ಕನ್ನಡ ಸುದ್ದಿ  /  Nation And-world  /  Bjp Is A Party That Has Grown On The Sacrifices Of Stalwarts: Aswattha Narayan

ಬಿಜೆಪಿ ಧೀಮಂತ ವ್ಯಕ್ತಿಗಳ ತ್ಯಾಗ, ಬಲಿದಾನಗಳಿಂದ ಬೆಳೆದಿರುವ ಪಕ್ಷ: ಅಶ್ವತ್ಥ ನಾರಾಯಣ

ಬಿಜೆಪಿಯು ಶಾಮಪ್ರಸಾದ್ ಮುಖರ್ಜಿ ಮತ್ತು ದೀನದಯಾಳ್ ಉಪಾಧ್ಯಾಯರವರಂಥ ಧೀಮಂತ ವ್ಯಕ್ತಿಗಳ ತ್ಯಾಗ, ಬಲಿದಾನಗಳಿಂದ ಬೆಳೆದಿರುವ ಸೈದ್ಧಾಂತಿಕ ಬದ್ಧತೆಯ ಪಕ್ಷವಾಗಿದೆ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಬಿಜೆಪಿ ಧೀಮಂತ ವ್ಯಕ್ತಿಗಳ ತ್ಯಾಗ, ಬಲಿದಾನಗಳಿಂದ ಬೆಳೆದಿರುವ ಪಕ್ಷ: ಅಶ್ವತ್ಥ ನಾರಾಯಣ
ಬಿಜೆಪಿ ಧೀಮಂತ ವ್ಯಕ್ತಿಗಳ ತ್ಯಾಗ, ಬಲಿದಾನಗಳಿಂದ ಬೆಳೆದಿರುವ ಪಕ್ಷ: ಅಶ್ವತ್ಥ ನಾರಾಯಣ

ಬೆಂಗಳೂರು: ಬಿಜೆಪಿಯು ಶಾಮಪ್ರಸಾದ್ ಮುಖರ್ಜಿ ಮತ್ತು ದೀನದಯಾಳ್ ಉಪಾಧ್ಯಾಯರವರಂಥ ಧೀಮಂತ ವ್ಯಕ್ತಿಗಳ ತ್ಯಾಗ, ಬಲಿದಾನಗಳಿಂದ ಬೆಳೆದಿರುವ ಸೈದ್ಧಾಂತಿಕ ಬದ್ಧತೆಯ ಪಕ್ಷವಾಗಿದೆ. ಇಲ್ಲಿ ಕುಟುಂಬ ಪರಿವಾರಗಳ ಯಜಮಾನಿಕೆಗೆ ಆಸ್ಪದವಿಲ್ಲ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಭಾನುವಾರ ಹೇಳಿದ್ದಾರೆ.

ಪುಲಕೇಶಿ ನಗರದಲ್ಲಿ ಪಕ್ಷದ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು.

ಪಕ್ಷವು ಕಾಶ್ಮೀರ, ಅಸ್ಸಾಂ, ಈಶಾನ್ಯ ಭಾರತ ಮುಂತಾದ ಕಡೆಗಳಲ್ಲಿ ಇದ್ದ ಜಟಿಲ ಸಮಸ್ಯೆಗಳನ್ನು ಹಲವು ದಶಕಗಳ ಹೋರಾಟದ ನಂತರ ಸಮರ್ಥವಾಗಿ ಬಗೆಹರಿಸಿದೆ. ಈ ಮೂಲಕ ಭಾರತವನ್ನು ಸುರಕ್ಷಿತವನ್ನಾಗಿ ಮಾಡಲಾಗಿದೆ ಎಂದು ಅವರು ಪ್ರತಿಪಾದಿಸಿದರು.

ಕೆಲಸ ಮಾಡುವ ಮನಸ್ಸಿದ್ದರೆ ಲಕ್ಷಾಂತರ ಜನರ ಅಗತ್ಯವೇನೂ ಇಲ್ಲ. ಒಬ್ಬ ವ್ಯಕ್ತಿಯೇ ಸಂಕಲ್ಪ ಶಕ್ತಿಯ ಬಲದಿಂದ ಸಾಧುಸಬಹುದು ಎನ್ನುವುದನ್ನು ಮೋದಿಯವರು ತೋರಿಸಿ ಕೊಟ್ಟಿದ್ದಾರೆ ಎಂದು ಅವರು ನಿದರ್ಶನಗಳನ್ನು ನೀಡಿದರು.

ಪಕ್ಷವು ಸಮಾಜದ ಎಲ್ಲ ವರ್ಗಗಳ ಏಳ್ಗೆಗೂ ಸಮಾನ ಆದ್ಯತೆ ನೀಡಿದೆ. ಇದಕ್ಕೆ ತಕ್ಕಂತೆ ಹತ್ತಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಇವುಗಳನ್ನು ಮನೆಮನೆಗೆ ತಲುಪಿಸಬೇಕು. ಈ ಮೂಲಕ ಕಾರ್ಯಕರ್ತರು ಪಕ್ಷದ ಗೆಲುವನ್ನು ಖಾತ್ರಿಪಡಿಸಬೇಕು ಎಂದು ಅವರು ಕರೆ ಕೊಟ್ಟರು.

ಪುಲಕೇಶಿ ನಗರದಲ್ಲಿ ಪಕ್ಷದ ಕಾರ್ಯಕರ್ತರು ರಚನಾತ್ಮಕ ಚಟುವಟಿಕೆಗಳನ್ನು ನಡೆಸಬೇಕು. ಈ ಮೂಲಕ ಪಕ್ಷದ ನೆಲೆಯನ್ನು ಇಲ್ಲಿ ವಿಸ್ತರಿಸಬೇಕು ಎಂದು ಸಚಿವರು ನುಡಿದರು. ಕಾರ್ಯಕ್ರಮದಲ್ಲಿ ಪಕ್ಷದ ಸ್ಥಳೀಯ ಮುಖಂಡರಾದ ಸುರೇಂದ್ರ, ಮುರಳಿ ಮುಂತಾದವರು ಇದ್ದರು.

ಸಚಿವರಿಂದ ಪದ್ಮ ಪುರಸ್ಕೃತರ ಭೇಟಿ, ಅಭಿನಂದನೆ

ಮೈಸೂರು: ಈ ಸಾಲಿನ ಪದ್ಮಭೂಷಣ ಪುರಸ್ಕೃತರಾದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಮತ್ತು ಪದ್ಮಶ್ರೀ ಪುರಸ್ಕೃತರಾದ ಡಾ.ಖಾದರ್ ಮತ್ತು ಡಾ. ಸುಬ್ಬರಾಮನ್ ಅವರ ನಿವಾಸಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ಶನಿವಾರ ಭೇಟಿ ನೀಡಿ, ಅಭಿನಂದಿಸಿದರು. ಮೊದಲು ಎಸ್‌ಎಲ್‌ ಭೈರಪ್ಪನವರ ಮನೆಗೆ ತೆರಳಿದ ಅವರು, ಲೇಖಕರಿಗೆ ಶಾಲು ಹಾಕಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು,"ಭೈರಪ್ಪನವರ ಸಾಹಿತ್ಯ ಸಾಧನೆಯು ಅನುಪಮವಾಗಿದ್ದು, ಭಾರತೀಯ ಚಿಂತನೆಗಳನ್ನು ಉದ್ದೀಪಿಸುವಂತಿದೆ. ಅವರಿಗೆ ಪದ್ಮಭೂಷಣ ಪುರಸ್ಕಾರ ಕೊಟ್ಟಿರುವುದರಿಂದ ಪ್ರಶಸ್ತಿಗೆ ಮೌಲ್ಯ ಬಂದಿದೆ" ಎಂದರು.

ಹಾಗೆಯೇ, ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸುವ ಮೂಲಕ ಡಾ.ಖಾದರ್ ಮತ್ತು ತಾಳೆಗರಿಗಳ ಡಿಜಿಟಲ್ ಅಧ್ಯಯನಕ್ಕೆ ಕಾರಣಕರ್ತರಾಗಿರುವ ಡಾ.ಸುಬ್ಬರಾಮನ್ ಅವರ ಸಾಧನೆ ಅನುಕರಣೀಯವಾಗಿದೆ" ಎಂದು ಸಚಿವರು ಬಣ್ಣಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.