iNCOVACC: ಮೂಗಿನ ಮೂಲಕ ನೀಡುವ ಕೋವಿಡ್ ವ್ಯಾಕ್ಸಿನ್ಗೆ ದರ ನಿಗದಿ.. ಒಂದು ಡೋಸ್ಗೆ ಎಷ್ಟು ಹಣ ಗೊತ್ತಾ?
ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಯಾದ (ನೇಸಲ್ ಲಸಿಕೆ) ಇನ್ಕೋವ್ಯಾಕ್ ( iNCOVACC)ಗೆ ಭಾರತ್ ಬಯೋಟೆಕ್ ಸಂಸ್ಥೆ ದರ ನಿಗದಿ ಪಡಿಸಿದೆ.
ನವದೆಹಲಿ: ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಯಾದ (ನೇಸಲ್ ಲಸಿಕೆ) ಇನ್ಕೋವ್ಯಾಕ್ ( iNCOVACC)ಗೆ ಭಾರತ್ ಬಯೋಟೆಕ್ ಸಂಸ್ಥೆ ದರ ನಿಗದಿ ಪಡಿಸಿದೆ.
ಈ ಇಂಟ್ರಾನಾಸಲ್ ಲಸಿಕೆಯ ಒಂದು ಡೋಸ್ಗೆ ಖಾಸಗಿ ಆಸ್ಪತ್ರೆಗಳಲ್ಲಿ 800 ರೂಪಾಯಿ (ಜಿಎಸ್ಟಿ ಹೊರತುಪಡಿಸಿ) ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ಡೋಸ್ಗೆ 325 ರೂಪಾಯಿ (ಜಿಎಸ್ಟಿ ಹೊರತುಪಡಿಸಿ) ನಿಗದಿ ಪಡಿಸಲಾಗಿದೆ. ಡಿಸೆಂಬರ್ 23 ರಿಂದ ಈ ಲಸಿಕೆ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಾಗುತ್ತಿದ್ದು, 2023ರ ಜನವರಿ ನಾಲ್ಕನೇ ವಾರದಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೂ ಬರಲಿದೆ.
ಇತ್ತೀಚೆಗಷ್ಟೆ ನೇಸಲ್ ಲಸಿಕೆಗೆ ಕೇಂದ್ರದಿಂದ ಅನುಮೋದನೆ ದೊರೆತಿತ್ತು. ಈ ಲಸಿಕೆಯನ್ನು ಹೆಟೆರೊಲಾಜಸ್ ಬೂಸ್ಟರ್ ಆಗಿ ಬಳಕೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಕೋವಿನ್ (CoWIN) ಪೋರ್ಟಲ್‌ನಲ್ಲಿ ಈ ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ಈ ಲಸಿಕೆಯ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ವಿಶ್ವದ ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆಯಾಗಿರುವ ಇನ್ಕೋವ್ಯಾಕ್ ಅನ್ನು ವಾಷಿಂಗ್ಟನ್ ಯೂನಿವರ್ಸಿಟಿ ಸೇಂಟ್ ಲೂಯಿಸ್ ಸಹಭಾಗಿತ್ವದಲ್ಲಿ ಭಾರತ್ ಬಯೋಟೆಕ್ ಕಂಪನಿಯು ತಯಾರಿಸಿದೆ. ಈಗಾಗಲೇ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಎರಡೂ ಡೋಸ್ ಪಡೆದ 18 ವರ್ಷ ಮೇಲ್ಪಟ್ಟವರು, ಮೂಗಿನ ಮೂಲಕ ತೆಗೆದುಕೊಳ್ಳುವ ಈ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಪಡೆಯಬಹುದಾಗಿದೆ. ಈಗಾಗಲೇ ಬೂಸ್ಟರ್ ಡೋಸ್ ಪಡೆದವರೂ ಸಹ ಈ ಲಸಿಕೆಯನ್ನು ಪಡೆಯಬಹುದಾಗಿದೆ.
ಈ ಬಗ್ಗೆ ಮಾತನಾಡಿರುವ ಭಾರತ್ ಬಯೋಟೆಕ್ ಕಾರ್ಯನಿರ್ವಾಹಕ ಅಧ್ಯಕ್ಷ ಕೃಷ್ಣ ಯೆಲ್ಲ, ಎರಡು ವಿಭಿನ್ನ ಪ್ಲಾಟ್‌ಫಾರ್ಮ್‌ಗಳಿಂದ ಎರಡು ವಿಭಿನ್ನ ವಿತರಣಾ ವ್ಯವಸ್ಥೆಗಳೊಂದಿಗೆ ಎರಡು ಕೋವ್ಯಾಕ್ಸಿನ್ ಮತ್ತು ಇನೋಕೋವ್ಯಾಕ್ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಇನೋಕೋವ್ಯಾಕ್ ಲಸಿಕೆಯು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗಳು ಮತ್ತು ಸಾಂಕ್ರಾಮಿಕ ಸಮಯದಲ್ಲಿ ಸುಲಭ ಮತ್ತು ನೋವುರಹಿತ ಪ್ರತಿರಕ್ಷಣೆಯಾಗಿದೆ ಎಂದು ಹೇಳಿದ್ದಾರೆ.
ಇನ್ಕೋವ್ಯಾಕ್ ಲಸಿಕೆಯ ಮೂರನೇ ಹಂತದ ಪ್ರಯೋಗಗಳನ್ನು ಭಾರತದಾದ್ಯಂತ 14 ಪ್ರಾಯೋಗಿಕ ಸ್ಥಳಗಳಲ್ಲಿ ಸುಮಾರು 3100 ವಿಷಯಗಳಲ್ಲಿ ಸುರಕ್ಷತೆ, ಇಮ್ಯುನೊಜೆನಿಸಿಟಿಗಾಗಿ ನಡೆಸಲಾಗಿದೆ ಎಂದು ಭಾರತ್ ಬಯೋಟೆಕ್ ಪ್ರಕಟಣೆ ತಿಳಿಸಿದೆ.
ಚೀನಾ, ಯುನೈಟೆಡ್ ಸ್ಟೇಟ್ಸ್, ಜಪಾನ್ ಮತ್ತು ಬ್ರೆಜಿಲ್ನಲ್ಲಿ ಕೊರೊನಾ ರೂಪಾಂತರ ಒಮಿಕ್ರಾನ್ನ ಬಿಎಫ್ 7 (BF.7) ಉಪತಳಿ ವ್ಯಾಪಕವಾಗಿ ಹರಡುತ್ತಿದ್ದು, ಭಾರತದಲ್ಲಿಯೂ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಗುಜರಾತ್ನಲ್ಲಿ ಎರಡು ಹಾಗೂ ಒಡಿಶಾದಲ್ಲಿ 2 ಕೇಸ್ಗಳು ವರದಿಯಾಗಿವೆ. ಚೀನಾದಲ್ಲಿ ದಿನಕ್ಕೆ ಮಿಲಿಯನ್ಗಟ್ಟಲೆ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದು, ಪ್ರತಿನಿತ್ಯ 5 ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಶೀಘ್ರವೇ ಮಾರ್ಗಸೂಚಿಗಳು ಹೊರಬೀಳಲಿದೆ.
Karnataka Covid guidelines: ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ; ಹೊಸ ವರ್ಷಾಚರಣೆಗೂ ಷರತ್ತುಗಳು ಅನ್ವಯ
ಕೋವಿಡ್ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕಠಿಣ ನಿಬಂಧನೆಗಳನ್ನು ಜಾರಿಗೊಳಿಸಿದೆ. ಇಂದಿನಿಂದ ಅನ್ವಯವಾಗುವಂತೆ, ಶಾಲಾ-ಕಾಲೇಜುಗಳು, ಮಾಲ್‌ಗಳು ಮತ್ತು ಚಿತ್ರಮಂದಿರಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದೆ. ಈ ಮಾರ್ಗಸೂಚಿಯು ತಕ್ಷಣದಿಂದಲೇ ಜಾರಿಗೆ ಬರಲಿದೆ. ಅಲ್ಲದೆ ಹೊಸ ವರ್ಷಾಚರಣೆಗೂ ಕೆಲ ನಿಯಮಗಳನ್ನು ರೂಪಿಸಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ