Atul Subhash case: ಮೊಮ್ಮಗನನ್ನು ತಮಗೊಪ್ಪಿಸಬೇಕು ಎಂಬ ಅತುಲ್ ಸುಭಾಷ್ ಪಾಲಕರ ಅಹವಾಲು ವಿಚಾರಣೆಗೆ ಒಪ್ಪಿದ ಸುಪ್ರೀಂ ಕೋರ್ಟ್
Atul Subhash case: ಮೊಮ್ಮಗನನ್ನು ತಮಗೊಪ್ಪಿಸುವಂತೆ ಬೆಂಗಳೂರಿನ ಟೆಕ್ಕಿ ಮೃತ ಅತುಲ್ ಸುಭಾಷ್ ಅವರ ತಾಯಿ ಮಾಡಿರುವ ಮನವಿಗೆ ಸ್ಪಂದಿಸಿದ ಸುಪ್ರೀಂ ಕೋರ್ಟ್, ಆ ದಾವೆಯ ವಿಚಾರಣೆ ನಡೆಸಲಿದೆ.

Atul Subhash case: ಬೆಂಗಳೂರು ಟೆಕ್ಕಿ ಮೃತ ಅತುಲ್ ಸುಭಾಷ್ ಅವರ ತಾಯಿ ಅಂಜು ದೇವಿ, ತಮ್ಮ ಮೊಮ್ಮಗನ ಕಸ್ಟಡಿಗೆ ಕೋರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಿಗದಿಪಡಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಇದು ಅತುಲ್ ಸುಭಾಷ್ ಅವರ ಪಾಲಕರಿಗೆ ದೊಡ್ಡ ರಿಲೀಫ್ ನೀಡಿದೆ ಎಂದು ವರದಿ ಹೇಳಿದೆ. ಬೆಂಗಳೂರು ಮೂಲದ ಇಂಜಿನಿಯರ್ ತನ್ನ ಪತ್ನಿಯ ಕಿರುಕುಳವನ್ನು ಆರೋಪಿಸಿ 2024 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸೂಸೈಡ್ ನೋಟ್ ಮತ್ತು ವಿಡಿಯೋ ರಾಷ್ಟ್ರವ್ಯಾಪಿ ಚರ್ಚಗೆ ಗ್ರಾಸವಾಯಿತು. ವರದಕ್ಷಿಣೆ ಕಾನೂನು ಕುರಿತು ಚರ್ಚೆ ನಡೆದು, ಕಾನೂನು ಪರಿಷ್ಕರಣೆ ಆಗಬೇಕು ಎಂಬ ಬೇಡಿಕೆಯೂ ವ್ಯಕ್ತವಾಗುವಂತೆ ಮಾಡಿತ್ತು.
ಮೊಮ್ಮಗನನ್ನು ತಮಗೊಪ್ಪಿಸುವಂತೆ ಕೋರಿ ಹೇಬಿಯಸ್ ಕಾರ್ಪಸ್ ಅರ್ಜಿ
ಬೆಂಗಳೂರು ಟೆಕ್ಕಿ ಮೃತ ಅತುಲ್ ಸುಭಾಷ್ ಅವರ ತಾಯಿ, ಸುಪ್ರೀಂ ಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಮೊಮ್ಮಗನನ್ನು ತಮಗೊಪ್ಪಿಸುವಂತೆ ಮನವಿ ಮಾಡಿದ್ದಾರೆ. ತನ್ನ ನಾಲ್ಕು ವರ್ಷದ ಮೊಮ್ಮಗನನ್ನು ಕಸ್ಟಡಿಗೆ ನೀಡುವಂತೆ ಕೋರಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವ ಅಂಜು ದೇವಿ ಅವರ ಮನವಿಯನ್ನು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಸಾಯೀಶ್ ಚಂದ್ರ ಶರ್ಮಾ ಅವರ ಪೀಠವು ಆಲಿಸುವ ಸಾಧ್ಯತೆಯಿದೆ.
ಇದಕ್ಕೂ ಮೊದಲು, ಜನವರಿ 7 ರಂದು ನಾಲ್ಕು ವರ್ಷದ ಮಗುವಿಗೆ ಅಜ್ಜಿ (ಅಂಜು ದೇವಿ) ಅಪರಿಚಿತರಾಗಿರುವ ಕಾರಣ ಮಗುವನ್ನು ಅವರ ಸುಪರ್ದಿಗೆ ಒಪ್ಪಿಸಲಾಗದು ಎಂದು ನ್ಯಾಯಪೀಠ ಹೇಳಿತ್ತು.
ನಂತರ ಸುಪ್ರೀಂ ಕೋರ್ಟ್ ಮಗುವನ್ನು ಮುಂದಿನ ವಿಚಾರಣೆಯ ಜನವರಿ 20 ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿತ್ತು ಮತ್ತು ಮಾಧ್ಯಮ ವಿಚಾರಣೆಯ ಆಧಾರದ ಮೇಲೆ ಪ್ರಕರಣವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿತು.
ಅತುಲ್ ಸುಭಾಷ್ ಮಗ ಎಲ್ಲಿದ್ದಾನೆ
ಕಳೆದ ವಿಚಾರಣೆಯ ಸಂದರ್ಭದಲ್ಲಿ, ಮೃತ ಅತುಲ್ ಸುಭಾಷ್ ಅವರ ಮಗು ಹರಿಯಾಣದ ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದೆ ಎಂದು ಸುಭಾಷ್ ಅವರ ಪರಿತ್ಯಕ್ತ ಪತ್ನಿ ನಿಕಿತಾ ಸಿಂಘಾನಿಯಾ ಪರ ವಾದ ಮಂಡಿಸಿದ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.
ಅಂಜು ದೇವಿ ಪರ ವಾದ ಮಂಡಿಸಿದ ವಕೀಲ ಕುಮಾರ್ ದುಶ್ಯಂತ್ ಸಿಂಗ್ ಅವರು ಮಗುವಿನ ಪಾಲನೆಯ ಹೊಣೆಗಾರಿಕೆಯನ್ನು ಅತುಲ್ ಸುಭಾಷ್ ಅವರ ಪಾಲಕರಿಗೆ ವಹಿಸಬೇಕು ಕೋರಿದರು ಮತ್ತು ಆಕೆಯಿಂದ ದೂರವಾದ ಸೊಸೆ ಮಗು ಎಲ್ಲಿದೆ ಎಂಬುದನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿದರು.
ಕಾನೂನು ಪ್ರಕಾರ, ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವನ್ನು ಬೋರ್ಡಿಂಗ್ ಶಾಲೆಗೆ ಸೇರಿಸಬಾರದು. ಅತುಲ್ ಸುಭಾಷ್ ಪಾಲಕರು ಮಗುವಿಗೆ ಒಂದೆರಡು ವರ್ಷ ಇರುವಾಗ ಮಾತ್ರವೇ ನೋಡಿದ್ದರು. ಆ ಫೋಟೋ ಬಿಟ್ಟರೆ ಅವರ ಬಳಿ ಮಗುವಿನ ಇತ್ತೀಚಿನ ಫೋಟೋ ಇಲ್ಲ. ಸಂಪರ್ಕಕ್ಕೆ ಅವಕಾಶವನ್ನೂ ಸೊಸೆ ನೀಡಿಲ್ಲ ಎಂದು ಆರೋಪಿಸಿದರು.
ಅತುಲ್ ಪತ್ನಿ ನಿಖಿತಾ ಸೇರಿ 3 ಆರೋಪಿಗಳಿಗೆ ಜ 4 ರಂದು ಜಾಮೀನು
ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯಾ, ಅತ್ತೆ ನಿಶಾ ಸಿಂಘಾನಿಯಾ, ಬಾಮೈದ ಅನುರಾಗ್ ಸಿಂಘಾನಿಯಾರಿಗೆ ಬೆಂಗಳೂರಿನ 29ನೇ ಸಿಸಿಹೆಚ್ ನ್ಯಾಯಾಲಯ ಜನವರಿ 4 ರಂದು ಜಾಮೀನು ಮಂಜೂರು ಮಾಡಿತು.
ಉತ್ತರಪ್ರದೇಶ ಮೂಲದ 34 ವರ್ಷದ ಟೆಕ್ಕಿ ಅತುಲ್ ಸುಭಾಷ್ 2024ರ ಡಿಸೆಂಬರ್ 8 ರಂದು ರಾತ್ರಿ ಬೆಂಗಳೂರಿನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಮಾರನೇ ದಿನ ಬೆಳಗ್ಗೆ ಬೆಳಕಿಗೆ ಬಂದಿತ್ತು. ಕೂಡಲೇ ಸ್ಥಳೀಯರು 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತತ್‌ಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಸ್ಥಳ ಪರಿಶೀಲಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದು, ಕೇಸ್ ದಾಖಲಿಸಿಕೊಂಡಿದ್ದರು. ಅತುಲ್ ಸುಭಾಷ್ ಬರೆದಿಟ್ಟ 24 ಪುಟಗಳ ಮರಣ ಪತ್ರದಲ್ಲಿ ಪತ್ನಿ ಮತ್ತು ಆಕೆಯ ಕುಟುಂಬ ಸದಸ್ಯರ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಇದಾದ ಬಳಿಕ ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯಾ, ಅತ್ತೆ ನಿಶಾ ಸಿಂಘಾನಿಯಾ, ಬಾಮೈದ ಅನುರಾಗ್ ಸಿಂಘಾನಿಯಾ ಬಂಧನವಾಗಿತ್ತು.
