ಬ್ಯಾಂಕ್ ಆಫ್ ಬರೋಡಾ ಆಫೀಸ್ ಅಸಿಸ್ಟೆಂಟ್ ನೇಮಕಾತಿ: 500 ಹುದ್ದೆಗಳಿಗೆ ಅರ್ಜಿ ಆಹ್ವಾನ; ಸಂಬಳ, ಆಯ್ಕೆ ಪ್ರಕ್ರಿಯೆ ವಿವರ ಇಲ್ಲಿದೆ
ಬ್ಯಾಂಕ್ ಆಫ್ ಬರೋಡಾ ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಭಾರತದಾದ್ಯಂತ ಇರುವ 500 ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಭಾರತದ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ (Bank of Baroda) ಆಫೀಸ್ ಅಸಿಸ್ಟೆಂಟ್ (Office Assistant) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಡ್ರೈವ್ ಮೂಲಕ ದೇಶಾದ್ಯಂತ 500 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ನೇರ ಲಿಂಕ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ನೋಂದಣಿ ಪ್ರಕ್ರಿಯೆಯು ಈಗಾಗಲೇ, ಅಂದರೆ ಮೇ 3ರಂದು ಆರಂಭವಾಗಿದೆ. ಆದರೆ, ಇನ್ನೂ ಕೆಲವು ದಿನಗಳವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ನೋಂದಣಿಗೆ ಮೇ 23 ಕೊನೆಯ ದಿನವಾಗಿದೆ. ಅದಕ್ಕೂ ಮೊದಲು ಆಸಕ್ತರು ಅರ್ಜಿ ಸಲ್ಲಿಕೆ ಮಾಡಬಹುದು. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ bankofbaroda.in ಗೆ ಭೇಟಿ ನೀಡಬಹುದು.
ದೇಶದಾದ್ಯಂತ ಒಟ್ಟು 500 ಖಾಲಿ ಹುದ್ದೆಗಳಿವೆ. ಇದರಲ್ಲಿ ಕರ್ನಾಟಕದಲ್ಲಿ 31 ಹುದ್ದೆಗಳು ಖಾಲಿ ಇವೆ. ಹುದ್ದೆಯ ಸ್ಥಳವು ಬ್ಯಾಂಕಿನ ಅಗತ್ಯವನ್ನು ಅವಲಂಬಿಸಿರುತ್ತದೆ. ಅಭ್ಯರ್ಥಿಯು ಅರ್ಜಿ ಸಲ್ಲಿಸಿರುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಯಾವುದೇ ಕಚೇರಿ ಅಥವಾ ಶಾಖೆಗಳಲ್ಲಿ ಅವರನ್ನು ಕೆಲಸಕ್ಕೆ ನಿಯೋಜಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಹತಾ ಮಾನದಂಡಗಳು
ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು. ಇದೇ ವೇಳೇ ಯಾವ ರಾಜ್ಯದಿಂದ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತೀರೋ ಆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಸ್ಥಳೀಯ ಭಾಷೆಯಲ್ಲಿ ಪ್ರವೀಣರಾಗಿರಬೇಕು. ಅಂದರೆ ಆಯಾ ರಾಜ್ಯದ ಸ್ಥಳೀಯ ಭಾಷೆಯಲ್ಲಿ ಓದಲು, ಬರೆಯಲು ಮತ್ತು ಮಾತನಾಡಲು ಸಮರ್ಥರಾಗಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18ರಿಂದ 26 ವರ್ಷದದ ಒಳಗಿರಬೇಕು. ಅಭ್ಯರ್ಥಿಯು 1999ರ ಮೇ 01ರ ನಂತರ ಮತ್ತು 2007ರ ಮೇ 01ರ ಒಳಗೆ ಜನಿಸಿರಬೇಕು.
ವೇತನ ಶ್ರೇಣಿಯು 19500ರಿಂದ ಆರಂಭವಾಗಿ 37815ರವರೆಗೆ ಇದೆ ಎಂದು ಬ್ಯಾಂಕ್ ತಿಳಿಸಿದೆ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ನಂತರ ಅಭ್ಯರ್ಥಿಗಳ ಸ್ಥಳೀಯ ಭಾಷಾ ಪರೀಕ್ಷೆ (ಭಾಷಾ ಪ್ರಾವೀಣ್ಯತೆ ಪರೀಕ್ಷೆ), ಆನ್‌ಲೈನ್ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು/ಉತ್ತೀರ್ಣರಾಗುವುದು ಒಳಗೊಂಡಿರುತ್ತದೆ. ಮುಂದಿನ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಮತ್ತು ಶ್ರೇಯಾಂಕ ಪಟ್ಟಿಯನ್ನು ರಚಿಸಲು, ಪ್ರತಿ ಅಭ್ಯರ್ಥಿಯು ಲಿಖಿತ ಆನ್‌ಲೈನ್ ಪರೀಕ್ಷೆಯ ಪ್ರತಿ ವಿಭಾಗದಲ್ಲಿ ಕನಿಷ್ಠ ಸ್ಕೋರ್ (ಕಟ್-ಆಫ್) ಮತ್ತು ಒಟ್ಟು 100 ಅಂಕಗಳಲ್ಲಿ ಕನಿಷ್ಠ ಸ್ಕೋರ್ ಪಡೆಯಬೇಕಾಗುತ್ತದೆ.
ಅರ್ಜಿ ಶುಲ್ಕ
ಸಾಮಾನ್ಯ, ಇಡಬ್ಲ್ಯುಎಸ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 600 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಇದೇ ವೇಳೆ ಎಸ್‌ಸಿ, ಎಸ್‌ಟಿ, ವಿಕಲಚೇತನ, ಇಎಕ್ಸ್ಎಸ್, ಡಿಐಎಸ್‌ಎಕ್ಸ್ಎಸ್ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 100 ರೂ. ನಿಗದಿಯಾಗಿದೆ.
ಇನ್ನಷ್ಟು ಉದ್ಯೋಗ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ