BJP Hits Back Rahul: ರಾಹುಲ್‌ ಅವರಿಗೆ 52 ವರ್ಷಗಳ ಬಳಿಕ ಜವಾಬ್ದಾರಿಯ ನೆನಪಾಗಿದೆ: ಬಿಜೆಪಿ ತಿರುಗೇಟು!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bjp Hits Back Rahul: ರಾಹುಲ್‌ ಅವರಿಗೆ 52 ವರ್ಷಗಳ ಬಳಿಕ ಜವಾಬ್ದಾರಿಯ ನೆನಪಾಗಿದೆ: ಬಿಜೆಪಿ ತಿರುಗೇಟು!

BJP Hits Back Rahul: ರಾಹುಲ್‌ ಅವರಿಗೆ 52 ವರ್ಷಗಳ ಬಳಿಕ ಜವಾಬ್ದಾರಿಯ ನೆನಪಾಗಿದೆ: ಬಿಜೆಪಿ ತಿರುಗೇಟು!

ಛತ್ತೀಸ್‌ಗಢ ರಾಜಧಾನಿ ರಾಯ್‌ಪುರ್‌ದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಪಕ್ಷದ 85ನೇ ಸರ್ವಸದಸ್ಯರ ಅಧಿವೇಶನ ಉದ್ದೇಶಿಸಿ, ರಾಹುಲ್‌ ಗಾಂಧಿ ಅವರು ಮಾಡಿರುವ ಭಾಷಣವನ್ನು ಬಿಜೆಪಿ ಟೀಕಿಸಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್‌ ಪಾತ್ರಾ, 52 ವರ್ಷಗಳ ಬಳಿಕವಾದರೂ ರಾಹುಲ್‌ ಗಾಂಧಿ ಅವರಿಗೆ ತಮ್ಮ ಜವಾಬ್ದಾರಿಯ ನೆನಪಾಗಿರುವುದು ಸಂತಸದ ಸಂಗತಿ ಎಂದು ಕಾಲೆಳೆದಿದ್ದಾರೆ.

ಸಂಬೀತ್‌ ಪಾತ್ರಾ (ಸಂಗ್ರಹ ಚಿತ್ರ)
ಸಂಬೀತ್‌ ಪಾತ್ರಾ (ಸಂಗ್ರಹ ಚಿತ್ರ) (HT_PRINT)

ನವದೆಹಲಿ: ಛತ್ತೀಸ್‌ಗಢ ರಾಜಧಾನಿ ರಾಯ್‌ಪುರ್‌ದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಪಕ್ಷದ 85ನೇ ಸರ್ವಸದಸ್ಯರ ಅಧಿವೇಶನ ಉದ್ದೇಶಿಸಿ, ರಾಹುಲ್‌ ಗಾಂಧಿ ಅವರು ಮಾಡಿರುವ ಭಾಷಣವನ್ನು ಆಡಳಿತಾರೂಢ ಬಿಜೆಪಿ ಟೀಕಿಸಿದೆ.

ಭಾರತ್‌ ಜೋಡೋ ಯಾತ್ರೆಯಿಂದ ನನಗೆ ವೈಯಕ್ತಿಕವಾಗಿ ತುಂಬ ಲಾಭವಾಗಿದೆ. ದೇಶದ ಜನರ ಬಯಕೆಯನ್ನು ಅರ್ಥ ಮಾಡಿಕೊಳ್ಳಲು ಈ ಯಾತ್ರೆ ನನಗೆ ಸಹಾಯ ಮಾಡಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದರು. ರಾಹುಲ್‌ ಅವರ ಈ ಹೇಳಿಕೆಗೆ ವ್ಯಂಗ್ಯವಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್‌ ಪಾತ್ರಾ, 52 ವರ್ಷಗಳ ಬಳಿಕವಾದರೂ ರಾಹುಲ್‌ ಗಾಂಧಿ ಅವರಿಗೆ ತಮ್ಮ ಜವಾಬ್ದಾರಿಯ ನೆನಪಾಗಿರುವುದು ಸಂತಸದ ಸಂಗತಿ ಎಂದು ಕಾಲೆಳೆದಿದ್ದಾರೆ.

''52 ವರ್ಷಗಳನಂತರ ರಾಹುಲ್ ಗಾಂಧಿ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡಿದ್ದಾರೆ. ಆದರೆ ರಾಹುಲ್‌ ನಿಜವಾಗಿಯೂ ಈ ದೇಶದ ಬಗ್ಗೆ ಚಿಂತಿಸಬೇಕಾಗಿಲ್ಲ. ಈ ದೇಶ ಪ್ರಧಾನಿ ಮೋದಿ ಅವರ ಆಡಳಿತದಡಿ ಸುರಕ್ಷಿತವಾಗಿದ್ದು, ದೇಶದ ಜನ ಕೂಡ ನೆಮ್ಮದಿಯಿಂದ ಇದ್ದಾರೆ..'' ಎಂದು ಸಂಬೀತ್‌ ಪಾತ್ರಾ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಕೇವಲ ಹೆಸರಿಗೆ ಮಾತ್ರ ಎಐಸಿಸಿ ಅಧ್ಯಕ್ಷರಾಗಿದ್ದಾರೆ ಎಂಬುದನ್ನು, ಕಾಂಗ್ರೆಸ್‌ ಪಕ್ಷದ 85ನೇ ಸರ್ವಸದಸ್ಯರ ಅಧಿವೇಶನ ಜಗಜ್ಜಾಹೀರು ಮಾಡಿದೆ. ಇಡೀ ಅಧಿವೇಶನದಲ್ಲಿ ಕೇವಲ ಗಾಂಧಿ ಕುಟುಂಬವೇ ರಾರಾಜಿಸಿದೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಅವರೇ ಅಧಿವೇಶನವನ್ನು ಮುನ್ನಡೆಸಿದ್ದಾರೆ. ಕಾಂಗ್ರೆಸ್‌ ಈಗಲೂ ಗಾಂಧಿ ಕುಟುಂಬದ ಪ್ರಭಾವದಿಂದ ಹೊರಬಂದಿಲ್ಲ ಎಂಬುದಕ್ಕೆ ಈ ಅಧಿವೇಶ ಸಾಕ್ಷಿ ಒದಗಿಸಿದೆ ಎಂದು ಸಂಬೀತ್‌ ಪಾತ್ರಾ ಕಿಡಿಕಾರಿದ್ದಾರೆ.

ಕಾಂಗ್ರೆಸ್‌ ಅಧಿವೇಶನದಲ್ಲಿ ರಾಹುಲ್‌ ಗಾಂಧಿ ಅವರು ಮಾಡಿರುವ ಭಾಷಣ ತುಂಬಾ ಅಪ್ರಸ್ತುತವಾಗಿತ್ತು. ದೇಶದ ಜನರು ಕೇಳದ ಪ್ರಶ್ನೆಗಳನ್ನು ರಾಹುಲ್‌ ಗಾಂಧಿ ಕೇಳುತ್ತಿದ್ದಾರೆ. ಅದಾನಿ ವಿಚಾರದಲ್ಲಿ ಸುಳ್ಳು ಹೇಳುತ್ತಿರುವ ರಾಹುಲ್‌ ಗಾಂಧಿ, ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಂಬೀತ್‌ ಪಾತ್ರಾ ತೀವ್ರ ವಾಗ್ದಾಳಿ ನಡೆಸಿದರು.

ಇಡೀ ಜಗತ್ತಿನಲ್ಲಿ ಭಾರತವು ಈಗ ಪ್ರಕಾಶಮಾನವಾದ ತಾಣವಾಗಿದೆ. ಭಾರತದ ಬಗ್ಗೆ ಜಗತ್ತು ತುಂಬ ಗೌರವದ ಭಾವನೆಯನ್ನು ಇಟ್ಟುಕೊಂಡಿದೆ. ಜಾಗತಿಕ ವೇದಿಕೆಯಲ್ಲಿ ಭಾರತದ ಧ್ವನಿಯನ್ನು ಅತ್ಯಂತ ಗಮನವಿಟ್ಟು ಆಲಿಸಲಾಗುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ಅವರ ಸಮರ್ಥ ನಾಯಕತ್ವವೇ ಕಾರಣ ಎಂದು ಸಂಬೀತ್‌ ಪಾತ್ರಾ ಇದೇ ವೇಳೆ ಅಭಿಪ್ರಾಯಪಟ್ಟರು.

ಪ್ರಧಾನಿ ಮೋದಿ ಜಾಗತಿಕವಾಗಿ ಭಾರತದ ಚಹರೆಯನ್ನು ಬದಲಾಯಿಸಿದ್ದಾರೆ. ಯಾವುದೇ ಜಾಗತಿಕ ವಿಚಾರದಲ್ಲಿ ಭಾರತವನ್ನು ಹೊರಗಿಟ್ಟು ನಿರ್ಣಯ ಕೈಗೊಳ್ಳುವುದು ಜಗತ್ತಿಗೆ ಈಗ ಸಾಧ್ಯವಿಲ್ಲ. ಈ ಬದಲಾವಣೆಯನ್ನು ದೇಶದ ಜನರು ಸ್ವಾಗತಿಸಿದ್ದು, ಪ್ರಧಾನಿ ಮೋದಿ ಬಗ್ಗೆ ಹೆಮ್ಮೆಯ ಭಾವನೆಯನ್ನು ಹೊಂದಿದ್ದಾರೆ. ಆದರೆ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಮಾತ್ರ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ ಎಂದು ಸಂಬೀತ್‌ ಪಾತ್ರಾ ತರಾಟೆಗೆ ತೆಗೆದುಕೊಂಡರು.

ರಾಹುಲ್‌ ಗಾಂಧಿ ಮೊದಲು ಈ ದೇಶದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು. ಈ ದೇಶದ ಇತಿಹಾಸ, ವರ್ತಮಾನ, ಭವಿಷ್ಯ ಯಾವುದರ ಬಗ್ಗೆಯೂ ಜ್ಞಾನವಿಲ್ಲದ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ಪಾಠ ಮಾಡುವುದನ್ನು ನಿಲ್ಲಿಸಬೇಕು. ಈಗಲಾದರೂ ರಾಹುಲ್‌ ಗಾಂಧಿ ಪ್ರಬುದ್ಧರಾಗಿ ವರ್ತಿಸಬೇಕು ಎಂದು ಸಂಬೀತ್‌ ಪಾತ್ರಾ ಆಗ್ರಹಿಸಿದ್ದಾರೆ.

ಇದಕ್ಕೂ ಮೊದಲು ಕಾಂಗ್ರೆಸ್‌ ಪಕ್ಷದ 85ನೇ ಸರ್ವಸದಸ್ಯರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್‌ ಗಾಂಧಿ, ''52 ವರ್ಷಗಳ ಬಳಿಕವೂ ನನಗೆ ನನ್ನದೇ ಆದ ಸ್ವಂತ ಮನೆ ಇಲ್ಲ. ಆದರೆ ಕಾಶ್ಮೀರವನ್ನು ತಲುಪಿದಾಗ ನನಗೆ ಇದು ನನ್ನ ಮನೆಯಂತೆ ಭಾಸವಾಯಿತು. ಯಾತ್ರೆಯಲ್ಲಿ ಜನರು ನನ್ನೊಂದಿಗೆ ರಾಜಕೀಯ ವಿಷಯಗಳ ಬಗ್ಗೆ ಮಾತನಾಡುತ್ತಿರಲಿಲ್ಲ. ಆದರೆ ನಾನು ಕಾಶ್ಮೀರ ತಲುಪಿದಾಗ ಎಲ್ಲವೂ ಬದಲಾಯಿತು..'' ಎಂದು ಹೇಳಿದ್ದರು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.