Sudha Murty: ರಾಜ್ಯಸಭೆಗೆ ಕರ್ನಾಟಕದ ಲೇಖಕಿ ಸುಧಾ ಮೂರ್ತಿ ನಾಮನಿರ್ದೇಶನ; ಪ್ರಧಾನಿ ನರೇಂದ್ರ ಮೋದಿ ಘೋಷಣೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sudha Murty: ರಾಜ್ಯಸಭೆಗೆ ಕರ್ನಾಟಕದ ಲೇಖಕಿ ಸುಧಾ ಮೂರ್ತಿ ನಾಮನಿರ್ದೇಶನ; ಪ್ರಧಾನಿ ನರೇಂದ್ರ ಮೋದಿ ಘೋಷಣೆ

Sudha Murty: ರಾಜ್ಯಸಭೆಗೆ ಕರ್ನಾಟಕದ ಲೇಖಕಿ ಸುಧಾ ಮೂರ್ತಿ ನಾಮನಿರ್ದೇಶನ; ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಲೇಖಕಿ, ಮೂರ್ತಿ ಟ್ರಸ್ಟ್‌ ಮುಖ್ಯಸ್ಥೆ ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶುಕ್ರವಾರ ನಾಮನಿರ್ದೇಶನ ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ವಿಷಯವನ್ನು ಇಂದು (ಮಾ.8) ಪ್ರಕಟಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಲೇಖಕಿ, ಇನ್‌ಫೋಸಿಸ್‌ ಫೌಂಡೇಶನ್‌ನ ಮಾಜಿ ಮುಖ್ಯಸ್ಥೆ ಸುಧಾ ಮೂರ್ತಿ ಅವರಿಗೆ ನಮಸ್ಕರಿಸಿದ ಸಂದರ್ಭ. (ಕಡತ ಚಿತ್ರ)
ಪ್ರಧಾನಿ ನರೇಂದ್ರ ಮೋದಿ ಅವರು ಲೇಖಕಿ, ಇನ್‌ಫೋಸಿಸ್‌ ಫೌಂಡೇಶನ್‌ನ ಮಾಜಿ ಮುಖ್ಯಸ್ಥೆ ಸುಧಾ ಮೂರ್ತಿ ಅವರಿಗೆ ನಮಸ್ಕರಿಸಿದ ಸಂದರ್ಭ. (ಕಡತ ಚಿತ್ರ)

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೇಖಕಿ ಮತ್ತು ಲೋಕೋಪಕಾರಿ ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರಕಟಿಸಿದ್ದಾರೆ. ಸುಧಾ ಮೂರ್ತಿ ಅವರನ್ನು ಅಭಿನಂದಿಸಿದ ಪ್ರಧಾನಿ ಮೋದಿ, ವಿವಿಧ ಕ್ಷೇತ್ರಗಳಿಗೆ ಸುಧಾ ಮೂರ್ತಿ ಅವರ ಕೊಡುಗೆ ಅಪಾರ ಮತ್ತು ಸ್ಪೂರ್ತಿದಾಯಕ ಎಂದು ಹೇಳಿದರು.

"ಭಾರತದ ರಾಷ್ಟ್ರಪತಿಗಳು ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ನನಗೆ ಸಂತೋಷವಾಗಿದೆ. ಸಮಾಜ ಸೇವೆ, ಲೋಕೋಪಕಾರ ಮತ್ತು ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಿಗೆ ಸುಧಾ ಮೂರ್ತಿಯವರ ಕೊಡುಗೆಗಳು ಅಪಾರ ಮತ್ತು ಸ್ಪೂರ್ತಿದಾಯಕವಾಗಿವೆ. ರಾಜ್ಯಸಭೆಯಲ್ಲಿ ಅವರ ಉಪಸ್ಥಿತಿಯು ನಮ್ಮ 'ನಾರಿ ಶಕ್ತಿ'ಗೆ ಪ್ರಬಲ ಸಾಕ್ಷಿಯಾಗಿದೆ, ನಮ್ಮ ರಾಷ್ಟ್ರದ ಹಣೆಬರಹವನ್ನು ರೂಪಿಸುವಲ್ಲಿ ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಉದಾಹರಣೆಯಾಗಿದೆ. ಅವರಿಗೆ ಫಲಪ್ರದ ಸಂಸದೀಯ ಅಧಿಕಾರಾವಧಿಯನ್ನು ಹಾರೈಸುತ್ತೇನೆ" ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ.

ಸುಧಾ ಮೂರ್ತಿ ಯಾರು? ಅವರ ಕಿರುಪರಿಚಯ

ಸುಧಾ ಮೂರ್ತಿ ಅವರು ಭಾರತದ ಶಿಕ್ಷಣ ತಜ್ಞೆ, ಲೇಖಕಿ, ಸಾಮಾಜಿಕ ಕಾರ್ಯಕರ್ತೆ ಮತ್ತು ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ. ಅವರು ಗೇಟ್ಸ್ ಫೌಂಡೇಶನ್‌ನ ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಸದಸ್ಯರೂ ಹೌದು. ಸುಧಾ ಮೂರ್ತಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾವನ್ನು ಸ್ಥಾಪಿಸಿದ್ದಾರೆ.

2006 ರಲ್ಲಿ, ಸುಧಾ ಮೂರ್ತಿ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ನೀಡಿ ಗೌರವಿಸಲಾಯಿತು. ನಂತರ 2023 ರಲ್ಲಿ, ಅವರಿಗೆ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡಲಾಯಿತು.

ಮೂರ್ತಿ ಅವರು ಇನ್ಫೋಸಿಸ್ನ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರನ್ನು ವಿವಾಹವಾದರು - ಅವರಿಗೆ ಅಕ್ಷತಾ ಮತ್ತು ರೋಹನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಅಕ್ಷತಾ ಮೂರ್ತಿ ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ವಿವಾಹವಾಗಿದ್ದಾರೆ.

ಸುಧಾ ಮೂರ್ತಿ ಅವರು ತಮ್ಮ ಕಾದಂಬರಿ 'ಡಾಲರ್ ಬಹು' ಮೂಲಕವೂ ಹೆಸರುವಾಸಿಯಾಗಿದ್ದಾರೆ. ಇದನ್ನು ಅವರು ಮೊದಲು ಕನ್ನಡದಲ್ಲಿ ಬರೆದರು ಮತ್ತು ನಂತರ ಇಂಗ್ಲಿಷ್ ಭಾಷೆಗೆ ಅನುವಾದಿಸಿದರು. ಈ ಕಾದಂಬರಿಯನ್ನು 2001ರಲ್ಲಿ ಜೀ ಟಿವಿ ನಾಟಕೀಯ ಸರಣಿಯಾಗಿ ದೂರದರ್ಶನದಲ್ಲಿ ಪ್ರಸಾರ ಮಾಡಿತು. ಅವರು 'ರೂನಾ' ಎಂಬ ಕಥೆಯನ್ನು ಸಹ ಬರೆದರು., ಅದು ಮರಾಠಿ ಚಲನಚಿತ್ರವಾಗಿ ಮೂಡಿಬಂತು.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.