Saif Ali Khan: ನಟ ಸೈಫ್ ಅಲಿ ಖಾನ್‌ಗೆ ಚೂರಿ ಇರಿತ ಪ್ರಕರಣ, ದಾಳಿಕೋರನ ಬಂಧನ
Saif Ali khan attacker arrested: ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲೆ ದಾಳಿ ಮಾಡಿದ ದುಷ್ಕರ್ಮಿಯನ್ನು ಒಂದು ದಿನದ ತರುವಾಯ ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಬಾಂದ್ರಾ ಪಶ್ಚಿಮದಲ್ಲಿರುವ ಕರೀನಾ ಕಪೂರ್ ಅವರ ನಿವಾಸಕ್ಕೆ ನುಗ್ಗಿದ ದಾಳಿಕೋರ ಆರು ಬಾರಿ ಸೈಫ್ ಆಲಿ ಖಾನ್‌ಗೆ ಚಾಕು ಇರಿದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತ್ತು.

Saif Ali khan attacker arrested: ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲೆ ದಾಳಿ ಮಾಡಿದ ದುಷ್ಕರ್ಮಿಯನ್ನು ಒಂದು ದಿನದ ತರುವಾಯ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಾಂದ್ರಾ ಪಶ್ಚಿಮದಲ್ಲಿರುವ ಕರೀನಾ ಕಪೂರ್ ಅವರ ನಿವಾಸಕ್ಕೆ ನುಗ್ಗಿದ ದಾಳಿಕೋರ ಆರು ಬಾರಿ ಸೈಫ್ ಆಲಿ ಖಾನ್‌ಗೆ ಚಾಕು ಇರಿದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಶಂಕಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
"ವಿಚಾರಣೆಗಾಗಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ" ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. "ದಾಳಿಕೋರನ ಗುರುತನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಈ ಕೃತ್ಯದ ಹಿಂದಿನ ಉದ್ದೇಶ ತಿಳಿಯಲು ಪ್ರಯತ್ನಿಸಲಾಗುತ್ತಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಈ ಪ್ರಕರಣದ ತನಿಖೆಯನ್ನು ನಡೆಸಲು ಹಲವು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿತ್ತು. ಅಪರಿಚಿತ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 311 (ಕೊಲೆ ಅಥವಾ ಗಂಭೀರ ಗಾಯ ಪ್ರಯತ್ನ ಮತ್ತು ದರೋಡೆ) ಮತ್ತು 331(4) (ರಾತ್ರಿಯಲ್ಲಿ ನಿವಾಸಕ್ಕೆ ಅಕ್ರಮ ಪ್ರವೇಶ) ಇತ್ಯಾದಿ ಪ್ರಕರಣಗಳಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿತ್ತು.
ಗುರುವಾರ ಮುಂಜಾನೆ ಮುಂಬೈನಲ್ಲಿ ತಮ್ಮ ನಿವಾಸದಲ್ಲಿ ಸೈಫ್ ಆಲಿ ಖಾನ್ ಇದ್ದ ವೇಳೆ ಕಳ್ಳತನ ಯತ್ನ ನಡೆದಿತ್ತು. ಆ ಸಮಯದಲ್ಲಿ ಆಗುಂತಕ ವ್ಯಕ್ತಿ ಸೈಫ್ ಆಲಿ ಖಾನ್‌ಗೆ ಹಲವು ಬಾರಿ ಚಾಕುವಿನಿಂದ ಚುಚ್ಚಿ ಮಾರಣಾಂತಿಕವಾಗಿ ಗಾಯಗೊಳಿಸಿದ್ದ. ರಾತ್ರಿ ಸುಮಾರು 2.30 ಗಂಟೆಯ ಆಸುಪಾಸಿನಲ್ಲಿ ಈ ಘಟನೆ ನಡೆದಿತ್ತು. ಆಗುಂತಕ ಮೆಟ್ಟಿಲು ಇಳಿದು ಹೋಗುವ ದೃಶ್ಯವು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಈ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿದ್ದರು. ಘಟನೆ ನಡೆದ ಸಂದರ್ಭ ರೀನಾ ಕಪೂರ್ ಖಾನ್ (44), ಪುತ್ರರಾದ ತೈಮೂರ್ ಅಲಿ ಖಾನ್ (8) ಮತ್ತು ಜೆಹಾಂಗೀರ್ ಅಲಿ ಖಾನ್ (4) ಕೂಡ ಮನೆಯಲ್ಲಿದ್ದರು.
"ನಟ ಸೈಫ್ ಆಲಿ ಖಾನ್ ಅವರು ಬೆನ್ನೆಲುಬಿಗೆ ಗಂಭೀರ ಗಾಯವಾಗಿದೆ. ಅಲ್ಲಿ ಹೊಕ್ಕಿರುವಂತಹ ಚಾಕು ಹೊರತೆಗೆಯಲು ಶಸ್ತ್ರಚಿಕಿತ್ಸೆ ನಡೆಸಲಾಗಿದೆ" ಎಂದು ಲೀಲಾವತಿ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ.ನಿತಿನ್ ತಿಳಿಸಿದ್ದಾರೆ.
"ಸೈಫ್ ಅವರಿಗೆ 6 ಗಾಯಗಳಾಗಿದ್ದು, ಅವುಗಳಲ್ಲಿ ಎರಡು ಸಣ್ಣಪುಟ್ಟಗಳು, ಎರಡು ಮಧ್ಯಮ ಗಾಯಗಳು ಮತ್ತು ಎರಡು ಆಳವಾದ ಗಾಯಗಳಾಗಿವೆ. ಒಂದು ಗಾಯವು ಬೆನ್ನಿನ ಮೇಲೆ ಆಗಿದ್ದು, ಅದು ಬೆನ್ನುಮೂಳೆಯ ಹತ್ತಿರದಲ್ಲಿದೆ. ನ್ಯೂರೋ ಸರ್ಜನ್ ಶಸ್ತ್ರಚಿಕಿತ್ಸೆ ಮಾಡಿದ್ದಾರೆ" ಎಂದು ಲೀಲಾವತಿ ಆಸ್ಪತ್ರೆಯ ಸಿಒಒ ಡಾ. ಉತ್ತಮಣಿ ತಿಳಿಸಿದ್ದಾರೆ.
