Bhupendra Patel takes oath: ಗುಜರಾತ್‌ನ 18ನೇ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ ಸ್ವೀಕಾರ
ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು, ರಾಜ್ಯದ 18ನೇ ಮುಖ್ಯಮಂತ್ರಿಯಾಗಿ ಪಟೇಲ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಇವರೊಂದಿಗೆ ಕುವರ್ಜಿ ಬವಲಿಯಾ, ಮುಲುಭಾಯ್ ಬೇರಾ, ಕುಬೇರ್ ದಿಂಡೋರ್ ಮತ್ತು ಭಾನುಬೆನ್ ಬಬಾರಿಯಾ ಸೇರಿದಂತೆ 16 ಶಾಸಕರು ಕೂಡಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಗಾಂಧಿನಗರ: ಗುಜರಾತ್‌ನ ರಾಜಧಾನಿ ಗಾಂಧಿನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಬಿಜೆಪಿ ನಾಯಕ ಭೂಪೇಂದ್ರ ಪಟೇಲ್ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು.
ಹೊಸ ಸೆಕ್ರೆಟರಿಯೇಟ್ ಬಳಿಯ ಹೆಲಿಪ್ಯಾಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು, ರಾಜ್ಯದ 18ನೇ ಮುಖ್ಯಮಂತ್ರಿಯಾಗಿ ಪಟೇಲ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಇವರೊಂದಿಗೆ ಕುವರ್ಜಿ ಬವಲಿಯಾ, ಮುಲುಭಾಯ್ ಬೇರಾ, ಕುಬೇರ್ ದಿಂಡೋರ್ ಮತ್ತು ಭಾನುಬೆನ್ ಬಬಾರಿಯಾ ಸೇರಿದಂತೆ 16 ಶಾಸಕರು ಕೂಡಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಡಿಸೆಂಬರ್ 8ರಂದು ನಡೆದ ಗುಜರಾತ್ ವಿಧಾನಸಭಾ ಚುನಾವಣೆಯ ಮತಎಣಿಕೆಯಲ್ಲಿ, ಒಟ್ಟು 182 ಸದಸ್ಯ ಬಲದ ಸದನದಲ್ಲಿ ದಾಖಲೆಯ 156 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯು ಸತತ ಏಳನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಯ್ತು.
ರಾಜ್ಯದಲ್ಲಿ ಕಾಂಗ್ರೆಸ್ 17 ಕ್ಷೇತ್ರಗಳಲ್ಲಿ ಜಯ ಸಾಧಿಸಿದರೆ, ಮೊದಲ ಬಾರಿಇಗೆ ರಾಜ್ಯದಲ್ಲಿ ಕಣಕ್ಕಿಳಿದಿದ್ದ ಎಎಪಿ 5ರಲ್ಲಿ ಗೆಲುವು ಸಾಧಿಸಿದೆ. ಚುನಾವಣಾ ಫಲಿತಾಂಶಗಳ ನಂತರ ಹೊಸ ಸರ್ಕಾರ ರಚನೆಗೆ ದಾರಿ ಮಾಡಿಕೊಡಲು, 60 ವರ್ಷದ ಪಟೇಲ್ ಅವರು ಶುಕ್ರವಾರ ತಮ್ಮ ಸಂಪುಟ ಸದಸ್ಯರೊಂದಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಇಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಪಟ್ಟಿ(ಹೆಸರು ಮತ್ತು ಕ್ಷೇತ್ರ):
ಬಚುಭಾಯಿ ಖಬಾದ್ -ದೇವಗಢ್ ಬರಿಯಾ
ಪರಶೋತ್ತಮ್ ಸೋಲಂಕಿ -ಭಾವನಗರ (ಗ್ರಾಮೀಣ)
ಹರ್ಷ ಸಂಘವಿ -ಮಜೂರ
ಜಗದೀಶ್ ವಿಶ್ವಕರ್ಮ -ನಿಕೋಲ್
ಋಷಿಕೇಶ್ ಪಟೇಲ್ -ವಿಸ್ನಗರ
ರಾಘವಜಿ ಪಟೇಲ್ -ಜಾಮ್‌ನಗರ (ಗ್ರಾಮೀಣ)
ಬಲವಂತಸಿಂಹ ರಜಪೂತ್ -ಸಿಧ್ಪುರ್
ಮುಖೇಶಭಾಯಿ ಝಿನಾಭಾಯಿ ಪಟೇಲ್ -ಓಲ್ಪಾದ್
ಕುವರ್ಜಿಭಾಯಿ ನರ್ಶಿಭಾಯಿ ಹಲ್ಪತಿ -ಮಾಂಡವಿ (ST)
ಕನುಭಾಯಿ ದೇಸಾಯಿ -ಪರಡಿ
ಕುವರ್ಜಿಭಾಯಿ ಬವಲಿಯಾ -ಜಸ್ದನ್
ಡಾ ಕುಬೇರ್ ದಿಂಡೋರ್ -ಸಂತ್ರಂಪುರ (ST)
ಭಾನುಬೆನ್ ಬಬಾರಿಯಾ -ರಾಜ್‌ಕೋಟ್ (ಗ್ರಾಮೀಣ) (SC)
ಮುಲುಭಾಯ್ ಬೇರಾ -ಖಂಬಾಲಿಯಾ
ಭಿಕುಭಾಯಿ ಚತುರ್ಸಿಂಹ ಪರ್ಮಾರ್ -ಮೋದಸಾ
ಪ್ರಫುಲ್ ಪನ್ಸೇರಿಯಾ -ಕಮ್ರೇಜ
ಶನಿವಾರ ಪಟೇಲ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. ಬಳಿಕ ಅವರು ರಾಜ್ಯಪಾಲರನ್ನು ಭೇಟಿಯಾಗಿ ಮುಂದಿನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಚುನಾವಣೆಯಲ್ಲಿ ಪಟೇಲ್ ಅವರು ಘಟ್ಲೋಡಿಯಾ ಕ್ಷೇತ್ರದಲ್ಲಿ 1.92 ಲಕ್ಷ ಮತಗಳ ಭಾರಿ ಅಂತರದಿಂದ ಗೆದ್ದರು. ಕಳೆದ ವರ್ಷವಷ್ಟೇ ವಿಜಯ್ ರೂಪಾನಿ ಅವರ ಸ್ಥಾನಕ್ಕೆ ಭೂಪೇಂದ್ರ ಪಟೇಲ್ ಅವರನ್ನು ಸಿಎಂ ಆಗಿ ನೇಮಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ವಿವಿಧ ರಾಜ್ಯಗಳ ಬಿಜೆಪಿ ನಾಯಕರು ಉಪಸ್ಥಿತರಿದ್ದರು.
ಯಡಿಯೂರಪ್ಪ ಅವರು ಶನಿವಾರವೇ ಗುಜರಾತ್ ತಲುಪಿದ್ದು, ಏಕತಾ ಪ್ರತಿಮೆಗೆ ಭೇಟಿ ನೀಡಿದ್ದರು. ಬಿಜೆಪಿ ಗುಜರಾತ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅರ್ಜುನ್ ಮುಂಡಾ ಅವರೊಂದಿಗೆ ಪಕ್ಷದ ಕೇಂದ್ರ ವೀಕ್ಷಕರಾಗಿ ಯಡಿಯೂರಪ್ಪ ಭಾಗವಹಿಸಿದ್ದರು. ಭೂಪೇಂದ್ರ ಪಟೇಲ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಇಂದು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.