಬಲವಾಗುತ್ತಿರುವುದು, ಬೇರೆ ಕಂಪನಿಗಳ ಪ್ರಮುಖ ಕಾರುಗಳ ಆಗಮನವು ಈ ಎರಡು ಕಂಪನಿಗಳ ಮಾರಾಟ ಇಳಿಕೆಗೆ ಕಾರಣವಾಗಿವೆ.
ಭಾರತದ ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ಕಂಪನಿಗಳ ಸಮಗ್ರ ಮಾರುಕಟ್ಟೆ ಪಾಲು ಇಳಿಕೆ ಕಾಣುತ್ತಿರುವುದು ಗ್ರಾಹಕರ ಆದ್ಯತೆಯಲ್ಲಿ ಬದಲಾವಣೆಯಾಗುತ್ತಿರುವುದು ಮತ್ತು ಸ್ಪರ್ಧೆ ಹೆಚ್ಚುತ್ತಿರುವುದರ ಪ್ರತಿಬಿಂಬವಾಗಿದೆ ಎಂದು ಜೆಫ್ರೀಸ್ ರಿಸರ್ಚ್ ತಿಳಿಸಿದೆ. ಇದೇ ಅವಧಿಯಲ್ಲಿ ಮಹೀಂದ್ರ ಮತ್ತು ಟೊಯೊಟಾ ಕಂಪನಿಗಳ ಮಾರುಕಟ್ಟೆ ಪಾಲು ಎಂದಿಗಿಂತ ಎತ್ತರಕ್ಕೆ ತಲುಪಿದೆ. ಭಾರತದಲ್ಲಿ ಎಸ್‌ಯುವಿಗಳಿಗೆ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಾಣುತ್ತಿರುವುದು ಮಹೀಂದ್ರ ಮತ್ತು ಟೊಯೊಟಾ ಕಾರುಗಳ ಬೇಡಿಕೆ ಹೆಚ್ಚಾಗಲು ಕಾರಣ ಎಂದು ಜೆಫ್ರೀಸ್ ಅಧ್ಯಯನ ವರದಿ ತಿಳಿಸಿದೆ.
2025ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಮಹೀಂದ್ರಾದ ಮಾರುಕಟ್ಟೆ ಪಾಲು ಸಾರ್ವಕಾಲಿಕ ಉನ್ನತ ಮಟ್ಟಕ್ಕೆ ಏರಿತು. ಭಾರತೀಯ ಪ್ರಯಾಣಿಕ ವಾಹನ ವಲಯದಲ್ಲಿ ಈ ಕಂಪನಿಯ ಮಾರುಕಟ್ಟೆ ಪಾಲು ಶೇಕಡ 12.5ಕ್ಕೆ ತಲುಪಿದೆ. ಎಸ್‌ಯುವಿ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಾಣುತ್ತಿರುವುದು ಈ ಕಂಪನಿಯ ಮಾರುಕಟ್ಟೆ ಪಾಲು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಮೊದಲು ಸ್ವದೇಶಿ ಕಾರು ತಯಾರಿಕಾ ಕಂಪನಿ ಟಾಟಾ ಮೋಟಾರ್ಸ್ ಕಂಪನಿಯ ಮಾರುಕಟ್ಟೆ ಪಾಲು ಕೂಡ ಹೆಚ್ಚಾಗಿದೆ. ಟಾಟಾ ಮಾರುಕಟ್ಟೆ ಪಾಲು 2023ರ ಹಣಕಾಸು ವರ್ಷದಲ್ಲಿ ಶೇಕಡ 14 ಇತ್ತು. ಆದರೆ, 2025ರ ಮೊದಲಾರ್ಧದಲ್ಲಿ ಇದರ ಮಾರುಕಟ್ಟೆ ಪಾಲು ಶೇಕಡ 13.3ಕ್ಕೆ ಇಳಿಕೆ ಕಂಡಿದೆ.
ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕವು ಭಾರತೀಯ ಪ್ರಯಾಣಿಕ ವಾಹನ ಉದ್ಯಮಕ್ಕೆ ಸವಾಲಿನಿಂದ ಕೂಡಿತ್ತು. ರಫ್ತು ಸೇರಿದಂತೆ ಒಟ್ಟಾರೆ ಸಗಟು ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡಾ 1ರಷ್ಟು ಕುಸಿತವನ್ನು ದಾಖಲಿಸಿದೆ. ಗ್ರಾಹಕರ ಆದ್ಯತೆ ಬದಲಾಗುತ್ತಿರುವ ಸೂಚನೆ ಇದಾಗಿದೆ. ಎಸ್‌ಯುವಿ ಸೇರಿದಂತೆ ಬೇರೆ ರೀತಿಯ ಚಂದದ ಕಾರುಗಳತ್ತ ಗ್ರಾಹಕರು ಗಮನ ಹರಿಸುತ್ತಿದ್ದಾರೆ. ಇದು ಮಹೀಂದ್ರ ಮತ್ತು ಟಾಟಾದಂತಹ ಕಂಪನಿಗಳಿಗೆ ವರದಾನವಾಗಿದೆ.