ಕನ್ನಡ ಸುದ್ದಿ  /  Nation And-world  /  Bbc Documentary: Delhi University Seeks Police Help As Students Planned Screening

BBC documentary row: ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮುಂದಾದ ವಿದ್ಯಾರ್ಥಿಗಳು.. ಪೊಲೀಸರ ಸಹಾಯ ಕೋರಿದ ದೆಹಲಿ ವಿವಿ

ಪ್ರಧಾನಿ ನರೇಂದ್ರ ಮೋದಿ ಮತ್ತು 2002ರ ಗುಜರಾತ್ ಗಲಭೆ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮುಂದಾಗಿದ್ದು, ವಿವಿ ಅಧಿಕಾರಿಗಳು ಪೊಲೀಸರ ಸಹಾಯ ಕೋರಿದ್ದಾರೆ.

ದೆಹಲಿ ವಿಶ್ವವಿದ್ಯಾಲಯ
ದೆಹಲಿ ವಿಶ್ವವಿದ್ಯಾಲಯ

ನವದೆಹಲಿ: ಜೆಎನ್​​ಯು, ಜಾಮಿಯಾ, ಹೈದರಾಬಾದ್​ ವಿಶ್ವವಿದ್ಯಾಲಯಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು 2002ರ ಗುಜರಾತ್ ಗಲಭೆ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮುಂದಾಗಿದ್ದು, ವಿವಿ ಅಧಿಕಾರಿಗಳು ಪೊಲೀಸರ ಸಹಾಯ ಕೋರಿದ್ದಾರೆ.

ವಿದ್ಯಾರ್ಥಿ ಸಂಘಟನೆಗಳಾದ ಭೀಮ್ ಆರ್ಮಿ ಸ್ಟೂಡೆಂಟ್ ಫೆಡರೇಶನ್ ಹಾಗೂ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ದೆಹಲಿ ವಿವಿಯ ನಾರ್ತ್ ಕ್ಯಾಂಪಸ್​​ನಲ್ಲಿ ಕಲಾ ವಿಭಾಗದಲ್ಲಿ ಇಂದು ಸಂಜೆ 5 ಗಂಟೆಗೆ ‘ಇಂಡಿಯಾ: ದಿ ಮೋದಿ ಕ್ವಶ್ಶನ್’ಡಾಕ್ಯುಮೆಂಟರಿ ಪ್ರದರ್ಶನಕ್ಕೆ ಪ್ಲಾನ್​ ಮಾಡಿದೆ.

"ನಾವು ಈ ಬಗ್ಗೆ ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದೇವೆ. ಅವರು ಕ್ರಮ ತೆಗೆದುಕೊಳ್ಳುತ್ತಾರೆ. ಪೋಲೀಸ್ ನಿಯೋಜನೆ ಮಾಡಲಾಗುತ್ತದೆ. ಅಂತಹ ಸ್ಕ್ರೀನಿಂಗ್ ಅನ್ನು ನಾವು ಅನುಮತಿಸುವುದಿಲ್ಲ" ಎಂದು ದೆಹಲಿ ವಿವಿ ಅಧಿಕಾರಿ ರಜನಿ ಅಬ್ಬಿ ಹೇಳಿರುವುದಾಗಿ ಪಿಟಿಐ ಉಲ್ಲೇಖಿಸಿದೆ.

ಇನ್ನು ತಮಿಳುನಾಡಿನ ಮದ್ರಾಸ್ ವಿಶ್ವವಿದ್ಯಾಲಯದಲ್ಲೂ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ವಿದ್ಯಾರ್ಥಿಗಳು ಮುಂದಾಗಿದ್ದು, ಅನುಮತಿ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ. ಗುರುವಾರ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ್ದಕ್ಕಾಗಿ ಚೆನ್ನೈ ಕಾರ್ಪೊರೇಷನ್​​ ಕೌನ್ಸಿಲರ್ ಎ. ಪ್ರಿಯದರ್ಶಿನಿ ಅವರನ್ನು ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ. ಇವರನ್ನು ಸೇರಿ ಒಟ್ಟು 20 ಮಂದಿಯನ್ನು ಪೊಲೀಸರು ಕಸ್ಟಡಿಗೆ ಕರೆದೊಯ್ದಿದ್ದರು.

ಗುರುವಾರ ಸಂಜೆ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಎಸ್‌ಎಫ್‌ಐ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದೆ. ಪೊಲೀಸರು ಅಥವಾ ಆಡಳಿತದ ಯಾವುದೇ ಹಸ್ತಕ್ಷೇಪವಿಲ್ಲದೆ ಸ್ಕ್ರೀನಿಂಗ್ ನಡೆಸಲಾಗಿದೆ ಎಂದು ವರದಿಯಾಗಿದೆ.

ಇನ್ನು ಗುರುವಾರ ತೆಲಂಗಾಣದ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಎಸ್‌ಎಫ್‌ಐ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ್ದು, ಇದಕ್ಕೆ ತಿರುಗೇಟು ನೀಡಲು ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ 'ದಿ ಕಾಶ್ಮೀರ್ ಫೈಲ್ಸ್' ಅನ್ನು ಕ್ಯಾಂಪಸ್‌ನಲ್ಲಿ ಪ್ರದರ್ಶಿಸಿದೆ ಎಂದು ವರದಿಯಾಗಿದೆ.

ಬುಧವಾರ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಸಂಘಟನೆಯು ಸಮೂಹ ಸಂವಹನ ವಿಭಾಗದಲ್ಲಿ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಪ್ರದರ್ಶನಕ್ಕೂ ಮುನ್ನ ಕ್ಯಾಂಪಸ್‌ನ ಹೊರಗೆ ಗಲಾಟೆ ಸೃಷ್ಟಿಸಿದ ಆರೋಪದ ಮೇಲೆ ನಾಲ್ವರು ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದರು ಎಂದು ವರದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿವಿ, 'ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ ಆಗಿಲ್ಲ.. ನಮ್ಮಲ್ಲಿ ಏನು ನಡೆದೇ ಇಲ್ಲ' ಎಂದು ಹೇಳಿದೆ.

ಮಂಗಳವಾರ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್​ಯು) ವಿದ್ಯಾರ್ಥಿಗಳ ಒಂದು ವಿಭಾಗವು ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವ ಯೋಜನೆಯನ್ನು ಹಾಕಿಕೊಂಡಿತ್ತು. ಆದರೆ ವಿವಿಯ ಆಡಳಿತ ಮಂಡಳಿ ಇಂಟರ್ನೆಟ್ ಮತ್ತು ವಿದ್ಯುತ್ ಸ್ಥಗಿತಗೊಳಿಸಿತ್ತು. ಆದರೂ ವಿದ್ಯಾರ್ಥಿಗಳು ತಮ್ಮ ಮೊಬೈಲ್​ ಹಾಗೂ ಲ್ಯಾಪ್​ಟಾಪ್​ನಲ್ಲಿ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ವರದಿಯಾಗಿದೆ.

ಏನಿದು ವಿವಾದ?

ಯುನೈಟಡ್​ ಕಿಂಗ್​ಡಮ್​​ನ ರಾಷ್ಟ್ರೀಯ ಪ್ರಸಾರ ಮಾಧ್ಯಮವಾದ ಬಿಬಿಸಿ (ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್) ಪ್ರಧಾನಿ ನರೇಂದ್ರ ಮೋದಿ ಕುರಿತು 'ಇಂಡಿಯಾ: ದಿ ಮೋದಿ ಕ್ವಶ್ಚನ್' (India: The Modi Question)ಹೆಸರಿನ ಸಾಕ್ಷ್ಯಚಿತ್ರವೊಂದನ್ನು ತಯಾರಿಸಿದೆ. ಎರಡು ಭಾಗಗಳಲ್ಲಿ ಮೂಡಿ ಬಂದಿರುವ ಈ ಸಾಕ್ಷ್ಯಚಿತ್ರದ ಎರಡು ಸಂಚಿಕೆಗಳು ಬಿಡುಗಡೆಯಾಗಿವೆ. ಆದರೆ ಈ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಲಿಂಕ್​ಗಳನ್ನು, ಯೂಟ್ಯೂಬ್​ ವಿಡಿಯೋಗಳನ್ನು ಹಾಗೂ ಟ್ವೀಟ್​ಗಳನ್ನು ಕೇಂದ್ರ ಸರ್ಕಾರ ಬ್ಲಾಕ್​ ಮಾಡಿದೆ.

ಈ ವಿವಾದಿತ ಬಿಬಿಸಿ ಸಾಕ್ಷ್ಯಚಿತ್ರ 'ಇಂಡಿಯಾ: ದಿ ಮೋದಿ ಕ್ವಶ್ಚನ್' ನಲ್ಲಿ 2002ರ ಗುಜರಾತ್ ಗಲಭೆಯಲ್ಲಿ ಅಂದಿನ ಗುಜರಾತ್​ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಪಾತ್ರವನ್ನು ತೋರಿಸಲಾಗಿದೆ. ಬಿಬಿಸಿ ಸಾಕ್ಷ್ಯಚಿತ್ರಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಪಕ್ಷಪಾತಿ ಧೋರಣೆಯುಳ್ಳ ಅಪಪ್ರಚಾರದ ತುಣಕು ಎಂದು ಕಿಡಿಕಾರಿದೆ. 2002ರ ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ಖುದ್ದು ಸುಪ್ರೀಂಕೋರ್ಟ್‌ ಪ್ರಧಾನಿ ಮೋದಿ ಅವರಿಗೆ ಕ್ಲಿನ್‌ ಚಿಟ್‌ ನೀಡಿದ್ದು, ಈ ವಿಷಯವನ್ನು ಮತ್ತೆ ಕೆದಕುವುದು ನ್ಯಾಯಾಂಗವನ್ನು ಅವಮಾನಿಸದಂತಾಗುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

IPL_Entry_Point

ವಿಭಾಗ