PPF Interest Rate: ಪಿಪಿಎಫ್, ಸುಕನ್ಯಾ ಸಮೃದ್ಧಿ ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಹೆಚ್ಚಾಯಿತಾ, ಸರ್ಕಾರದ ತೀರ್ಮಾನ ಹೀಗಿದೆ
ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕಕ್ಕೆ ಸಂಬಂಧಿಸಿ ಪಿಪಿಎಫ್, ಸುಕನ್ಯಾ ಸಮೃದ್ಧಿ, ಎಸ್‌ಸಿಎಸ್‌ಎಸ್ ಸೇರಿ ಎಲ್ಲ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಈ ಯೋಜನೆಗಳ ಬಡ್ಡಿದರ ಪರಿಷ್ಕರಣೆ ಸಾಮಾನ್ಯ. ಮೂರನೇ ತ್ರೈಮಾಸಿಕಕ್ಕೆ ಅನ್ವಯವಾಗುವಂತೆ ಬಡ್ಡಿದರ ಏರಿತಾ, ಇಳಿಯಿತಾ.. ಇಲ್ಲಿದೆ ವರದಿ.
ಹಿರಿಯ ನಾಗರಿಕರ ಖಾತೆಗಳು, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (ಎನ್‌ಎಸ್‌ಸಿ), ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ನಂತಹ ಹೆಚ್ಚಿನ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಪ್ರಸ್ತುತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲೂ ಸರ್ಕಾರವು ಬದಲಾವಣೆ ಅಥವಾ ಪರಿಷ್ಕಣೆ ಮಾಡಿಲ್ಲ. ಈಗಿರುವ ಬಡ್ಡಿದರವೇ ಮುಂದುವರಿಯಲಿದೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದೆ.
ಮೂರನೇ ತ್ರೈಮಾಸಿಕ ಅಕ್ಟೋಬರ್ 1 ರಿಂದ ಆರಂಭವಾಗಲಿದೆ. ಸಣ್ಣ ಉಳಿತಾಯ ಯೋಜನೆಗಳ ಪೈಕಿ ಬಹಳ ಜನಪ್ರಿಯವಾದುದು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅರ್ಥಾತ್ ಪಿಪಿಎಫ್. ಹೆಚ್ಚಿನ ಬಡ್ಡಿದರ ಸಿಗುವ ಯೋಜನೆ ಎಂಬ ಆಕರ್ಷಣೆಯೂ ಇದೆ. ಈ ಪಿಪಿಎಫ್‌ನ ಬಡ್ಡಿದರವನ್ನು 2020ರ ಏಪ್ರಿಲ್ - ಜೂನ್ ಅವಧಿಯಲ್ಲಿ ಶೇಕಡ 7.9ರಿಂದ ಶೇಕಡ 7.1ಕ್ಕೆ ಇಳಿಸಲಾಗಿತ್ತು. ಅಂದಿನಿಂದ ಇಂದಿನ ತನಕವೂ ಅದರ ಪರಿಷ್ಕರಣೆ ಆಗಿಲ್ಲ ಎಂದು ಪಿಟಿಐ ವರದಿ ಮಾಡಿದೆ.
ಯಾವ ಯೋಜನೆಗೆ ಎಷ್ಟು ಬಡ್ಡಿದರ ತ್ರೈಮಾಸಿಕ ಅಕ್ಟೋಬರ್ - ಡಿಸೆಂಬರ್ 2023
ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) - 8.2%
ಮಾಸಿಕ ಆದಾಯ ಖಾತೆ ಯೋಜನೆ (ಎಂಐಎಎಸ್) - 7.4%
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) - 7.7%
ಸಾರ್ವಜನಿಕ ಪಿಂಚಣಿ ನಿಧಿ (ಪಿಪಿಎಫ್) 7.1%
ಕಿಸಾನ್ ವಿಕಾಸ್ ಪತ್ರ (115 ತಿಂಗಳಲ್ಲಿ ಮೆಚ್ಯೂರ್ ಆಗುವುದು) (ಕೆವಿಪಿ) -7.5%
ಸುಕನ್ಯಾ ಸಮೃದ್ಧಿ ಖಾತೆ ಯೋಜನೆ - 8%
ಐದು ವರ್ಷದ ಆರ್‌ಡಿ - 6.7%
1 ವರ್ಷ ಅವಧಿ ಠೇವಣಿ - 6.9%
2 ವರ್ಷ ಅವಧಿ ಠೇವಣಿ - 7%
3 ವರ್ಷ ಅವಧಿ ಠೇವಣಿ - 7%
4 ವರ್ಷ ಅವಧಿ ಠೇವಣಿ - 7.5%
5 ವರ್ಷದ ರಿಕರಿಂಗ್ ಡೆಪಾಸಿಟ್ ಬಡ್ಡಿದರ 20 ಮೂಲಾಂಶ ಏರಿಕೆ
ಸಣ್ಣ ಉಳಿತಾಯ ಖಾತೆ ಯೋಜನೆಗಳ ಪೈಕಿ 5 ವರ್ಷದ ರಿಕರಿಂಗ್ ಡೆಪಾಸಿಟ್ ಅಥವಾ ಆರ್‌ಡಿ ಖಾತೆಗೆ ಮೂರನೇ ತ್ರೈಮಾಸಿಕಕ್ಕೆ ಅನ್ವಯವಾಗುವಂತೆ ಬಡ್ಡಿದರವನ್ನು ಶೇಕಡ 0.2 (20 ಮೂಲಾಂಶ) ಏರಿಸಿದ್ದು, ಈಗ ಇರುವ ಶೇಕಡ 6.5ರ ಬದಲು ನಾಳೆಯಿಂದ ಶೇಕಡ 6.7ಕ್ಕೆ ಏರಿಸಲಾಗಿದೆ.
ಇನ್ನುಳಿದಂತೆ ಅವಧಿ ಠೇವಣಿಗಳ ಬಡ್ಡಿದರ ಸ್ಥಿರವಾಗಿದೆ. ವಿಶೇಷವಾಗಿ 1, 2, 3 ಮತ್ತು 4 ವರ್ಷಗಳ ಅವಧಿ ಠೇವಣಿಯ ಬಡ್ಡಿದರ ಸ್ಥಿರವಾಗಿದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಪರಿಷ್ಕರಣೆ ಪ್ರತಿ ಮೂರು ತಿಂಗಳಿಗೆ ಒಮ್ಮೆ ಆಗುತ್ತದೆ. ಕೇಂದ್ರ ಸರ್ಕಾರ ಇದನ್ನು ನಿರ್ವಹಿಸುತ್ತದೆ.