Ola electric scooter: 2 ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದ ಓಲಾ, ದರ 39,999 ರೂ, ಮನೆಗೆ ಇನ್ವರ್ಟರ್ ಆಗಿಯೂ ಬಳಸಿ
Ola electric scooter: ಓಲಾ ಕಂಪನಿಯು ಓಲಾ ಗಿಗ್ (Ola Gig) ಮತ್ತು ಓಲಾ ಎಸ್1 ಝಡ್ (Ola S1 Z) ಎಂಬ ಎರಡು ಸ್ಕೂಟರ್‌ಗಳನ್ನು ಪರಿಚಯಿಸಿದೆ. ಈ ಸ್ಕೂಟರ್‌ಗಳ ಬ್ಯಾಟರಿಯನ್ನು ಮನೆಯ ಇನ್ವರ್ಟರ್ ಆಗಿಯೂ ಬಳಸಬಹುದು. ಈ ಸ್ಕೂಟರ್‌ಗಳ ದರ 39,999 ರೂನಿಂದ ಆರಂಭವಾಗುತ್ತದೆ. 2025ರ ಏಪ್ರಿಲ್‌ನಿಂದ ಈ ಇ ಸ್ಕೂಟರ್‌ಗಳ ಡೆಲಿವರಿ ಆರಂಭವಾಗಲಿದೆ.
Ola electric scooter: ಓಲಾ ಎಲೆಕ್ಟ್ರಿಕ್ ಕಂಪನಿಯು ಭಾರತದಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಓಲಾ ಗಿಗ್ ಡೆಲಿವರಿ ಇ ಸ್ಕೂಟರ್ ಮತ್ತು ಓಲಾ ಎಸ್1 ಝಡ್ ಸ್ಕೂಟರ್ ಪರಿಚಯಿಸಲಿದೆ. ಇವೆರಡು ಸ್ಕೂಟರ್‌ಗಳು ತೆಗೆಯಬಹುದಾದ ಬ್ಯಾಟರಿ ಪ್ಯಾಕ್ ಹೊಂದಿರಲಿವೆ. ಈ ಬ್ಯಾಟರಿಗಳನ್ನು ಮನೆಯ ಇನ್ವರ್ಟರ್ ಆಗಿಯೂ ಬಳಸಬಹುದು. ಗಿಗ್ ಮತ್ತು S1 Z ಶ್ರೇಣಿಯ ಇ-ಸ್ಕೂಟರ್‌ಗಳು ಎರಡು ಆವೃತ್ತಿಗಳಲ್ಲಿ ಲಭ್ಯವಿರಲಿದೆ. 1.5 ಕಿಲೋವಾಟ್ಸ್ ಬ್ಯಾಟರಿ ಪ್ಯಾಕ್ ಹೊಂದಿರಲಿದೆ. ಈ ಸ್ಕೂಟರ್‌ಗಳ ದರ 39,999 ರೂನಿಂದ ಆರಂಭವಾಗುತ್ತದೆ. 2025ರ ಏಪ್ರಿಲ್‌ನಿಂದ ಈ ಇ ಸ್ಕೂಟರ್‌ಗಳ ಡೆಲಿವರಿ ಆರಂಭವಾಗಲಿದೆ.
ಈ ಎರಡು ಸ್ಕೂಟರ್‌ಗಳಲ್ಲಿ ಓಲಾ ಎಸ್1 ಝಡ್ ಎನ್ನುವುದು ನಗರದೊಳಗೆ ವೈಯಕ್ತಿಕ ಪ್ರಯಾಣಕ್ಕೆ ಸೂಕ್ತವಾದ ಸ್ಕೂಟರ್ ಆಗಿರಲಿದೆ. ಇನ್ನೊಂದು ತನ್ನ ಹೆಸರಿನಂತೆ ಗಿಗ್ ಸ್ಕೂಟರ್. ಅಂದರೆ, ಗಿಗ್ ಕೆಲಸಗಾರರನ್ನು ಗಮನದಲ್ಲಿಟ್ಟುಕೊಂಡು ಆಗಮಿಸಲಿದೆ. ವಿವಿಧ ಡೆಲಿವರಿ ಅವಶ್ಯಕತೆಗೆ ವಾಣಿಜ್ಯ ಉದ್ದೇಶದಿಂದ ಈ ಸ್ಕೂಟರ್ ಬಳಸಬಹುದು. ತೆಗೆಯಬಹುದಾದ ಬ್ಯಾಟರಿಯನ್ನು ವೈಯಕ್ತಿಕ ಅವಶ್ಯಕತೆಗಳಿಗೂ ಬಳಸಬಹುದು. ಇನ್ವರ್ಟರ್ ಆಗಿ ಮನೆ ಅಥವಾ ಆಫೀಸ್‌ಗೂ ಬಳಸಬಹುದು.
ತೆಗೆಯಬಹುದಾದ ಬ್ಯಾಟರಿಗಳು ಸ್ಥಿರ ಬ್ಯಾಟರಿಗಳಿಗಿಂತ ಹೆಚ್ಚು ಅನುಕೂಲಕರ. ಸ್ಥಿರ ಬ್ಯಾಟರಿಯಾದರೆ (ಸ್ಕೂಟರ್‌ನಿಂದ ತೆಗೆಯಲಾಗದ) ಪೋರ್ಟಬಲ್ ಚಾರ್ಜರ್‌ಗಾಗಿ ಚಾರ್ಜಿಂಗ್ ಸ್ಟೇಷನ್ ಅಥವಾ ಪ್ಲಗ್ ಪಾಯಿಂಟ್ ಹುಡುಕಬೇಕು. ಬಳಕೆದಾರರು ಸಾಮಾನ್ಯವಾಗಿ ಕೆಲವೇ ನಿಮಿಷಗಳಲ್ಲಿ ಚಾರ್ಜ್ ಮಾಡಿದ ಬ್ಯಾಟರಿಗೆ ಡೆಡ್ ಬ್ಯಾಟರಿಯನ್ನು ತ್ವರಿತವಾಗಿ ವಿನಿಮಯ ಮಾಡಿಕೊಳ್ಳಬಹುದು.
ಬ್ಯಾಟರಿ ಪ್ಯಾಕ್‌ಗಳನ್ನು ಸೀಟಿನ ಕೆಳಗೆ ಅಳವಡಿಸಲಾಗಿದೆ. ಸುಲಭವಾಗಿ ತೆಗೆಯಲು ಮತ್ತು ಮರುಸ್ಥಾಪಿಸಲು ಹ್ಯಾಂಡಲ್‌ಗಳನ್ನು ಹೊಂದಿರುತ್ತದೆ. ಓಲಾ ಎಲೆಕ್ಟ್ರಿಕ್ ಬ್ಯಾಟರಿಗಳನ್ನು ಓಲಾ ಪವರ್‌ಪಾಡ್‌ಗೆ ಪ್ಲಗ್ ಮಾಡುವ ಮೂಲಕ ಪೋರ್ಟಬಲ್ ಹೋಮ್ ಇನ್ವರ್ಟರ್‌ಗಳಾಗಿ ಬಳಸಬಹುದು. ಇದನ್ನು ಪ್ರತ್ಯೇಕವಾಗಿ 9,999 ರೂ ನೀಡಿ ಖರೀದಿಸಬೇಕು. ಇಪ್ಪತ್ತು ಸಾವಿರ ರೂಪಾಯಿಗೆ ಹೊಸ ಬೇರೆ ಇನ್ವರ್ಟರ್ ಖರೀದಿಸಲು ಕಷ್ಟವಾಗುವವರು ಈ ರೀತಿ ಬಳಕೆ ಮಾಡಬಹುದು.
PowerPod 500W ವರೆಗೆ ವಿದ್ಯುತ್ ಉತ್ಪಾದಿಸಬಹುದು. ಇದು 1.5kWh ಬ್ಯಾಟರಿಯನ್ನು ಹೊಂದಿದ್ದು ಅದು 3 ಗಂಟೆಗಳವರೆಗೆ ಇರುತ್ತದೆ. ಇದು 5 ಎಲ್ಇಡಿ ಬಲ್ಬ್‌ಗಳು, 3 ಸೀಲಿಂಗ್ ಫ್ಯಾನ್‌ಗಳು, 1 ಟಿವಿ, 1 ಮೊಬೈಲ್ ಫೋನ್ ಚಾರ್ಜರ್ ಮತ್ತು 1 ವೈ-ಫೈ ರೂಟರ್ ರನ್ ಮಾಡಬಹುದು. ಪವರ್‌ಪಾಡ್ ತಂತ್ರಜ್ಞಾನವು ಪವರ್ ಕಟ್ ಹೆಚ್ಚು ಇರುವ ನಗರ ಮತ್ತು ಪಟ್ಟಣ, ಗ್ರಾಮದ ಜನರಿಗೆ ಅನುಕೂಲಕರವಾಗಿದೆ.
ಓಲಾ ಗಿಗ್
ಓಲಾ ಗಿಗ್ ಇ-ಸ್ಕೂಟರ್ ಅನ್ನು ಗಿಗ್ ಕೆಲಸಗಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ವಿಭಿನ್ನ ಫೀಚರ್‌ಗಳೊಂದಿಗೆ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. ಮೂಲ ರೂಪಾಂತರವು 39,999 ರೂಗಳ ಆರಂಭಿಕ ಬೆಲೆಯನ್ನು ಹೊಂದಿದೆ. ಕಡಿಮೆ ದೂರ ಪ್ರಯಾಣಿಸುವವರಿಗೆ ಸೂಕ್ತವಾಗಿದೆ. ಇದರ ಪ್ರಮಾಣೀಕೃತ ರೇಂಜ್ 112 ಕಿ.ಮೀ ಇದೆ. ಇದರಲ್ಲಿ ಗಂಟೆಗೆ 25 ಕಿ.ಮೀ. ವೇಗದಲ್ಲಿ ಹೋಗಬಹುದು. ಇದು 250 ವ್ಯಾಟ್ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಬರುತ್ತದೆ. ಗಿಗ್ ಪ್ಲಸ್ ದರ 49,999 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ದೂರದ ಪ್ರಯಾಣ ಮಾಡುವವರಿಗೆ ಅಥವಾ ಭಾರವಾದ ಲಗೇಜ್‌ನೊಂದಿಗೆ ಪ್ರಯಾಣಿಸುವ ಡೆಲಿವರಿ ಬಾಯ್‌ಗಳಂತಹ ಗಿಗ್ ಕೆಲಸ ಮಾಡುವವರಿಗೆ ಇದು ಹೆಚ್ಚು ಉಪಯುಕ್ತವಾಗಿದೆ. ಇದರಲ್ಲಿ ಗಂಟೆಗೆ 45 ಕಿಲೋಮೀಟರ್ ವೇಗದಲ್ಲಿ ಸಾಗಬಹುದು. ಈ ಎರಡೂ ಮಾದರಿಗಳು B2B ಖರೀದಿದಾರರಿಗೆ ಅಥವಾ ಬಾಡಿಗೆ ಯೂನಿಟ್‌ಗಳಾಗಿ ಮಾತ್ರ ಲಭ್ಯ ಇರುತ್ತವೆ.
ಓಲಾ ಎಸ್1 ಝಡ್
ನಗರ ಮತ್ತು ಸಣ್ಣ ಪಟ್ಟಣಗಳ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ. ಇದು ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಮೂಲ ಎಸ್1ಝಡ್ ದರ 59,999 ರೂಪಾಯಿ ಇರುತ್ತದೆ. ಇದು 2.9 kW ಹಬ್ ಮೋಟಾರ್ ಹೊಂದಿದೆ. ಸಿಂಗಲ್ ಅಥವಾ ಡ್ಯುಯಲ್ 1.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಕಾನ್ಫಿಗರೇಶನ್‌ಗಳನ್ನು ಬಳಸುತ್ತದೆ. ಎಸ್1ಝಡ್ ಡ್ಯುಯಲ್ ಬ್ಯಾಟರಿ ಸೆಟಪ್‌ನೊಂದಿಗೆ 146 ಕಿ.ಮೀ.ರೇಂಜ್ ನೀಡುತ್ತದೆ. ಈ ಇ-ಸ್ಕೂಟರ್ ಗಂಟೆಗೆ 70 ಕಿಮೀ ವೇಗದಲ್ಲಿ ಸಾಗುತ್ತದೆ. 1.8 ಸೆಕೆಂಡುಗಳಲ್ಲಿ 20 ಕಿಮೀ ವೇಗವನ್ನು ತಲುಪುತ್ತದೆ. ಎಸ್1 ಝಡ್‌ಪ್ಲಸ್ ಆವೃತ್ತಿಯ ದರ 64,999 ರೂನಿಂದ ಆರಂಭವಾಗುತ್ತದೆ.