HT Kannada Exclusive: ಭಾರತ-ರಷ್ಯಾ ಕೈಜೋಡಿಸಿದರೆ ವಿಶ್ವದ ಪ್ರಬಲ ಶಕ್ತಿ ನಾವೇ ಆಗುತ್ತೇವೆ; ಅಲೆಕ್ಸಿ ವಾಲ್ಕೋವ್ ಸಂದರ್ಶನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ht Kannada Exclusive: ಭಾರತ-ರಷ್ಯಾ ಕೈಜೋಡಿಸಿದರೆ ವಿಶ್ವದ ಪ್ರಬಲ ಶಕ್ತಿ ನಾವೇ ಆಗುತ್ತೇವೆ; ಅಲೆಕ್ಸಿ ವಾಲ್ಕೋವ್ ಸಂದರ್ಶನ

HT Kannada Exclusive: ಭಾರತ-ರಷ್ಯಾ ಕೈಜೋಡಿಸಿದರೆ ವಿಶ್ವದ ಪ್ರಬಲ ಶಕ್ತಿ ನಾವೇ ಆಗುತ್ತೇವೆ; ಅಲೆಕ್ಸಿ ವಾಲ್ಕೋವ್ ಸಂದರ್ಶನ

India-Russia Relationship: ರಷ್ಯಾದ ಸೆಂಟ್ ಪೀಟರ್ಸ್ ಬರ್ಗ್ ಇಂಟರ್‌ನ್ಯಾಷನಲ್ ಎಕಾನಮಿಕ್ ಫೋರಂ ನಿರ್ದೇಶಕ ಅಲೆಕ್ಸಿ ವಾಲ್ಕೋವ್ (Alexey Valkov) ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. 'ಹಿಂದೂಸ್ತಾನ್ ಟೈಮ್ಸ್‌ ಕನ್ನಡ'ದ ಎಚ್‌.ಮಾರುತಿ ಅವರಿಗೆ ಸಂದರ್ಶನ ನೀಡಿದ ಅವರು, 'ಎರಡೂ ದೇಶಗಳು ಒಗ್ಗೂಡಿದರೆ ಪ್ರಬಲ ಶಕ್ತಿಗಳಾಗುತ್ತವೆ' ಎಂಬ ಅಂಶವನ್ನು ಒತ್ತಿ ಹೇಳಿದರು.

ರಷ್ಯಾದ ಅರ್ಥಶಾಸ್ತ್ರಜ್ಞ ಅಲೆಕ್ಸಿ ವಾಲ್ಕೋವ್
ರಷ್ಯಾದ ಅರ್ಥಶಾಸ್ತ್ರಜ್ಞ ಅಲೆಕ್ಸಿ ವಾಲ್ಕೋವ್

ಬೆಂಗಳೂರು: ಜಗತ್ತಿನ ಹಲವು ದೇಶಗಳ ಜೊತೆಗೆ ನಮಗೆ ಸ್ನೇಹ ಸಂಬಂಧವಿದೆ. ಆದರೆ ಭಾರತದ ಜೊತೆಗಿನ ಸಂಬಂಧ ವಿಶೇಷವಾದುದು. ಏಕೆಂದರೆ ಭಾರತ ಎಲ್ಲ ಕ್ಷೇತ್ರಗಳಲ್ಲೂ ಶಕ್ತಿಯುತ ದೇಶವೇ. ಹಲವು ಕಾರಣಗಳಿಗಾಗಿ ಬೆಂಗಳೂರು ನಮ್ಮ ಸಂಬಂಧ ವೃದ್ಧಿ ಆಗಬೇಕಾಗಿರುವ ಮಹಾನಗರಿ. ಈ ಬಗ್ಗೆ ಅಭಿಮಾನವೂ ಇದೆ.

ಇದು ಇಂಟರ್ ನ್ಯಾಷನಲ್ ಎಕಾನಮಿಕ್ ಫೋರಂ (ಎಸ್‌ಪಿಐಇಎಫ್‌) ನಿರ್ದೇಶಕ ಅಲೆಕ್ಸಿ ವಾಲ್ಕೋವ್ ಅವರ ಸ್ಪಷ್ಟ ನುಡಿ.

ವಿಶ್ವದ ಪ್ರಮುಖ ಆರ್ಥಿಕ ವೇದಿಕೆಗಳಲ್ಲಿ ಒಂದಾದ ಸೇಂಟ್‌ ಪೀಟರ್ಸ್‌ಬರ್ಗ್ ಇಂಟರ್ ನ್ಯಾಷನಲ್ ಎಕನಾಮಿಕ್ ಫೋರಂ (ಎಸ್‌ಪಿಐಇಎಫ್‌) ನಿರ್ದೇಶಕ ಅಲೆಕ್ಸಿ ವಾಲ್ಕೋವ್ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದರು. 2024ರ ಜೂನ್‌ನಲ್ಲಿ ನಡೆಯಲಿರುವ ಬಂಡವಾಳ ಹೂಡಿಕೆ ಸಮಾವೇಶಕ್ಕೆ ಹೂಡಿಕೆದಾರರನ್ನು ಆಕರ್ಷಿಸಲು ಭಾರತ ಪ್ರವಾಸ ಕೈಗೊಂಡಿದ್ದರು. ಅವರು ಭೇಟಿ ನೀಡಿದ ಮೂರು ನಗರಗಳ ಪೈಕಿ ಬೆಂಗಳೂರು ಕೂಡಾ ಒಂದು. ಹಾಗೆ, ಬೆಂಗಳೂರಿಗೆ ಆಗಮಿಸಿದ್ದ ಅವರು ಹಿಂದೂಸ್ಥಾನ್ ಟೈಮ್ಸ್‌ ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೂಡಿಕೆದಾರರ ಸಮ್ಮೇಳನದ ಉದ್ದೇಶ ಮತ್ತು ವಿವರಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಭಾರತ-ರಷ್ಯಾ ಸಂಬಂಧ ಕುರಿತೂ ಮುಕ್ತವಾಗಿ ಮಾತನಾಡಿದರು. ಅವರ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಪ್ರ: ಸೇಂಟ್‌ ಪೀಟರ್ಸ್‌ಬರ್ಗ್ ಹೂಡಿಕೆದಾರರ ಸಮ್ಮೇಳನಕ್ಕೆ ಭಾರತದಲ್ಲಿ ಪ್ರತಿಕ್ರಿಯೆ ಹೇಗಿದೆ?

ಉ: 2024ರ ಜೂನ್ ತಿಂಗಳಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಹೂಡಿಕೆದಾರರರನ್ನು ಆಕರ್ಷಿಸಲು ಕೈಗೊಂಡ ಭಾರತ ಪ್ರವಾಸ ಯಶಸ್ವಿಯಾಗಿದೆ. ದೇಶದ ಮೂರು ರಾಜಧಾನಿಗಳನ್ನು ಸಂದರ್ಶಿಸಿದ್ದೇನೆ. ಭಾರತದ ರಾಜಧಾನಿ ದೆಹಲಿ, ಆರ್ಥಿಕ ರಾಜಧಾನಿ ಮುಂಬೈ ಮತ್ತು ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರು ನಗರಗಳಲ್ಲಿ ಹೂಡಿಕೆದಾರರರೊಂದಿಗೆ ಸಭೆ ಚರ್ಚೆ ನಡೆಸಿದ್ದೇನೆ. ಪ್ರತಿಕ್ರಿಯೆ ಅಶಾದಾಯಕವಾಗಿದ್ದು, ಭಾರತದಿಂದ ಕಳೆದ ವರ್ಷಕ್ಕಿಂತ ಹೆಚ್ಚಿನ ಬಂಡವಾಳ ಹೂಡಿಕೆಯ ನಿರೀಕ್ಷೆಯಲ್ಲಿದ್ದೇವೆ.

ಪ್ರ: ವಿಶೇಷವಾಗಿ ಬೆಂಗಳೂರಿನ ಪ್ರತಿಕ್ರಿಯೆ ಹೇಗಿದೆ?

ಬೆಂಗಳೂರು ದೇಶದ ಐಟಿ ರಾಜಧಾನಿ. ವಿಶೇಷವಾಗಿ ಇಲ್ಲಿನ ಉದ್ಯಮಿಗಳ ಪ್ರತಿಕ್ರಿಯೆ ಉತ್ತಮವಾಗಿತ್ತು. ಐಟಿ ಬಿಟಿ ಸೇರಿದಂತೆ ಎಲ್ಲ ವಲಯಗಳ ಉದ್ಯಮಿಗಳನ್ನು ಭೇಟಿ ಮಾಡಿ ಸಮ್ಮೇಳನಕ್ಕೆ ಆಹ್ವಾನಿಸಿದ್ದೇವೆ. ಪ್ರತಿಕ್ರಿಯೆ ಪೂರಕವಾಗಿದ್ದು ಬೆಂಗಳೂರಿನಿಂದಲೂ ಉತ್ತಮ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆಯಲ್ಲಿದ್ದೇವೆ. ಬೆಂಗಳೂರು ಸಾಕಷ್ಟು ಬೆಳವಣಿಗೆ ಹೊಂದಿರುವ ನಗರಿ. ಇದರ ಬಗ್ಗೆ ಅಭಿಮಾನವಿದೆ.

ಪ್ರ: ನಿಮ್ಮ ಆದ್ಯತಾ ವಲಯಗಳಾವುವು?

ಇಂತಹ ವಲಯವೇ ಆಗಬೇಕು ಎಂದೇನೂ ಇಲ್ಲ. ಒಟ್ಟಾರೆಯಾಗಿ ನಮ್ಮ ದೇಶದಲ್ಲಿ ಬಂಡವಾಳ ಹೂಡಿಕೆ ಮಾಡುವುದು ಮುಖ್ಯ. ಆರ್ಥಿಕ ಸಮ್ಮೇಳನದ ಉದ್ಧೇಶವೇ ಅದು. ನಾವು ಉದ್ಯಮಿಗಳು ಮತ್ತು ಕಂಪನಿಗಳ ಸಿಇಒಗಳನ್ನು ಗಮನದಲ್ಲಿಟ್ಟುಕೊಂಡಿದ್ದೇವೆಯೇ ಹೊರತು ವಲಯಗಳನ್ನಲ್ಲ.

ಪ್ರ: ರಷ್ಯಾ ಇತ್ತೀಚೆಗೆ ಮುಖ್ಯವಾಗಿ ಚೀನಾ ಮತ್ತು ಪಾಕಿಸ್ತಾನಕ್ಕೆ ಹೆಚ್ಚು ಮಹತ್ವ ನೀಡುತ್ತಿರುವುದು ಏಕೆ? ಈ ಪ್ರಶ್ನೆ ಏಕೆಂದರೆ ದಶಕಗಳಿಂದ ರಷ್ಯಾದ ಉತ್ತಮ ಪಾಲುದಾರ ರಾಷ್ಟ್ರ ಭಾರತ ಅಲ್ಲವೇ?

ಉ: ಭಾರತ ದೇಶ ರಷ್ಯಾದ ಉತ್ತಮ ಮಿತ್ರ ಎನ್ನುವುದರಲ್ಲಿ ಸಂಶಯವಿಲ್ಲ. ಭಾರತ ಸ್ವಾತಂತ್ರ್ಯ ಪಡೆದಾಗಿನಿಂದ ರಷ್ಯಾದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಭಾರತ- ರಷ್ಯಾ ವೇದಿಕೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಉಭಯ ದೇಶಗಳ ನಡುವೆ ಉತ್ತಮ ಸಂಬಂಧ ಇದೆ. ಒಂದು ವೇದಿಕೆಯ ಮುಖ್ಯಸ್ಥನಾಗಿ ಇದಕ್ಕಿಂತ ಹೆಚ್ಚಿನ ಉತ್ತರ ನೀಡುವುದು ಅಸಾಧ್ಯ.

ಪ್ರ: ಭಾರತ - ರಷ್ಯಾ ಕೈ ಜೋಡಿಸಿದರೆ ವಿಶ್ವದ ಪ್ರಬಲ ರಾಷ್ಟ್ರಗಳಾಗುವ ಸಾಧ್ಯತೆಗಳಿವೆ ಅಲ್ಲವೇ?

ಉ: ನಿಮ್ಮ ಊಹೆ ನಿಜ. ಬ್ರಿಕ್ಸ್ ಸಮ್ಮೇಳನದಲ್ಲೂ ಇದನ್ನೇ ಪ್ರತಿಪಾದಿಸಲಾಗಿದೆ. ಎರಡೂ ದೇಶಗಳ ನಡುವೆ ವಾಣಿಜ್ಯ ವ್ಯಾಪಾರ ಸಂಬಂಧಗಳೂ ಮತ್ತಷ್ಟು ಬೆಳೆದರೆ ಪ್ರಬಲ ದೇಶಗಳಾಗಿ ಹೊರಹೊಮ್ಮುವುದರಲ್ಲಿ ಸಂದೇಹವೇ ಇಲ್ಲ.

ಪ್ರ: ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಮೇಕ್ ಇನ್ ಇಂಡಿಯಾ ಕುರಿತು ನಿಮ್ಮ ಅಭಿಪ್ರಾಯವೇನು?

ಉ: 2017ರಲ್ಲಿ ರಷ್ಯಾಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮೇಕ್ ಇನ್ ಇಂಡಿಯಾ ಕುರಿತು ಪ್ರಸ್ತಾಪ ಮಾಡಿದ್ದು ನೆನಪಿಗೆ ಬರುತ್ತಿದೆ. ರಷ್ಯಾದ ಜೊತೆಗಿನ ಉತ್ತಮ ಸಂಬಂಧದ ನಡುವೆಯೂ ಭಾರತ ತನ್ನ ಬೆಳವಣಿಗೆಗೆ ಪ್ರತ್ಯೇಕ ಹಾದಿ ತುಳಿಯಲಿದೆ ಎಂದು ಹೇಳಿದ್ದರು. ಅದೇ ಮೇಕ್ ಇನ್ ಇಂಡಿಯಾ. ಇದರಿಂದ ಎರಡೂ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ಯಾವುದೇ ಧಕ್ಕೆ ಉಂಟಾಗಿಲ್ಲ. ಭಾರತದ ಸಿಐಐ, ಫಿಕ್ಕಿ, ಐಸಿಎಎಸ್ ನಿರಂತರವಾಗಿ ರಷ್ಯಾದ ಜೊತೆ ಸಂಪರ್ಕದಲ್ಲಿದ್ದು ಪರಸ್ಪರ ಸಹಕಾರ ಕುರಿತು ಚರ್ಚೆ ನಡೆಯುತ್ತಲೇ ಇರುತ್ತದೆ.

ಪ್ರ: ಭಾರತಕ್ಕೆ ಹೆಚ್ಚು ರಕ್ಷಣಾ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿರುವುದು ರಷ್ಯಾ. ಈ ಸಂಬಂಧ ಈಗಲೂ ಅನೂಚಾನವಾಗಿ ಮುಂದುವರೆದಿದೆಯೇ?

ಉ: ದಶಕಗಳಿಂದ ಈ ಸಾಂಪ್ರದಾಯಿಕ ವಲಯದಲ್ಲಿ ಕೊಡುಕೊಳ್ಳುವಿಕೆ ಮುಂದುವರೆಯುತ್ತಲೇ ಇದೆ. ಅಷ್ಟರ ಮಟ್ಟಿಗೆ ರಷ್ಯಾ ಭಾರತದ ನಂಬಿಕಸ್ಥ ಮಿತ್ರ ರಾಷ್ಟ್ರವಾಗಿದೆ. ರಕ್ಷಣಾ ವಲಯ ಕ್ಲಿಷ್ಟಕರ ಮತ್ತು ಸೂಕ್ಷ್ಮ ವಿಷಯವಾಗಿದ್ದು ಎರಡೂ ದೇಶಗಳ ಮುಖ್ಯಸ್ಥರು ಗಮನ ಹರಿಸುವ ವಿಷಯ ಇದಾಗಿದೆ.

ಪ್ರ: ಕೋವಿಡ್ ನಂತರ ಮತ್ತು ರಷ್ಯಾ ಮೇಲೆ ವಿಧಿಸಿರುವ ಆರ್ಥಿಕ ದಿಗ್ಭಂಧನ ಕುರಿತು ನಿಮ್ಮ ಅಭಿಪ್ರಾಯಗಳೇನು?

ಉ: ಕೋವಿಡ್ ನಂತರ ರಷ್ಯಾದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. 2021ರಿಂದ ಬಂಡವಾಳ ಹೂಡಿಕೆ ದುಪ್ಪಟ್ಟಾಗುತ್ತಿದೆ. ಉದಾಹರಣೆಗೆ 2023ರಲ್ಲಿ ನಡೆದ ಇದೇ ರೀತಿಯ ಆರ್ಥಿಕ ಸಮ್ಮೇಳನದಲ್ಲಿ 130 ದೇಶಗಳ 17 ಸಾವಿರ ಪ್ರತಿನಿಧಿಗಳೂ ಭಾಗವಹಿಸಿದ್ದರು. 6 ಸಾವಿರ ವ್ಯಾಪಾರ ವಹಿವಾಟಿನ ಪ್ರತಿನಿಧಿಗಳಿದ್ದರು. 33 ದೇಶಗಳ 4 ಸಾವಿರಕ್ಕೂ ಹೆಚ್ಚು ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು. 150ಕ್ಕೂ ಹೆಚ್ಚು ವಿದೇಶಗಳ ಉನ್ನತ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಮ್ಮೇಳನದಲ್ಲಿ 900ಕ್ಕೂ ಹೆಚ್ಚು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿತ್ತು.

ಪ್ರ: ವಿಶೇಷವಾಗಿ ಬೆಂಗಳೂರಿನಿಂದ ಯಾವ ವಲಯದಲ್ಲಿ ಬಂಡವಾಳ ನಿರೀಕ್ಷೆ ಮಾಡುತ್ತಿದ್ದೀರಿ?

ಉ: ಆಗಲೇ ಹೇಳಿದಂತೆ ನಿರ್ದಿಷ್ಟವಾಗಿ ಇಂಥದ್ದೇ ವಲಯ ಎಂದು ಗುರುತಿಸಿಲ್ಲ. ಬೆಂಗಳೂರಿನಲ್ಲಿ ಕೇವಲ ಐಟಿ ಬಿಟಿ ಮಾತ್ರವಲ್ಲದೆ ರಾಸಾಯನಿಕ ಕೈಗಾರಿಕೆಯಿಂದ ಹಿಡಿದು ಆಟೋಮೊಬೈಲ್‌ವರೆಗೆ ಎಲ್ಲ ರೀತಿಯ ಕೈಗಾರಿಕೆಗಳಿದ್ದು ಗರಿಷ್ಠ ಪ್ರಮಾಣದ ಕೈಗಾರಿಕಾ ಪ್ರತಿನಿಧಿಗಳನ್ನು ಭೇಟಿಯಾಗಿ ರಷ್ಯಾದಲ್ಲಿರುವ ವಿಫುಲ ಅವಕಾಶಗಳನ್ನು ಕುರಿತು ಮನವರಿಕೆ ಮಾಡಿಕೊಟ್ಟಿದ್ದೇವೆ.

ಪ್ರ: ಈಗಲೂ ರಷ್ಯಾ ಆದ್ಯತೆ ಭಾರತವೇ ಅಥವಾ ಚೀನಾ ದೇಶವೇ?

ಉ: ರಷ್ಯಾ ತನ್ನ ಬೆಳವಣಿಗೆಗಾಗಿ ಎಲ್ಲ ಅವಕಾಶಗಳನ್ನು ಮುಕ್ತವಾಗಿ ಇರಿಸಿಕೊಂಡಿದೆ. ಯಾವುದೇ ದೇಶದ ಸಂಬಂಧ ಬೆಳೆಸಿದರೂ ಪರಸ್ಪರ ಲಾಭವಾಗುವ ಉದ್ಧೇಶಗಳನ್ನು ನಿರೀಕ್ಷಿಸಲಾಗುತ್ತದೆ. ಅದು ಭಾರತವೇ ಆಗಿರಬಹುದು, ಚೀನಾ ದೇಶವೇ ಆಗಿರಬಹುದು. ರಷ್ಯಾದ ಮಾರುಕಟ್ಟೆಯನ್ನು ಯಾರು ಬೇಕಾದರೂ ಪ್ರವೇಶಿಸಬಹುದಾಗಿದೆ. ಆದರೂ ಭಾರತಕ್ಕೆ ವಿಶೇಷ ಸ್ಥಾನವಿದ್ದು, ಹೆಚ್ಚು ಹೆಚ್ಚು ದ್ವಿಪಕ್ಷೀಯ ಮಾತುಕತೆಗಳನ್ನು ಮತ್ತು ಆರ್ಥಿಕ ಬೆಳವಣಿಗೆಗಳನ್ನು ನಿರೀಕ್ಷಿಸುತ್ತದೆ. 2024ರ ಜೂನ್ ತಿಂಗಳಲ್ಲಿ ನಡೆಯಲಿರುವ ಈ ಸಮ್ಮೇಳನಕ್ಕೆ ಭಾರತದಿಂದ ಅತಿ ಹೆಚ್ಚು ಉದ್ಯಮಿಗಳು ಭಾಗವಹಿಸುವ ನಿರೀಕ್ಷೆ ಇದೆ. ಅನೇಕ ಕೇಂದ್ರ ಸಚಿವರೂ ಭಾಗಿಯಾಗಲಿದ್ದಾರೆ.

ಕೊನೆಯದಾಗಿ ಮತ್ತೊಮ್ಮೆ ರಷ್ಯಾ ಪರವಾಗಿ ಬೆಂಗಳೂರಿನ ಉದ್ಯಮಿಗಳನ್ನು ಬಂಡವಾಳ ಹೂಡಿಕೆಗಾಗಿ ಆಹ್ವಾನಿಸಲು ಹೆಮ್ಮೆಪಡುತ್ತೇನೆ ಎಂದು ಹೇಳುವ ಮೂಲಕ ಅಲೆಕ್ಸಿ ತಮ್ಮ ಸಂದರ್ಶನ ಅಂತ್ಯಗೊಳಿಸಿದರು.

ರಷ್ಯಾದ ಅರ್ಥಶಾಸ್ತ್ರಜ್ಞ ಅಲೆಕ್ಸಿ ವಾಲ್ಕೋವ್ ಅವರನ್ನು ಸಂದರ್ಶನ ಮಾಡುತ್ತಿರುವ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಪ್ರತಿನಿಧಿ ಮಾರುತಿ ಎಚ್
ರಷ್ಯಾದ ಅರ್ಥಶಾಸ್ತ್ರಜ್ಞ ಅಲೆಕ್ಸಿ ವಾಲ್ಕೋವ್ ಅವರನ್ನು ಸಂದರ್ಶನ ಮಾಡುತ್ತಿರುವ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಪ್ರತಿನಿಧಿ ಮಾರುತಿ ಎಚ್

(ಸಂದರ್ಶನ: ಎಚ್.ಮಾರುತಿ, ಬೆಂಗಳೂರು)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.