ಅಯೋಧ್ಯೆ ದೀಪೋತ್ಸವದಲ್ಲಿ ಈ ಬಾರಿ ಗಮನಸೆಳೆಯಲಿದೆ ರಾವಣನ ಬೃಹತ್ ಪುಷ್ಪಕ ವಿಮಾನ, ಉರಿಯಲಿವೆ 25 ಲಕ್ಷ ಹಣತೆಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಯೋಧ್ಯೆ ದೀಪೋತ್ಸವದಲ್ಲಿ ಈ ಬಾರಿ ಗಮನಸೆಳೆಯಲಿದೆ ರಾವಣನ ಬೃಹತ್ ಪುಷ್ಪಕ ವಿಮಾನ, ಉರಿಯಲಿವೆ 25 ಲಕ್ಷ ಹಣತೆಗಳು

ಅಯೋಧ್ಯೆ ದೀಪೋತ್ಸವದಲ್ಲಿ ಈ ಬಾರಿ ಗಮನಸೆಳೆಯಲಿದೆ ರಾವಣನ ಬೃಹತ್ ಪುಷ್ಪಕ ವಿಮಾನ, ಉರಿಯಲಿವೆ 25 ಲಕ್ಷ ಹಣತೆಗಳು

ಶ್ರೀರಾಮಚಂದ್ರನ ಊರು ಅಯೋಧ್ಯೆಯಲ್ಲಿ ಇಂದಿನಿಂದ ಮೂರು ದಿನ ದೀಪೋತ್ಸವದ ಸಂಭ್ರಮ. ಈ ಬಾರಿ ರಾವಣನ ಬೃಹತ್ ಪುಷ್ಪಕ ವಿಮಾನದ ಪ್ರತಿಕೃತಿ ಸೆಲ್ಫಿ ಪಾಯಿಂಟ್ ಆಗಿ ಬಳಕೆಯಾಗಲಿದ್ದು, 5 ಅಡಿ ಎತ್ತರದ ಸೀತಾರಾಮಚಂದ್ರ ಹನುಮಂತರ ಪ್ರತಿಮೆಗಳೂ ಆಕರ್ಷಣೆಯಾಗಿ ಇರಲಿವೆ. ಅಯೋಧ್ಯೆಯನ್ನು ಬೆಳಗಲಿವೆ 25 ಲಕ್ಷ ಹಣತೆಗಳು. ಕಾರ್ಯಕ್ರಮಗಳು ಮತ್ತು ಇತರೆ ವಿವರ ಹೀಗಿದೆ-

ಅಯೋಧ್ಯೆ ದೀಪೋತ್ಸವದಲ್ಲಿ ಈ ಬಾರಿ ರಾವಣನ ಬೃಹತ್ ಪುಷ್ಪಕ ವಿಮಾನ ಗಮನಸೆಳೆಯಲಿದೆ. ದಾಖಲೆಯ 25 ಲಕ್ಷ ಹಣತೆಗಳು ಉರಿಯಲಿವೆ. ( ದೀಪೋತ್ಸವದ ಕಡತ ಚಿತ್ರ)
ಅಯೋಧ್ಯೆ ದೀಪೋತ್ಸವದಲ್ಲಿ ಈ ಬಾರಿ ರಾವಣನ ಬೃಹತ್ ಪುಷ್ಪಕ ವಿಮಾನ ಗಮನಸೆಳೆಯಲಿದೆ. ದಾಖಲೆಯ 25 ಲಕ್ಷ ಹಣತೆಗಳು ಉರಿಯಲಿವೆ. ( ದೀಪೋತ್ಸವದ ಕಡತ ಚಿತ್ರ) (PTI Photo/Nand Kumar)

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಂದಿನಿಂದ ಮೂರು ದಿನ ದೀಪೋತ್ಸವದ ಸಂಭ್ರಮ. ತ್ರೇತಾಯುಗದ ಸಂದರ್ಭಕ್ಕೆ ತಕ್ಕಂತೆ ಅಯೋಧ್ಯೆಯ ದೇವಾಲಯ ನಗರಿ ಸಿಂಗಾರಗೊಳ್ಳುತ್ತಿದ್ದು, ಇಂದಿನಿಂದ (ಅಕ್ಟೋಬರ್ 28) ಬುಧವಾರ (ಅಕ್ಟೋಬರ್ 30) ತನಕ ದೀಪೋತ್ಸವ ನಡೆಯಲಿದ್ದು, 10 ಬೃಹತ್ ವೇದಿಕೆ, 25 ಲಕ್ಷ ಹಣತೆಗಳನ್ನು ಸಜ್ಜುಗೊಳಿಸಲಾಗಿದೆ. ಅಯೋಧ್ಯೆ ನಿವಾಸಿಗಳು ಸಾಂಸ್ಕೃತಿಕ ಔತಣದ ನಿರೀಕ್ಷೆಯಲ್ಲಿದ್ದು, ಆಧ್ಯಾತ್ಮ, ಸಂಪ್ರದಾಯ ಮತ್ತು ಸಂಸ್ಕೃತಿಯ ಭವ್ಯ ಸಂಗಮವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರತಿಷ್ಠೆ ನೆರವೇರಿದ ಬಳಿಕ ನಡೆಯುತ್ತಿರುವ ಮೊದಲ ದೀಪೋತ್ಸವ ಇದು. ಈ ಬಾರಿ ಅಯೋಧ್ಯೆ ನಗರದ ತುಂಬಾ 25 ಲಕ್ಷಣ ಮಣ್ಣಿನ ದೀಪಗಳನ್ನು ಉರಿಸಿ ರಾಮನನ್ನು ಆರಾಧಿಸಲಾಗುತ್ತದೆ.

ಅಯೋಧ್ಯೆಯ ರಾಮಕಥಾ ಪಾರ್ಕ್‌ನಲ್ಲಿ ರಾಮಲೀಲಾ ಪ್ರದರ್ಶನ

ಅಯೋಧ್ಯೆಯ ರಾಮಕಥಾ ಪಾರ್ಕ್‌ನಲ್ಲಿ ಸಾಂಸ್ಕೃತಿಕ ವೈವಿಧ್ಯ ನಡೆಯಲಿದ್ದು, ಆರು ರಾಷ್ಟ್ರಗಳ ಅಂದರೆ ಮ್ಯಾನ್ಮಾರ್‌, ನೇಪಾಳ, ಥಾಯ್ಲೆಂಡ್‌, ಮಲೇಷ್ಯಾ, ಕಾಂಬೋಡಿಯಾ, ಇಂಡೋನೇಷ್ಯಾದ ಕಲಾವಿದರು ರಾಮಲೀಲಾವನ್ನು ಪ್ರದರ್ಶಿಸಲಿದ್ದಾರೆ. ಇವರಲ್ಲದೆ, ಉತ್ತರಾಖಂಡದ ಕಲಾವಿದರ ಗುಂಪು ಕೂಡ ರಾಮಲೀಲಾ ಪ್ರದರ್ಶನ ನೀಡಲಿದೆ.

ಸಹರಾನ್‌ಪುರದ ರಂಜನಾ ನೆವ್ ಅವರು ರಾಮಾಯಣ ನೃತ್ಯ ಪ್ರದರ್ಶನವನ್ನು ನೀಡಲಿದ್ದಾರೆ. ಆಗ್ರಾದ “ಪ್ರೀತಿ ಕೆ ಪರಿಂದೇ” ಎಂದು ಕರೆಯಲ್ಪಡುವ ಪ್ರೀತಿ ಸಿಂಗ್ ಅವರು ಹನುಮಾನ್‌ ಚಾಲೀಸಾ ನೃತ್ಯ ನಾಟಕ ಪ್ರದರ್ಶಿಸಲಿದ್ದಾರೆ. ದೆಹಲಿಯ ಮೈತ್ರೇಯ ಪಹಾರಿ ಮತ್ತು ಅವರ ತಂಡವು “ಶ್ರೀ ರಾಮಚರಿತಮಾನಸ್ ನಾರಿ ಶಕ್ತಿ” ಯನ್ನು ಪ್ರಸ್ತುತಪಡಿಸಲಿದ್ದಾರೆ. ಇದರಲ್ಲಿ ರಾಮಾಯಣ ಕಥೆಗಳಲ್ಲಿರುವ ಸ್ತ್ರೀ ಶಕ್ತಿಯನ್ನು ಕೊಂಡಾಡಲಾಗುತ್ತದೆ. ಈ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 7 ಗಂಟೆಗೆ ಶುರುವಾಗಲಿದೆ.

ಅಯೋಧ್ಯೆ ಲತಾ ಚೌಕ್‌ನಲ್ಲಿ ಗಮನಸೆಳೆಯಲಿದೆ ಭಾರಿ ಗಾತ್ರದ ಪುಷ್ಪಕ ವಿಮಾನ

ಅಯೋಧ್ಯೆ ಲತಾ ಚೌಕ್‌ನಲ್ಲಿ ಸ್ಥಾಪಿಸಲಾಗುತ್ತಿರುವ ಭವ್ಯ 'ಪುಷ್ಪಕ ವಿಮಾನ'ದ ಮೇಲೆ ಈ ಬಾರಿ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ರಾಮಾಯಣದ ಕಥೆಯಲ್ಲಿ ರಾವಣನು ಪುಷ್ಪಕ ವಿಮಾನವನ್ನು ಬಳಸಿದ ಉಲ್ಲೇಖವಿದೆ. ಯುದ್ಧಗಳಲ್ಲೂ ಪುಷ್ಪಕ ವಿಮಾನ ಬಳಕೆಯಾಗಿದ್ದು, ಅದು ಅಪೇಕ್ಷಿತ ಸ್ಥಾನಕ್ಕೆ ರಾವಣನನ್ನು ಕರೆದೊಯ್ಯುತ್ತಿತ್ತು ಎಂಬ ಅಂಶವೂ ಇದೆ. ಹೀಗಾಗಿ ಪ್ರವಾಸೋದ್ಯಮದ ದೃಷ್ಟಿಯಿಂದ ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಪುಷ್ಪಕ ವಿಮಾನವನ್ನು ಸ್ಥಾಪಿಸುವುದಕ್ಕೆ ಮತ್ತು ಅಯೋಧ್ಯೆಯನ್ನು ಶೃಂಗರಿಸುವುದಕ್ಕಾಗಿ ವಿಶೇಷ ಏಜೆನ್ಸಿಗಳನ್ನು ನೇಮಕ ಮಾಡಿದೆ.

ಲತಾಚೌಕ್‌ನಲ್ಲಿ ಪುಷ್ಪಕ ವಿಮಾನವನ್ನು ಸ್ಥಾಪಿಸಲಾಗುತ್ತಿದೆ. ಇದು 36 ಅಡಿ ಎತ್ತರ ಮತ್ತು 24 ಅಡಿ ಅಗಲ ಇದ್ದು, ಸೆಲ್ಫಿ ಪಾಯಿಂಟ್ ಮಾದರಿಯಲ್ಲಿ ಬಳಕೆಯಾಗಲಿದೆ. ಪುಷ್ಪಕ ವಿಮಾನದ ಸನಿಹವೇ 5 ಅಡಿ ಎತ್ತರ ಶ್ರೀರಾಮ, ಸೀತಾ ಮತ್ತು ರಾಮನ ಮೂವರು ಸಹೋದರರು, ಹನುಮಾನ್ ದೇವರ ಫೈಬರ್‌ ಪ್ರತಿಮೆಗಳನ್ನೂ ಸ್ಥಾಪಿಸಲಾಗುತ್ತದೆ ಎಂದು ವಿವಿಡ್ ಇಂಡಿಯಾ ಅಡ್ವರ್ಟೈಸಿಂಗ್ ಮತ್ತು ಮಾರ್ಕೆಟಿಂಗ್ ಕಂಪನಿಯ ಸವಿನಾ ಜೈಟ್ಲಿ ತಿಳಿಸಿದ್ದಾಗಿ ಈ ಟಿವಿ ಭಾರತ್ ವರದಿ ಮಾಡಿದೆ.

ದೆಹಲಿ ಮತ್ತು ಲಕ್ನೋದಿಂದ ತಂಡಗಳು ಬಂದಿದ್ದರೂ, ಸ್ಥಳೀಯ ಕುಶಲಕರ್ಮಿಗಳೇ ಕೆಲಸದಲ್ಲಿ ತೊಡಗಿಸಿಕೊಂಡಿರುವಂಥದ್ದು. ರಾಮ್ ಕಿ ಪೈಡಿಯಲ್ಲಿ 8 ಅಡಿ ಎತ್ತರದ ರಾಮ್ ದರ್ಬಾರ್, 11 ಥೀಮ್ ಗೇಟ್‌ಗಳನ್ನು ಸ್ಥಾಪಿಸಲಾಗುತ್ತಿದ್ದು, ಅದರಲ್ಲಿ 3 ಗೇಟ್‌ಗಳು ರಾಮ್ ಕಥಾ ಪಾರ್ಕ್‌ನಲ್ಲೇ ಇರುತ್ತವೆ ಎಂದು ವರದಿ ವಿವರಿಸಿದೆ.

ಮುಖ್ಯ ದ್ವಾರಗಳನ್ನು 10 ಕ್ವಿಂಟಾಲ್ ಹೂವಿನಿಂದ ಅಲಂಕರಿಸಲಾಗುತ್ತಿದೆ. ರಾಮಮಂದಿರಕ್ಕೆ ಹೋಗುವ ನಾಲ್ಕು ಮುಖ್ಯದ್ವಾರಗಳನ್ನು ಅಲಂಕರಿಸುವ ಕೆಲಸ ನಡೆಯುತ್ತಿದ್ದು, ಇದಕ್ಕಾಗಿ 10 ಕ್ವಿಂಟಾಲ್ ಹೂವುಗಳನ್ನು ಬಳಸಿಕೊಂಡು ತೋರಣ ಕಟ್ಟಲಾಗುತ್ತಿದೆ. ರಾಮ್ ಕಿ ಪೈಡಿ ಸೇರಿ 55 ಘಾಟ್‌ಗಳಲ್ಲಿ 25 ಲಕ್ಷ ದೀಪಗಳನ್ನು ಬೆಳಗಿಸುವ ಗುರಿಯನ್ನು ನಿಗದಿಪಡಿಸಲಾಗಿದೆ. ಮೊದಲ ಬಾರಿಗೆ 10,000 ಅಯೋಧ್ಯೆ ವಾಸಿಗಳು ಉತ್ಸವದಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದಿದ್ದಾರೆ ಎಂದು ವರದಿ ವಿವರಿಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.