ಕನ್ನಡ ಸುದ್ದಿ  /  Nation And-world  /  Black Ink Smeared On Poster Of Bommai At Mumbai Bus Stop

Maharashtra-Karnataka border dispute: ಮುಂಬೈನಲ್ಲಿ ಸಿಎಂ ಬೊಮ್ಮಾಯಿ ಪೋಸ್ಟರ್‌ಗೆ ಮಸಿ ಬಳಿದ ದುಷ್ಕರ್ಮಿಗಳು

ಮುಂಬೈನ ಮಾಹಿಮ್ ಬಸ್ ನಿಲ್ದಾಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪೋಸ್ಟರ್‌ಗೆ ಮಸಿ ಬಳಿದಿರುವುದು ಕಂಡುಬಂದಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ಸಚಿತ್ರ ವರದಿ ಮಾಡಿದೆ. ಕಪ್ಪು ಬಣ್ಣ ಬಳಿದ ಪೋಸ್ಟರ್‌ಗಳ ಹಲವಾರು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಮುಂಬೈನಲ್ಲಿ ಸಿಎಂ ಬೊಮ್ಮಾಯಿ ಪೋಸ್ಟರ್‌ಗೆ ಮಸಿ ಬಳಿದ ಪುಂಡರು
ಮುಂಬೈನಲ್ಲಿ ಸಿಎಂ ಬೊಮ್ಮಾಯಿ ಪೋಸ್ಟರ್‌ಗೆ ಮಸಿ ಬಳಿದ ಪುಂಡರು (ANI)

ಮುಂಬೈ: ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವೆ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಗಡಿ ವಿಚಾರವಾಗಿ ಉಭಯ ರಾಜ್ಯಗಳ ನಾಯಕರು ರಾಜಕೀಯ ಕೆಸರೆರೆಚಾಟದಲ್ಲಿ ತೊಡಗಿದ್ದಾರೆ. ಮುಖ್ಯವಾಗಿ ಸಿಎಂ ಬೊಮ್ಮಾಯಿ ಹಾಗೂ ಮಹಾರಾಷ್ಟ್ರ ಡಿಸಿಎಂ ಫಡ್ನವೀಸ್‌ ಹೇಳಿಕೆಗಳಿಂದಾಗಿ, ನೆರೆಯ ರಾಜ್ಯಗಳ ಶಾಂತಿ ಕದಡಿದೆ. ಈ ನಡುವೆ ಪುಂಡರು ಬಾಲ ಬಿಚ್ಚಿದ್ದು, ಮಹಾರಾಷ್ಟ್ರ ರಾಜಧಾನಿಯಲ್ಲಿ ಸಿಎಂ ಬೊಮ್ಮಾಯಿ ಪೋಸ್ಟರ್‌ಗೆ ಮಸಿ ಬಳಿದಿದ್ದಾರೆ.

ಮುಂಬೈನ ಮಾಹಿಮ್ ಬಸ್ ನಿಲ್ದಾಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪೋಸ್ಟರ್‌ಗೆ ಮಸಿ ಬಳಿದಿರುವುದು ಕಂಡುಬಂದಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ಸಚಿತ್ರ ವರದಿ ಮಾಡಿದೆ. ಕಪ್ಪು ಬಣ್ಣ ಬಳಿದ ಪೋಸ್ಟರ್‌ಗಳ ಹಲವಾರು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಇತ್ತೀಚೆಗೆ ದ್ವಿಪಕ್ಷೀಯ ಸಂಬಂಧ ಚೆನ್ನಾಗಿಲ್ಲ. ಕೆಲವು ದಿನಗಳಿಂದ ಗಡಿ ವಿವಾದ ನಡೆಯುತ್ತಿದ್ದು, ಈ ನಡುವೆ ಸಿಎಂ ಫೋಟೋಗೆ ಮಸಿ ಬಳಿದಿರುವ ಘಟನೆ ನಡೆದಿದೆ. ಗಡಿ ವಿಚಾರವಾಗಿ ಎರಡೂ ರಾಜ್ಯಗಳ ನಾಯಕರು ಪರಸ್ಪರ ವಾಗ್ವಾದ ನಡೆಸುತ್ತಿದ್ದಾರೆ.

ಶುಕ್ರವಾರ ನಡೆದ ಮತ್ತೊಂದು ಘಟನೆಯಲ್ಲಿ, ಮರಾಠಾ ಪರ ಸಂಘಟನೆಯ ಕಾರ್ಯಕರ್ತರ ಗುಂಪೊಂದು ಮಹಾರಾಷ್ಟ್ರ ಪರ ಘೋಷಣೆ ಕೂಗುತ್ತಾ ಕರ್ನಾಟಕದ ಸರ್ಕಾರಿ ಬಸ್‌ಗಳಿಗೆ ಬಣ್ಣ ಬಳಿದ ಘಟನೆಯ ವರದಿಗಳು ಹೊರಬಿದ್ದಿದ್ದವು. ಈ ಕೃತ್ಯವನ್ನು ಸಿಎಂ ಬೊಮ್ಮಾಯಿ ಖಂಡಿಸಿದ್ದಾರೆ. ಅಲ್ಲದೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವು ಇಂತಹ ಚೇಷ್ಟೆಗಳನನ್ನು ಕೊನೆಗೊಳಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಇಂತಹ ಘಟನೆಗಳು ರಾಜ್ಯಗಳ ನಡುವೆ ಒಡಕು ಮೂಡಿಸುತ್ತವೆ. ಹೀಗಾಗಿ ಇದನ್ನು ಶೀಘ್ರವಾಗಿ ಅಂತ್ಯಕಾಣಿಸಲು ಮಹಾರಾಷ್ಟ್ರವು ಶೀಘ್ರವಾಗಿ ಕಾರ್ಯನಿರ್ವಹಿಸಬೇಕು ಎಂದು ಸಿಎಂ ಹೇಳಿದ್ದಾರೆ.

ಸಿಎಂ ಏನು ಹೇಳಿದರು?

ಭಾರತ ರಾಜ್ಯಗಳ ಒಕ್ಕೂಟ. ಪ್ರತಿ ರಾಜ್ಯಕ್ಕೂ ತನ್ನದೇ ಆದ ಹಕ್ಕುಗಳಿವೆ. ರಾಜ್ಯಗಳನ್ನು ರಾಜ್ಯ ಮರುವಿಂಗಡನಾ ಕಾಯ್ದೆಯಡಿ ರಚಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಆಯಾ ರಾಜ್ಯಗಳ ಕರ್ತವ್ಯವಾಗಿದ್ದು, ರಾಜ್ಯಗಳ ನಡುವೆ ಶಾಂತಿ ಕಾಯ್ದುಕೊಳ್ಳಬೇಕಿದೆ. ಮಹಾರಾಷ್ಟ್ರ ಸರ್ಕಾರ ತಕ್ಷಣವೇ ಕ್ರಮಕೈಗೊಂಡು ರಾಜ್ಯಗಳ ನಡುವಿನ ಅಂತರವನ್ನು ಕಡಿಮೆಮಾಡಬೇಕು. ನಾವು ಕಾನೂನು ಪಾಲಿಸುವವ ರಾಗಿದ್ದು, ನಮ್ಮ ಹಕ್ಕುಗಳ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದೇವೆ. ಮಹಾರಾಷ್ಟ್ರ 2004 ರಲ್ಲಿ ಪ್ರಕರಣ ದಾಖಲಿಸಿತ್ತು. ನಾವು ನ್ಯಾಯಾಲಯದಲ್ಲಿ ಹೋರಾಡುತ್ತಿದ್ದೇವೆ ಎಂದು ಸಿಎಂ ಹೇಳಿದ್ದಾರೆ.

ಏನಿದು ವಿವಾದ?

ಎರಡು ರಾಜ್ಯಗಳ ನಡುವೆ ದಶಕಗಳಷ್ಟು ಹಳೆಯದಾದ ಗಡಿ ವಿವಾದ ಮತ್ತೆ ಭುಗಿಲೆದ್ದಿದ್ದು, ಸುಪ್ರೀಂ ಕೋರ್ಟ್ ಶೀಘ್ರದಲ್ಲೇ ಪ್ರಕರಣದ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಪ್ರಸ್ತುತ ಮಹಾರಾಷ್ಟ್ರದಲ್ಲಿರುವ ಸಾಂಗ್ಲಿ ಜಿಲ್ಲೆಯ ಕೆಲವು ಗ್ರಾಮಗಳು ನೀರಿನ ಸಮಸ್ಯೆ ಎದುರಿಸುತ್ತಿರುವ ಕಾರಣ ಅಧಿಕೃತವಾಗಿ ಕರ್ನಾಟಕದ ಭಾಗವಾಗಲು ನಿರ್ಣಯವನ್ನು ಅಂಗೀಕರಿಸಿವೆ ಎಂದು ಸಿಎಂ ಬೊಮ್ಮಾಯಿ ಅವರು ಕಳೆದ ಬುಧವಾರ ಹೇಳಿದ್ದರು. ಆ ಬಳಿಕ ಹೊಸ ವಿವಾದ ಭುಗಿಲೆದ್ದಿದೆ.

ದೇವೇಂದ್ರ ಫಡ್ನವೀಸ್‌ ಹೇಳಿದ್ದೇನು?

ಆದರೆ ಇತ್ತೀಚೆಗೆ ಅಂತಹ ಯಾವುದೇ ನಿರ್ಣಯಗಳನ್ನು ಅಂಗೀಕರಿಸಲಾಗಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಈ ವಿಷಯದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಬೊಮ್ಮಾಯಿ ಉಲ್ಲೇಖಿಸಿದ ನಿರ್ಣಯವು 2012 ರದ್ದಾಗಿದೆ ಎಂದು ಹೇಳಿದ್ದಾರೆ.

“ಮಹಾರಾಷ್ಟ್ರದ ಯಾವ ಹಳ್ಳಿಯೂ ಕರ್ನಾಟಕಕ್ಕೆ ಸೇರುವುದಿಲ್ಲ. ಬೆಳಗಾವಿ, ಕಾರವಾರ, ನಿಪ್ಪಾಣಿ ಸೇರಿದಂತೆ ಮರಾಠಿ ಭಾಷಿಕ ಗ್ರಾಮಗಳನ್ನು ಪಡೆಯಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ತೀವ್ರ ಹೋರಾಟ ನಡೆಸಲಿದೆ” ಎಂದು ಫಡ್ನವೀಸ್ ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಫಡ್ನವೀಸ್ ಅವರ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ಟಾಂಗ್‌ ನೀಡಿದ್ದಾರೆ. “ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ದೇಶದ ನೆಲ, ಜಲ ಮತ್ತು ಗಡಿಯನ್ನು ರಕ್ಷಿಸಲು ನಮ್ಮ ಸರ್ಕಾರ ಬದ್ಧವಾಗಿದೆ,” ಎಂದು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ರಾಜ್ಯದ ಗಡಿ ಜಿಲ್ಲೆಗಳಲ್ಲಿ ಒಂದು ತುಂಡು ಜಾಗವನ್ನು ಕೂಡಾ ಬಿಟ್ಟುಕೊಡುವುದಿಲ್ಲ ಎಂದು ಸಿಎಂ ಭರವಸೆ ನೀಡಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಅಕ್ಕಲಕೋಟೆಯಂತಹ ಕನ್ನಡ ಮಾತನಾಡುವ ಪ್ರದೇಶಗಳು ಕರ್ನಾಟಕಕ್ಕೆ ಸೇರಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಟ್ವೀಟ್ ಮಾಡಿದ ಅವರು, ಕರ್ನಾಟಕವು ತನ್ನ ಕಾನೂನು ಹೋರಾಟವನ್ನು ಪ್ರಬಲಗೊಳಿಸಲು ಸಿದ್ಧವಾಗಿದೆ ಎಂದು ಹೇಳಿದರು.

IPL_Entry_Point