ಎಸ್‌ಬಿಐ ಸಿಬಿಒ ನೇಮಕಾತಿ: 2964 ಸರ್ಕಲ್ ಬೇಸ್‌ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 48480 ರೂ ಆರಂಭಿಕ ವೇತನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಎಸ್‌ಬಿಐ ಸಿಬಿಒ ನೇಮಕಾತಿ: 2964 ಸರ್ಕಲ್ ಬೇಸ್‌ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 48480 ರೂ ಆರಂಭಿಕ ವೇತನ

ಎಸ್‌ಬಿಐ ಸಿಬಿಒ ನೇಮಕಾತಿ: 2964 ಸರ್ಕಲ್ ಬೇಸ್‌ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 48480 ರೂ ಆರಂಭಿಕ ವೇತನ

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಆರಂಭಿಸಿದೆ. ಅರ್ಹ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಒಟ್ಟು 2964 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಎಸ್‌ಬಿಐ ಸಿಬಿಒ ನೇಮಕಾತಿ: 2964 ಸರ್ಕಲ್ ಬೇಸ್‌ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಎಸ್‌ಬಿಐ ಸಿಬಿಒ ನೇಮಕಾತಿ: 2964 ಸರ್ಕಲ್ ಬೇಸ್‌ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ (File)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸರ್ಕಲ್ ಬೇಸ್‌ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಪ್ರಕ್ರಿಯೆ ಮೂಲಕ ಬ್ಯಾಂಕ್‌ನಲ್ಲಿ 2964 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. 2025ರ ಮೇ 9ರಿಂದ ಪ್ರಕ್ರಿಯೆ ಆರಂಭವಾಗಿದ್ದು, ಮೇ 29 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳು ಇಲ್ಲಿವೆ.

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ (ಐಡಿಡಿ) ಸೇರಿದಂತೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಇದೇ ವೇಳೆ ವೈದ್ಯಕೀಯ, ಎಂಜಿನಿಯರಿಂಗ್, ಚಾರ್ಟರ್ಡ್ ಅಕೌಂಟೆಂಟ್, ಕಾಸ್ಟ್ ಅಕೌಂಟೆಂಟ್ ಮುಂತಾದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಕೂಡಾ ಈ ಪೋಸ್ಟ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಯೋಮಿತಿ

2025ರ ಏಪ್ರಿಲ್ 30ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯಸ್ಸಿನ ಮಿತಿ 21ರಿಂದ 30 ವರ್ಷಗಳ ನಡುವೆ ಇರಬೇಕು. ಅಂದರೆ ಅಭ್ಯರ್ಥಿಗಳು 01.05.1995ರ ನಂತರ ಮತ್ತು 30.04.2004ಕ್ಕಿಂತ ಮುಂಚೆ ಜನಿಸಿರಬೇಕು.

ಅರ್ಹತೆ

ಒಂದು ನಿರ್ದಿಷ್ಟ ಸರ್ಕಲ್‌ನ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಆ ಸರ್ಕಲ್‌ನ ಯಾವುದೇ ನಿರ್ದಿಷ್ಟ ಆಯ್ಕೆಯ ಸ್ಥಳೀಯ ಭಾಷೆಯಲ್ಲಿ ಪ್ರವೀಣರಾಗಿರಬೇಕು. ಅಂದರೆ ಓದುವುದು, ಬರೆಯುವುದು ಮತ್ತು ಅರ್ಥಮಾಡಿಕೊಳ್ಳುವುದು ಬರಬೇಕು. ಇಲ್ಲಿ ಸರ್ಕಲ್‌ ಎಂದರೆ ಒಂದು ಪ್ರದೇಶ ಅಥವಾ ರಾಜ್ಯವನ್ನು ಸೂಚಿಸುತ್ತದೆ. ಉದಾಹರಣೆಗೆ ಎಸ್‌ಬಿಐನ ಬೆಂಗಳೂರು ಸರ್ಕಲ್‌ನಲ್ಲಿ ಕರ್ನಾಟಕ ಬರುತ್ತದೆ. ಕರ್ನಾಟಕದಿಂದ ಅರ್ಜಿ ಸಲ್ಲಿಸುವವರಿಗೆ ಕನ್ನಡ ಭಾಷೆ ಬರಬೇಕು. ಅತ್ತ ಚೆನ್ನೈ ಸರ್ಕಲ್‌ನಲ್ಲಿ ತಮಿಳುನಾಡು ಮತ್ತು ಪಾಂಡಿಚೇರಿ ಸೇರುತ್ತದೆ. ಅಲ್ಲಿ ತಮಿಳು ಭಾಷೆ ಬರಬೇಕು.

ಆಯ್ಕೆ ಪ್ರಕ್ರಿಯೆ

ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ, ಸ್ಕ್ರೀನಿಂಗ್ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ. ಆನ್‌ಲೈನ್ ಪರೀಕ್ಷೆಯು 120 ಅಂಕಗಳಿಗೆ ಆಬ್ಜೆಕ್ಟಿವ್‌ ಟೆಸ್ಟ್ ಮತ್ತು 50 ಅಂಕಗಳಿಗೆ ಡಿಸ್ಕ್ರಿಪ್ಟಿವ್‌ ಟೆಸ್ಟ್ ಒಳಗೊಂಡಿರುತ್ತದೆ. ಆಬ್ಜೆಕ್ಟಿವ್‌ ಟೆಸ್ಟ್ ಮುಗಿದ ತಕ್ಷಣ ಡಿಸ್ಕ್ರಿಪ್ಟಿವ್‌ ಟೆಸ್ಟ್ ನಡೆಸಲಾಗುತ್ತದೆ.‌ ಅಭ್ಯರ್ಥಿಗಳು ತಮ್ಮ ವಿವರಣಾತ್ಮಕ ಪರೀಕ್ಷಾ ಉತ್ತರಗಳನ್ನು ಕಂಪ್ಯೂಟರ್‌ನಲ್ಲಿ ಟೈಪ್‌ ಮಾಡಬೇಕು. ಆಬ್ಜೆಕ್ಟಿವ್‌ ಟೆಸ್ಟ್ ಅವಧಿ 2 ಗಂಟೆಗಳು ಮತ್ತು ಇದು ಒಟ್ಟು 120 ಅಂಕಗಳ 4 ವಿಭಾಗಗಳನ್ನು ಒಳಗೊಂಡಿರುತ್ತದೆ. ಪ್ರತಿ ವಿಭಾಗಕ್ಕೆ ಪ್ರತ್ಯೇಕ ಸಮಯ ಇರುತ್ತದೆ. ಡಿಸ್ಕ್ರಿಪ್ಟಿವ್‌ ಪರೀಕ್ಷೆಯ ಅವಧಿ 30 ನಿಮಿಷಗಳು. ಇದು ಇಂಗ್ಲಿಷ್ ಭಾಷೆಯ ಪರೀಕ್ಷೆ (ಪತ್ರ ಬರೆಯುವುದು ಮತ್ತು ಪ್ರಬಂಧ) ಆಗಿದ್ದು, ಒಟ್ಟು 50 ಅಂಕಗಳಿಗೆ ಎರಡು ಪ್ರಶ್ನೆಗಳನ್ನು ಹೊಂದಿರುತ್ತದೆ.

ಸಂದರ್ಶನ

ಸಂದರ್ಶನವು 50 ಅಂಕಗಳನ್ನು ಒಳಗೊಂಡಿರುತ್ತದೆ. ಅಂತಿಮ ಆಯ್ಕೆಗೆ ಅಭ್ಯರ್ಥಿಗಳು ಸಂದರ್ಶನದಲ್ಲಿ ಕನಿಷ್ಠ ಅರ್ಹತಾ ಅಂಕಗಳನ್ನು ಗಳಿಸಬೇಕಾಗುತ್ತದೆ. ಈ ಕನಿಷ್ಠ ಅರ್ಹತಾ ಅಂಕಗಳನ್ನು ಬ್ಯಾಂಕ್ ನಿರ್ಧರಿಸುತ್ತದೆ.

ಅಂತಿಮ ಆಯ್ಕೆ

ಅಭ್ಯರ್ಥಿಗಳು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನ ಎರಡರಲ್ಲೂ ಪ್ರತ್ಯೇಕವಾಗಿ ಅರ್ಹತೆ ಪಡೆಯಬೇಕಾಗುತ್ತದೆ. ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನ ಎರಡರಲ್ಲೂ ಅರ್ಹತೆ ಪಡೆಯುವ ಅಭ್ಯರ್ಥಿಗಳಿಗೆ ಅಂತಿಮ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಆನ್‌ಲೈನ್ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಸಂದರ್ಶನದಲ್ಲಿ ಪಡೆದ ಅಂಕಗಳಿಗೆ ಸೇರಿಸಲಾಗುತ್ತದೆ. ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಗಳಿಸಿದ ಅಂಕಗಳ ಮೇಲೆ ಕ್ರಮವಾಗಿ 75:25ರ ಸರಾಸರಿಯಲ್ಲಿ ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ. ಆನ್‌ಲೈನ್ ಪರೀಕ್ಷೆಯಲ್ಲಿ (170 ಅಂಕಗಳಲ್ಲಿ) ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು 75 ಅಂಕಗಳಿಗೆ ಹಾಗೂ ಸಂದರ್ಶನದಲ್ಲಿ ಪಡೆಯುವ 50 ಅಂಕಗಳನ್ನು 25 ಅಂಕಗಳಿಗೆ ಪರಿವರ್ತಿಸಲಾಗುತ್ತದೆ. ಕೊನೆಗೆ ಒಟ್ಟು 100 ಅಂಕಗಳಲ್ಲಿ ಪರಿವರ್ತಿತ ಅಂಕಗಳನ್ನು ಲೆಕ್ಕಹಾಕಿದ ನಂತರ ವೃತ್ತವಾರು ಮತ್ತು ವರ್ಗವಾರು ಅಂತಿಮ ಮೆರಿಟ್ ಪಟ್ಟಿ ರಚಿಸಲಾಗುತ್ತದೆ. ಈ ಮೆರಿಟ್ ಪಟ್ಟಿಯಲ್ಲಿ ಅಗ್ರ ಶ್ರೇಯಾಂಕಿತ ಅಭ್ಯರ್ಥಿಗನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ

ಸಾಮಾನ್ಯ/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳಿಗೆ 750 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಇದೇ ವೇಳೆ ಎಸ್‌ಸಿ/ಎಸ್‌ಟಿ/ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಸ್ಕ್ರೀನ್‌ ಮೇಲೆ ಕೇಳುವ ಮಾಹಿತಿಯನ್ನು ಒದಗಿಸುವ ಮೂಲಕ ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿ ಮಾಡಬಹುದು. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ sbi.co.in.

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.