Joe Biden: ದೊಡ್ಡವರೆಲ್ಲಾ ಜಾಣರಲ್ಲ..ವರ್ಷಕ್ಕೆ ಒಂದು ಮಿಲಿಯನ್‌ ಡಾಲರ್‌ ಪಡೆದು ಪಾಠವೇ ಮಾಡದ 'ಪ್ರೋ. ಬೈಡನ್'!‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Joe Biden: ದೊಡ್ಡವರೆಲ್ಲಾ ಜಾಣರಲ್ಲ..ವರ್ಷಕ್ಕೆ ಒಂದು ಮಿಲಿಯನ್‌ ಡಾಲರ್‌ ಪಡೆದು ಪಾಠವೇ ಮಾಡದ 'ಪ್ರೋ. ಬೈಡನ್'!‌

Joe Biden: ದೊಡ್ಡವರೆಲ್ಲಾ ಜಾಣರಲ್ಲ..ವರ್ಷಕ್ಕೆ ಒಂದು ಮಿಲಿಯನ್‌ ಡಾಲರ್‌ ಪಡೆದು ಪಾಠವೇ ಮಾಡದ 'ಪ್ರೋ. ಬೈಡನ್'!‌

ಜೋ ಬೈಡನ್‌ ಅಮೆರಿಕದ ಉಪಾಧ್ಯಕ್ಷ( ಅಧ್ಯಕ್ಷ ಬರಾಕ್‌ ಒಬಾಮಾ ಆಡಳಿತಾವಧಿಯಲ್ಲಿ) ಪದವಿ ತ್ಯಜಿಸಿದ ಮೇಲೆ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದರು. ಆದರೆ ಬೈಡನ್‌ ಅವರು ಈ ವಿವಿಯಲ್ಲಿ ಒಂದೇ ಒಂದು ತರಗತಿಯನ್ನೂ ತೆಗೆದುಕೊಂಡಿಲ್ಲ. ಆದರೂ ಬೈಡನ್‌ ಅವರಿಗೆ ವರ್ಷಕ್ಕೆ ಒಂದು ಮಿಲಿಯನ್‌ ಅಮೆರಿಕನ್‌ ಡಾಲರ್‌ ವೇತನ ನೀಡಲಾಗಿದೆ.

ಜೋ ಬೈಡನ್‌ (ಸಂಗ್ರಹ ಚಿತ್ರ)
ಜೋ ಬೈಡನ್‌ (ಸಂಗ್ರಹ ಚಿತ್ರ) (Bloomberg)

ಮೆಕ್ಸಿಕೋ ಸಿಟಿ: 'ಬಡೆ ಲೋಗ್‌ ಬಡಿ ಬಾತ್'‌ ಅನ್ನೋ ಹಾಗೆ ದೊಡ್ಡ ಮನುಷ್ಯರು ಏನೇ ಮಾಡಿದರೂ ಅದು ಚೆಂದವಾಗಿಯೇ ಕಾಣುತ್ತದೆ. ಇದಕ್ಕೆ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಕೂಡ ಹೊರತಲ್ಲ. ಎಲ್ಲರಿಗೂ ಗೊತ್ತಿರುವಂತೆ ಜೋ ಬೈಡನ್‌ ಅಮೆರಿಕದ ಉಪಾಧ್ಯಕ್ಷ( ಅಧ್ಯಕ್ಷ ಬರಾಕ್‌ ಒಬಾಮಾ ಆಡಳಿತಾವಧಿಯಲ್ಲಿ) ಪದವಿ ತ್ಯಜಿಸಿದ ಮೇಲೆ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದರು. ಆದರೆ ಬೈಡನ್‌ ಅವರು ಈ ವಿವಿಯಲ್ಲಿ ಒಂದೇ ಒಂದು ತರಗತಿಯನ್ನೂ ತೆಗೆದುಕೊಂಡಿಲ್ಲ. ಆದರೂ ಬೈಡನ್‌ ಅವರಿಗೆ ವರ್ಷಕ್ಕೆ ಬರೋಬ್ಬರಿ ಒಂದು ಮಿಲಿಯನ್‌ ಅಮೆರಿಕನ್‌ ಡಾಲರ್‌ ವೇತನ ನೀಡಲಾಗಿದೆ.

ನಿನ್ನೆ(ಜ.೧೦-ಮಂಗಳವಾರ) ಮೆಕ್ಸಿಕೋ ನಗರದಲ್ಲಿ ನಡೆದ ಉತ್ತರ ಅಮೆರಿಕ ನಾಯಕರ ಶೃಂಗಸಭೆಯಲ್ಲಿ ಮಾತನಾಡಿದ ಜೋ ಬೈಡನ್‌, "ಉಪಾಧ್ಯಕ್ಷನಾಗಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ, ನಾನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿದ್ದೇನೆ.." ಎಂದು ಹೇಳಿದರು.

ಆದರೆ ಎರಡು ವರ್ಷಗಳ ಕಾಲ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ ಜೋ ಬೈಡನ್‌ ಅವರು, ಒಂದೇ ಒಂದು ತರಗತಿಯನ್ನೂ ತೆಗೆದುಕೊಂಡಿಲ್ಲ. ಆದಾಗ್ಯೂ ವಿವಿಯು ಬೈಡನ್‌ ಅವರಿಗೆ 1 ಮಿಲಿಯನ್ ಅಮೆರಿಕನ್‌ ಡಾಲರ್‌ ವೇತನ ಪಾವತಿಸಿದೆ.

ರಿಪಬ್ಲಿಕನ್ ನ್ಯಾಷನಲ್ ಕಮಿಟಿ ರಿಸರ್ಚ್ ಯೂನಿಟ್ ಅಥವಾ ಆರ್‌ಎನ್‌ಸಿ ಸಂಶೋಧನೆಯು, ಬೈಡನ್‌ ತರಗತಿ ತೆಗೆದುಕೊಂಡಿರದ ವಿಷಯವನ್ನು ಬಹಿರಂಗಪಡಿಸಿದೆ. "ಬೈಡನ್ ಅವರು ಪ್ರಾಧ್ಯಾಪಕರಾಗಿರುವ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ.." ಎಂದು ಆರ್‌ಎನ್‌ಸಿ ವರದಿ ಮಾಡಿದೆ.

ಬೈಡನ್ ಅವರು 2017-2019ರ ಅವಧಿಯಲ್ಲಿ ಫಿಲಡೆಲ್ಫಿಯಾ ಶಾಲೆಯಲ್ಲಿ ಗೌರವ ಪ್ರಾಧ್ಯಾಪಕರಾಗಿದ್ದರು. ಫಿಲಡೆಲ್ಫಿಯಾ ಇನ್‌ಕ್ವೈರರ್‌ನ ತನಿಖಾ ವರದಿಯ ಪ್ರಕಾರ, ಬೈಡನ್‌ ಅವರಿಗೆ 2017ರಲ್ಲಿ 371,159 ಅಮೆರಿಕನ್‌ ಡಾಲರ್‌, ಮತ್ತು 2018 ಮತ್ತು 2019ರಲ್ಲಿ 540,484 ಅಮೆರಿಕನ್‌ ಡಾಲರ್ ಪಾವತಿಸಲಾಗಿದೆ.

2017ರಲ್ಲಿ ಬೈಡನ್ ಗೌರವ ಪ್ರಾಧ್ಯಾಪಕ ಸ್ಥಾನವನ್ನು ಸ್ವೀಕರಿಸಿದ್ದರು. ಇದನ್ನು ಔಪಚಾರಿಕವಾಗಿ "ಬೆಂಜಮಿನ್ ಫ್ರಾಂಕ್ಲಿನ್ ಅಧ್ಯಕ್ಷೀಯ ಪ್ರಾಕ್ಟೀಸ್ ಪ್ರೊಫೆಸರ್" ಎಂದು ಕರೆಯಲಾಗುತ್ತದೆ. ಬೈಡನ್‌ ಅವರು ತದನಂತರ ವಾಷಿಂಗ್ಟನ್‌ನಲ್ಲಿ ಪೆನ್ ಬೈಡನ್ ಸೆಂಟರ್ ಫಾರ್ ಡಿಪ್ಲೊಮಸಿ ಅಂಡ್ ಗ್ಲೋಬಲ್ ಎಂಗೇಜ್‌ಮೆಂಟ್ ಅನ್ನು ಸ್ಥಾಪಿಸಿದರು. ಜೊತೆಗೆ ಅವರು ಅಲ್ಮಾ ಮೇಟರ್ ಆಗಿರುವ ಡೆಲವೇರ್ ವಿಶ್ವವಿದ್ಯಾಲಯದಲ್ಲಿ ಬೈಡನ್ ಇನ್‌ಸ್ಟಿಟ್ಯೂಟ್ ಅನ್ನು ಸ್ಥಾಪಿಸಿದರು.

ಈ ಅವಧಿಯಲ್ಲಿ ಬೈಡನ್ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸಗಳು ಮತ್ತು ಭಾಷಣಗಳನ್ನು ನೀಡಿದ್ದರು. ಆದರೆ ಆ ಸಮಯದಲ್ಲಿ ಪೂರ್ಣ ಸೆಮಿಸ್ಟರ್ ಕೋರ್ಸ್‌ಗಳನ್ನು ಬೈಡನ್‌ ವಿದ್ಯಾರ್ಥಿಗಳಿಗೆ ಕಲಿಸಲಿಲ್ಲ ಎಂದು ಆರ್‌ಎನ್‌ಸಿ ವರದಿ ಉಲ್ಲೇಖಿಸಿದೆ.

2017-2021ರ ಅವಧಿಯಲ್ಲಿ ಬೈಡನ್‌ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ (ಯುಪಿಎನ್ಎನ್) ಗೌರವ ಪ್ರಾಧ್ಯಾಪಕ ಸ್ಥಾನವನ್ನು ಪಡೆದುಕೊಂಡರು. ಅಲ್ಲಿಯೂ ಬೈಡನ್‌ ಸೆಮಿಸ್ಟರ್‌ ಕೋರ್ಸ್‌ಗಳನ್ನು ಕಲಿಸಲಿಲ್ಲ. ಅವರು ಪ್ರಾಥಮಿಕವಾಗಿ ವಿದ್ಯಾರ್ಥಿಗಳಿಗೆ ಭಾಷಣಗಳು ಮತ್ತು ಉಪನ್ಯಾಸಗಳನ್ನು ಮಾತ್ರ ನೀಡಿದ್ದಾರೆ ಎಂದು ಆರ್‌ಎನ್‌ಸಿ ವರದಿ ತಿಳಿಸಿದೆ.

ಏಪ್ರಿಲ್ 2019ರಲ್ಲಿ ಬೈಡನ್ ಯುಎಸ್ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗುತ್ತಿದ್ದಂತೆ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯವು ಹೇಳಿಕೆಯೊಂದನ್ನು ಬಿಡುಗಡೆ ಮಾಡಿತು. ಆ ಹೇಳಿಕೆ ಪ್ರಕಾರ "ಬೈಡನ್‌ ಯುಎಸ್‌ ಅಧ್ಯಕ್ಷ ಸ್ಥಾನದ ಅಧಿಕೃತ ಅಭ್ಯರ್ಥಿಯಾಗಿರುವುದರಿಂದ, ಪೆನ್ ಬೈಡೆನ್ ಸೆಂಟರ್‌ನಲ್ಲಿ ತಮ್ಮ ಕೆಲಸದಿಂದ ವೇತನರಹಿತ ರಜೆ ತೆಗೆದುಕೊಳ್ಳುತ್ತಿದ್ದಾರೆ.." ಎಂದು ಸ್ಪಷ್ಟಪಡಿಸಲಾಗಿತ್ತು.

ಏತನ್ಮಧ್ಯೆ, ವಾಷಿಂಗ್ಟನ್‌ನಲ್ಲಿರುವ ಪೆನ್ ಬೈಡನ್ ಸೆಂಟರ್ ಫಾರ್ ಡಿಪ್ಲೊಮಸಿ ಅಂಡ್ ಗ್ಲೋಬಲ್ ಎಂಗೇಜ್‌ಮೆಂಟ್‌ನಲ್ಲಿನ ವರ್ಗೀಕರಿಸಲಾದ ದಾಖಲೆಗಳಿಗೆ ಪ್ರತಿಕ್ರಿಯಿಸಿರುವ ಜೋ ಬೈಡೆನ್, " ಈ ದಾಖಲೆಗಳಲ್ಲಿ ಏನಿದೆ ಎಂದು ನನಗೆ ತಿಳಿದಿಲ್ಲ. ನಾನು ಮತ್ತು ನನ್ನ ವಕೀಲರು ಯಾವ ದಾಖಲೆಗಳನ್ನು ನೀಡುವಂತೆ ಸಲಹೆ ನೀಡಿಲ್ಲ. ಆದಾಗ್ಯೂ ಈ ಕುರಿತು ವನಡೆಯುತ್ತಿರುವ ವಿಚಾರಣೆಗೆ ಸಹಕರಿಸಲಾಗುವುದು.. ” ಎಂದು ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮೊದಲು, ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್ ಅವರು, ಬೈಡನ್‌ ಉಪಾಧ್ಯಕ್ಷ ಅವಧಿಯ ದಾಖಲೆಗಳನ್ನಿ ಪರಿಶೀಲಿಸಲು ಚಿಕಾಗೋದ ಯುಎಸ್ ಅಟಾರ್ನಿಯನ್ನು ನಿಯೋಜಿಸಿದ್ದಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.