ಎಲ್‌ಕೆಜಿ ಶುಲ್ಕ ಒಂದೇ ವರ್ಷ 1.4 ಲಕ್ಷ ರೂ ಏರಿಕೆ, ಸಾಮಾನ್ಯನ ವೇತನ ಕೂಡ ಇಷ್ಟು ಹೆಚ್ಚಾಗಲ್ಲ! ದುಬಾರಿಯಾಗುತ್ತಿದೆ ಶಿಕ್ಷಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಎಲ್‌ಕೆಜಿ ಶುಲ್ಕ ಒಂದೇ ವರ್ಷ 1.4 ಲಕ್ಷ ರೂ ಏರಿಕೆ, ಸಾಮಾನ್ಯನ ವೇತನ ಕೂಡ ಇಷ್ಟು ಹೆಚ್ಚಾಗಲ್ಲ! ದುಬಾರಿಯಾಗುತ್ತಿದೆ ಶಿಕ್ಷಣ

ಎಲ್‌ಕೆಜಿ ಶುಲ್ಕ ಒಂದೇ ವರ್ಷ 1.4 ಲಕ್ಷ ರೂ ಏರಿಕೆ, ಸಾಮಾನ್ಯನ ವೇತನ ಕೂಡ ಇಷ್ಟು ಹೆಚ್ಚಾಗಲ್ಲ! ದುಬಾರಿಯಾಗುತ್ತಿದೆ ಶಿಕ್ಷಣ

Education Cost; ಎಲ್‌ಕೆಜಿ ಶಿಕ್ಷಣ ಶುಲ್ಕ ಒಂದೇ ವರ್ಷ 1.4 ಲಕ್ಷ ರೂಪಾಯಿ ಏರಿಕೆಯಾಗಿದೆ. ಜನ ಸಾಮಾನ್ಯನ ವೇತನ ಕೂಡ ಇಷ್ಟು ಹೆಚ್ಚಾಗಲ್ಲ!. ದುಬಾರಿಯಾಗುತ್ತಿದೆ ಶಿಕ್ಷಣ ಎಂಬುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಲ್ಲಿರುವ ಹಾಟ್‌ ಟಾಪಿಕ್‌. ಬೆಂಗಳೂರು (Bengaluru) ಮೂಲದ ವ್ಯಕ್ತಿ ಯೊಬ್ಬರು ಈ ವಿಚಾರ ಪ್ರಸ್ತಾಪಿಸಿದ್ದಾರೆ.

ದುಬಾರಿಯಾಗುತ್ತಿದೆ ಶಿಕ್ಷಣ (ಸಾಂಕೇತಿಕ ಚಿತ್ರ)
ದುಬಾರಿಯಾಗುತ್ತಿದೆ ಶಿಕ್ಷಣ (ಸಾಂಕೇತಿಕ ಚಿತ್ರ) (Canva)

ಬೆಂಗಳೂರು: ಬಹುತೇಕ ನಗರಗಳಲ್ಲಿ ವಿಶೇಷವಾಗಿ ಬೆಂಗಳೂರು, ಹೈದರಾಬಾದ್‌, ಚೆನ್ನೈ ಮುಂತಾದೆಡೆ ದುಬಾರಿಯಾಗತೊಡಗಿದೆ ಶಿಕ್ಷಣ. ಪೂರ್ವ ಪ್ರಾಥಮಿಕ ಶಿಕ್ಷಣದ ಶುಲ್ಕಗಳು (Kindergarten Fees) ಈಗ ಸಮಾಜದಲ್ಲಿ ಚರ್ಚೆಯ ವಿಚಾರವಾಗಿದೆ. ಸಾಮಾಜಿಕ ತಾಣಗಳಲ್ಲೂ ಈ ವಿಚಾರ ಆಗೊಮ್ಮೆ ಈಗೊಮ್ಮೆ ಗಮನಸೆಳೆಯುತ್ತಿದೆ. ಇತ್ತೀಚಿನ ಪೋಸ್ಟ್ ಎಲ್‌ಕೆಜಿ ಶುಲ್ಕದ ವಿಚಾರವನ್ನು ಪ್ರಸ್ತಾಪಿಸಿದೆ.

ಹಣದುಬ್ಬರ ಮತ್ತು ಹೆಚ್ಚಿನ ಜೀವನ ವೆಚ್ಚ ಹೆಚ್ಚಾಗುತ್ತಿರುವ ಕಾರಣ ದೇಶದಲ್ಲಿ ಜನರ ಖರೀದಿ ಸಾಮರ್ಥ್ಯ ಕುಸಿಯತೊಡಗಿದೆ. ಮೆಟ್ರೋ ನಗರಗಳಲ್ಲಿ ಬಡ ವರ್ಗದಿಂದ ಹಿಡಿದು ಮೇಲ್ಮಧ್ಯಮ ವರ್ಗದ ಜನರ ಪಾಲಿಗೆ ಇದು ತುಸು ಹೆಚ್ಚು ಎಂದೇ ಹೇಳಬಹುದು. ಮನೆ ಬಾಡಿಗೆ, ಶಾಲಾ ಶುಲ್ಕ, ನಿತ್ಯ ಬದುಕಿನ ಖರ್ಚು ವೆಚ್ಚಗಳನ್ನು ಗಮನಿಸಿದರೆ ಸಿಗುವ ವೇತನ, ಬರುವ ಆದಾಯ ಸಾಕಾಗುವುದಿಲ್ಲ.

ಈ ಸಮಸ್ಯೆ ಅನುಭವಿಸುವವರು ಯಾರು ಎಂದರೆ ದೊಡ್ಡ ದೊಡ್ಡ ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಿರುವ ಮೇಲ್ಮಧ್ಯಮ ವರ್ಗದವರೆಗಿನ ಬಹುತೇಕರು. 11 ತಿಂಗಳಾಗುತ್ತಿದ್ದಂತೆ ಬಾಡಿಗೆ ಹೆಚ್ಚಿಸಬೇಕು. ಇದು ಶೇಕಡ 10 ಅಥವಾ ಮನೆ ಮಾಲೀಕರಿಗೆ ತೋಚಿದಷ್ಟು. ಹೆಚ್ಚಿಸಿ ಕೊಡದೇ ಇದ್ದರೆ ಬೇರೆ ಬಾಡಿಗೆ ಮನೆ ಹುಡುಕಬೇಕು. ಆಗ ಇಲ್ಲಿ ಕೊಟ್ಟ ಅಡ್ವಾನ್ಸ್‌ ಕಡಿತವಾಗಿ ಕೈ ಸೇರುತ್ತದೆ. ಹೊಸ ಮನೆಗೆ ಮುಂಗಡ ಕೊಡಬೇಕು, ಆ ಮನೆಗೆ ಸಮೀಪ ಶಾಲೆ ಹುಡುಕಬೇಕು. ಅಲ್ಲಿ ಮಕ್ಕಳನ್ನು ಸೇರಿಸಬೇಕಾದರೆ ಮತ್ತೆ ಡೊನೇಶನ್ ಕೊಡಬೇಕು. ಹೀಗೆ ಹಣದುಬ್ಬರ ಸಮಸ್ಯೆ ಅರ್ಥಮಾಡಿಕೊಳ್ಳಬಹುದು. ಇರಲಿ, ಈಗ ನೇರ ವಿಚಾರಕ್ಕೆ ಬರೋಣ.

ಎಲ್‌ಕೆಜಿ ಶಿಕ್ಷಣದ ಶುಲ್ಕ 2.3 ಲಕ್ಷ ರೂಪಾಯಿಯಿಂದ 3.7 ಲಕ್ಷ ರೂಪಾಯಿಗೆ ಏರಿಕೆ

ಬೆಂಗಳೂರು ಮೂಲದ ಹೂಡಿಕೆದಾರ ಅವಿರಲ್ ಭಟ್ನಾಗರ್ ಎಂಬುವವರು ಹೈದರಾಬಾದ್‌ನಲ್ಲಿ ಎಲ್‌ಕೆಜಿ ಶುಲ್ಕ ಕಳೆದ ವರ್ಷ 2.3 ಲಕ್ಷ ರೂಪಾಯಿ ಇದ್ದದ್ದು ಈ ವರ್ಷ 3.7 ಲಕ್ಷ ರೂಪಾಯಿ ತಲುಪಿರುವ ಬಗ್ಗೆ ಗಮನಸೆಳೆದಿದ್ದಾರೆ. ಆದಗ್ಯೂ ಅವರು ಈ ಶುಲ್ಕ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಯ ಹೆಸರನ್ನು ಉಲ್ಲೇಖಿಸಿಲ್ಲ. ಇದು ಹೈದಾರಾಬಾದ್ ಒಂದರ ಸಮಸ್ಯೆಯಲ್ಲ, ಇಡೀ ದೇಶದಲ್ಲೇ ಈ ಪರಿಸ್ಥಿತಿ ಇದೆ ಎಂಬರ್ಥದಲ್ಲಿ ಹೇಳಿದ್ದಾರೆ.

“ಹೈದರಾಬಾದ್‌ನಲ್ಲಿ ಎಲ್‌ಕೆಜಿ ಶುಲ್ಕವು 2.3 ಲಕ್ಷ ರೂ ನಿಂದ 3.7 ಲಕ್ಷ ರೂಗೆ ಏರಿದೆ. ಇದು ರಾಷ್ಟ್ರಮಟ್ಟದ ಏರಿಕೆಗೆ ಕನ್ನಡಿ. ನಾವು ಮನೆ ಖರೀದಿ ಬೆಲೆಗಳನ್ನು ಗಮನಿಸಿದರೆ, ನಿಜವಾದ ಹಣದುಬ್ಬರವನ್ನು ಶಿಕ್ಷಣ ಸ್ಪಷ್ಟವಾಗಿ ಕಾಣಬಹುದು. ಹಣದುಬ್ಬರ-ಹೊಂದಾಣಿಕೆ ನೋಡಿದರೆ, ಕಳೆದ 30 ವರ್ಷಗಳಲ್ಲಿ ಶಾಲಾ ಶುಲ್ಕಗಳು 9 ಪಟ್ಟು ಮತ್ತು ಕಾಲೇಜು ಶುಲ್ಕಗಳು 20 ಪಟ್ಟು ಹೆಚ್ಚಾಗಿದೆ. ಶಿಕ್ಷಣ ಬಹಳ ದುಬಾರಿಯಾಗಿಬಿಟ್ಟಿದೆ” ಎಂದು ಅವಿರಲ್‌ ಭಟ್ನಾಗರ್ ಟ್ವೀಟ್ ಮಾಡಿದ್ದಾರೆ.

ದತ್ತಾಂಶದೊಂದಿಗೆ ಗಂಭೀರ ಚರ್ಚೆಗೆ ಎಡೆಮಾಡಿಕೊಟ್ಟ ಪೋಸ್ಟ್‌

ಅವಿರಲ್‌ ಅವರು ಆಗಸ್ಟ್ 14 ರಾತ್ರಿ 7.33ಕ್ಕೆ ಎರಡು ಟ್ವೀಟ್‌ಗಳನ್ನು ಒಟ್ಟಿಗೇ ಮಾಡಿದ್ದು ಇನ್ನೊಂದರಲ್ಲಿ ಗೂಗಲ್ ಶೀಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ 1994ರಿಂದ 2024ರ ತನಕದ ದತ್ತಾಂಶವಿದೆ. ಶ್ರೀಮಂತರ ಆದಾಯ, ಭಾರತೀಯರ ಸರಾಸರಿ ಆದಾಯ, ಕಾಲೇಜು ಶಿಕ್ಷಣ ವೆಚ್ಚ, ಐಐಟಿ ಶಿಕ್ಷಣ ವೆಚ್ಚ, ಆಲ್ಟೋ ಕಾರು ದರ, ತೆರಿಗೆ ದರ ತನಕ 16 ಅಂಶಗಳಿವೆ. ಅವುಗಳ ಏರಿಕೆಯ ಪ್ರಮಾಣವನ್ನು ಅವರು ಅದರಲ್ಲಿ ಉಲ್ಲೇಖಿಸಿದ್ದು, ದತ್ತಾಂಶದ ಮೂಲಗಳನ್ನೂ ನೀಡಿದ್ದಾರೆ.

ಈ ವಿಚಾರದ ಬಗ್ಗೆ ಗಂಭೀರ ಚರ್ಚೆಯಾಗಲಿ ಎಂಬ ಉದ್ದೇಶ ಈ ಪೋಸ್ಟ್‌ನಲ್ಲಿದ್ದು ಆಸಕ್ತರು ಪಾಲ್ಗೊಂಡಿದ್ದಾರೆ. ಇದು 3.22 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಹೊಂದಿದೆ. 3 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು 770 ರೀಟ್ವೀಟ್‌ ಆಗಿದೆ. 325ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. ನೀವೂ ಈ ಚರ್ಚೆಯಲ್ಲಿ ಭಾಗವಹಿಸಬಹುದಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.