Tata Tiago: 2025 ಟಾಟಾ ಟಿಯಾಗೊ ಇವಿ ಬಿಡುಗಡೆ, ದರ 8 ಲಕ್ಷ ರೂಪಾಯಿ, ಎಲೆಕ್ಟ್ರಿಕ್ ಕಾರಿನಲ್ಲಿ ಏನೇನಿದೆ ವಿಶೇಷ
2025 Tata Tiago EV: ಟಾಟಾ ಫ್ಯಾಕ್ಟರಿಯಿಂದ 2025ರ ಹೊಸ ಟಿಯಾಗೊ ಇವಿ ಬಿಡುಗಡೆಯಾಗಿದೆ. ಹಳೆಯ ಟಿಯಾಗೊ ಇವಿಗೆ ಹೋಲಿಸಿದರೆ ಹೊಸ ಕಾರಿನಲ್ಲಿ ಹೊಸ ಫೀಚರ್‌ಗಳು, ಕಾಸ್ಮೆಟಿಕ್ ಬದಲಾವಣೆಗಳನ್ನು ಗುರುತಿಸಬಹುದು. ಇದರ ಆರಂಭಿಕ ದರ 8 ಲಕ್ಷ ರೂಪಾಯಿ.
ಭಾರತದ ಮಾರುಕಟ್ಟೆಗೆ 2025ರ ಹೊಸ ಟಾಟಾ ಟಿಯಾಗೊ ಇವಿ ಆಗಮಿಸಿದೆ. ಈ ಕಾರನ್ನು ಭಾರತ್ ಮೊಬಿಲಿಟಿ ಎಕ್ಸ್‌ಪೋ 2025ರಲ್ಲಿ ಕಂಪನಿಯು ಅನಾವರಣ ಮಾಡಲಿದೆ. ಈ ಕಾರಿಗೆ ಕಂಪನಿಯು ಹೊಸ ಫೀಚರ್‌ಗಳನ್ನು ಸೇರಿಸಿದೆ. ಒಂದಿಷ್ಟು ಕಾಸ್ಮೆಟಿಕ್ ಬದಲಾವಣೆಗಳನ್ನು ಗುರುತಿಸಬಹುದು. ಇದರ ಪ್ಲಾಟ್‌ಫಾರ್ಮ್ ಮತ್ತು ತಂತ್ರಜ್ಞಾನ ವಿಷಯಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಕಾರಿನ ಹೊರ ವಿನ್ಯಾಸ
ಹೊಸ ಕಾರಿನಲ್ಲಿ ಮರು ವಿನ್ಯಾಸ ಮಾಡಲಾದ ಗ್ರಿಲ್ ಇದೆ. ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳೂ ಇವೆ. ಮುಂಭಾಗದ ಡೋರ್‌ನ ಬದಿಯಲ್ಲಿ ಇವಿ ಬ್ಯಾಡ್ಜಿಂಗ್ ಅಂಟಿಸಲಾಗಿದೆ. ಇದರೊಂದಿಗೆ ಇದರ 14 ಇಂಚಿನ ಹೊಸ ವಿನ್ಯಾಸದ ಅಲಾಯ್ ವೀಲ್ ಕೂಡ ಗಮನ ಸೆಳೆಯುತ್ತದೆ. ಸೂಪರ್‌ನೋವಾ ಕೂಪರ್, ಚಿಲ್ಲಿ ಲೈಮ್ ಮತ್ತು ಅರಿಜೋನಾ ಬ್ಲೂ ಎಂಬ ಮೂರು ಹೊಸ ಬಣ್ಣಗಳಲ್ಲಿ ಈ ಕಾರನ್ನು ಲಾಂಚ್ ಮಾಡಲಾಗಿದೆ. ಹಳೆಯ ಡೇಟೊನಾ ಗ್ರೇ, ಸಿಗ್ನೇಚರ್ ಟೀಲ್ ಮತ್ತು ಪ್ರಿಸ್ಟೈನ್ ವೈಟ್ ಬಣ್ಣಗಳಲ್ಲಿಯೂ ಹೊಸ ಟಿಯಾಗೊ ಇವಿ ಲಭ್ಯವಿದೆ.
ಇಂಟೀರಿಯರ್ ಹೇಗಿದೆ?
ಕಾರಿನೊಳಗೂ ಹೊಸ ಬದಲಾವಣೆಗಳನ್ನು ಗುರುತಿಸಬಹುದು. ಇಂಟೀರಿಯರ್ ಅನ್ನು ಡ್ಯೂಯೆಲ್ ಟೋನ್ ಕಲರ್ ಥೀಮ್‌ನಲ್ಲಿ ನಿರ್ಮಿಸಲಾಗಿದೆ. 10.25 ಇಂಚಿನ ಟಚ್ ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ. ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಗೆ ಬೆಂಬಲ ನೀಡುತ್ತದೆ. ಮಿಣುಗುವ ಟಾಟಾ ಲೊಗೊ ಹೊಂದಿರುವ ಟು ಸ್ಪೋಕ್ ಸ್ಟಿಯರಿಂಗ್ ವೀಲ್ ಇದೆ.
ಇವಿಷ್ಟು ಮಾತ್ರವಲ್ಲದೆ ಈ ಕಾರಿಗೆ ಟಾಟಾ ಕಂಪನಿಯು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಶಾರ್ಕ್ ಫಿನ್ ಆಂಟೆನಾ, ಪರಿಷ್ಕೃತ ಡ್ರೈವರ್ ಡಿಸ್‌ಪ್ಲೇ, ಎಚ್‌ಡಿ ರಿಯರ್ ಪಾರ್ಕಿಂಗ್ ಕ್ಯಾಮೆರಾ ಅಳವಡಿಸಲಾಗಿದೆ.
ದರ ಎಷ್ಟು?
ಟಾಟಾ ಟಿಯಾಗೊ ಇವಿಯ ಎಕ್ಸ್‌ಇ ಮತ್ತು ಎಕ್ಸ್‌ಟಿ ಆವೃತಿಗಳ ದರ ಈಗಲೂ ಕ್ರಮವಾಗಿ 8 ಲಕ್ಷ ರೂ. ಮತ್ತು 9 ಲಕ್ಷ ರೂ ಇದೆ. ಎಕ್ಸ್‌ಟಿ ಎಲ್‌ಆರ್ ದರ 14 ಸಾವಿರ ರೂ. ಹೆಚ್ಚಾಗಿದೆ. ಇದರ ಎಕ್ಸ್ ಶೋರೂಂ ದರ 10.14 ಲಕ್ಷ ರೂಪಾಯಿ ಇದೆ. ಎಕ್ಸ್‌ಝಡ್ ಪ್ಲಸ್ ಆವೃತ್ತಿಯನ್ನು ಕೈಬಿಡಲಾಗಿದೆ. ಎಕ್ಸ್‌ಝಡ್ ಪ್ಲಸ್ ಎಲ್‌ಆರ್ ಆವೃತ್ತಿ ದರವೂ 14 ಸಾವಿರ ರೂಪಾಯಿ ಹೆಚ್ಚಾಗಿದೆ. ಇದರ ದರ 11.14 ಲಕ್ಷ ರೂಪಾಯಿ ಇದೆ. ಇವೆಲ್ಲವೂ ಎಕ್ಸ್ ಶೋರೂಂ ದರ.
ರೊಟರಿ ಡಯಲ್, ಐಟಿಪಿಎಂಎಸ್, ಫಾಲೋ ಮಿ ಹೋಮ್ ಹೆಡ್‌ಲ್ಯಾಂಪ್, ಕೂಲ್ಡ್ ಗ್ಲೌ ಬಾಕ್ಸ್, ಆಟೋಮ್ಯಾಟಿಕ್ ವೈಪರ್‌ಗಳು ಮತ್ತು ಹೆಡ್‌ಲ್ಯಾಂಪ್‌ಗಳು, ಪುಷ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಕ್ರೂಸ್ ಕಂಟ್ರೋಲ್ ಮುಂತಾದ ಫೀಚರ್‌ಗಳು ಈ ಕಾರಿನಲ್ಲಿ ಇವೆ.
ಟಾಟಾ ಟಿಯಾಗೊ, ಟೈಗೂರ್ ಬಿಡುಗಡೆ
ಕಂಪನಿಯು ಟಾಟಾ ಟಿಯಾಗೊ, ಟೈಗೂರ್‌ನ ಪರಿಷ್ಕೃತ ಆವೃತ್ತಿಯನ್ನೂ ಬಿಡುಗಡೆ ಮಾಡಿದೆ. ಹೊಸ ಬಣ್ಣಗಳ ಜತೆ ಇವುಗಳ ಇಂಟೀರಿಯರ್ ಅಪ್‌ಗ್ರೇಡ್ ಮಾಡಲಾಗಿದೆ. ಈ ಕಾರುಗಳಿಗೂ 10.25 ಇಂಚಿನ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್, ಎಲ್‌ಇಡಿ ಹೆಡ್‌ಲ್ಯಾಂಪ್ ಇತ್ಯಾದಿಗಳನ್ನು ಅಳವಡಿಸಲಾಗಿದೆ.