ಅಮ್ಮಾ.. ನಾನು ಕದ್ದಿಲ್ಲಮ್ಮ.. 15 ರೂ. ಚಿಪ್ಸ್ ಪಾಕೆಟ್ ಕಳ್ಳತನದ ಆರೋಪ: ಮನನೊಂದ 12ರ ಬಾಲಕ ಆತ್ಮಹತ್ಯೆ
ಪಶ್ಚಿಮ ಬಂಗಾಳದ ಮೇದಿನಿಪುರ ಜಿಲ್ಲೆಯಲ್ಲಿ ಚಿಪ್ಸ್ ಪಾಕೆಟ್ ಕಳ್ಳತನದ ಆರೋಪಕ್ಕೆ ಸಿಲುಕಿದ ಬಾಲಕನೋರ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ವರದಿಯಾಗಿದೆ.

ಕೋಲ್ಕತ್ತ: ಅಂಗಡಿಯಲ್ಲಿ 15 ರೂ. ಚಿಪ್ಸ್ ಪ್ಯಾಕೆಟ್ ಕಳ್ಳತನದ ಆರೋಪ ಮತ್ತು ಸಾರ್ವಜನಿಕವಾಗಿ ನಿಂದಿಸಿ, ಹಲ್ಲೆ ನಡೆಸಿದ ಪರಿಣಾಮ ಮನನೊಂದ 12ರ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ವರದಿಯಾಗಿದೆ. ಅಂಗಡಿಯವರ ಪ್ರಕಾರ, ಬಾಲಕ ಹೊರಗಡೆ ಇದ್ದ ಚಿಪ್ಸ್ ಪ್ಯಾಕೆಟ್ ತೆಗೆದುಕೊಂಡು ಹೋಗಿದ್ದಾನೆ ಮತ್ತು ಅದಕ್ಕೆ ಹಣ ಪಾವತಿಸಿಲ್ಲ ಎನ್ನುವ ಆರೋಪವಾಗಿದೆ. ಆದರೆ ಪೊಲೀಸರ ಪ್ರಕಾರ, 7ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಕೃಷ್ಣೇಂದು, ಚಿಪ್ಸ್ ಖರೀದಿಸಲು ಗೋಸೈಬರ್ ಬಜಾರ್‌ಗೆ ಹೋಗಿದ್ದನು, ಆದರೆ ಅಂಗಡಿಯಲ್ಲಿ ಯಾರೂ ಕಂಡುಬಂದಿಲ್ಲ ಎಂದು ವರದಿಯಾಗಿದೆ. ನಂತರ ಅವನು, ಅಂಕಲ್, ನಾನು ಚಿಪ್ಸ್ ತೆಗೆದುಕೊಳ್ಳುತ್ತೇನೆ ಎಂದು ಕೂಗಿದ್ದಾನೆ, ಆದರೆ ಅದಕ್ಕೆ ಅಂಗಡಿಯಾತನಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಅವನ ತಾಯಿ ಹೇಳಿದ್ದಾರೆ. ಬಳಿಕ, ಸುತ್ತಲೂ ಯಾರೂ ಇಲ್ಲ ಎಂದು ಭಾವಿಸಿ, ಅವನು ಚಿಪ್ಸ್ ಪ್ಯಾಕೆಟ್ ತೆಗೆದುಕೊಂಡು ಹೊರಟುಹೋಗಿದ್ದ ಎಂದು ಆರೋಪಿಸಲಾಗಿದೆ.
ಸ್ವಲ್ಪ ಸಮಯದ ನಂತರ, ಅಂಗಡಿ ಮಾಲೀಕ ಶುಭಂಕರ್ ದೀಕ್ಷಿತ್ ಹಿಂತಿರುಗಿದ್ದು, ಅವರು ಹುಡುಗನನ್ನು ಬೆನ್ನಟ್ಟಿ ಕಪಾಳಮೋಕ್ಷ ಮಾಡಿದ್ದಾರೆ ಮತ್ತು ವಾಪಸ್ ಅಂಗಡಿಗೆ ಕರೆತಂದು ಸಾರ್ವಜನಿಕವಾಗಿ ನಿಂದಿಸಿ, ಬಸ್ಕಿ ಹೊಡೆಸಿದ್ದಾರೆ ಎಂದು ಕುಟುಂಬದ ದೂರನ್ನು ಉಲ್ಲೇಖಿಸಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದಾದ ನಂತರ ಹುಡುಗನ ತಾಯಿಯನ್ನು ಅಂಗಡಿಗೆ ಕರೆಸಲಾಯಿತು. ಹುಡುಗನ ತಾಯಿ ಬಂದು, ಮಗುವಿಗೆ ಗದರಿ, ಎರಡು ಏಟು ಕೊಟ್ಟಿದ್ದಾರೆ. ನಾನು ಚಿಪ್ಸ್ ಕದ್ದಿಲ್ಲ, ಪ್ಯಾಕೆಟ್ ಅಂಗಡಿಯ ಹೊರಗೆ ಬಿದ್ದಿರುವುದನ್ನು ನಾನು ತೆಗೆದುಕೊಂಡೆ ಮತ್ತು ನಂತರ ಪಾವತಿಸಲು ಉದ್ದೇಶಿಸಿದ್ದೆ ಎಂದು ಬಾಲಕ ವಿವರಿಸಲು ಯತ್ನಿಸಿದ್ದಾನೆ. ಆದರೆ ಯಾರೂ ಆತನ ಮಾತನ್ನು ಕೇಳಿಲ್ಲ. ಹೀಗಾಗಿ ಬಳಿಕ ಬಾಲಕನ ತಾಯಿ ಚಿಪ್ಸ್ ಪ್ಯಾಕೆಟ್ ಹಣವನ್ನು ಪಾವತಿಸಿ, ಪದೇ ಪದೇ ಕ್ಷಮೆಯಾಚಿಸಿದ್ದಾರೆ. ಆದಾಗ್ಯೂ, ಅಂಗಡಿಯವರು ಅವನನ್ನು ಸುಳ್ಳುಗಾರ ಎಂದು ಹೀಯಾಳಿಸಿರುವುದಾಗಿ ಆರೋಪಿಸಲಾಗಿದೆ.
ಘಟನೆಯ ನಂತರ, ಬಾಲಕ ಕೃಷ್ಣೇಂದು ತನ್ನ ತಾಯಿಯೊಂದಿಗೆ ಮನೆಗೆ ಮರಳಿದ್ದಾನೆ. ಬಳಿಕ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ಆತನ ತಾಯಿ ಕರೆದರೂ ಬಾಲಕ ಪ್ರತಿಕ್ರಿಯಿಸದಿರುವುದನ್ನು ಕಂಡು ಗಾಬರಿಯಾಗಿ ಆಕೆ ಮತ್ತು ನೆರೆಹೊರೆಯವರು ಬಾಗಿಲು ಒಡೆದು ನೋಡಿದಾಗ ಬಾಲಕನ ಬಾಯಿಯಲ್ಲಿ ನೊರೆ ಬರುತ್ತಿತ್ತು ಮತ್ತು ಅರ್ಧ ಖಾಲಿಯಾದ ಕೀಟನಾಶಕ ಬಾಟಲಿಯೊಂದಿಗೆ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದನು. ತಕ್ಷಣವೇ ಬಾಲಕನನ್ನು ತಮ್ಲುಕ್ ಆಸ್ಪತ್ರೆಗೆ ಸಾಗಿಸಿ ಐಸಿಯುಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಬಾಲಕ ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಮನೆಯವರು ಯಾವುದೇ ದೂರು ನೀಡಿರಲಿಲ್ಲ. ಆದರೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಆ ಸಂದರ್ಭದಲ್ಲಿ ಬಾಲಕ ಬರೆದಿದ್ದ ಡೆತ್‌ನೋಟ್ ಆತನ ಕೋಣೆಯಲ್ಲಿ ಪತ್ತೆಯಾಗಿದ್ದು, ಅದರಲ್ಲಿ ಹೀಗೆ ಬರೆಯಲಾಗಿತ್ತು. "ಅಮ್ಮಾ, ನಾನು ಕಳ್ಳನಲ್ಲ. ನಾನು ಚಿಪ್ಸ್ ಪ್ಯಾಕೆಟ್ ಕದಿಯಲಿಲ್ಲ. ನಾನು ಕಾಯುತ್ತಿರುವಾಗ ಅಂಗಡಿಯ ಅಂಕಲ್ ಅಲ್ಲಿ ಇರಲಿಲ್ಲ. ಹಿಂದಿರುಗುವಾಗ, ರಸ್ತೆಯಲ್ಲಿ ಕುರ್ಕುರೆ ಪ್ಯಾಕೆಟ್ ಬಿದ್ದಿರುವುದನ್ನು ನಾನು ನೋಡಿದೆ ಮತ್ತು ಅದನ್ನು ಎತ್ತಿಕೊಂಡು ಬಂದೆ. ನಾನು ಕುರ್ಕುರೆಯನ್ನು ಪ್ರೀತಿಸುತ್ತೇನೆ, ಹೊರಡುವ ಮೊದಲು ಇದು ನನ್ನ ಕೊನೆಯ ಮಾತುಗಳು. ಈ ಕೃತ್ಯಕ್ಕಾಗಿ ದಯವಿಟ್ಟು ನನ್ನನ್ನು ಕ್ಷಮಿಸಿ" ಎಂದು ಬರೆದಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಘಟನೆಯ ಬಳಿಕ ಅಂಗಡಿಯ ಮಾಲೀಕ ಮಳಿಗೆಯನ್ನು ಮುಚ್ಚಿ ನಾಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.