ಬಿಹಾರದಲ್ಲಿ ಜಲ ದುರಂತ; ಜೀವಿತ್ ಪುತ್ರಿಕಾ ಹಬ್ಬದಂದೇ ಪವಿತ್ರ ಸ್ನಾನದ ವೇಳೆ 37 ಮಕ್ಕಳು ಸೇರಿ 43 ಮಂದಿ ಸಾವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬಿಹಾರದಲ್ಲಿ ಜಲ ದುರಂತ; ಜೀವಿತ್ ಪುತ್ರಿಕಾ ಹಬ್ಬದಂದೇ ಪವಿತ್ರ ಸ್ನಾನದ ವೇಳೆ 37 ಮಕ್ಕಳು ಸೇರಿ 43 ಮಂದಿ ಸಾವು

ಬಿಹಾರದಲ್ಲಿ ಜಲ ದುರಂತ; ಜೀವಿತ್ ಪುತ್ರಿಕಾ ಹಬ್ಬದಂದೇ ಪವಿತ್ರ ಸ್ನಾನದ ವೇಳೆ 37 ಮಕ್ಕಳು ಸೇರಿ 43 ಮಂದಿ ಸಾವು

Bihar Festival Death: ಬಿಹಾರದಲ್ಲಿ ಜೀವಿಪುತ್ರಿಕಾ ವ್ರತ ಹಬ್ಬದ ಸಂದರ್ಭದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ನದಿಗಳು ಮತ್ತು ಕೊಳಗಳಲ್ಲಿ ಪವಿತ್ರ ಸ್ನಾನ ಮಾಡುವಾಗ 37 ಮಕ್ಕಳು ಸೇರಿದಂತೆ 43 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಜೀವಿತ್ ಪುತ್ರಿಕಾ ಹಬ್ಬದಂದೇ ಪವಿತ್ರ ಸ್ನಾನದ ವೇಳೆ ಮಕ್ಕಳು ಸೇರಿ 43 ಭಕ್ತರು ಸಾವು
ಜೀವಿತ್ ಪುತ್ರಿಕಾ ಹಬ್ಬದಂದೇ ಪವಿತ್ರ ಸ್ನಾನದ ವೇಳೆ ಮಕ್ಕಳು ಸೇರಿ 43 ಭಕ್ತರು ಸಾವು

ನವದೆಹಲಿ: ಬಿಹಾರದಲ್ಲಿ ಘನಘೋರ ದುರಂತವೊಂದು ಸಂಭವಿಸಿದೆ. ರಾಜ್ಯದಲ್ಲಿ ನಡೆದ 'ಜೀವಿತ್ ಪುತ್ರಿಕಾ ವ್ರತ' ಹಬ್ಬದ ಸಂದರ್ಭದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ನದಿಗಳು ಮತ್ತು ಕೊಳಗಳಲ್ಲಿ ಪವಿತ್ರ ಸ್ನಾನ ಮಾಡುವ ವೇಳೆ 37 ಮಕ್ಕಳು ಸೇರಿ ಒಟ್ಟು 43 ಜನರು ಜಲ ಸಮಾಧಿಯಾಗಿದ್ದಾರೆ. ಜೊತೆಗೆ ಮೂವರು ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರ ಗುರುವಾರ (ಸೆಪ್ಟೆಂಬರ್ 26) ತಿಳಿಸಿದೆ. ಬುಧವಾರ (ಸೆ.25) ನಡೆದ ಹಬ್ಬದಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಈ ಘಟನೆಗಳು ನಡೆದಿವೆ.

'ಜೀವಿತ್ ಪುತ್ರಿಕಾ ವ್ರತ' ಹಬ್ಬದ ವೇಳೆ ಮಹಿಳೆಯರು ತಮ್ಮ ಮಕ್ಕಳ ಯೋಗಕ್ಷೇಮಕ್ಕೆ ಉಪವಾಸ ಮಾಡುತ್ತಾರೆ ಮತ್ತು ಇಬ್ಬರೂ ಪವಿತ್ರ ಸ್ನಾನ ಮಾಡುತ್ತಾರೆ. ಅದರಂತೆ ಪವಿತ್ರ ಸ್ನಾನ ಮಾಡುವ ವೇಳೆ ಈ ದುರಂತ ಸಂಭವಿಸಿದೆ. ವಿಪತ್ತು ನಿರ್ವಹಣಾ ಇಲಾಖೆ (ಡಿಎಂಡಿ) ಪ್ರಕಟಣೆ ಹೊರಡಿಸಿದ್ದು, ಈವರೆಗೆ ಒಟ್ಟು 43 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಔರಂಗಾಬಾದ್ ಜಿಲ್ಲೆಯ ಮದನ್‌ಪುರ ಬ್ಲಾಕ್‌ನ ಕುಶಾಹ ಗ್ರಾಮದಲ್ಲಿ 4 ಮಕ್ಕಳು ಮತ್ತು ಬರುನ್ ಬ್ಲಾಕ್‌ನ ಇಥಾತ್ ಗ್ರಾಮದಲ್ಲಿ 3 ಮಕ್ಕಳು ಸ್ನಾನ ಮಾಡುವ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ದುಃಖ ತಂದಿದೆ. ಮೃತರ ಅವಲಂಬಿತರಿಗೆ ಯಾವುದೇ ವಿಳಂಬವಿಲ್ಲದೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚನೆ ನೀಡಲಾಗಿದೆ. ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. 

ಪೂರ್ವ ಮತ್ತು ಪಶ್ಚಿಮ ಚಂಪಾರಣ್, ನಳಂದಾ, ಔರಂಗಾಬಾದ್, ಕೈಮೂರ್, ಬಕ್ಸರ್, ಸಿವಾನ್, ರೋಹ್ತಾಸ್, ಸರನ್, ಪಾಟ್ನಾ, ವೈಶಾಲಿ, ಮುಜಾಫರ್‌ಪುರ, ಸಮಸ್ತಿಪುರ್, ಗೋಪಾಲ್‌ಗಂಜ್ ಮತ್ತು ಅರ್ವಾಲ್ ಜಿಲ್ಲೆಗಳಲ್ಲಿ ಮುಳುಗಿದ ಘಟನೆಗಳು ವರದಿಯಾಗಿವೆ. ನಾಪತ್ತೆಯಾದವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಜನರನ್ನು ನೀರಿಗಿಳಿಯದಂತೆ ಸೂಚನೆ ನೀಡಲಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.