ಭೋಪಾಲ್ ಅನಿಲ ದುರಂತದ ಯೂನಿಯನ್ ಕಾರ್ಬೈಡ್‌ ಸೈಟ್‌ನಿಂದ ಅಪಾಯಕಾರಿ ತ್ಯಾಜ್ಯ ವಿಲೇವಾರಿ; ಕೋರ್ಟ್‌ ಬಿಗಿ ನಿಲುವಿಗೆ ಮಣಿದ ಸರ್ಕಾರ, 5 ಮುಖ್ಯ ಅಂಶ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭೋಪಾಲ್ ಅನಿಲ ದುರಂತದ ಯೂನಿಯನ್ ಕಾರ್ಬೈಡ್‌ ಸೈಟ್‌ನಿಂದ ಅಪಾಯಕಾರಿ ತ್ಯಾಜ್ಯ ವಿಲೇವಾರಿ; ಕೋರ್ಟ್‌ ಬಿಗಿ ನಿಲುವಿಗೆ ಮಣಿದ ಸರ್ಕಾರ, 5 ಮುಖ್ಯ ಅಂಶ

ಭೋಪಾಲ್ ಅನಿಲ ದುರಂತದ ಯೂನಿಯನ್ ಕಾರ್ಬೈಡ್‌ ಸೈಟ್‌ನಿಂದ ಅಪಾಯಕಾರಿ ತ್ಯಾಜ್ಯ ವಿಲೇವಾರಿ; ಕೋರ್ಟ್‌ ಬಿಗಿ ನಿಲುವಿಗೆ ಮಣಿದ ಸರ್ಕಾರ, 5 ಮುಖ್ಯ ಅಂಶ

Bhopal Gas Tragedy: ಮಧ್ಯಪ್ರದೇಶದಲ್ಲಿ 5000ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿ, 5 ಲಕ್ಷಕ್ಕೂ ಹೆಚ್ಚು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದ ಭೋಪಾಲ್ ಅನಿಲ ದುರಂತದ ತ್ಯಾಜ್ಯ ಕೊನೆಗೂ ವಿಲೇವಾರಿಯಾಗಿದೆ. ಕೋರ್ಟ್‌ನ ಬಿಗಿ ನಿಲುವಿಗೆ ಮಣಿದ ಸರ್ಕಾರ, ಯೂನಿಯನ್ ಕಾರ್ಬೈಡ್‌ ಸೈಟ್‌ನಿಂದ ತ್ಯಾಜ್ಯ ವಿಲೇವಾರಿ ಮಾಡಿದೆ. ಈ ವಿದ್ಯಮಾನದ 5 ಮುಖ್ಯ ಅಂಶಗಳಿವು.

ಭೋಪಾಲ್ ಅನಿಲ ದುರಂತದ ಯೂನಿಯನ್ ಕಾರ್ಬೈಡ್‌ ಸೈಟ್‌ನಿಂದ ಅಪಾಯಕಾರಿ ತ್ಯಾಜ್ಯ ವಿಲೇವಾರಿ ಮಾಡುವುದಕ್ಕಾಗಿ ಅವುಗಳನ್ನು 12 ಟ್ರಕ್‌ಗಳಲ್ಲಿ ಇಂದೋರ್‌ನ ಪೀತಾಂಪುರಕ್ಕೆ ಸಾಗಿಸಲಾಯಿತು.
ಭೋಪಾಲ್ ಅನಿಲ ದುರಂತದ ಯೂನಿಯನ್ ಕಾರ್ಬೈಡ್‌ ಸೈಟ್‌ನಿಂದ ಅಪಾಯಕಾರಿ ತ್ಯಾಜ್ಯ ವಿಲೇವಾರಿ ಮಾಡುವುದಕ್ಕಾಗಿ ಅವುಗಳನ್ನು 12 ಟ್ರಕ್‌ಗಳಲ್ಲಿ ಇಂದೋರ್‌ನ ಪೀತಾಂಪುರಕ್ಕೆ ಸಾಗಿಸಲಾಯಿತು. (Sanjeev Gupta / ANI Photo)

Bhopal Gas Tragedy: ಭೋಪಾಲ್ ಅನಿಲ ದುರಂತ ಘಟಿಸಿ ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಯೂನಿಯನ್ ಕಾರ್ಬೈಡ್‌ ಫ್ಯಾಕ್ಟರಿ ಸೈಟ್‌ನಿಂದ ಅಪಾಯಕಾರಿ ತ್ಯಾಜ್ಯ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ವಿಷಕಾರಿ ತ್ಯಾಜ್ಯವನ್ನು ಹೊತ್ತ ಹನ್ನೆರಡು ಟ್ರಕ್‌ಗಳು ಬುಧವಾರ ರಾತ್ರಿ 9.05 ಕ್ಕೆ ಭಾರೀ ಭದ್ರತೆಯೊಂದಿಗೆ 250 ಕಿ.ಮೀ ದೂರದ ಇಂದೋರ್ ಬಳಿಯ ಪಿತಾಂಪುರ್ ಕೈಗಾರಿಕಾ ಪ್ರದೇಶಕ್ಕೆ ತಲುಪಿವೆ. ಈ ವಾಹನಗಳು ಹೋಗುವ ಹಾದಿಯಲ್ಲಿ ಸುತ್ತಮುತ್ತ ಪ್ರದೇಶದಲ್ಲಿ ಸಂಚಾರ ನಿರ್ಬಂಧ ವಿಧಿಸಿದ್ದು, ಪೊಲೀಸರು ಬಿಗಿ ಪಹರೆ ನಡೆಸಿದ್ದಾರೆ. ಇದೇ ವೇಳೆ, ಭೋಪಾಲ್‌ಗೆ ಹೊರೆಯಾಗಿದ್ದ ಅಪಾಯಕಾರಿ ತ್ಯಾಜ್ಯ ಕೊನೆಗೂ ವಿಲೇವಾರಿಯಾಯಿತು ಎಂದು ಜನ ನಿಟ್ಟುಸಿರುಬಿಟ್ಟಿದ್ದಾರೆ. ಭೋಪಾಲ್ ದುರಂತದಲ್ಲಿ 5000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.

ಭೋಪಾಲ್ ಅನಿಲ ದುರಂತದ ತ್ಯಾಜ್ಯ ವಿಲೇವಾರಿ; ಸಿಎಂ ಹೇಳಿರುವುದಿಷ್ಟು

ಭೋಪಾಲ್ ಅನಿಲ ದುರಂತದ ಸ್ಥಳದಿಂದ 40 ವರ್ಷಗಳಷ್ಟು ಹಳೆಯ ವಿಷಕಾರಿ ತ್ಯಾಜ್ಯವನ್ನು ತೆಗೆದುಹಾಕುವ ಕುರಿತು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ “... ಕಳೆದ 40 ವರ್ಷಗಳಿಂದ ಯೂನಿಯನ್ ಕಾರ್ಬೈಡ್‌ ಸೈಟ್‌ನಲ್ಲಿ ಕೂಡಿಟ್ಟಿದ್ದ ಸುಮಾರು 358 ಮೆಟ್ರಿಕ್ ಟನ್ ಅಪಾಯಕಾರಿ ತ್ಯಾಜ್ಯವನ್ನು ಭೋಪಾಲ್‌ನಿಂದ ವಿಲೇವಾರಿ ಮಾಡಲಾಗಿದೆ. ಭೋಪಾಲ್ ಜನರ ಆರೋಗ್ಯದ ದೃಷ್ಟಿಯಿಂದ ಭಾರತ ಸರ್ಕಾರ ಹಾಗೂ ಹಲವು ಸಂಸ್ಥೆಗಳ ಜತೆಗೂಡಿ ಮಧ್ಯಪ್ರದೇಶ ಸರ್ಕಾರ ಈ ವಿಷಕಾರಿ ತ್ಯಾಜ್ಯದ ವಿಲೇವಾರಿಯನ್ನು ನೆರವೇರಿಸುತ್ತಿದೆ. ಈ ಅಪಾಯಕಾರಿ ತ್ಯಾಜ್ಯ ವಿಲೇವಾರಿಯಿಂದಾಗಿ ಪರಿಸರದ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ. ಇಡೀ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು. ಈ ವಿಚಾರವನ್ನು ರಾಜಕೀಯವಾಗಿ ಬಳಸದೇ ಇರುವುದು ಜಾಣತನ” ಎಂದು ಹೇಳಿದರು.

ಯೂನಿಯನ್ ಕಾರ್ಬೈಡ್‌ ಸೈಟ್‌ನಿಂದ ಅಪಾಯಕಾರಿ ತ್ಯಾಜ್ಯ ವಿಲೇವಾರಿ; 5 ಮುಖ್ಯ ಅಂಶಗಳು

1) ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಲ್ಲಿರುವ ಯೂನಿಯನ್ ಕಾರ್ಬೈಡ್‌ ಕಾರ್ಖಾನೆ ನಿವೇಶನದಿಂದ ಅಪಾಯಕಾರಿ ತ್ಯಾಜ್ಯವನ್ನು ವಿಲೇವಾರಿಗೊಳಿಸುವಂತೆ ಸುಪ್ರೀಂ ಕೋರ್ಟ್ ಹಲವು ಬಾರಿ ನಿರ್ದೇಶನ ನೀಡಿತ್ತು. ಆದಾಗ್ಯೂ, ಈ ಬಗ್ಗೆ ನಿರ್ಲಕ್ಷ್ಯವಹಿಸಿದ್ದ ಅಧಿಕಾರಿಗಳನ್ನು ಮಧ್ಯಪ್ರದೇಶ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಇದಾದ ಬಳಿಕ 2024ರ ಡಿಸೆಂಬರ್ 29 ರಂದು ಅಪಾಯಕಾರಿ ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಸಿದ್ಧತೆ ಶುರುವಾಯಿತು. 100 ಪರಿಣತರ ಕಾರ್ಮಿಕರು ಈ ಕೆಲಸ ಮಾಡಿದ್ದಾರೆ.

2) ಭೋಪಾಲ್‌ನಿಂದ 250 ಕಿ.ಮೀ. ದೂರದ ಇಂದೋರ್‌ನ ಪೀತಾಂಪುರ ಇಂಡಸ್ಟ್ರಿಯಲ್ ಏರಿಯಾದಲ್ಲಿ ಈ ತ್ಯಾಜ್ಯ ಸುರಿಯಲು ಸ್ಥಳ ನಿಗದಿ ಮಾಡಿದ ಸರ್ಕಾರ, ಭಾರಿ ಭದ್ರತೆಯೊಂದಿಗೆ ನಿನ್ನೆ (ಜನವರಿ 1) ರಾತ್ರಿ 9.05ಕ್ಕೆ ತ್ಯಾಜ್ಯವನ್ನು ರವಾನಿಸಿದೆ. ಬಿಗಿ ಪೊಲೀಸ್ ಭದ್ರತೆಯೊಂದಿಗೆ 12 ಟ್ರಕ್‌ಗಳಲ್ಲಿ 377 ಮೆಟ್ರಿಕ್ ಟನ್ ಅಪಾಯಕಾರಿ ತ್ಯಾಜ್ಯ ರವಾನೆಯಾಗಿದೆ. ಇದಕ್ಕಾಗಿ 250 ಕಿ.ಮೀ ರಸ್ತೆಯನ್ನು ಸಂಪೂರ್ಣ ಸಂಚಾರ ಮುಕ್ತಗೊಳಿಸಿದ್ದು, ಜನವರಿ 2 ರಂದು ಪೀತಾಂಪುರ ತಲುಪಲು ಬೇಕಾದ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದ್ದರು.

3) ಈ ಹಿಂದೆ ಡಿಸೆಂಬರ್ 3 ರಂದು, ಮಧ್ಯಪ್ರದೇಶ ಹೈಕೋರ್ಟ್ ವಿಷಕಾರಿ ತ್ಯಾಜ್ಯ ವಿಲೇವಾರಿಗೆ ಅಧಿಕಾರಿಗಳಿಗೆ ನಾಲ್ಕು ವಾರಗಳ ಗಡುವನ್ನು ವಿಧಿಸಿತ್ತು. ತ್ಯಾಜ್ಯ ವಿಲೇವಾರಿ ವಿಳಂಬದ ಬಗ್ಗೆ ಹೈಕೋರ್ಟ್‌ನ ವಿಭಾಗೀಯ ಪೀಠವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು. ಗಡುವು ಪಾಲನೆಯಲ್ಲಿ ವಿಫಲವಾದಲ್ಲಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ನ್ಯಾಯಪೀಠ ತಾಕೀತು ಮಾಡಿತ್ತು. ಅಲ್ಲದೆ ಜನವರಿ 3 ರಂದು ನ್ಯಾಯಾಲಯದಲ್ಲಿ ಕಾರ್ಯಪ್ರಗತಿ ಕುರಿತು ಅಫಿಡವಿಟ್ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶಿಸಿತ್ತು. ಮುಂದಿನ ವಿಚಾರಣೆಯನ್ನು ಕೋರ್ಟ್‌ ಜನವರಿ 6ಕ್ಕೆ ನಿಗದಿ ಮಾಡಿತ್ತು.

4) ಪೀತಾಂಪುರ ಜನರಲ್ಲಿ ಆತಂಕ ಮನೆ ಮಾಡಿದ್ದು, ತೀವ್ರ ಪ್ರತಿರೋಧ ಒಡ್ಡಿದ್ದಾರೆ. ಸ್ಥಳೀಯ ಪರಿಸರ ಮತ್ತು ಜಲಮೂಲಗಳನ್ನು ಕಲುಷಿತಗೊಳಿಸಬಹುದು ಎಂಬ ಆತಂಕದಿಂದ ಪಿತಾಂಪುರ ಮತ್ತು ಇಂದೋರ್‌ನಲ್ಲಿ ಸ್ಥಳೀಯರು ಮತ್ತು ಕಾರ್ಯಕರ್ತರು ತ್ಯಾಜ್ಯವನ್ನು ಸ್ಥಳಾಂತರಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.

5) ಪೀತಾಂಪುರ, ಇಂದೋರ್ ಜನರ ಆತಂಕ ನಿವಾರಿಸುವ ಪ್ರಯತ್ನ ಮಾಡಿದ ಸರ್ಕಾರ, ಅಪಾಯಕಾರಿ ತ್ಯಾಜ್ಯದಿಂದ ಹಾನಿಯ ಭೀತಿಯನ್ನು ತಳ್ಳಿ ಹಾಕಿದೆ. ಅಗತ್ಯ ಎಲ್ಲ ಸುರಕ್ಷಾ ಕ್ರಮಗಳೊಂದಿಗೆ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಅದರ ಹೊಗೆಯನ್ನು ಪರಿಸರಕ್ಕೆ ಬಿಡುವಾಗಲೂ ಹೆಚ್ಚು ಮುತುವರ್ಜಿವಹಿಸಲಾಗುತ್ತದೆ. ಘನ ತ್ಯಾಜ್ಯವನ್ನು ಭೂಮಿಯ ಆಳದಲ್ಲಿ ಹೂಳಲಾಗುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ.

ಏನಿದು ಭೋಪಾಲ್ ಅನಿಲ ದುರಂತ

ಕುಖ್ಯಾತ ಭೋಪಾಲ್ ಅನಿಲ ದುರಂತವು 1984ರ ಡಿಸೆಂಬರ್ 2 ಮತ್ತು 3ರ ನಡುವೆ ರಾತ್ರಿ ವೇಳೆ ಸಂಭವಿಸಿದೆ. ಇದು ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಘಟಕದಲ್ಲಿ ವಿಷಕಾರಿ ಮೀಥೈಲ್‌ ಐಸೋಸೈನೇಟ್ ಅನಿಲ ಹೊರಸೂಸಿದ್ದರಿಂದ ಉಂಟಾದ ದುರಂತವಾಗಿತ್ತು. ಈ ದುರಂತದಲ್ಲಿ 5,479 ಜನ ಮೃತಪಟ್ಟರು. ಸರ್ಕಾರದ ಅಂದಾಜಿನ ಪ್ರಕಾರ, ದುರಂತದ ಪರಿಣಾಮ 5 ಲಕ್ಷಕ್ಕೂ ಹೆಚ್ಚು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. 2005 ರಲ್ಲಿ 377 ಮೆಟ್ರಿಕ್ ಟನ್ ವಿಷಕಾರಿ ತ್ಯಾಜ್ಯವನ್ನು ಸಂಗ್ರಹಿಸಲಾಯಿತು. ಅದು ಅಲ್ಲಿಯೇ ಇತ್ತು. ಅದನ್ನು ಈಗ ವಿಲೇವಾರಿ ಮಾಡಿರುವಂತದ್ದು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.