ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕಾರಣ ಕಾನೂನು ದುರ್ಬಳಕೆ ವಿಚಾರ ಚರ್ಚೆಗೆ; ಸೆಕ್ಷನ್ 498ಎ ಎಂದರೇನು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕಾರಣ ಕಾನೂನು ದುರ್ಬಳಕೆ ವಿಚಾರ ಚರ್ಚೆಗೆ; ಸೆಕ್ಷನ್ 498ಎ ಎಂದರೇನು

ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕಾರಣ ಕಾನೂನು ದುರ್ಬಳಕೆ ವಿಚಾರ ಚರ್ಚೆಗೆ; ಸೆಕ್ಷನ್ 498ಎ ಎಂದರೇನು

Section 498A: ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣವು ವರದಕ್ಷಿಣೆ ಕಿರಕುಳ ತಡೆ ಕಾನೂನು ದುರ್ಬಳಕೆ ವಿಚಾರದ ಚರ್ಚೆಯನ್ನು ಪುನಃ ಹುಟ್ಟುಹಾಕಿದೆ. ಬಹಳ ಸ್ಪಷ್ಟವಾಗಿ ವಿಡಿಯೋ ಹೇಳಿಕೆ ದಾಖಲಿಸಿರುವ ಅತುಲ್ ಸುಭಾಷ್‌, ಕಾನೂನು ದುರ್ಬಳಕೆ ಕುರಿತು ಅಸಮಾಧಾನ ತೋಡಿಕೊಂಡಿದ್ದರು. ಈ ಸೆಕ್ಷನ್ 498ಎ ಎಂದರೇನು, ಮತ್ತು ಪೂರಕ ವಿವರಗಳು ಇಲ್ಲಿವೆ.

ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕಾರಣ ಕಾನೂನು ದುರ್ಬಳಕೆ ವಿಚಾರ ಚರ್ಚೆಗೆ ಗ್ರಾಸ ಒದಗಿಸಿದೆ. ಹಾಗಾದರೆ ಸೆಕ್ಷನ್ 498ಎ ಎಂದರೇನು ಎಂಬ ವಿವರ ಇಲ್ಲಿದೆ.
ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕಾರಣ ಕಾನೂನು ದುರ್ಬಳಕೆ ವಿಚಾರ ಚರ್ಚೆಗೆ ಗ್ರಾಸ ಒದಗಿಸಿದೆ. ಹಾಗಾದರೆ ಸೆಕ್ಷನ್ 498ಎ ಎಂದರೇನು ಎಂಬ ವಿವರ ಇಲ್ಲಿದೆ.

Section 498A: ಉತ್ತರ ಪ್ರದೇಶ ಮೂಲದ ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ (34) ಆತ್ಮಹತ್ಯೆ ಪ್ರಕರಣವು ಕೌಟುಂಬಿಕ ಹಿಂಸಾಚಾರ, ವರದಕ್ಷಿಣೆ ಕಿರಕುಳ ಕಾನೂನು ದುರುಪಯೋಗಕ್ಕೆ ಸಂಬಂಧಿಸಿದ ಚರ್ಚೆಯನ್ನು ಹುಟ್ಟುಹಾಕಿದೆ. ಮೃತ ಅತುಲ್ ಸುಭಾಷ್‌ ಕುಟುಂಬ ಸದಸ್ಯರ ವಿರುದ್ಧ ಅವರ ಪತ್ನಿ ಮತ್ತು ಕುಟುಂಬದವರು 10ಕ್ಕೂ ಹೆಚ್ಚು ಕೇಸ್ ದಾಖಲಿಸಿದ್ದರು. ಅವರ ಚಿತ್ರಹಿಂಸೆಯ ಕಾರಣ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿ ಬಂತು ಎಂದು ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಅತುಲ್ ಸುಭಾಷ್ ಮತ್ತು ಅವರ ಕುಟುಂಬದವರ ವಿರುದ್ಧ ಸೆಕ್ಷನ್ 498ಎ ಪ್ರಕಾರ ಕೇಸ್ ದಾಖಲಾಗಿದ್ದು, ಕಾನೂನು ದುರ್ಬಳಕೆ ಆರೋಪದ ಘಟನೆಯ ಕುರಿತು ಸಾಮಾಜಿ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ರೀತಿ ದುರ್ಬಳಕೆ ಮಾಡುವ ಮೂಲಕ ನಿಜವಾದ ಸಂತ್ರಸ್ತರಿಗೆ ನ್ಯಾಯ ಸಿಗದಂತೆ ಮಾಡುತ್ತಾರೆ ಎಂಬ ಆಕ್ರೋಶ, ಅಸಮಾಧಾನ ವ್ಯಕ್ತವಾಗಿದೆ.

ಸೆಕ್ಷನ್ 498ಎ ದುರುಪಯೋಗ; ಸುಪ್ರೀಂ ಕೋರ್ಟ್ ಟಿಪ್ಪಣಿ

ಸುಪ್ರೀಂ ಕೋರ್ಟ್, ಡಿಸೆಂಬರ್ 10 ರಂದು ಒಂದು ದಿನ ಮುಂಚಿತವಾಗಿ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವಾಗ, ಸೆಕ್ಷನ್ 498A (ಈಗ ಭಾರತೀಯ ನ್ಯಾಯಾಂಗ ಸಂಹಿತೆಯ ಸೆಕ್ಷನ್ 85) ದುರ್ಬಳಕೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿತು. ನ್ಯಾಯಮೂರ್ತಿಗಳಾದ ಬಿ. ವಿ. ನಾಗರತ್ನ ಮತ್ತು ಎನ್. ಕೋಟೇಶ್ವರ್ ಸಿಂಗ್ ಅವರಿದ್ದ ನ್ಯಾಯಪೀಠವು ಯಾವುದೇ ನಿರ್ದಿಷ್ಟ ಸಾಕ್ಷ್ಯಾಧಾರಗಳಿಲ್ಲದೆ ಮಾಡುವ ಸಾಮಾನ್ಯ ಆರೋಪಗಳು ಕಾನೂನು ಪ್ರಕ್ರಿಯೆಯ ದುರುಪಯೋಗಕ್ಕೆ ಕಾರಣವಾಗಬಹುದು ಎಂದು ಹೇಳಿತು.

ಭಾರತೀಯ ದಂಡ ಸಂಹಿತೆ (IPC) ಯಲ್ಲಿ ತಿದ್ದುಪಡಿಯ ಮೂಲಕ ಸೆಕ್ಷನ್ 498A ಅನ್ನು ಸೇರಿಸಿದ್ದರ ಉದ್ದೇಶವು ಪತಿ ಮತ್ತು ಆತನ ಕುಟುಂಬ ಸದಸ್ಯರಿಂದ ಮಹಿಳೆ ಮೇಲಾಗುವ ಕ್ರೌರ್ಯವನ್ನು ತಡೆಗಟ್ಟುವುದಾಗಿದೆ. ಈ ವಿಚಾರದಲ್ಲಿ ಸರ್ಕಾರ ತುರ್ತು ಗಮನಹರಿಸುವುದನ್ನು ಇದು ಖಚಿತಪಡಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. "ಗಂಡ ಮತ್ತು ಅತ್ತೆ-ಮಾವಂದಿರು ಮಾಡುವ ದೌರ್ಜನ್ಯಗಳಿಂದ ಮಹಿಳೆಯರನ್ನು ರಕ್ಷಿಸಲು 498A ಅನ್ನು ಸೇರಿಸಲಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ದಾಂಪತ್ಯ ಕಲಹಗಳು ಹೆಚ್ಚಾಗುತ್ತಿದ್ದು, ವೈಯಕ್ತಿಕ ಸೇಡು ತೀರಿಸಿಕೊಳ್ಳಲು ಈ ಕಾನೂನಿನ ದುರ್ಬಳಕೆಯೂ ಹೆಚ್ಚಾಗಿದೆ" ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತ್ತು.

ದಾಂಪತ್ಯ ಕಲಹ ನಡೆದಾಗ, ಅಲ್ಲಿ ಅದರ ತೀವ್ರತೆಗೆ ಅನುಗುಣವಾಗಿ ಸೆಕ್ಷನ್ 498ಎ ಪ್ರಯೋಗವಾಗುವ ಸಾಧ್ಯತೆ ಇದೆ. ಇಂತಹ ಸನ್ನಿವೇಶದಲ್ಲಿ ಅಸ್ಪಷ್ಟ ಮತ್ತು ಸಾಮಾನ್ಯ ಆರೋಪಗಳ ತನಿಖೆ ಮಾಡುವ ಅಗತ್ಯವಿದೆ. ಮಾಡದೇ ಇದ್ದರೆ ಅದು ಪತ್ನಿ ಮತ್ತು ಆಕೆಯ ಕುಟುಂಬ ಸದಸ್ಯರು ದುರುಪಯೋಗ ಮಾಡುವುದಕ್ಕೆ ಅವಕಾಶ ಕೊಟ್ಟಂತಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.

ಆ ರೀತಿಯಾಗಿ, "ಐಪಿಸಿಯ ಸೆಕ್ಷನ್ 498 ಎ ಪ್ರಕಾರ ಕ್ರೌರ್ಯವನ್ನು ಎದುರಿಸುತ್ತಿರುವ ಯಾವುದೇ ಮಹಿಳೆ ಮೌನವಾಗಿರಬೇಕು. ದೂರು ನೀಡಬಾರದು ಅಥವಾ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಾರದು ಎಂದು ನ್ಯಾಯಪೀಠ ಹೇಳುತ್ತಿರುವುದಲ್ಲ. ಕಾನೂನು ದುರ್ಬಳಕೆಗೆ ಅವಕಾಶ ನೀಡಬಾರದು ಎಂಬುದನ್ನು ಹೇಳುತ್ತಿದ್ದೇವೆ. ಸೆಕ್ಷನ್ 498ಎ ಜಾರಿಗೆ ತಂದಿರುವುದರ ಮೂಲ ಉದ್ದೇಶವನ್ನು ಕಾನೂನು ಪಾಲಕರು ಅರ್ಥಮಾಡಿಕೊಳ್ಳಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಭಾರತೀಯ ನ್ಯಾಯ ಸಂಹಿತೆಯಲ್ಲಿ ಇದರ ಸೆಕ್ಷನ್ ಬದಲು

ಭಾರತೀಯ ನ್ಯಾಯ ಸಂಹಿತೆ 2023 ಪ್ರಕಾರ, ಸೆಕ್ಷನ್ 85 ಮತ್ತು 86ರಲ್ಲಿ ಐಪಿಸಿಯ ಸೆಕ್ಷನ್ 498A ಮತ್ತು ಅದರ ವಿವರಣೆ ಸೇರಿಸಲಾಗಿದೆ. "ಕ್ರೌರ್ಯ" ದ ವ್ಯಾಖ್ಯಾನವನ್ನು ಭಾರತೀಯ ನ್ಯಾಯಾಂಗ ಸಂಹಿತೆಯ ಸೆಕ್ಷನ್ 86 ರಲ್ಲಿ ವಿಸ್ತರಿಸಲಾಗಿದೆ, ಅದು ಆತ್ಮಹತ್ಯೆಗೆ ಕಾರಣವಾಗಬಹುದು ಅಥವಾ ಮಹಿಳೆಗೆ ಗಂಭೀರ ಗಾಯವನ್ನು ಉಂಟುಮಾಡುವ ನಡವಳಿಕೆಯನ್ನು ಸೇರಿಸಿದೆ. ಅಂತಹ ಕ್ರೌರ್ಯವನ್ನು ಎಸಗುವವರಿಗೆ ಮೂರು ವರ್ಷ ತನಕ ಜೈಲು ಶಿಕ್ಷೆ ಮತ್ತು ದಂಡ ಸೇರಿ ಶಿಕ್ಷೆಯನ್ನು ಸೆಕ್ಷನ್ 85 ವಿವರಿಸುತ್ತದೆ. ಪ್ರಸ್ತುತ ಸಾಮಾಜಿಕ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಈ ಸೆಕ್ಷನ್‌ಗಳನ್ನು ತಿದ್ದುಪಡಿ ಮಾಡಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

ಐಪಿಸಿಯ ಸೆಕ್ಷನ್ 498ಎ ಎಂದರೇನು?

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 498A ಮಹಿಳೆಯರಿಗೆ ತಮ್ಮ ಪತಿ, ಮತ್ತು ಅವರ ಪಾಲಕರು (ಅತ್ತೆ ಮಾವ) ಮತ್ತು ಕುಟುಂಬ ಸದಸ್ಯರ ದೌರ್ಜನ್ಯ ಮತ್ತು ವರದಕ್ಷಿಣೆ ಕಿರುಕುಳದಿಂದ ರಕ್ಷಣೆ ನೀಡುವ ಗುರಿಯನ್ನು ಹೊಂದಿದೆ. ಈ ಸೆಕ್ಷನ್ ಅಡಿಯಲ್ಲಿ, ಮಹಿಳೆಯು ತನ್ನ ಪತಿ ಅಥವಾ ಅತ್ತೆಯವರಿಂದ ಯಾವುದೇ ರೀತಿಯ ಮಾನಸಿಕ ಅಥವಾ ದೈಹಿಕ ಕಿರುಕುಳವನ್ನು ಅನುಭವಿಸಿದರೆ, ಅಂತಹ ಅಪರಾಧವು ಈ ವರ್ಗಕ್ಕೆ ಬರುತ್ತದೆ.

ಅಪರಾಧದ ಸ್ವರೂಪ: ಪತಿ ಅಥವಾ ಅತ್ತೆಯು ಮಹಿಳೆಗೆ ನೀಡುವ ಕಿರುಕುಳದ ಪ್ರಮಾಣ, ಆತ್ಮಹತ್ಯೆಗೆ ಯತ್ನಿಸಿದರೆ ಅಂತಹ ಅಪರಾಧ. ಮಹಿಳೆಗೆ ಗಂಭೀರವಾದ ಗಾಯ ಅಥವಾ ಮಾನಸಿಕ ಒತ್ತಡ ಉಂಟಾದರೆ ಅದು ಕೂಡ ಈ ಅಪರಾಧದ ವ್ಯಾಪ್ತಿಗೆ ಬರುತ್ತದೆ. ವರದಕ್ಷಿಣೆಗಾಗಿ ಕಿರುಕುಳ ನೀಡಿದರೆ, ಆ ಕೃತ್ಯವೂ ಇದೇ ಅಪರಾಧ ಸ್ವರೂಪಕ್ಕೆ ಸೇರ್ಪಡೆಯಾಗುತ್ತದೆ.

ಶಿಕ್ಷೆ ಮತ್ತು ದೂರು ಸಲ್ಲಿಕೆ ವಿಚಾರ: ಇನ್ನು ಶಿಕ್ಷೆಯ ನಿಬಂಧನೆಗಳನ್ನು ಗಮನಿಸುವುದಾದರೆ, ಈ ಆರೋಪಗಳು ಸಾಬೀತಾದರೆ ಅಂತಹ ಸಂದರ್ಭದಲ್ಲಿ ಅಪರಾಧಿಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಇದು ಜಾಮೀನುರಹಿತ ಅಪರಾಧ ಕೃತ್ಯವಾಗಿದೆ. ಈ ಆರೋಪವನ್ನು ಮಹಿಳೆ ಹೊರಿಸಿದರೆ, ಪತಿ ಮತ್ತು ಅವರ ಕುಟುಂಬ ಸದಸ್ಯರನ್ನು ಪೊಲೀಸರು ವಾರೆಂಟ್ ಇಲ್ಲದೆಯೇ ಬಂಧಿಸಿ ಕರೆದೊಯ್ಯಬಹುದು. ಈ ಸೆಕ್ಷನ್ ಪ್ರಕಾರ ಮಹಿಳೆ ಅಥವಾ ಆಕೆಯ ಕುಟುಂಬ ಸದಸ್ಯರು ದೂರು ಸಲ್ಲಿಸಬಹುದಾಗಿದೆ.

ಸೆಕ್ಷನ್ 498 ಎ ಉದ್ದೇಶ, ದುರುಪಯೋಗದ ಟೀಕೆ: ವರದಕ್ಷಿಣೆ ಕಿರುಕುಳ ಮತ್ತು ಮಹಿಳೆಯರ ವಿರುದ್ಧದ ಇತರ ರೀತಿಯ ಕೌಟುಂಬಿಕ ಹಿಂಸಾಚಾರದ ಪ್ರಕರಣಗಳು ಹೆಚ್ಚಾದ ಸನ್ನಿವೇಶದಲ್ಲಿ ಅವುಗಳನ್ನು ನಿಯಂತ್ರಿಸುವ ಸಲುವಾಗಿ ಮತ್ತು ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಖಚಿತಪಡಿಸಲು 1983ರಲ್ಲಿ ಈ ಸೆಕ್ಷನ್ ಅನ್ನು ಐಪಿಸಿಗೆ ಸೇರ್ಪಡೆ ಮಾಡಲಾಯಿತು. ಈ ಸೆಕ್ಷನ್ ಮಹಿಳೆಯ ರಕ್ಷಣೆಗೆ ಪ್ರಬಲ ಅಸ್ತ್ರವಾಗಿದ್ದರೂ, ಅನೇಕ ಬಾರಿ ದುರ್ಬಳಕೆಯಾಗಿರುವುದು ಬೆಳಕಿಗೆ ಬಂದಿವೆ. ಆದ್ದರಿಂದ ತನಿಖೆ ನಡೆಸಿಯೇ ಮುಂದುವರಿಯಬೇಕು. ಬಂಧಿಸುವಾಗ ಹೆಚ್ಚಿನ ನಿಗಾವಹಿಸಬೇಕು ಎಂದು ಕೋರ್ಟ್ ಕೂಡ ನಿರ್ದೇಶನ ನೀಡಿದೆ.

498ಎ ದುರುಪಯೋಗದ ಬಗ್ಗೆ ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈಕೋರ್ಟ್ ಈಗಾಗಲೇ ಎಚ್ಚರಿಕೆ ನೀಡಿದೆ. ಸೆಪ್ಟಂಬರ್‌ನಲ್ಲಿ ನ್ಯಾಯಮೂರ್ತಿ ಬಿಆರ್ ಗವಾಯಿ ಅವರು ದೇಶದಲ್ಲಿ ಅತ್ಯಂತ ಹೆಚ್ಚು ದುರ್ಬಳಕೆಯಾದ ಕಾನೂನುಗಳಲ್ಲಿ ಸೆಕ್ಷನ್ 498ಎ ಒಂದಾಗಿದೆ ಎಂದು ಹೇಳಿದ್ದರು. ಮದುವೆ ನೆರವೇರದೆ ಇದ್ದರೂ ಯುವಕನೊಬ್ಬ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕಾಗಿ ಬಂದ ಪ್ರಕರಣವನ್ನು ಅವರು ಪ್ರಸ್ತಾಪಿಸಿದರು. ಈ ಕಾನೂನಿನಡಿ ವಯಸ್ಸಾದವರು ಮತ್ತು ರೋಗಿಗಳನ್ನು ಅನಗತ್ಯವಾಗಿ ಕಾನೂನು ತೊಂದರೆಗೆ ಎಳೆಯುವ ಬಗ್ಗೆ ಬಾಂಬೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಇದನ್ನು ಸಂಯೋಜಿತ ಅಪರಾಧ ಎಂದು ಪರಿಗಣಿಸಿದರೆ, ಸೌಹಾರ್ದ ಪರಿಹಾರದ ಮೂಲಕ ಅನೇಕ ಪ್ರಕರಣಗಳನ್ನು ಪರಿಹರಿಸಬಹುದು ಎಂದು ನ್ಯಾಯಾಲಯ ವಿವರಣೆಯನ್ನೂ ನೀಡಿತ್ತು.

ದಾಂಪತ್ಯ ಕಲಹದಲ್ಲಿ ಪತಿ ಮತ್ತು ಆತನ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಾಗಿ ಸೆಕ್ಷನ್ 498ಎ ಬಳಕೆಯಾಗುತ್ತಿದೆ ಎಂದು ಕೇರಳ ಹೈಕೋರ್ಟ್ 2023ರ ಮೇ ತಿಂಗಳಲ್ಲಿ ಹೇಳಿತ್ತು. ಇದೇ ರೀತಿ, ಮಹಿಳೆಯರ ರಕ್ಷಣೆಗೆ ಬಳಕೆಯಾಗಬೇಕಾದ ಸೆಕ್ಷನ್ 498ಎ ಪ್ರತೀಕಾರದ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎಂದು ಜಾರ್ಖಂಡ್ ಹೈಕೋರ್ಟ್ 2023ರ ಜುಲೈನಲ್ಲಿ ಹೇಳಿತ್ತು.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.