ಕನ್ನಡ ಸುದ್ದಿ  /  Nation And-world  /  Bjp To Launch "Ghar Ghar Jodo" Campaign To Reach Out To Sc Communities

Ghar Ghar Jodo: ಭಾರತ್‌ ಜೋಡೊಗೆ ಕೌಂಟರ್‌, ಬಿಜೆಪಿಯಿಂದ ಘರ್‌ ಘರ್‌ ಜೋಡೋ ಅಭಿಯಾನ, ಭಾರತೀಯ ಜನತಾ ಪಕ್ಷದ ಪ್ಲ್ಯಾನ್‌ ಏನು?

BJP Ghar Ghar Jodo: 21 ದಿನಗಳ ಈ ಯಾತ್ರೆಯು ಅಂಬೇಡ್ಕರ್‌ ಜಯಂತಿಯಂದು ಆರಂಭವಾಗಿ ಬುದ್ಧ ಜಯಂತಿಯಾದ ಮೇ 5ರಂದು ಕೊನೆಗೊಳ್ಳಲಿದೆ.

Ghar Ghar Jodo: ಭಾರತ್‌ ಜೋಡೊಗೆ ಕೌಂಟರ್‌, ಬಿಜೆಪಿಯಿಂದ ಘರ್‌ ಘರ್‌ ಜೋಡೋ ಅಭಿಯಾನ
Ghar Ghar Jodo: ಭಾರತ್‌ ಜೋಡೊಗೆ ಕೌಂಟರ್‌, ಬಿಜೆಪಿಯಿಂದ ಘರ್‌ ಘರ್‌ ಜೋಡೋ ಅಭಿಯಾನ

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಎಸ್‌ಸಿ ಮೋರ್ಚಾವು ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿ ಪ್ರಯುಕ್ತ "ಘರ್ ಘರ್ ಜೋಡೋ" ಕಾರ್ಯಕ್ರಮವನ್ನು ಆರಂಭಿಸಲಿದೆ. ಈ ಯಾತ್ರೆಯ ಮೂಲಕ ಎಸ್‌ಸಿ ಸಮುದಾಯವನ್ನು ತಲುಪುವ ಪ್ರಯತ್ನ ಮಾಡಲಿದೆ.

21 ದಿನಗಳ ಈ ಯಾತ್ರೆಯು ಅಂಬೇಡ್ಕರ್‌ ಜಯಂತಿಯಂದು ಆರಂಭವಾಗಿ ಬುದ್ಧ ಜಯಂತಿಯಾದ ಮೇ 5ರಂದು ಕೊನೆಗೊಳ್ಳಲಿದೆ.

ಈ ಕಾರ್ಯಕ್ರಮಕ್ಕಾಗಿ ಬಿಜೆಪಿ ಎಸ್ಸಿ ಮೋರ್ಚಾ 11 ಸದಸ್ಯರ ರಾಷ್ಟ್ರೀಯ ಸಮಿತಿಯನ್ನು ರಚಿಸಿದೆ. ಅದೇ ರೀತಿ ರಾಜ್ಯ ಮತ್ತು ಜಿಲ್ಲಾವಾರು ಸಮಿತಿಗಳನ್ನು ಕೂಡ ತಲಾ 11 ಸದಸ್ಯರನ್ನೊಳಗೊಂಡಂತೆ ರಚಿಸಲಾಗುತ್ತಿದೆ. ಸರ್ಕಾರದ ಎಲ್ಲಾ ಕಲ್ಯಾಣ ಯೋಜನೆಗಳು ಪರಿಶಿಷ್ಟ ಜಾತಿ ಸಮಾಜಕ್ಕೆ ಲಭ್ಯವಾಗುವಂತೆ ನೋಡಿಕೊಳ್ಳುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ತಿಳಿಸಿದೆ.

"ಇದು ಸಮಾಜಕ್ಕೆ ಮಾಡುವ ಸೇವೆಯಾಗಿದೆ. ಈ ಅಭಿಯಾನದ ಮೂಲಕ ಸರಕಾರದ ಎಲ್ಲಾ ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ಪಡೆಯಲು ಎಸ್‌ಸಿ ಸಮುದಾಯಕ್ಕೆ ಸಾಧ್ಯವಾಗುವಂತೆ ನಾವು ಕೆಲಸ ಮಾಡುತ್ತೇವೆ. ಕೊಳೆಗೇರಿಗಳು ಸೇರಿದಂತೆ ಮನೆಮನೆಗೆ ಹೋಗಿ ಪ್ರಚಾರ ಕೈಗೊಳ್ಳಲಾಗುತ್ತದೆ. ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಫಾರ್ಮ್‌ಗಳನ್ನು ಭರ್ತಿ ಮಾಡಲು ಸಹ ಅವರಿಗೆ ನೆರವು ನೀಡಲಿದ್ದೇವೆ" ಎಂದು ಸುದ್ದಿಸಂಸ್ಥೆ ಎಎನ್‌ಐಗೆ ಬಿಜೆಪಿ ಎಸ್‌ಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ ಮಾಹಿತಿ ನೀಡಿದ್ದಾರೆ.

21 ದಿನಗಳ ಪ್ರಚಾರದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಿದೆ ಎಂದು ಆರ್ಯ ಹೇಳಿದ್ದಾರೆ. ಈ ಕಾರ್ಯಕ್ರಮದ ವೇಳೆ ಸ್ವಚ್ಛತಾ ಅಭಿಯಾನವೂ ನಡೆಯಲಿದೆ ಎಂದರು.

ಪರಿಶಿಷ್ಟ ಜಾತಿ ಸಮುದಾಯಗಳ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಬಿಜೆಪಿ ಎಸ್‌ಸಿ ಮೋರ್ಚಾ ಹೆಚ್ಚಿನ ಗಮನ ನೀಡಲಿದೆ ಎಂದು ಅವರು ಹೇಳಿದರು.

ಬಿಜೆಪಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳನ್ನು ನಿರ್ಲಕ್ಷಿಸುತ್ತದೆ ಎಂಬ ಪ್ರತಿಪಕ್ಷಗಳ ಆರೋಪಗಳ ಬಗ್ಗೆ ಕೇಳಿದ ಪ್ರಶ್ನೆಗೆ ಆರ್ಯ ಹೀಗಂದರು. "ಬಿಜೆಪಿ ಸರ್ಕಾರವು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ಅದು ಈ ನೆಲದ ನೀತಿಗಳನ್ನು ಜಾರಿಗೆ ತರುತ್ತದೆ" ಎಂದು ಹೇಳಿದರು.

ಪ್ರತಿಪಕ್ಷದ ಮಟ್ಟಿಗೆ ಹೇಳುವುದಾದರೆ, ಕಾಂಗ್ರೆಸ್ ಅಥವಾ ವಿರೋಧ ಪಕ್ಷ ಯಾವುದೇ ಇರಲಿ, ಅವರು ಪರಿಶಿಷ್ಟ ಜಾತಿಯವರಿಗೆ ಕನಸುಗಳನ್ನು ತೋರಿಸಿದ್ದಾರೆ, ಆದರೆ ಅವು ಕನಸುಗಳಾಗಿಯೇ ಉಳಿಯುವಂತೆ ನೋಡಿಕೊಂಡಿದ್ದಾರೆ. ಅವರು ಎಂದಿಗೂ ಈಡೇರಿಸದ ಭರವಸೆಗಳನ್ನು ನೀಡಿದರು. ಬಿಜೆಪಿ ಮೂಲಕ ವಿವಿಧ ನೀತಿಗಳು ಎಸ್‌ಸಿ ಸಮುದಾಯಗಳನ್ನು ತಲುಪುತ್ತವೆ" ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಹಂತಗಳಲ್ಲಿ ಕೆಲಸ ಮಾಡಿದ್ದಾರೆ. ಮೋದಿಯವರು ಪರಿಶಿಷ್ಟ ಜಾತಿಯವರನ್ನು ಸ್ವಾವಲಂಬಿಗಳಾಗಿ ಮಾಡಲು ಪ್ರಯತ್ನಿಸಿದ್ದಾರೆ. ಅವರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ. ಈ ಯೋಜನೆಗಳು, ನೀತಿಗಳು ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ" ಎಂದು ಆರ್ಯ ಹೇಳಿದ್ದಾರೆ.

"ಕಾಂಗ್ರೆಸ್ ಸರ್ಕಾರ ಇಂತಹ ಕೆಲಸ ಮಾಡಬಹುದಿತ್ತು. ಆದರೆ, ಅವರೆಂದಿಗೂ ಇಂತಹ ಕೆಲಸ ಮಾಡಲಿಲ್ಲ. ವಿವಿಧ ರಾಜ್ಯಗಳಲ್ಲಿ ಅವರ ಸರಕಾರವೂ ಇದೆ. ಕಾಂಗ್ರೆಸ್ ಎಂದಿಗೂ ಪರಿಶಿಷ್ಟ ಜಾತಿಗೆ ಗೌರವ ನೀಡುವುದಿಲ್ಲ. ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಎಂದಿಗೂ ಗೌರವಿಸಲಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಟ್ಟವರು ಯಾರು? ಮೋದಿ ಸರ್ಕಾರವು ಸಂವಿಧಾನವನ್ನು ಆಚರಿಸಲು ಪ್ರಾರಂಭಿಸಿತು ಎಂದು ಅವರು ಹೇಳಿದ್ದಾರೆ.

 

IPL_Entry_Point