ಬಾಲರಾಮನ ದರ್ಶನಕ್ಕೆ ವಾಯುಯಾನ ಸೇವೆ ಹೆಚ್ಚಳ; ಬೆಂಗಳೂರು- ಅಯೋಧ್ಯೆ ಇಂಡಿಗೋ ನೇರ ವಿಮಾನ ಸೇವೆ ಡಿಸೆಂಬರ್ 31 ರಿಂದ ಶುರು,
ಕರ್ನಾಟಕ ರಾಜಧಾನಿ ಬೆಂಗಳೂರು ಮತ್ತು ಅಯೋಧ್ಯೆ ನಡುವೆ ನೇರ ವಿಮಾನ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಂಡಿಗೋ ತನ್ನ ನೇರ ವಿಮಾನ ಯಾನ ಸೇವೆಯನ್ನು ಡಿಸೆಂಬರ್ 31 ರಿಂದ ಶುರುಮಾಡುತ್ತಿರುವುದಾಗಿ ಘೋಷಿಸಿದೆ. ಬಾಲರಾಮನ ದರ್ಶನ ಪ್ರವಾಸ ಇನ್ನಷ್ಟು ಸಲೀಸಾಗಲಿದೆ.
ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ಅಯೋಧ್ಯೆಗೆ ಇಂಡಿಗೋ ನೇರ ವಿಮಾನ ಯಾನ ಡಿಸೆಂಬರ್ 31 ರಿಂದ ಶುರುವಾಗಲಿದೆ. ಅನುಕೂಲಕರ ಸಮಯದಲ್ಲಿ ಈ ವಿಮಾನ ಯಾನ ಸಂಪರ್ಕವು ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಗೆ ಹೆಚ್ಚು ಅವಕಾಶವನ್ನು ಒದಗಿಸಲಿದೆ. ಇದು ಏರ್‌ಲೈನ್ಸ್‌ನ ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುತ್ತದೆ ಎಂದು ಇಂಡಿಗೋ ಹೇಳಿಕೊಂಡಿದೆ. ಇದಲ್ಲದೆ, ಬೆಂಗಳೂರು - ಗೋರಖಪುರ ನಡುವೆ ದೈನಂದಿನ ವಿಮಾನ ಯಾನ ಮತ್ತೆ ಡಿಸೆಂಬರ್ 31 ರಿಂದ ಶುರುವಾಗಲಿದೆ ಎಂದು ಇಂಡಿಗೋ ಘೋಷಿಸಿದೆ.
ಬೆಂಗಳೂರು- ಅಯೋಧ್ಯೆ ಇಂಡಿಗೋ ವಿಮಾನ ಯಾನದ ವೇಳಾಪಟ್ಟಿ
ಇಂಡಿಗೋ 6ಇ 934 ವಿಮಾನವು ಬೆಂಗಳೂರಿನಿಂದ ಬೆಳಗ್ಗೆ 11.40ಕ್ಕೆ ಹೊರಟು ಅಪರಾಹ್ನ 2.25ಕ್ಕೆ ಅಯೋಧ್ಯೆಗೆ ಆಗಮಿಸಲಿದೆ. ಅಯೋಧ್ಯೆಯಿಂದ 6E 926 ವಿಮಾನವು ಅಪರಾಹ್ನ 2.55 ಕ್ಕೆ ಹೊರಟು ಸಂಜೆ 5.30 ಕ್ಕೆ ಬೆಂಗಳೂರಿಗೆ ಆಗಮಿಸಲಿದೆ.
“ಬೆಂಗಳೂರಿನಿಂದ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ ದೈನಂದಿನ ವಿಮಾನ ಸಂಚಾರ ಪ್ರಾರಂಭವು ದೇಶದಲ್ಲಿ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ವಿಮಾನ ಯಾನದ ಪ್ರಮುಖ ಕೇಂದ್ರವಾಗಿ ಬೆಂಗಳೂರಿನ ಸ್ಥಾನವನ್ನು ಇನ್ನಷ್ಟು ಬಲಪಡಿಸುತ್ತದೆ. ದೈನಂದಿನ ವಿಮಾನಗಳು ನಮ್ಮ ಗ್ರಾಹಕರಿಗೆ ಆಳವಾದ ಆಧ್ಯಾತ್ಮಿಕ ಮಹತ್ವದ ನಗರ ಅಯೋಧ್ಯೆಯಲ್ಲಿ ಸುತ್ತಾಡಲು ಸಾಕಷ್ಟು ಸಮಯವನ್ನು ಒದಗಿಸುವ ನಿಟ್ಟಿನಲ್ಲಿ ಸಮಯೋಚಿತವಾಗಿದೆ”ಎಂದು ಇಂಡಿಗೋದ ಜಾಗತಿಕ ಮಾರಾಟದ ಮುಖ್ಯಸ್ಥ ವಿನಯ್ ಮಲ್ಹೋತ್ರಾ ಹೇಳಿದರು.
ಅಯೋಧ್ಯೆಯಲ್ಲಿ ಉಬರ್ ಆಟೋ ಶುರು
ಪ್ರಯಾಣ ಸೇವಾ ಪೂರೈಕೆದಾರ ಕಂಪನಿ ಉಬರ್ ತನ್ನ ಜನಪ್ರಿಯ ಉಬರ್ ಆಟೋ ಮೂಲಕ ಅಯೋಧ್ಯೆಯಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಸೇವೆಯನ್ನು ಪ್ರಾರಂಭಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಸೇವೆಗೆ ಹಸಿರು ನಿಶಾನೆ ತೋರಿದರು. ಎಲೆಕ್ಟ್ರಿಕ್ ಆಟೋ ರಿಕ್ಷಾ ಸೇವೆಯ ಪ್ರಾರಂಭದ ನಂತರ, ಉಬರ್ ಇಂಟರ್‌ಸಿಟಿ ಜೊತೆಗೆ ಅಯೋಧ್ಯೆಯಲ್ಲಿ ಉಬರ್‌ಗೋ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಯೋಜಿಸಿದೆ. ನಗರದಲ್ಲಿ ಈ ಪ್ರಯಾಣ ಸೇವೆಗಳನ್ನು ಪ್ರಾರಂಭಿಸುವ ಮೂಲಕ, ಹಂಚಿಕೆಯ ಮೊಬಿಲಿಟಿ ಅಗ್ರಿಗೇಟರ್ ಅಯೋಧ್ಯೆಯಲ್ಲಿ ಅಂತರ-ನಗರ ಪ್ರಯಾಣದ ಅಗತ್ಯಗಳಿಗಾಗಿ ವ್ಯಾಪಕ ಆಯ್ಕೆಯನ್ನು ನೀಡುತ್ತದೆ. ಅಲ್ಲದೆ, ಇಂಟರ್‌ಸಿಟಿ ಸೇವೆಯೊಂದಿಗೆ, ಅಯೋಧ್ಯೆ ಮತ್ತು ಉತ್ತರ ಪ್ರದೇಶದ ಇತರ ಜನಪ್ರಿಯ ಸ್ಥಳಗಳ ನಡುವೆ ಚಲನಶೀಲತೆಯ ಸೇವೆಯನ್ನು ನೀಡುವುದಾಗಿ ಹೇಳಿಕೊಂಡಿದೆ.