Kedarnath Temple: ಉತ್ತರಾಖಂಡ್‌ನ ಕೇದಾರನಾಥ ದೇವಾಲಯದಲ್ಲಿ ಫೋಟೋಗ್ರಫಿ, ವಿಡಿಯೊ ಚಿತ್ರೀಕರಣ ನಿಷೇಧ; ಇದೇ ಕಾರಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kedarnath Temple: ಉತ್ತರಾಖಂಡ್‌ನ ಕೇದಾರನಾಥ ದೇವಾಲಯದಲ್ಲಿ ಫೋಟೋಗ್ರಫಿ, ವಿಡಿಯೊ ಚಿತ್ರೀಕರಣ ನಿಷೇಧ; ಇದೇ ಕಾರಣ

Kedarnath Temple: ಉತ್ತರಾಖಂಡ್‌ನ ಕೇದಾರನಾಥ ದೇವಾಲಯದಲ್ಲಿ ಫೋಟೋಗ್ರಫಿ, ವಿಡಿಯೊ ಚಿತ್ರೀಕರಣ ನಿಷೇಧ; ಇದೇ ಕಾರಣ

ಕೇದಾರನಾಥ ದೇವಾಲಯದಲ್ಲಿ ಹೊಸದಾಗಿ ಜಾರಿಗೆ ತಂದಿರುವ ಫೋಟೋ, ವಿಡಿಯೋ ಚಿತ್ರೀಕರಣ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಅಲ್ಲಿನ ಸಮಿತಿ ದೇವಾಲಯದ ಆವರಣದೊಳಗೆ ಎಚ್ಚರಿಕೆ ಫಲಕಗಳನ್ನು ಹಾಕಿದೆ.

ಕೇದಾರನಾಥ ದೇವಾಲಯದಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣವನ್ನು ನಿಷೇಧಿಸಲಾಗಿದೆ
ಕೇದಾರನಾಥ ದೇವಾಲಯದಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣವನ್ನು ನಿಷೇಧಿಸಲಾಗಿದೆ

ದೆಹಲಿ: ಉತ್ತರ ಭಾರತದ (North India) ಪ್ರಸಿದ್ಧ ಹಾಗೂ ಹಿಂದುಗಳ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಉತ್ತರಾಖಂಡ್‌ನ (Uttarakhand) ಕೇದಾರನಾಥ ದೇವಾಲಯದ (Kedarnath Temple) ಆವರಣದಲ್ಲಿ ಫೋಟೋ (Photography) ಹಾಗೂ ವಿಡಿಯೊ ಚಿತ್ರೀಕರಣವನ್ನು (Videography Prohibition) ನಿಷೇಧಿಸಲಾಗಿದೆ.

ದೇವಾಲಯದ ಬಳಿ ಅಸಭ್ಯವಾಗಿ ಫೋಟೋ ತೆಗೆಯುವುದು, ವಿಡಿಯೊ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇತ್ತೀಚೆಗೆಷ್ಟೇ ಮಹಿಳಾ ಬ್ಲಾಗರ್‌ವೊಬ್ಬರು ದೇವಾಲಯದ ಎದುರು ತನ್ನ ಗೆಳೆಯನಿಗೆ ಪ್ರಪೋಸ್ ಮಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇಂತಹ ಘಟನೆಗಳು ಹೆಚ್ಚಾಗುತ್ತಿದ್ದ ಕಾರಣ ಶ್ರೀಬದರಿನಾಥ-ಕೇದಾರನಾಥ ದೇವಾಲಯ ಸಮಿತಿ (BKTC) ಇಂದು (ಜುಲೈ 17, ಸೋಮವಾರ) ಪವಿತ್ರ ದೇವಾಲಯದಲ್ಲಿ ಫೋಟೋ ಅಥವಾ ವಿಡಿಯೊ ಚಿತ್ರೀಕರಣವನ್ನು ನಿಷೇಧಿಸುತ್ತಿರುವುದಾಗಿ ಘೋಷಿಸಿದೆ.

ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ದೇವಾಲಯದ ಆವರಣದ ವಿವಿಧ ಸ್ಥಳಗಳಲ್ಲಿ ಎಚ್ಚರಿಕೆಯ ಫಲಕಗಳನ್ನು ಹಾಕಿದ್ದು, ಅದರಲ್ಲಿ ಮೊಬೈಲ್ ಫೋನ್‌ಗಳೊಂದಿಗೆ ದೇವಾಲಯದ ಆವರಣವನ್ನು ಪ್ರವೇಶಬೇಡಿ, ಯಾವುದೇ ರೀತಿಯ ಛಾಯಾಚಿತ್ರ ಮತ್ತು ವಿಡಿಯೊಗ್ರಫಿಯನ್ನು ದೇವಾಲಯದ ಒಳಗೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬರೆದಿರುವ ಈ ಬೋರ್ಡ್‌ಗಳಲ್ಲಿ ಸಮಿತಿಯ ಆದೇಶವನ್ನು ಪಾಲಿಸದವರ ವಿರುದ್ಧ ಕಾನೂನು ಕ್ರಮ ಜರಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ. ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇದೆ ಎಂದು ಬರೆದಿರುವ ಫಲಕಗಳನ್ನು ಅಲ್ಲಲ್ಲಿ ಹಾಕಲಾಗಿದೆ.

ಇತ್ತೀಚೆಗಷ್ಟೇ ದೇವಸ್ಥಾನದ ಮುಂದೆ ಮಹಿಳಾ ಬ್ಲಾಗರ್ ತನ್ನ ಗೆಳೆಯನಿಗೆ ಪ್ರಪೋಸ್ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಬಳಿಕ ಎಚ್ಚತ್ತ ಸಮಿತಿಯು ಕೇದಾರನಾಥ ಪೊಲೀಸರಿಗೆ ಪತ್ರ ಬರೆದು ದೇವಸ್ಥಾನದ ಸುತ್ತಮುತ್ತ ವಿಡಿಯೊ ಮಾಡುವುದನ್ನು ನಿಷೇಧಿಸಬೇಕೆಂದು ಮನವಿ ಮಾಡಿತ್ತು.

ದೇವಾಲಯದ ಸುತ್ತಲಿನ ಪ್ರದೇಶವನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲು ಹಾಗೂ ಯೂಟ್ಯೂಬ್ ಶಾರ್ಟ್ ವಿಡಿಯೊ/ ವಿಡಿಯೊ/ ಇನ್‌ಸ್ಟಾಗ್ರಾಮ್‌ ರೀಲ್ಸ್‌ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಕೇದಾರನಾಥ ಧಾಮ್ ಪೊಲೀಸರಿಗೆ ಬಿಕೆಟಿಎಸಿ ಪತ್ರದಲ್ಲಿ ಕೋರಿದೆ.

ಛಾಯಾಚಿತ್ರ, ವಿಡಿಯೊ ಚಿತ್ರೀಕರಣ ಜೊತೆಗೆ ದೇವಸ್ಥಾನಕ್ಕೆ ಬರುವ ಭಕ್ತರು ಸೂಕ್ತ ಬಟ್ಟೆಗಳನ್ನು ಧರಿಸುವಂತೆ ಒತ್ತಾಯಿಸಿದ್ದು, ದೇವಾಲಯದ ಆವರಣದಲ್ಲಿ ಡೇರೆಗಳು ಅಥವಾ ಶಿಬಿರಗಳನ್ನು ಹಾಕದಂತೆ ಸೂಚಿಸಲಾಗಿದೆ.

ಈ ಹಿಂದೆ ಕೆಲವು ಯಾತ್ರಾರ್ಥಿಗಳು ದೇವಸ್ಥಾನದೊಳಗೆ ಅಸಭ್ಯವಾಗಿ ಫೋಟೋಗಳನ್ನು ತೆಗೆದುಕೊಳ್ಳುವಾಗ ಸಿಕ್ಕಿಬಿದ್ದಿದ್ದರು. ಹೀಗಾಗಿ ಕೇದಾರನಾಥಕ್ಕೆ ಬರುವ ಯಾತ್ರಾರ್ಥಿಗಳು ಸಾಧಾರಣ ಉಡುಗೆ ತೊಡುವಂತೆ ಸೂಚಿಸಲಾಗಿದೆ ಎಂದು ಶ್ರೀಬದರಿನಾಥ್ ಕೇದಾರನಾಥ್ ದೇವಾಲಯ ಸಮಿತಿ ಅಧ್ಯಕ್ಷ ಅಜಯ್ ಅಜೇಂದ್ರ ಎಎನ್‌ಐಗೆ ತಿಳಿಸಿದ್ದಾರೆ.

ಉತ್ತರಾಖಂಡ್‌ನ ರುದ್ರಪ್ರಯಾಗ ಜಿಲ್ಲೆಯ ಪರ್ವತಗಳ ಮಧ್ಯ ಇರುವ ಪುರಾತನ ಕೇದಾರನಾಥ ದೇವಾಲಯದ ವಾರ್ಷಿಕ ದರ್ಶನಕ್ಕಾಗಿ ಲಕ್ಷಾಂತರ ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಹಾಗೂ ಎಲ್ಲಕ್ಕಿಂತ ಎತ್ತರದ ಈ ಪವಿತ್ರ ದೇವಾಲಯವು ಸಮುದ್ರ ಮಟ್ಟದಿಂದ 3,584 ಮೀಟರ್ ಎತ್ತರದಲ್ಲಿದೆ.

ಮಳೆಗಾಲದಲ್ಲಿ ಇಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಪ್ರವಾಸಿಗರು ಪರದಾಡುವಂತಹ ಪರಿಸ್ಥಿತಿ ಕೂಡ ಉಂಟಾಗಿತ್ತು. ಇಲ್ಲಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಸೇನೆ ಹಾಗೂ ಪೊಲೀಸರು ಬಿಗಿ ಭದ್ರತೆಯನ್ನು ಒದಿಸುತ್ತಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.