ಕನ್ನಡ ಸುದ್ದಿ  /  Nation And-world  /  Bangalore News Many Ministers From Karnataka Including Dcm Dks Camping For Telangana Assembly Elections Kub

Telangana Elections: ತೆಲಂಗಾಣ ಚುನಾವಣೆ: ಕರ್ನಾಟಕದ ಹಲ ಸಚಿವರಿಗೆ ಉಸ್ತುವಾರಿ ಹೊಣೆ

Telangana elections ನೆರೆಯ ತೆಲಂಗಾಣ ರಾಜ್ಯದಲ್ಲಿ ನವೆಂಬರ್‌ 30 ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಪ್ರಚಾರ ಕಾವು ಏರಿದ್ದು, ಕರ್ನಾಟಕದಿಂದಲೂ ಹಲವಾರು ಸಚಿವರು, ಮುಖಂಡರು ಕಾಂಗ್ರೆಸ್‌ ಪರ ಪ್ರಚಾರದಲ್ಲಿ ನಿರತರಾಗಿದ್ದಾರೆ.

ತೆಲಂಗಾಣದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್‌ ಅಹಮದ್‌ ಖಾನ್‌ ಪ್ರಚಾರ ಕೈಗೊಂಡರು.
ತೆಲಂಗಾಣದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್‌ ಅಹಮದ್‌ ಖಾನ್‌ ಪ್ರಚಾರ ಕೈಗೊಂಡರು.

ಬೆಂಗಳೂರು: ತೆಲಂಗಾಣ ವಿಧಾನಸಭೆ ಚುನಾವಣೆ ರಂಗೇರಿರುವ ನಡುವೆ ಕರ್ನಾಟಕ ಸರ್ಕಾರದ ಹಲವು ಸಚಿವರು ಹಾಗೂ ಮುಖಂಡರಿಗೆ ಚುನಾವಣೆ ಹೊಣೆ ನೀಡಲಾಗಿದೆ.

ಅದರಲ್ಲೂ ಸಿದ್ದರಾಮಯ್ಯ ಅವರ ಸಂಪುಟದ ಹತ್ತಕ್ಕೂ ಹೆಚ್ಚು ಸಚಿವರು ಈಗಾಗಲೇ ತೆಲಂಗಾಣ ರಾಜ್ಯದಲ್ಲಿಯೇ ಬೀಡು ಬಿಟ್ಟು ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ.

ಹೊಸ ರಾಜ್ಯ ತೆಲಂಗಾಣದಲ್ಲಿ ಈಗಾಗಲೇ ಭಾರತ ರಾಷ್ಟ್ರ ಸಮಿತಿ( BRS) ಎರಡು ಬಾರಿ ಅಧಿಕಾರದಲ್ಲಿದ್ದು ಮೂರನೇ ಬಾರಿಗೆ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಕಾಂಗ್ರೆಸ್‌ ಕೂಡ ಪ್ರಯತ್ನಿಸುತ್ತಿದೆ. ಕಾಂಗ್ರೆಸ್‌ಗೆ ತೆಲಂಗಾಣದಲ್ಲಿ ನಾಯಕರ ಕೊರತೆ ಕಾಡುತ್ತಿದೆ. ಈ ಕಾರಣದಿಂದ ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿರುವುದರಿಂದ ಇಲ್ಲಿನ ಸಚಿವರು, ಮುಖಂಡರಿಗೆ ಹೊಣೆ ನೀಡಲಾಗುತ್ತಿದೆ.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಬಾರಿ ತೆಲಂಗಾಣಕ್ಕೆ ತೆರಳಿ ಪ್ರಚಾರ ಮಾಡಿ ಬಂದಿದ್ಧಾರೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಹಲವು ಬಾರಿ ತೆಲಂಗಾಣಕ್ಕೆ ಭೇಟಿ ನೀಡಿ ಶಕ್ತಿ ತುಂಬಿದ್ಧಾರೆ. ಈಗಲೂ ನಾಲ್ಕು ದಿನದಿಂದ ತೆಲಂಗಾಣದಲ್ಲಿಯೇ ಬೀಡು ಬಿಟ್ಟಿದ್ದು ಪ್ರಚಾರ ನಡೆಸುತ್ತಲೇ ಇದ್ದಾರೆ. ಸಚಿವ ಜಮೀರ್‌ ಅಹಮದ್‌ ಖಾನ್‌ ಅವರಿಗೆ ಹಲವು ಕ್ಷೇತ್ರಗಳ ಉಸ್ತುವಾರಿ ವಹಿಸಿದ್ದು ಅವರೂ ಪ್ರಚಾರದಲ್ಲಿ ನಿರತರು. ಹಿರಿಯ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್‌ ಕೂಡ ಪ್ರಚಾರ ಕೈಗೊಂಡಿದ್ದಾರೆ. ಸಚಿವೆ ಲಕ್ಷ್ಮಿಹೆಬ್ಬಾಳಕರ್‌ ತೆಲಂಗಾಣದಲ್ಲಿ ಪ್ರಚಾರ ನಡೆಸಿದ್ಧಾರೆ. ಡಾ.ಎಂ.ಸಿ.ಸುಧಾಕರ್‌, ಕ್ರೀಡಾ ಸಚಿವ ಬಿ.ನಾಗೇಂದ್ರ ಹಲವು ಕ್ಷೇತ್ರಗಳಲ್ಲಿ ಸುತ್ತು ಹಾಕಿದ್ದಾರೆ.

ಅದರಲ್ಲೂ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಕಾಂಗ್ರೆಸ್‌ ಆರು ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿದೆ. ಅಲ್ಲದೇ ಗ್ಯಾರಂಟಿ ಯೋಜನೆಗಳನ್ನೂ ಅನುಷ್ಠಾನಕ್ಕೆ ತಂದಿದೆ.

ಈಗ ತೆಲಂಗಾಣ ಚುನಾವಣೆಗೂ ಕಾಂಗ್ರೆಸ್‌ ಕರ್ನಾಟಕ ಮಾದರಿಯ ಭರವಸೆಗಳನ್ನೇ ನೀಡಿದೆ. ಈ ಕಾರಣದಿಂದಲೂ ಕರ್ನಾಟಕದಲ್ಲಿ ಘೋಷಿಸಲಾದ ಯೋಜನೆಗಳು, ಅವುಗಳ ಜಾರಿ, ಜನರಿಗೆ ಅದರಿಂದ ಲಾಭದ ಕುರಿತು ಮತದಾರರಿಗೆ ಮನವರಿಕೆ ಮಾಡಿಕೊಡಲು ಕರ್ನಾಟಕದ ಸಚಿವರಿಗೆ ಹೊಣೆ ನೀಡಲಾಗಿದೆ. ಕರ್ನಾಟಕದ ಐದಕ್ಕೂ ಹೆಚ್ಚು ಜಿಲ್ಲೆಗಳ ಗಡಿಯನ್ನು ತೆಲಂಗಾಣ ಹಂಚಿಕೊಂಡಿದೆ. ತೆಲುಗು ಹಿನ್ನೆಲೆ ಇರುವ ಸಚಿವರನ್ನು ಹೆಚ್ಚು ಅಲ್ಲಿಗೆ ನಿಯೋಜಿಸಲಾಗಿದೆ.

ಕರ್ನಾಟಕದ ಗ್ಯಾರಂಟಿ ಯೋಜನೆ ಜಾರಿ ಹಾಗೂ ತೆಲಂಗಾಣದಲ್ಲಿ ಮಾಡಿರುವ ಘೋಷಣೆಗಳೇ ಅಲ್ಲಿನ ಚುನಾವಣೆ ವಿಷಯಗಳೇ ಆಗಿ ಮಾರ್ಪಟ್ಟಿವೆ.

ಭಾನುವಾರ ಪ್ರಚಾರ ಕೈಗೊಂಡಿದ್ದ ಸಿಎಂ ಸಿದ್ದರಾಮಯ್ಯ, ತೆಲಂಗಾಣದ ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಜಾರಿ ಮಾಡಲಾಗುತ್ತಿಲ್ಲ ಎಂಬ ಆರೋಪಗಳು ಚುನಾವಣಾ ಪ್ರೇರಿತ ಮತ್ತು ಸತ್ಯಕ್ಕೆ ದೂರವಾಗಿದೆ. ಕರ್ನಾಟಕ ರಾಜ್ಯದ ಜನತೆಯನ್ನು ಮೋಸ ಮಾಡಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಾಂಗ್ರೆಸ್ ಪಕ್ಷ ನೀಡಿರುವ ಎಲ್ಲ ಪಂಚ ಗ್ಯಾರಂಟಿಗಳನ್ನು 5 ವರ್ಷಗಳವರೆಗೆ ಅನುಷ್ಠಾನಗೊಳಿಸಲಿದೆ ತಿಳಿಸಿದರು.

ಧಾನಿ ಮೋದಿಯವರು ರಾಜಸ್ಥಾನದ ತಮ್ಮ ಚುನಾವಣಾ ಭಾಷಣದಲ್ಲಿ ಕರ್ನಾಟಕ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗುವುದಿಲ್ಲ. ಹಾಗೂ ರಾಜ್ಯದ ಆರ್ಥಿಕತೆ ಕುಂಠಿತವಾಗುತ್ತದೆ ಎಂದು ಟೀಕಿಸಿದ್ದರು. ಅವರ ಈ ಮಾತು ಸತ್ಯಕ್ಕೆ ದೂರವಾಗಿದ್ದು, ರಾಜ್ಯದ ಆರ್ಥಿಕತೆ ಸದೃಢವಾಗಿದ್ದು, ಅನುದಾನಕ್ಕೆ ಕೊರತೆ ಇಲ್ಲ. ಆದ್ದರಿಂದ ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಖಂಡಿತ ಜಯ ಸಾಧಿಸಲಿದ್ದು, ಅಧಿಕಾರಕ್ಕೆ ಬರಲಿದೆ. ತೆಲಂಗಾಣದಲ್ಲಿ ಪಕ್ಷ ನೀಡಿರುವ ಆರು ಗ್ಯಾರಂಟಿಗಳನ್ನು ಕಾಂಗ್ರೆಸ್ ಈಡೇರಿಸಲಿದ್ದು, ಇದರ ಬಗ್ಗೆ ತೆಲಂಗಾಣ ಜನರಿಗೆ ಯಾವುದೇ ಸಂಶಯ ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದರು.