Bank Interest Rate hike: ಎಸ್‌ಬಿಐ ಸಾಲದ ಮೇಲಿನ ಬಡ್ಡಿ ದರ ದುಬಾರಿ, ಬ್ಯಾಂಕ್ ಆಫ್ ಬರೋಡಾದಿಂದ ಎಫ್‌ಡಿ ಬಡ್ಡಿ ದರ ಏರಿಕೆ
Bank News ಭಾರತೀಯ ಸ್ಟೇಟ್ ಬ್ಯಾಂಕ್( SBI) ಹಾಗೂ ಬ್ಯಾಂಕ್ ಆಫ್ ಬರೋಡಾ( Bank Of Baroda) ತಮ್ಮ ಬಡ್ಡಿ ದರಗಳನ್ನು ಏರಿಸಿವೆ.
ದೆಹಲಿ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದು ಪೂರ್ಣ ಪ್ರಮಾಣದ ಬಜೆಟ್ ಅನ್ನು ಜುಲೈ23 ಮಂಡಿಸಲು ಅಣಿಯಾಗುತ್ತಿರುವ ನಡುವೆಯೇ ಸದ್ದಿಲ್ಲದೇ ಭಾರತದ ಪ್ರಮುಖ ಬ್ಯಾಂಕ್‌ಗಳ ಬಡ್ಡಿ ದರದಲ್ಲಿ ವ್ಯತ್ಯಾಸಗಳು ಆಗಿವೆ. ಭಾರತೀಯ ಸ್ಟೇಟ್ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಿ ಜಾರಿಗೊಳಿಸಿ ಶಾಕ್ ನೀಡಿದ್ದರೆ, ಮತ್ತೊಂದು ಬ್ಯಾಂಕ್ ಆದಂತಹ ಬ್ಯಾಂಕ್ ಆಫ್ ಬರೋಡಾ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಿ ಗ್ರಾಹಕರ ಸಂತಸ ಉಂಟು ಮಾಡಿದೆ. ಈ ಎರಡೂ ಬ್ಯಾಂಕ್‌ಗಳಲ್ಲಿ ಎಸ್‌ಬಿಐ ದ ಸೋಮವಾರವೇ ಜಾರಿಯಾಗಿದೆ. ಬ್ಯಾಂಕ್ ಆಫ್ ಬರೋಡಾದ ದರ ಪರಿಷ್ಕರಣೆ ಮುಂದಿನ ವಾರ ಜಾರಿಯಾಗಲಿದೆ.
ಭಾರತದ ಅತ್ಯಂತ ಹಳೆಯ ಹಾಗೂ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎನ್ನಿಸಿಕೊಂಡಿರುವ ಎಸ್‌ಬಿಐ ತನ್ನ ಗ್ರಾಹಕರಿಗೆ ಯಾವುದೇ ಸೂಚನೆಯಿಲ್ಲದೇ ಬಿಗ್ ಶಾಕ್ ನೀಡಿದೆ. ಸರ್ಕಾರಿ ಬ್ಯಾಂಕ್ ವಿವಿಧ ಸಾಲಗಳ ಬಡ್ಡಿ ದರಗಳನ್ನು ದುಬಾರಿ ಮಾಡಿರುವುದಾಗಿ ಪ್ರಕಟಿಸಿದೆ. ಸೋಮವಾರದಿಂದಲೇ ಹೊಸದಾಗಿ ಜಾರಿ ಮಾಡಲಾಗಿರುವ ಬಡ್ಡಿ ದರಗಳು ಅಸ್ತಿತ್ವಕ್ಕೆ ಬಂದಿವೆ. ಹೊಸ ಬಡ್ಡಿ ದರಗಳನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೆಬ್‌ಸೈಟ್‌ನಲ್ಲಿ ಲಭ್ಯ ಇರುವ ಮಾಹಿತಿಯಂತೆ, ಬ್ಯಾಂಕ್ ತನ್ನ ಸಾಲ ದರಗಳ ಕನಿಷ್ಠ ವೆಚ್ಚ(MCLR) ದಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದೆ. ಬದಲಾವಣೆ ಪ್ರಕಾರ, ಎಂಸಿಎಲ್ಆರ್ ಅನ್ನು 5 ರಿಂದ 10 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಲಾಗಿದೆ. ಅಂದರೆ ಎಂಸಿಎಲ್ ಆರ್ ಶೇ.0.05ರಿಂದ ಶೇ.0.10ಕ್ಕೆ ಏರಿಕೆ ಮಾಡಲಾಗಿದೆ.
ಎಸ್‌ಬಿಐ ಜಾರಿಗೊಳಿಸಿರುವ ಹೊಸ ಬಡ್ಡಿ ಎಂಸಿಎಲ್‌ಆರ್ ಹೆಚ್ಚಳದಿಂದಾಗಿ ಈಗಾಗಲೇ ಚಾಲ್ತಿಯಲ್ಲಿರುವ ಕೋಟ್ಯಂತರ ಗ್ರಾಹಕರಿಗೆ ಅವರು ಪಡೆದಿರುವ ವಿವಿಧ ಸಾಲ ಉತ್ಪನ್ನಗಳು ದುಬಾರಿಯಾಗಬಹುದು. ಇದರಿಂದಾಗಿ ಕೋಟ್ಯಂತರ ಗ್ರಾಹಕರ ಮೇಲೆ ಬಡ್ಡಿ ಹೊರೆಯಾಗಬಹುದು ಇದಕ್ಕೆ ಪೂರಕವಾಗಿ ಅವರು ಪಾವತಿಸುತ್ತಿರುವ ಇಎಂಐ ಮೊತ್ತವೂ ಹೆಚ್ಚಾಗಬಹುದು ಎನ್ನಲಾಗುತ್ತಿದೆ.
ಯಾವ ದರ ಎಷ್ಟು?
ಎಸ್‌ಬಿಐ ಒಂದು ತಿಂಗಳ ಸಾಲದ ಅವಧಿಯ ಎಂಸಿಎಲ್‌ಆರ್ ಅನ್ನು 5 ಬಿಪಿಎಸ್‌ನಿಂದ 8.35 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ.
ಮೂರು ತಿಂಗಳ ಸಾಲದ ಅವಧಿಯ ಮೇಲೆ ಎಂಸಿಎಲ್‌ಆರ್ಅನ್ನು 10 ಬಿಪಿಎಸ್ ನಿಂದ ಶೇ. 8.4 ಏರಿಸಲಾಗಿದೆ.
ಆರು ತಿಂಗಳ ಸಾಲದ ಅವಧಿಯ ಮೇಲೆ ಎಂಸಿಎಲ್‌ಆರ್ಅನ್ನು 10 ಬಿಪಿಎಸ್‌ನಿಂದಶೇ. 8.75 ಕ್ಕೆ ಅಧಿಕಗೊಳಿಸಲಾಗಿದೆ
ಒಂದು ವರ್ಷದ ಸಾಲದ ಅವಧಿಯ ಎಂಸಿಎಲ್‌ಆರ್ ಅನ್ನು 10 ಬಿಪಿಎಸ್ ನಿಂದ 8.85 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ.
ಎರಡು ವರ್ಷಗಳ ಸಾಲದ ಅವಧಿಯ ಮೇಲೆ ಎಂಸಿಎಲ್‌ಆರ್ ಅನ್ನು 10 ಬಿಪಿಎಸ್ ನಿಂದ ಶೇ. 8.95 ಕ್ಕೆ ಏರಿಸಲಾಗಿದೆ.
ಮೂರು ವರ್ಷಗಳ ಸಾಲದ ಅವಧಿಯ ಮೇಲೆ ಎಂಸಿಎಲ್‌ಆರ್ ಅನ್ನು 5 ಬಿಪಿಎಸ್‌ನಿಂದ 9 ಪ್ರತಿಶತಕ್ಕೆ ಅಧಿಕಗೊಳಿಸಲಾಗಿದೆ.
ಬ್ಯಾಂಕ್ ಆಫ್ ಬರೋಡಾ
ಭಾರತದ ಹಳೆಯ ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಬರೋಡಾ ನಿಶ್ಚಿತ ಠೇವಣಿಗಳ (fixed deposits) ಬಡ್ಡಿ ದರವನ್ನು ಏರಿಕೆ ಮಾಡಿ ಶುಭ ಸುದ್ದಿ ನೀಡಿದೆ. 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಇದು ಜುಲೈ 28ರಿಂದ ಜಾರಿಗೆ ಬರಲಿದೆ. ಸಾಮಾನ್ಯ ನಾಗರಿಕರಿಗೆ ಶೇ. 3-5.50 ಹಾಗೂ ಹಿರಿಯ ನಾಗರಿಕರಿಗೆ ಶೇ. 3.5ರಿಂದ ಶೇ 6.5ರ ಶ್ರೇಣಿಯಲ್ಲಿ ನಿಶ್ಚಿತ ಠೇವಣಿಗೆ ಬಡ್ಡಿ ದರ ಅನ್ವಯವಾಗಲಿದೆ. ಎಸ್‌ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಠೇವಣಿಗಳ ದರ ಏರಿಕೆ ಬಳಿಕ ಇದೀಗ ಬ್ಯಾಂಕ್ ಆಫ್ ಬರೋಡಾ ಎಫ್‌ಡಿ ಬಡ್ಡಿ ದರ ಏರಿಕೆ ಮಾಡಿದೆ.