ಸಂಗಾತಿ ಜತೆಗಿರುವ ತೇಜ್ ಪತ್ರಾಪ್ ಫೋಟೋ ವೈರಲ್; ಪಕ್ಷದಿಂದ ಉಚ್ಚಾಟಿಸಿದ್ದಷ್ಟೇ ಅಲ್ಲ, ಕುಟುಂಬದಿಂದಲೂ ಹೊರ ಹಾಕಿದ್ರು ಲಾಲು ಪ್ರಸಾದ್
ಬಿಹಾರ ರಾಜಕೀಯದಲ್ಲಿ ಸಂಚಲನ ಮೂಡಿಸಿದ ವಿದ್ಯಮಾನವೊಂದು ನಡೆದಿದೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಹಿರಿಯ ಪುತ್ರ ತೇಜ್ ಪ್ರತಾಪ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ. ಸಂಗಾತಿ ಜತೆಗಿರುವ ತೇಜ್ ಪತ್ರಾಪ್ ಫೋಟೋ ವೈರಲ್ ಆಗಿದ್ದು, ಅವರನ್ನು ಕುಟುಂಬದಿಂದಲೂ ಹೊರಗಿಟ್ಟಿರುವುದಾಗಿ ಲಾಲು ಪ್ರಸಾದ್ ಘೋಷಿಸಿದ್ದಾರೆ.

ಬಿಹಾರ ರಾಜಕೀಯದ ಮಹತ್ವದ ಬೆಳೆವಣಿಗೆಯೊಂದರಲ್ಲಿ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ತಮ್ಮ ದೊಡ್ಡ ಮಗ ತೇಜ್ ಪ್ರತಾಪ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ. ಸಂಗಾತಿ ಜತೆಗೆ ಇರುವ ತೇಜ್ ಪ್ರತಾಪ್ ಅವರ ಫೋಟೋ ವೈರಲ್ ಆಗಿರುವುದೇ ಇದಕ್ಕೆ ಕಾರಣ. ಹೀಗಾಗಿ, ಲಾಲು ಪ್ರಸಾದ್ ಅವರು ಪುತ್ರ ತೇಜ್ ಪ್ರತಾಪ್ ಅವರನ್ನು ಪಕ್ಷದಿಂದಷ್ಟೇ ಅಲ್ಲ, ತಮ್ಮ ಕುಟುಂಬದಿಂದಲೂ ಹೊರ ಹಾಕಿದ್ದಾರೆ. ಈ ವಿಚಾರವನ್ನು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಇನ್ನು ಮುಂದೆ ತೇಜ್ ಪ್ರತಾಪ್ ಮತ್ತು ತಮ್ಮ ಕುಟುಂಬ ಅಥವಾ ಪಕ್ಷಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತೇಜ್ ಪ್ರತಾಪ್‌ರನ್ನು ಪಕ್ಷದಿಂದ ಉಚ್ಚಾಟಿಸಿದ್ದಷ್ಟೇ ಅಲ್ಲ, ಕುಟುಂಬದಿಂದಲೂ ಹೊರ ಹಾಕಿದ್ರು ಲಾಲು ಪ್ರಸಾದ್
“ವೈಯಕ್ತಿಕ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ನಿರ್ಲಕ್ಷಿಸುವಂತಹ ನಡೆಯು ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಸಾಮೂಹಿಕ ಹೋರಾಟವನ್ನು ದುರ್ಬಲಗೊಳಿಸುತ್ತದೆ. ಹಿರಿಯ ಮಗನ ಚಟುವಟಿಕೆ, ಸಾರ್ವಜನಿಕ ನಡವಳಿಕೆ ಮತ್ತು ಬೇಜವಾಬ್ದಾರಿ ವರ್ತನೆಗಳು ನಮ್ಮ ಕುಟುಂಬದ ಮೌಲ್ಯಗಳು ಮತ್ತು ಆಚರಣೆಗಳಿಗೆ ಅನುಗುಣವಾಗಿಲ್ಲ. ಆದ್ದರಿಂದ ಅಂತಹ ವರ್ತನೆಗಳನ್ನು ಗಮನದಲ್ಲಿಟ್ಟುಕೊಂಡು ನಾನು ಅವರನ್ನು ಪಕ್ಷ ಹಾಗೂ ಕುಟುಂಬದಿಂದ ಹೊರಹಾಕುತ್ತಿದ್ದೇನೆ. ಇನ್ನು ಮುಂದೆ ಅವರಿಗೆ ಪಕ್ಷ ಅಥವಾ ಕುಟುಂಬದಲ್ಲಿ ಯಾವುದೇ ಪಾತ್ರವಿರುವುದಿಲ್ಲ. ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಹೊರಹಾಕಲಾಗಿದೆ” ಎಂದು ಲಾಲು ಪ್ರಸಾದ್ ಟ್ವೀಟ್ ಮಾಡಿದ್ದಾರೆ.
ವೈಯಕ್ತಿಕ ಜೀವನ ಅವರವರ ನಿರ್ಧಾರ ಎಂದ ಆರ್‌ಜೆಡಿ ಮುಖ್ಯಸ್ಥ
ತೇಜ್ ಪ್ರತಾಪ್ ವೈಯಕ್ತಿಕ ಜೀವನ ಅವರದ್ದೇ ನಿರ್ಧಾರ. ವೈಯಕ್ತಿಕ ಜೀವನದ ಒಳ್ಳೆಯದು ಮತ್ತು ಕೆಟ್ಟದ್ದನ್ನು ನೋಡಲು ಅವರು ಸ್ವತಃ ಸಮರ್ಥರಾಗಿದ್ದಾರೆ. ಯಾರೇ ಆಗಿದ್ದರೂ, ಸ್ವಂತ ವಿವೇಚನೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನಾನು ಯಾವಾಗಲೂ ಸಾರ್ವಜನಿಕ ಜೀವನದಲ್ಲಿ ಸಾರ್ವಜನಿಕ ಉದ್ದೇಶದ ಬೆಂಬಲಿಗರಾಗಿದ್ದೇನೆ. ಕುಟುಂಬದ ವಿಧೇಯ ಸದಸ್ಯರು ಸಾರ್ವಜನಿಕ ಜೀವನದಲ್ಲಿ ಈ ಕಲ್ಪನೆಯನ್ನು ಸ್ವೀಕರಿಸಿದ್ದಾರೆ ಮತ್ತು ಅನುಸರಿಸಿದ್ದಾರೆ ಎಂದು ಲಾಲು ಪ್ರಸಾದ್ ವಿವರಿಸಿದ್ದಾರೆ.
ಸಂಗಾತಿ ಜತೆಗಿರುವ ತೇಜ್ ಪತ್ರಾಪ್ ಫೋಟೋ ವೈರಲ್
ಅನುಷ್ಕಾ ಯಾದವ್ ಎಂಬ ಯುವತಿ ಜೊತೆಗೆ ತೇಜ್ ಪ್ರತಾಪ್ ಯಾದವ್ ಇರುವಂತಹ ಫೋಟೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಅದರಲ್ಲಿ ತೇಜ್ ಪ್ರತಾಪ್ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ, ತನಗೆ ಆಕೆಯ ಜತೆಗೆ 12 ವರ್ಷಗಳಿಂದ ಸಂಬಂಧ ಇದೆ ಎಂದು ತಪ್ಪೊಪ್ಪಿಗೆ ಹೇಳಿಕೆಯನ್ನು ಹಾಕಿಕೊಂಡಿದ್ದರು. ಬಳಿಕ ತನ್ನ ಸೋಷಿಯಲ್ ಮೀಡಿಯಾ ಖಾತೆ ಹ್ಯಾಕ್ ಆಗಿದೆ ಎಂದು ಸ್ಪಷ್ಟೀಕರಣವನ್ನೂ ಕೊಟ್ಟಿದ್ದರು.
ಶನಿವಾರ ತೇಜ್ ಪ್ರತಾಪ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ತೇಜ್ ಪ್ರತಾಪ್ ಅವರು ಅನುಷ್ಕಾ ಯಾದವ್ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದರು. ಅವರು ಕಳೆದ 12 ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದರು. ನಾನು ಇದನ್ನು ನಿಮಗೆ ಬಹಳ ಸಮಯದಿಂದ ಹೇಳಲು ಬಯಸಿದ್ದೆ, ಆದರೆ ಅದನ್ನು ಹೇಗೆ ಹೇಳಬೇಕೆಂದು ನನಗೆ ತಿಳಿದಿರಲಿಲ್ಲ. ಆದ್ದರಿಂದ ಇಂದು ಈ ಪೋಸ್ಟ್ ಮೂಲಕ, ನಾನು ನಿಮ್ಮೆಲ್ಲರ ಜತೆಗೆ ಹೃದಯದ ಮಾತನ್ನು ಹಂಚಿಕೊಂಡಿದ್ದೇನೆ. ನಾನು ಏನು ಹೇಳುತ್ತಿದ್ದೇನೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ವೈರಲ್ ಆದ ಕೂಡಲೇ, ಲಾಲು ಪ್ರಸಾದ್ ಕುಟುಂಬದ ವಿರೋಧಿಗಳು ಟ್ರೋಲ್ ಮಾಡಲು ಶುರುಮಾಡಿದ್ದರು. ತೇಜ್ ಪ್ರತಾಪ್ ಅವರ ಮೊದಲ ವಿವಾಹದ ವಿಚಾರಗಳು ಮುನ್ನೆಲೆಗೆ ಬಂದವು.