ಬಾಲರಾಮನ ಪ್ರಾಣ ಪ್ರತಿಷ್ಠೆ ಮುಹೂರ್ತಕ್ಕೆ ಮಗು ಹೆರಲು ಹಾತೊರೆಯುತ್ತಿರುವ ಕರ್ನಾಟಕದ ತಾಯಂದಿರು
ಒಂದಡೆ ಅಯೋಧ್ಯೆಯಲ್ಲಿ ಬಾಲ ರಾಮ ಪ್ರಾಣ ಪ್ರತಿಷ್ಠಾಪನೆ, ಅದೇ ದಿನ ಆಸ್ಪತ್ರೆಯಿಂದ ಬಾಲ ರಾಮ ಅಥವಾ ಸೀತೆಯನ್ನು ಮನೆಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ ಕರ್ನಾಟಕ ಸೇರಿ ದೇಶದ ಹಲವು ಭಾಗದ ತಾಯಂದಿರು. ನಿಗದಿತ ಸಮಯಕ್ಕೂ ಮುನ್ನ ಸಿ ಸೆಕ್ಷನ್ ಮೂಲಕವೇ ಮಗು ಪಡೆಯಲು ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ.
Ram Mandir Muhurat: ಉತ್ತರ ಪ್ರದೇಶ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠೆಯ ವಿಧಿ ವಿಧಾನಗಳು ನೆರವೇರುತ್ತಿದ್ದರೆ, ಆ ಶುಭ ಗಳಿಗೆಗೆ ಕರುಳ ಕುಡಿಯನ್ನು ಭೂಮಿಗೆ ಕರೆತರತಲು ಕರ್ನಾಟಕ ಸೇರಿ ದೇಶದ ವಿವಿಧ ಭಾಗಗಳ ತಾಯಂದಿರು ನಿರ್ಧರಿಸಿದ್ದಾರೆ! ಹೌದು, ಇಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಆ ಪ್ರಯುಕ್ತ ಒಂಭತ್ತು ತಿಂಗಳ ಆಸುಪಾಸಿನ ತಾಯಂದಿರು ಗರ್ಭದ ಮಗುವನ್ನು ಸಿಸೇರಿಯನ್ ಮೂಲಕ ಪಡೆಯಲು ಹಾತೊರೆಯುತ್ತಿದ್ದಾರೆ.
ಇಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಸಮಾರಂಭಕ್ಕೆ ಭಾರತದಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸಮಯದಲ್ಲಿ ಆಸ್ಪತ್ರೆಗಳು ಮತ್ತು ಹೆರಿಗೆ ಕೇಂದ್ರಗಳು ಶಿಶುಗಳನ್ನು ಸ್ವಾಗತಿಸಲು ಸಿದ್ಧತೆ ನಡೆಸಿವೆ. ಮಗುವಿನ ರೂಪದಲ್ಲಿ ಬಾಲ ರಾಮನೇ ಮನೆ ಪ್ರವೇಶಿಸುತ್ತಾನೆ ಎಂಬ ನಂಬಿಕೆ ಎಲ್ಲ ಪೋಷಕರದ್ದಾಗಿದೆ.
ಮಗು ಯಾವುದೇ ಇರಲಿ, ನಮಗೆ ಇಂದೇ, ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಮುಹೂರ್ತದ ಸಮಯಕ್ಕೇ ಮಗು ಜನಿಸುವಂತಾಗಲಿ ಎಂದು ಪತ್ನಿಯನ್ನು ಆಸ್ಪತ್ರೆಗೆ ಕರೆತಂದ ಸಾಕಷ್ಟು ಉದಾಹರಣೆಗಳು ಇದೀಗ ಮುನ್ನೆಲೆಗೆ ಬರುತ್ತಿವೆ. ಬಾಲ ರಾಮನ ಪ್ರತಿಷ್ಠೆ ದಿನವೇ ಮಗು ಜನಿಸಿದರೆ ಮಂಗಳಕರವೆಂದು ಪರಿಗಣಿಸಿ ಈ ನಿರ್ಧಾರಕ್ಕೆ ಬಂದಿವೆ.
ಉತ್ತರ ಪ್ರದೇಶದ ಐಟಿ ಉದ್ಯೋಗಿ ನಿಲೇಶ್ ಹೇಳುವ ಪ್ರಕಾರ, "ನಾವು ಬೇಕು ಅಂತಲೇ ಉದ್ದೇಶಪೂರ್ವಕವಾಗಿ ಈ ದಿನವನ್ನು ಆಯ್ಕೆ ಮಾಡಿಕೊಂಡಿದ್ದೇವೆ, ಮಗುವಿನ ಲಿಂಗದ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ ಸಿಸೇರಿಯನ್ ಮೂಲಕ ನಾವು ಈ ಸಮಯವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಮಗುವಿನ ರೂಪದಲ್ಲಿಯೇ ನಮ್ಮ ಮನೆಗೆ ರಾಮನ ಆಗಮನವಾಗಲಿದೆ" ಎಂದಿದ್ದಾರೆ.
ಅದೇ ರೀತಿ ಫರಿದಾಬಾದ್‌ನ ಸ್ಕ್ರೀರೋಗ ವಿಭಾಗದ ಹಿರಿಯ ವೈದ್ಯೆ ಇಲಾ ಝಾ ಪ್ರಕಾರ, "ಜನವರಿ 22ಕ್ಕೆ ನಿಗದಿತ ಹೆರಿಗೆಗಾಗಿ ಸಾಕಷ್ಟು ಪೋಷಕರಿಂದ ನಾನು ವಿನಂತಿಗಳು ಬಂದಿವೆ. ಆದರೆ ವೈದ್ಯರಾಗಿ, ಅಂತಹ ಎಲ್ಲಾ ಬೇಡಿಕೆಗಳನ್ನು ಪೂರೈಸುವುದು ವೈದ್ಯಕೀಯವಾಗಿ ಸಾಧ್ಯವಲ್ಲ. ದಿನ ಚೆನ್ನಾಗಿದ್ದರೆ ಮಾತ್ರವಲ್ಲ ತಾಯಿಯ ಪರಿಸ್ಥಿತಿ ನೋಡಿಕೊಂಡೇ ನಾವು ಮುಂದುವರಿಯುತ್ತೇವೆ. ಮಗುವಿನ ಬೆಳವಣಿಗೆ ಆರೋಗ್ಯಕರವಾಗಿದ್ದರೆ, ತಾಯಿ ಚೆನ್ನಾಗಿದ್ದರೆ ಮಾತ್ರ ನಾವು ಮುಂದುವರಿದು ಸೀಸೇರಿಯನ್ ಮಾಡುತ್ತೇವೆ" ಎಂದಿದ್ದಾರೆ.
ವಿಜಯಪುರದಲ್ಲಿ JSS ಆಸ್ಪತ್ರೆಯಲ್ಲಿ ಉಚಿತ ಹೆರಿಗೆ
ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರುತ್ತಿದ್ದಾರೆ, ಇತ್ತ ವಿಜಯಪುರದ ಜೆಎಸ್‌ಎಸ್ (ಶ್ರೀ ಜಗದ್ಗುರು ಶ್ರೀ ಶಿವರಾತ್ರೀಶ್ವರ) ಆಸ್ಪತ್ರೆ ವಿನೂತನ ಕಾರ್ಯಕ್ಕೆ ಮುಂದಾಗಿದೆ. ಜ. 18ರಿಂದ 22ರವರೆಗೆ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗುವ ತಾಯಂದಿರಿಗೆ ಉಚಿತವಾಗಿ ಹೆರಿಗೆ ಮಾಡಿಸುವುದಾಗಿ ಶ್ರೀ ಸಿದ್ದೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ಹೇಳಿದೆ. ಮೊದಲ ದಿನವಾದ 18ನೇ ತಾರೀಖಿನಂದೇ 7 ಹೆರಿಗೆ ಮಾಡಿಸಿದ್ದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.