Hyundai Car Price: ಹುಂಡೈ ಹೊಸ ಕಾರು ಬೇಕಿದ್ರೆ ಕೂಡಲೇ ಬುಕ್ ಮಾಡಿ; 2025ರ ಜನವರಿ 1 ರಿಂದ ಬೆಲೆ ಏರಿಕೆ ಖಚಿತ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Hyundai Car Price: ಹುಂಡೈ ಹೊಸ ಕಾರು ಬೇಕಿದ್ರೆ ಕೂಡಲೇ ಬುಕ್ ಮಾಡಿ; 2025ರ ಜನವರಿ 1 ರಿಂದ ಬೆಲೆ ಏರಿಕೆ ಖಚಿತ

Hyundai Car Price: ಹುಂಡೈ ಹೊಸ ಕಾರು ಬೇಕಿದ್ರೆ ಕೂಡಲೇ ಬುಕ್ ಮಾಡಿ; 2025ರ ಜನವರಿ 1 ರಿಂದ ಬೆಲೆ ಏರಿಕೆ ಖಚಿತ

ಹುಂಡೈ ಮೋಟಾರ್ ಇಂಡಿಯಾ ಪ್ರಸ್ತುತ ಭಾರತದಲ್ಲಿ 3 ಹ್ಯಾಚ್‌ಬ್ಯಾಕ್‌ಗಳು, 8 SUVಗಳು ಮತ್ತು 2 ಸೆಡಾನ್‌ಗಳನ್ನು ಒಳಗೊಂಡಂತೆ ಒಟ್ಟು 13 ಮಾದರಿಗಳು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. 2025ರ ಜನವರಿ 1 ರಿಂದ ತನ್ನೆಲ್ಲಾ ಕಾರುಗಳ ಬೆಲೆಯನ್ನು ಹೆಚ್ಚಿಸಲು ಮುಂದಾಗಿದೆ. 2024ರ ಡಿಸೆಂಬರ್ ನಲ್ಲಿ ಕಾರು ಖರೀದಿಸುವವರಿಗೆ ಡಿಸ್ಕೌಂಟ್ ಗಳು ಸಿಗಲಿವೆ. (ವರದಿ: ವಿನಯ್ ಭಟ್)

2025ರ ಜನವರಿ 1 ರಿಂದ ಹ್ಯುಂಡೈ ಮೋಟಾರ್ಸ್ ಇಂಡಿಯಾ ತನ್ನ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಲಿದೆ.
2025ರ ಜನವರಿ 1 ರಿಂದ ಹ್ಯುಂಡೈ ಮೋಟಾರ್ಸ್ ಇಂಡಿಯಾ ತನ್ನ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಲಿದೆ.

ನೀವು ಹೊಸ ವರ್ಷದ ಸಂದರ್ಭ ಹೊಸ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ಈ ತಿಂಗಲೇ ಈ ಕೆಲಸವನ್ನು ಪೂರ್ಣಗೊಳಿಸಿ. ಇಲ್ಲ, ಜನವರಿ 1 ರಿಂದ ಕಾರನ್ನು ಖರೀದಿಸುವುದು ದುಬಾರಿಯಾಗಬಹುದು. ಹುಂಡೈ ಮೋಟಾರ್ ಇಂಡಿಯಾ ತನ್ನ ಎಲ್ಲಾ ವಾಹನಗಳ ಬೆಲೆಯನ್ನು 2025ರ ಜನವರಿ 1 ರಿಂದ 25,000 ರೂಪಾಯಿಗಳಷ್ಟು ಹೆಚ್ಚಿಸಲಿದೆ. ಹೊಸ ವರ್ಷ ಪ್ರಾರಂಭವಾಗುವ ಮೊದಲು ನೀವು ಕಾರನ್ನು ಬುಕ್ ಮಾಡಿ ಖರೀದಿಸಿದರೆ, 25,000 ರೂ. ವರೆಗೆ ಉಳಿಸಲು ಸಾಧ್ಯವಾಗುತ್ತದೆ.

ಹುಂಡೈ ವಾಹನಗಳ ಬೆಲೆ 25,000 ರೂ. ಹೆಚ್ಚಳ

ಪ್ರಸ್ತುತ ಹುಂಡೈ ಕಾರುಗಳು ಮಾರುಕಟ್ಟೆಯಲ್ಲಿ 5.92 ಲಕ್ಷ ದಿಂದ 46.05 ಲಕ್ಷದವರೆಗೆ ಲಭ್ಯವಿದೆ. ಇದರಲ್ಲಿ ಹುಂಡೈ ಗ್ರಾಂಡ್ ಐ10 ನಿಯೋಸ್ ಬೆಲೆ ರೂ 5.92 ಲಕ್ಷ ರೂ. ಮತ್ತು ಹುಂಡೈ ಐಒನಿಕ್ 5 ಇವಿ ಬೆಲೆ 46.05 ಲಕ್ಷ ರೂ. ಆಗಿದೆ. ಹುಂಡೈನ ಫುಲ್ ಟೈಮ್ ಡೈರೆಕ್ಟರ್ ಮತ್ತು ಮುಖ್ಯಸ್ಥ ತರುಣ್ ಗಾರ್ಗ್ ಮಾತನಾಡಿ, ‘‘ನಮ್ಮ ವಾಹನಗಳ ಉತ್ಪಾದನಾ ವೆಚ್ಚ ಹೆಚ್ಚಾಗಿದೆ, ಇದರಿಂದಾಗಿ ನಾವು ವಾಹನಗಳ ಬೆಲೆಯನ್ನು ಹೆಚ್ಚಿಸಬೇಕಾಗಿದೆ. ಜನವರಿ 1 ರಿಂದ ಎಲ್ಲಾ ವಾಹನಗಳಿಗೂ ಬೆಲೆ ಏರಿಕೆ ಅನ್ವಯವಾಗಲಿದೆ,’’ ಎಂದು ಹೇಳಿದ್ದಾರೆ.

ಹುಂಡೈ ಮುಂಬರುವ ಕಾರುಗಳು

ಹುಂಡೈ ಮೋಟಾರ್ ಇಂಡಿಯಾ ಪ್ರಸ್ತುತ ಭಾರತದಲ್ಲಿ 3 ಹ್ಯಾಚ್‌ಬ್ಯಾಕ್‌ಗಳು, 8 SUVಗಳು ಮತ್ತು 2 ಸೆಡಾನ್‌ಗಳನ್ನು ಒಳಗೊಂಡಂತೆ ಒಟ್ಟು 13 ಮಾದರಿಗಳು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಮುಂಬರುವ ವರ್ಷದಲ್ಲಿ ಕಂಪನಿಯು ಹುಂಡೈ ಕ್ರೆಟಾ EV, ಹುಂಡೈ ಸಾಂಟಾ ಫೆ, ಹುಂಡೈ IONIQ 6, ಹುಂಡೈ ಇನ್‌ಸ್ಟರ್ ಸೇರಿದಂತೆ 4 ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ.

ಡಿಸೆಂಬರ್‌ನಲ್ಲಿ ಖರೀದಿಸಿದರೆ ಆಗುವ ಲಾಭ

2024ರ ವರ್ಷಾಂತ್ಯದೊಳಗೆ ಹುಂಡೈ ಕಾರು ಖರೀದಿಸಿದರೆ ಸಾವಿರಾರು ರೂಪಾಯಿ ಉಳಿತಾಯ ಮಾಡಬಹುದು. ಹೊಸ ವರ್ಷದ ಪ್ರಯುಕ್ತ ಸದ್ಯ ಆಫರ್ ನೀಡಲಾಗಿದೆ. ನೀವು ಹುಂಡೈ ವೆನ್ಯೂ ಖರೀದಿಸಿದರೆ, 75,629 ರೂ. ವರೆಗೆ ಉಳಿಸಬಹುದು. ವೆನ್ಯೂ E ನ ಆರಂಭಿಕ ಬೆಲೆ 9.12 ಲಕ್ಷದಿಂದ 11.29 ಲಕ್ಷ ರೂಪಾಯಿ ವರೆಗೆ ಇದೆ. ಹಾಗೆಯೆ ನೀವು ಹುಂಡೈ ಎಕ್ಸೆಟರ್ ಅನ್ನು ಖರೀದಿಸಲು ಬಯಸಿದರೆ, ಕಂಪನಿಯು ಡಿಸೆಂಬರ್ ಆಫರ್‌ನಲ್ಲಿ ಈ ಕಾರಿನ ಮೇಲೆ ರೂ. 52,972 ವರೆಗೆ ಉಳಿಸುವ ಅವಕಾಶವನ್ನು ನೀಡುತ್ತಿದೆ. i20 ಅನ್ನು ಖರೀದಿಸಿದರೆ 65,000 ರೂ. ವರೆಗೆ ಉಳಿಸಬಹುದು. ಇದಲ್ಲದೇ, ನೀವು ಗ್ರ್ಯಾಂಡ್ i10 NIOS ನಲ್ಲಿ 68,000 ರೂ. ವರೆಗೆ ಡಿಸ್ಕೌಂಟ್ ಪಡೆಯಬಹುದು.

ಕಾರು ಮಾರಾಟದಲ್ಲಿ ಕುಸಿತ

ನವೆಂಬರ್‌ನಲ್ಲಿ ಹುಂಡೈ ಕಾರು ಮಾರಾಟದಲ್ಲಿ ಕುಸಿತ ಕಂಡುಬಂದಿದೆ. 2024 ರ ನವೆಂಬರ್ ಮಾರಾಟ ಅಂಕಿಅಂಶಗಳು ವರ್ಷದಿಂದ ವರ್ಷಕ್ಕೆ ಶೇಕಡಾ 7 ರಷ್ಟು ಕುಸಿತವನ್ನು ಕಂಡಿವೆ. ಕಂಪನಿಯು 2023ರ ನವೆಂಬರ್ 65,801 ಕಾರುಗಳ ಮಾರಾಟವನ್ನು ದಾಖಲಿಸಿದೆ, ಇದು ಈ ವರ್ಷ 61,252 ಯುನಿಟ್‌ಗಳಿಗೆ ಇಳಿದಿದೆ. ಅದೇ ಸಮಯದಲ್ಲಿ, ಒಟ್ಟಾರೆ ದೇಶೀಯ ಮಾರಾಟದಲ್ಲಿ ಶೇಕಡಾ 2 ರಷ್ಟು ಕುಸಿತವನ್ನು ಅನುಭವಿಸಿದೆ. (ವರದಿ: ವಿನಯ್ ಭಟ್).

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.