Owaisi On Tippu Express: ಟಿಪ್ಪು ಎಕ್ಸ್‌ಪ್ರೆಸ್ ರೈಲು ಹೆಸರು ಬದಲು: ಧೀರ ಪರಂಪರೆ ಅಳಿಸಲು ಸಾಧ್ಯವಿಲ್ಲ ಎಂದ ಒವೈಸಿ
ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾವಣೆಗೆ ವಿರೋಧ ವ್ಯಕ್ತಪಡಿಸಿರುವ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಒವೈಸಿ, ಬ್ರಿಟಿಷರ ವಿರುದ್ಧ ಮೂರು ಯುದ್ಧ ಮಾಡಿದ ಟಿಪ್ಪುವಿನ ಧೀರ ಪರಂಪರೆಯನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಒವೈಸಿ, ಟಿಪ್ಪು ಹೆಸರಿನ ರೈಲನ್ನು ಉಳಿಸಿಕೊಂಡು ಬೇರೊಂದು ರೈಲಿಗೆ ಒಡೆಯರ್ ಹೆಸರು ಇಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೈದರಾಬಾದ್: ಕೇಂದ್ರ ಸರ್ಕಾರ ಇತ್ತೀಚಿಗೆ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು, ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಿದೆ. ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಈ ರೈಲಿನ ಹೆಸರು ಬದಲಾವಣೆಗೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ.
ಅದರಂತೆ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾವಣೆಗೆ ವಿರೋಧ ವ್ಯಕ್ತಪಡಿಸಿರುವ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಒವೈಸಿ, ಬ್ರಿಟಿಷರ ವಿರುದ್ಧ ಮೂರು ಯುದ್ಧ ಮಾಡಿದ ಟಿಪ್ಪುವಿನ ಧೀರ ಪರಂಪರೆಯನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಒವೈಸಿ, "ಬಿಜೆಪಿ ಸರ್ಕಾರವು ಟಿಪ್ಪು ಎಕ್ಸ್‌ಪ್ರೆಸ್ ಅನ್ನು ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಿದೆ. ಟಿಪ್ಪು ಬಿಜೆಪಿಗೆ ಯಾವಾಗಲೂ ಅಪಥ್ಯ. ಏಕೆಂದರೆ ಅವನು ಬ್ರಿಟಿಷರ ವಿರುದ್ಧ 3 ಯುದ್ಧಗಳನ್ನು ಮಾಡಿದ್ದ. ಬೇರೊಂದು ರೈಲಿಗೆ ಒಡೆಯರ್ ಎಂದು ಹೆಸರಿಡಬಹುದಿತ್ತು. ಟಿಪ್ಪು ಪರಂಪರೆಯನ್ನು ಅಳಿಸಲು ಬಿಜೆಪಿಗೆ ಎಂದಿಗೂ ಸಾಧ್ಯವಿಲ್ಲ.." ಎಂದು ಗುಡುಗಿದ್ದಾರೆ.
ರೈಲಿಗೆ ಈ ಹಿಂದೆ ಇದ್ದ ಟಿಪ್ಪು ಸುಲ್ತಾನ್ ಹೆಸರನ್ನು ಉಳಿಸಿಕೊಂಡು, ಬೇರೊಂದು ರೈಲಿಗೆ ಒಡೆಯರ್ ಹೆಸರನ್ನು ಇಡಬೇಕಾಗಿತ್ತು. ಅಥವಾ ಹೊಸ ರೈಲು ಸಂಚಾರ ಆರಂಭಿಸಿ ಅದಕ್ಕೆ ಒಡೆಯರ್ ಎಂದು ನಾಮಕರಣ ಮಾಡಬೇಕಿತ್ತು. ಝಾನ್ಸಿ ರಾಣಿಗೆ ಕೆಲವರು ದ್ರೋಹ ಬಗೆದಂತೆ, ಬ್ರಿಟಿಷರ ಪರ ನಿಂತ ರಾಜವಂಶಸ್ಥರಲ್ಲಿ ಟಿಪ್ಪು ಒಬ್ಬನಲ್ಲ. ಈಗ ಅವರ ವಂಶಸ್ಥರ ಪೈಕಿ ಒಬ್ಬರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಒವೈಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬ್ರಿಟಿಷರ ವಿರುದ್ಧ ಮೂರು ಆಂಗ್ಲೋ-ಮೈಸೂರು ಯುದ್ಧ ಮಾಡಿದ, ಬ್ರಿಟಿಷರನ್ನು ಹೊಡೆದೊಡಿಸಲು ಭಾರತೀಯ ರಾಜರಿಗೆ ಒಗ್ಗಟ್ಟಿನ ಸಂದೇಶ ನೀಡಿದ ಮಹಾನ್ ರಾಜ ಟಿಪ್ಪು. ಆತನ ಧೀರೋದ್ಧಾತ ಹೋರಾಟದ ಇತಿಹಾಸವನ್ನು ನಮ್ಮ ಮಕ್ಕಳಿಗೆ ತಿಳಿಸುವುದು ಅವಶ್ಯ. ಆದರೆ ಆತ ಕೇವಲ ಮುಸ್ಲಿಂ ರಾಜ ಎಂಬ ಕಾರಣಕ್ಕೆ ಆತನ ಕೊಡುಗೆಯನ್ನು ಮರೆಮಾಚಲಾಗುತ್ತಿದೆ ಎಂದು ಒವೈಸಿ ಗಂಭೀರ ಆರೋಪ ಮಾಡಿದರು.
ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾವಣೆ ಮಾಡಿದ ಮಾತ್ರಕ್ಕೆ ಜನಮಾನಸದಿಂದ ಆತನ ಇತಿಹಾಸವನ್ನು ಮರೆಸಲು ಸಾಧ್ಯವಿಲ್ಲ. ಆತನ ಕೊಡುಗೆಯನ್ನು ಕೇವಲ ಕರ್ನಾಟಕ ಮಾತ್ರವಲ್ಲ, ಇಡೀ ದೇಶವೇ ಸ್ಮರಿಸುತ್ತದೆ. ಎಲ್ಲವನ್ನೂ ಕೋಮು ದೃಷ್ಟಿಯಿಂದಲೇ ನೋಡುವ ಬಿಜೆಪಿ, ದೇಶವನ್ನು ನಿಜಕ್ಕೂ ಅಪಾಯದ ಅಂಚಿಗೆ ತಳ್ಳುತ್ತಿದೆ ಎಂದು ಅಸಾದುದ್ದೀನ್ ಒವೈಸಿ ಕಿಡಿಕಾರಿದ್ದಾರೆ.
ಟಿಪ್ಪು ಬದುಕಿದ್ದಾಗ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಈಗ ಅವರು ಹುತಾತ್ಮರಾಗಿ ಶತಮಾನಗಳೇ ಉರುಳಿದರೂ, ಬ್ರಿಟಿಷರ ವಾರಸುದಾರರಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದಾರೆ. ಬ್ರಿಟಷರ ಗುಲಾಮರಿಗೆ ಟಿಪ್ಪುವಿನ ದೇಶಭಕ್ತಿ ಅರಿವಾಗುವುದಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಅಸಾದುದ್ಧೀನ್ ಒವೈಸಿ ಕೆಂಡ ಕಾರಿದ್ದಾರೆ.
ಕೇಂದ್ರ ಸರ್ಕಾರ ಇತ್ತೀಚಿಗೆ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು, ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಿರುವುದನ್ನು ಪ್ರತಿಪಕ್ಷ ಕಾಂಗ್ರೆಸ್ ಕೂಡ ತೀವ್ರವಾಗಿ ವಿರೋಧಿಸಿದೆ. ಈ ಕುರಿತು ಟ್ವೀಟ್ ಮಾಡಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯವರಿಗೆ ದ್ವೇಷ ಬಿತ್ತುವುದೇ ಕೆಲಸ. ದ್ವೇಷದ ರಾಜಕಾರಣ ಮಾಡುವುದೇ ಅವರ ಕೆಲಸವಾಗಿದೆ. ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾಯಿಸುವ ಅಗತ್ಯವಿರಲಿಲ್ಲ. ಇದರ ಬದಲು ಹೊಸ ರೈಲಿಗೆ ಒಡೆಯರ್ ಹೆಸರು ಇಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದರು.
ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾವಣೆ ವಿಚಾರದಲ್ಲಿ ಕರ್ನಾಟಕದ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ತೀವ್ರ ವಾಕ್ಸಮರ ನಡೆಯುತ್ತಿದೆ.
ವಿಭಾಗ