19 ವರ್ಷ ವಯಸ್ಸಿಗೆ ಹೃದಯಾಘಾತದಿಂದ ಸಾವನ್ನಪ್ಪಿದ ಬಾಡಿಬಿಲ್ಡರ್; ಬೊಜ್ಜು ಕರಗಿಸುವ ಪ್ರಯತ್ನವೇ ಮಾರಕವಾಯ್ತೇ!-brazil news bodybuilder matheus pavlak dies of heart attack at the age of 19 after fought against obesity jra ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  19 ವರ್ಷ ವಯಸ್ಸಿಗೆ ಹೃದಯಾಘಾತದಿಂದ ಸಾವನ್ನಪ್ಪಿದ ಬಾಡಿಬಿಲ್ಡರ್; ಬೊಜ್ಜು ಕರಗಿಸುವ ಪ್ರಯತ್ನವೇ ಮಾರಕವಾಯ್ತೇ!

19 ವರ್ಷ ವಯಸ್ಸಿಗೆ ಹೃದಯಾಘಾತದಿಂದ ಸಾವನ್ನಪ್ಪಿದ ಬಾಡಿಬಿಲ್ಡರ್; ಬೊಜ್ಜು ಕರಗಿಸುವ ಪ್ರಯತ್ನವೇ ಮಾರಕವಾಯ್ತೇ!

ಬ್ರೆಜಿಲ್ ಮೂಲದ ಬಾಡಿಬಿಲ್ಡರ್ ಮ್ಯಾಥ್ಯೂಸ್ ಪಾವ್ಲಾಕ್, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದ 5 ವರ್ಷಗಳಲ್ಲಿ ದೇಹದ ಬೊಜ್ಜು ಕರಗಿಸಿ ಬಾಡಿಬಿಲ್ಡರ್‌ ಆಗಿ ರೂಪಾಂತರಗೊಂಡ 19 ವರ್ಷದ ಪಾವ್ಲಾಕ್, ಅತಿಯಾದ ಔಷಧ ಸೇವನೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹೃದಯಾಘಾತದಿಂದ ಸಾವನ್ನಪ್ಪಿದ ಬಾಡಿಬಿಲ್ಡರ್ ಮ್ಯಾಥ್ಯೂಸ್ ಪಾವ್ಲಾಕ್
ಹೃದಯಾಘಾತದಿಂದ ಸಾವನ್ನಪ್ಪಿದ ಬಾಡಿಬಿಲ್ಡರ್ ಮ್ಯಾಥ್ಯೂಸ್ ಪಾವ್ಲಾಕ್

ಬ್ರೆಜಿಲ್‌ನ 19 ವರ್ಷದ ಬಾಡಿ ಬಿಲ್ಡರ್‌ ಮ್ಯಾಥ್ಯೂಸ್ ಪಾವ್ಲಾಕ್ (Matheus Pavlak), ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವರ್ಷಗಳ ಹಿಂದೆ ಬೊಜ್ಜಿನಿಂದ ಬಳಲುತ್ತಿದ್ದ ಮ್ಯಾಥ್ಯೂಸ್, 5 ವರ್ಷಗಳಲ್ಲಿ ತಮ್ಮ ದೇಹದಲ್ಲಿ ಭಾರಿ ಬದಲಾವಣೆ ಮಾಡಿಕೊಂಡಿದ್ದರು. ಜಿಮ್‌ ದೇಹವನ್ನು ಕಾಪಾಡಿಕೊಂಡು ಬಾಡಿಬಿಲ್ಡರ್ ಆದರು. ಆದರೆ, ತಮ್ಮ 19ನೇ ವಯಸ್ಸಿನಲ್ಲಿಯೇ ಮ್ಯಾಥ್ಯೂಸ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರ ಅಕಾಲಿಕ ಮರಣವು ಹಲವರಲ್ಲಿ ಅಚ್ಚರಿ ಮೂಡಿಸಿದೆ. ಬ್ರೆಜಿಲ್‌ನಲ್ಲಿ ವಾಸಿಸುತ್ತಿದ್ದ ಮ್ಯಾಥ್ಯೂಸ್, ಬಾಡಿಬಿಲ್ಡರ್ ಆಗಿ ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿದ್ದರು. ಅವರ ದೇಹ ಪರಿವರ್ತನೆಯೆ ಕಥೆ ವಿಶ್ವದಾದ್ಯಂತ ವೈರಲ್ ಆಗಿತ್ತು. ಹಲವು ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಮನ್ನಣೆ ಗಳಿಸಿದ್ದ ಮ್ಯಾಥ್ಯೂಸ್‌ ಈಗ ಪ್ರಾಣ ಕಳೆದುಕೊಂಡಿದ್ದಾರೆ.

ದಕ್ಷಿಣ ಬ್ರೆಜಿಲ್‌ನ ಸಂತ ಕ್ಯಾಟರಿನಾ ಪ್ರಾಂತ್ಯದಲ್ಲಿ ಮ್ಯಾಥ್ಯೂಸ್‌ ಹೆಚ್ಚು ಪ್ರಸಿದ್ಧರಾಗಿದ್ದರು. ಸುದ್ದಿಸಂಸ್ಥೆ ಟಿಎಂಜೆಡ್ ಪ್ರಕಾರ, ಅವರು ಇತ್ತೀಚೆಗೆ ಸ್ಥಳೀಯ ಮಟ್ಟದ ಸ್ಪರ್ಧೆಗಳಲ್ಲಿ ನಾಲ್ಕನೇ ಮತ್ತು ಆರನೇ ಸ್ಥಾನ ಪಡೆದಿದ್ದರು. ಇದೇ ವೇಳೆ ಅಂಡರ್ 23 ಸ್ಪರ್ಧೆಯಲ್ಲಿಯೂ ಗೆದ್ದಿದ್ದರು. ಇದೀಗ ದಿಢೀರ್ ಹೃದಯಾಘಾತದಿಂದಾಗಿ ಅಕಾಲಿಕ ಸಾವನ್ನು ಅಪ್ಪಿಕೊಂಡು ಪಾವ್ಲಾಕ್ ಅವರ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.

ಪಾವ್ಲಾಕ್ ಸಾವಿನ ಹಿಂದೆ ಸ್ಟೀರಾಯ್ಡ್‌ಗಳು ಸಹ ಪಾತ್ರ ವಹಿಸಿರಬಹುದು ಎಂದು ಹೇಳಲಾಗುತ್ತಿದೆ. ಇದರಿಂದ ಅವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಪಾವ್ಲಾಕ್ ತನ್ನ ಆರೋಗ್ಯವನ್ನು ಸುಧಾರಿಸಲು ಅನೇಕ ಔಷಧಿಗಳನ್ನು ಬಳಸಿದ್ದಾನೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಅವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಕೊನೆಗೆ ಹೃದಯಾಘಾತವಾಗಿದೆ.

ಪಾವ್ಲಾಕ್ ತಮ್ಮ ದೇಹದಲ್ಲಿ ಮಾಡಿಕೊಂಡ ರೂಪಾಂತರಕ್ಕೆ ಸಂಬಂಧಿಸಿದ ಚಿತ್ರಗಳನ್ನು ನಿರಂತರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದರು. ತಮಗೆ ತಾವೇ ಸ್ಪೂರ್ತಿ ಪಡೆದುಕೊಳ್ಳುತ್ತಿದ್ದರು. ಇತ್ತೀಚೆಗೆ ಕೂಡಾ ಅವರು ತಮ್ಮ ಚಿತ್ರವನ್ನು ಹಂಚಿಕೊಂಡಿದ್ದರು. 'ನೀವು ಕಂಡ ಕನಸು ನನಸಾಗಿಸುವುದು ಎಷ್ಟು ಕಷ್ಟ ಮತ್ತು ಅಸಾಧ್ಯ ಎಂಬುದು ಮುಖ್ಯವಲ್ಲ. ನೀವು ನಿಜವಾಗಿಯೂ ಅದನ್ನು ಮಾಡಲು ಬಯಸಿದರೆ, ನಿಮ್ಮಿಂದ ಅದನ್ನು ನನಸಾಗಿಸಲು ಸಾಧ್ಯವಾಗುತ್ತದೆ. ನಾನು ಅದನ್ನು ಮಾಡಿದ್ದೇನೆ' ಎಂದು ಬರೆದುಕೊಂಡಿದ್ದರು.

ಹಲವರ ಸಂತಾಪ

ಮ್ಯಾಥ್ಯೂಸ್ ಪಾವ್ಲಾಕ್ ಸಾವಿಗೆ, ಅವರ ಮಾಜಿ ತರಬೇತುದಾರ ಲ್ಯೂಕಾಸ್ ಶೆಗಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, 'ಇಂದು ತುಂಬಾ ದುಃಖದ ದಿನ. ನಾವು ಒಬ್ಬ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದ್ದೇವೆ. ಅವರ ಸಾವು ನಮ್ಮೆಲ್ಲರಿಗೂ ಆಘಾತವನ್ನುಂಟು ಮಾಡಿದೆ. ಅವರಿಗೆ ಉಜ್ವಲ ಭವಿಷ್ಯ ಕಾದಿತ್ತು. ಆದರೆ ಅವರ ಅಕಾಲಿಕ ಸಾವು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ದೇವರು ಯೋಜನೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ನನ್ನ ನೋವನ್ನು ವ್ಯಕ್ತಪಡಿಸಲು ನನಗೆ ಪದಗಳಿಲ್ಲ, ಎಂದು ಬರೆದುಕೊಂಡಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.