UPI Transaction Limit: ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಲ್ಲಿ ಯುಪಿಐ ಪಾವತಿ ಮಿತಿ 5 ಲಕ್ಷ ರೂಪಾಯಿಗೆ ಏರಿಸಿದ ಆರ್‌ಬಿಐ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವಿತ್ತೀಯ ನೀತಿ ಸಭೆ ಇಂದು (ಡಿ.8) ನಡೆದಿದ್ದು, ಯುಪಿಐ ವಹಿವಾಟಿಗೆ ಸಂಬಂಧಿಸಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಲ್ಲಿ ಯುಪಿಐ ಪಾವತಿ ಮಿತಿ (UPI transaction limit) ಯನ್ನು 5 ಲಕ್ಷ ರೂ.ಗೆ ಏರಿಸಿದೆ. ಇನ್ನೂ ಒಂದು ಮಹತ್ವದ ತೀರ್ಮಾನವನ್ನು ಸಭೆ ತೆಗೆದುಕೊಂಡಿದ್ದು ವಿವರಕ್ಕೆ ವರದಿ ಗಮನಿಸಿ.
ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ)ಗೆ ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಅವರು ಇಂದು (ಡಿ.8) ಎರಡು ಮಹತ್ವದ ಘೋಷಣೆಗಳನ್ನು ಮಾಡಿದರು. ಒಂದು ನಿರ್ದಿಷ್ಟವಾಗಿದ್ದು, ಮತ್ತು ಮತ್ತೊಂದು ಆನ್‌ಲೈನ್ ಪಾವತಿಗಳ ಪರಿಸರ ವ್ಯವಸ್ಥೆಗೆ ವಿಸ್ತೃತವಾಗಿ ಅನ್ವಯವಾಗುವಂಥದ್ದು.
ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ಮತ್ತು ಇತರೆ ಹಣಪಾವತಿ ಮಾಡುವಾಗ ಗ್ರಾಹಕರಿಗೆ ಹೇರಲಾಗಿದ್ದ ಯುಪಿಐ ಪಾವತಿ ಮಿತಿಯ (UPI transaction limit) ನ್ನು 5 ಲಕ್ಷ ರೂಪಾಯಿಗೆ ಆರ್‌ಬಿಐ ವಿತ್ತೀಯ ಸಮಿತಿ ಸಭೆ ಏರಿಸುವ ತೀರ್ಮಾನ ತೆಗೆದುಕೊಂಡಿದೆ.
ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳಲ್ಲಿ ಯುಪಿಐ ಪಾವತಿ ಮಿತಿಯನ್ನು 5 ಲಕ್ಷ ರೂಪಾಯಿಗೆ ಏರಿಕೆ
ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪಾವತಿಗಳಂತಹ ನಿರ್ದಿಷ್ಟ ವರ್ಗಗಳಿಗೆ ನಿಗದಿಮಾಡಲಾಗಿದ್ದ ಯುಪಿಐ ವಹಿವಾಟಿನ ಮಿತಿಯನ್ನು ಪ್ರಸ್ತುತ 1 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸುವುದಾಗಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು.
"ವಿವಿಧ ವರ್ಗಗಳ ಯುಪಿಐ ವಹಿವಾಟುಗಳ ಮಿತಿಯನ್ನು ಕಾಲಕಾಲಕ್ಕೆ ಪರಿಶೀಲಿಸಿ ಪರಿಷ್ಕರಿಸಲಾಗುತ್ತದೆ. ಅದರಂತೆ, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪಾವತಿಸುವ ಯುಪಿಐ ವಹಿವಾಟಿನ ಮಿತಿಯನ್ನು ಪ್ರತಿ ವಹಿವಾಟನ್ನು 1 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಸಭೆ ಅಂಗೀಕರಿಸಿದೆ. ಇದು ಗ್ರಾಹಕರಿಗೆ ನೆರವಾಗುವ ನಿರ್ಧಾರವಾಗಿದೆ. ಶಿಕ್ಷಣ ಮತ್ತು ಆರೋಗ್ಯದ ಉದ್ದೇಶಗಳಿಗಾಗಿ ಹೆಚ್ಚಿನ ಮೊತ್ತವನ್ನು ಗ್ರಾಹಕರು ಇನ್ನು ಯುಪಿಐ ಮೂಲಕವೇ ಪಾವತಿ ಮಾಡುವುದಕ್ಕೆ ಅನುಕೂಲವಾಗಲಿದೆ" ಎಂದು ಅವರು ವಿವರಿಸಿದರು.
ನಿರ್ದಿಷ್ಟ ವರ್ಗಗಳ ಮರುಕಳಿಸುವ ಪಾವತಿಗಳಿಗೆ ಇ-ಮ್ಯಾಂಡೇಟ್ ಮಿತಿ ಹೆಚ್ಚಳ
ಮರುಕಳಿಸುವ ಸ್ವಭಾವದ ಪಾವತಿಗಳು ಉದಾಹರಣೆಗೆ ಮ್ಯೂಚುವಲ್ ಫಂಡ್‌ನ ವ್ಯವಸ್ಥಿತ ಹೂಡಿಕೆ ಯೋಜನೆಯ ಹೂಡಿಕೆ, ವಿಮಾ ಪ್ರೀಮಿಯಂ, ಕ್ರೆಡಿಟ್ ಕಾರ್ಡ್ ಮರುಪಾವತಿಗಳ ಇ-ಮ್ಯಾಂಡೇಟ್ (ಮುನ್ನನುಮತಿ) ಮಿತಿಯನ್ನು 1 ಲಕ್ಷ ರೂಪಾಯಿಗೆ ಏರಿಸುವ ತೀರ್ಮಾನವನ್ನು ಆರ್‌ಬಿಐ ವಿತ್ತೀಯ ನೀತಿ ಸಭೆ ತೆಗೆದುಕೊಂಡಿದೆ.
ಮರುಕಳಿಸುವ ಸ್ವಭಾವದ ಪಾವತಿಗಳನ್ನು ಮಾಡುವ ಮುನ್ನನುಮತಿ (ಇ- ಮ್ಯಾಂಡೇಟ್) ವ್ಯವಸ್ಥೆಯು ಗ್ರಾಹಕರ ನಡುವೆ ಚಾಲ್ತಿಯಲ್ಲಿದೆ. ಈ ಚೌಕಟ್ಟಿನಲ್ಲಿ, 15,000 ರೂಪಾಯಿಗಿಂತ ಹೆಚ್ಚಿನ ಮರುಕಳಿಸುವ ವಹಿವಾಟುಗಳಿಗೆ ಪ್ರಸ್ತುತ ದೃಢೀಕರಣದ ಹೆಚ್ಚುವರಿ ಅಂಶ (ಎಎಫ್‌ಎ) ಅಗತ್ಯವಿದೆ. ಮ್ಯೂಚುಯಲ್ ಫಂಡ್ ಚಂದಾದಾರಿಕೆಗಳು, ವಿಮಾ ಪ್ರೀಮಿಯಂ ಚಂದಾದಾರಿಕೆಗಳು ಮತ್ತು ಕ್ರೆಡಿಟ್ ಕಾರ್ಡ್ ಮರುಪಾವತಿಗಳ ಮರುಕಳಿಸುವ ಪಾವತಿಗಳಿಗಾಗಿ ಪ್ರತಿ ವಹಿವಾಟಿಗೆ ಈ ಮಿತಿಯನ್ನು ಈಗ 1 ಲಕ್ಷ ರೂಪಾಯಿಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ವಿತ್ತೀಯ ಸಮಿತಿ ಸಭೆ ಅಂಗೀಕರಿಸಿದೆ. ಈ ಕ್ರಮವು ಇ-ಮಾಂಡೇಟ್‌ಗಳ ಬಳಕೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಶಕ್ತಿಕಾಂತ ದಾಸ್ ವಿವರಿಸಿದರು.