Akhilesh Yadav: ಇನ್ನುಳಿದಿರುವುದು 400 ದಿನಗಳ ಅಧಿಕಾರ ಮಾತ್ರ ಎಂದು ಬಿಜೆಪಿ ಒಪ್ಪಿಕೊಂಡಿದೆ: ತೆಲಂಗಾಣದಲ್ಲಿ ಅಖಿಲೇಶ್ ಅಬ್ಬರ!
ತೆಲಂಗಾಣದ ಖಮ್ಮಂನಲ್ಲಿ ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್) ವತಿಯಿಂದ ಆಯೋಜಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಕೇಂದ್ರದ ಆಡಳಿತಾರೂಢ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ಸಮಾವೇಶದಲ್ಲಿ ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್, ಡಿ. ರಾಜಾ ಸೇರಿದಂತೆ ಇತರ ಪ್ರಮುಖ ನಾಯಕರು ಭಾಗವಹಿಸಿದ್ದಾರೆ.
ಖಮ್ಮಂ: ಕೇಂದ್ರದಲ್ಲಿ ತನ್ನ ಬಳಿ ಉಳಿದಿರುವುದು ಕೇವಲ 400 ದಿನಗಳ ಅಧಿಕಾರ ಮಾತ್ರ ಎಂದು ಸ್ವತಃ ಬಿಜೆಪಿಯೇ ಒಪ್ಪಿಕೊಂಡಿದ್ದು, ಇದು 2024ರ ಬದಲಾವಣೆಯ ದಿಕ್ಸೂಚಿ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ತೆಲಂಗಾಣದ ಖಮ್ಮಂನಲ್ಲಿ ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್) ವತಿಯಿಂದ ಆಯೋಜಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್, ಕೇಂದ್ರದ ಆಡಳಿತಾರೂಢ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಿನ್ನೆ(ಜ.17-ಮಂಗಳವಾರ) ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ, ಲೋಕಸಭೆ ಚುನಾವಣೆಗೆ ಇನ್ನು 400 ದಿನಗಳು ಮಾತ್ರ ಉಳಿದುಕೊಂಡಿದ್ದು, ದೇಶದ ಪ್ರತಿ ಮತದಾರನನ್ನೂ ತಲುಪಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು. ಮೋದಿ ಅವರ ಈ ಹೇಳಿಕೆಯನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿರುವ ಅಖಿಲೇಶ್ ಯಾದವ್, ಹಾಗಾದರೆ ತನ್ನ ಬಳಿ ಕೇವಲ 400 ದಿನಗಳ ಅಧಿಕಾರ ಮಾತ್ರ ಉಳಿದಿರುವುದು ಎಂಬುದು ಬಿಜೆಪಿಗೆ ಮನವರಿಕೆಯಾಗಿದೆ ಎಂದು ಲೇವಡಿ ಮಾಡಿದರು.
''ತನ್ನ ಬಳಿ 400 ದಿನಗಳ ಅಧಿಕಾರ ಮಾತ್ರ ಉಳಿದಿದೆ ಎಂದು ನಿನ್ನೆ ಬಿಜೆಪಿ ಒಪ್ಪಿಕೊಂಡಿದೆ. ಯಾರು ತಮ್ಮ ದಿನಗಳನ್ನು ಎಣಿಸಲು ಪ್ರಾರಂಭಿಸುತ್ತಾರೋ ಅವರು ಮತ್ತೆಂದೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ..'' ಎಂದು ಅಖಿಲೇಶ್ ಯಾದವ್ ವ್ಯಂಗ್ಯವಾಡಿದರು.
ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಬಿಜೆಪಿಯ ದುರಾಡಳಿತದಿಂದ ಬೇಸತ್ತಿರುವ ದೇಶದ ಜನತೆ, ಬದಲಾವಣೆ ಬಯಿಸಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಲು ದೇಶದ ಜನತೆ 2024ರ ಲೋಕಸಭೆ ಚುನಾವಣೆಗಾಗಿ ಕಾಯುತ್ತಿದ್ದಾರೆ ಎಂದು ಅಖಿಲೇಶ್ ಯಾದವ್ ಇದೇ ವೇಳೆ ಗುಡುಗಿದರು.
ಬೆಲೆ ಏರಿಕೆ, ಕೋಮುವಾದ, ಕಾರ್ಪೋರೇಟ್ ಪರ ನೀತಿಗಳಿಂದ ದೇಶದ ಜನ ರೋಸಿ ಹೋಗಿದ್ದಾರೆ. ಅಧಿಕಾರಕ್ಕಾಗಿ ಬಿಜೆಪಿ ಕೋಮು ವಿಷಬೀಜ ಬಿತ್ತುತ್ತಿದೆ. ಆದರೆ ದೇಶದ ಜನತೆ ಎಂದಿಗೂ ಕೋಮುವಾದವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಅಖಿಲೇಶ್ ಯಾದವ್ ತೀವ್ರ ವಾಗ್ದಾಳಿ ನಡೆಸಿದರು.
ಬಿಆರ್‌ಎಸ್ ಮುಖ್ಯಸ್ಥ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್(ಕೆಸಿಆರ್) ಅವರು, ಬಿಜೆಪಿ ವಿರೋಧಿ ಮಹಾಮೈತ್ರಿಕೂಟ ರಚಿಸಲು ಶ್ರಮಿಸುತ್ತಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ದೇಶದ ಎಲ್ಲಾ ಪ್ರಾದೇಶಿಕ ಪಕ್ಷಗಳು ಒಂದಾಗಬೇಕು ಎಂಬುದು ತಮ್ಮ ಭಾವನೆ ಕೂಡ ಹೌದು ಎಂದು ಅಖಿಲೇಶ್ ಯಾದವ್ ಹೇಳಿದರು.
ಇದೇ ಸಮಾವೇಶದಲ್ಲಿ ಭಾಗವಹಿಸಿದ್ದ ಪಂಜಾಬ್ ಮುಖ್ಯಮಂತ್ರಿ ಹಾಗೂ ಆಪ್ ನಾಯಕ ಭಗವಂತ್ ಮಾನ್, ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮಲಾನಿಯಾ ಟ್ರಂಪ್ ಸರ್ಕಾರಿ ಶಾಲೆಯನ್ನು ನೋಡಲು ಬಯಸಿದಾಗ, ಬಿಜೆಪಿ ದೆಹಲಿಯ ಶಾಲೆಗಳನ್ನು ತೋರಿಸಿದ್ದರು. ಬಿಜೆಪಿ ದೇಶವನ್ನು ದಾರಿ ತಪ್ಪಿಸುತ್ತಿದೆ. ಅವರು ಇಡೀ ದೇಶವನ್ನು ಆಪೋಷಣ ಪಡೆಯಲು ಹವಣಿಸುತ್ತಿದ್ದಾರೆ ಎಂದು ಭಗವಂತ್ ಮಾನ್ ಕಿಡಕಾರಿದರು.
ಈ ಸಮಾವೇಶದಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಸಿಪಿಐ ನಾಯಕ ಡಿ. ರಾಜಾ ಸೇರಿದಂತೆ ಇತರ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಭಾಗವಹಿಸಿದ್ದರು. ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳನ್ನು ಒಟ್ಟುಗೂಡಿಸುವುದು ಈ ಸಮಾವೇಶದ ಉದ್ದೇಶ ಎನ್ನಲಾಗಿದೆ.
ಒಟ್ಟಿನಲ್ಲಿ 2024ರ ಲೋಕಸಭೆ ಚುನಾವಣೆಗೂ ಮೊದಲು ಬಿಜೆಪಿ ವಿರೋಧಿ ಪ್ರಾದೇಶಿಕ ಪಕ್ಷಗಳ ಮಹಾಮೈತ್ರಿಕೂಟ ರಚಿಸಲು ಮುಂದಾಗಿರುವ ಕೆಸಿಆರ್, ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿಟ್ಟಿದ್ದಾರೆ. ಖಮ್ಮಂನಲ್ಲಿ ಪ್ರಾದೇಶಿಕ ಪಕ್ಷಗಳ ನಾಯಕರನ್ನು ಒಟ್ಟುಗೂಡಿಸಿ ಭಾರೀ ಸಮ್ಮೇಳನವನ್ನು ಆಯೋಜಿಸುವಲ್ಲಿ ಕೆಸಿಆರ್ ಯಶಸ್ವಿಯಾಗಿದ್ದಾರೆ.
ವಿಭಾಗ