Budget 2025: ಮಧ್ಯಮ ವರ್ಗದಿಂದ ಕೃಷಿಕರ ತನಕ, ಕೇಂದ್ರ ಬಜೆಟ್‌ನಲ್ಲಿ ಯಾರಿಗೆ ಏನು ಸಿಕ್ಕಿತು, 10 ಮುಖ್ಯ ಘೋಷಣೆಗಳಿವು
Budget 2025 Highlights: ಬಜೆಟ್ ಭಾಷಣ ಆರಂಭಿಸುತ್ತಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ದೇಶಮಂಟೆ ಮಟ್ಟಿ ಕಾದು ಮನುಷಲು (ದೇಶವೆಂದರೆ ಮಣ್ಣಲ್ಲ, ಮನುಷ್ಯರು) ಎಂಬ ತೆಲುಗು ಕವಿ ಗುರಜಾಡ ಅಪ್ಪಾರಾವ್ ಅವರ ಕವಿತೆಯ ಸಾಲನ್ನು ಉಲ್ಲೇಖಿಸಿದರು. ಮಧ್ಯಮ ವರ್ಗದಿಂದ ಕೃಷಿಕರ ತನಕ, ಕೇಂದ್ರ ಬಜೆಟ್‌ನಲ್ಲಿ ಯಾರಿಗೆ ಏನು ಸಿಕ್ಕಿತು, 10 ಮುಖ್ಯ ಘೋಷಣೆಗಳ ವಿವರ ಇಲ್ಲಿದೆ.

Budget 2025 Highlights: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆ 1) ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2025 ಅನ್ನು ಮಂಡಿಸಿದರು. ಬಜೆಟ್ ಭಾಷಣ ಆರಂಭಿಸುತ್ತಲೇ, ದೇಶಮಂಟೆ ಮಟ್ಟಿ ಕಾದು ಮನುಷಲು (ದೇಶವೆಂದರೆ ಮಣ್ಣಲ್ಲ, ಮನುಷ್ಯರು) ಎಂಬ ತೆಲುಗು ಕವಿ ಗುರಜಾಡ ಅಪ್ಪಾರಾವ್ ಅವರ ಕವಿತೆಯ ಸಾಲನ್ನು ಉಲ್ಲೇಖಿಸಿದರು. ಇದಕ್ಕೆ ಅನುಗುಣವಾಗಿಯೇ ಅವರು ತಮ್ಮ ಬಜೆಟ್ ಭಾಷಣದಲ್ಲಿ ಮಧ್ಯಮ ವರ್ಗದಿಂದ ಹಿಡಿದು ರೈತಾಪಿ ಜನರಿಗೆ ಅನುಕೂಲವಾಗುವ ಅನೇಕ ಅಂಶಗಳನ್ನು ಪ್ರಕಟಿಸಿದರು. ತೆರಿಗೆದಾರರಿಗೆ ಹೆಚ್ಚು ಅನುಕೂಲ ಪ್ರಕಟಿಸಿದ ನಿರ್ಮಲಾ ಸೀತಾರಾಮನ್ ಅವರು ಮುಂದಿನ ವರ್ಷದಿಂದ 12 ಲಕ್ಷ ರೂಪಾಯಿ ತನಕ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ ಎಂದರು. ರೈತರಿಗೂ ಹೊಸ ಯೋಜನೆಗಳನ್ನು ಘೋಷಿಸಿದರು. ಈಗ ಇರುವಂತ ಯೋಜನೆಗಳ ಉನ್ನತೀಕರಣವನ್ನೂ ಪ್ರಕಟಿಸಿದರು. ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ 10 ಮುಖ್ಯ ಘೋಷಣೆಗಳ ಕಡೆಗೆ ಗಮನಹರಿಸೋಣ.
ಕೇಂದ್ರ ಬಜೆಟ್ 2025; ಮಧ್ಯಮ ವರ್ಗದಿಂದ ಕೃಷಿಕರ ತನಕ ಯಾರಿಗೇನು- 10 ಘೋಷಣೆಗಳು
1) ಆದಾಯ ತೆರಿಗೆ ವಿನಾಯಿತಿ: ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 2025-26ರ ಬಜೆಟ್‌ನಲ್ಲಿ ತೆರಿಗೆದಾರರಿಗೆ ಹೆಚ್ಚಿನ ಪರಿಹಾರ ನೀಡಿದ್ದಾರೆ. 12 ಲಕ್ಷ ರೂಪಾಯಿವರೆಗೆ ಆದಾಯವನ್ನು ಗಳಿಸುವವರಿಗೆ ಯಾವುದೇ ತೆರಿಗೆ ಇರುವುದಿಲ್ಲ ಎಂದು ಘೋಷಿಸಿದ್ದಾರೆ.
2) ಕೃಷಿಕರಿಗೆ ಸಾಲ ಮಿತಿ ಹೆಚ್ಚಳ: ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶನಿವಾರ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಹೊಂದಿರುವ ಕೃಷಿಕರಿಗೆ ಬಡ್ಡಿ ಸಹಾಯ ಯೋಜನೆಯ ಮಿತಿಯನ್ನು 3 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸುವುದಾಗಿ ಘೋಷಿಸಿದರು.
3) ಧನ ಧಾನ್ಯ ಕೃಷಿ ಯೋಜನೆ: 'ಪ್ರಧಾನ್ ಮಂತ್ರಿ ಧನ ಧಾನ್ಯ ಕೃಷಿ ಯೋಜನೆ' ಪ್ರಕಟಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕಡಿಮೆ ಇಳುವರಿ, ಆಧುನಿಕ ಬೆಳೆ ತೀವ್ರತೆ ಮತ್ತು ಸರಾಸರಿ ಸಾಲದ ಮಾನದಂಡಗಳನ್ನು ಹೊಂದಿರುವ 100 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೊಳಿಸುವುದಾಗಿ ಹೇಳಿದರು. 1.7 ಕೋಟಿ ರೈತರು ಈ ಯೋಜನೆಯಿಂದ ಪ್ರಯೋಜನ ಪಡೆಯಲಿದ್ದಾರೆ ಎಂದು ಹೇಳಿದರು.
4) ಹೊದ ಆದಾಯ ತೆರಿಗೆ ಮಸೂದೆ: ಕೇಂದ್ರ ಸರ್ಕಾರ ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಲಿದೆ. ಇದರಲ್ಲಿ, ತೆರಿಗೆದಾರರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮತ್ತು ನಂತರ ತೆರಿಗೆ ಪಡೆಯುವುದು ಎಂಬ ತತ್ತ್ವದ ಮೂಲಕ ಮುಂದೆ ಸಾಗುವ ಸೂಚನೆ ಇದೆ.
5) ವಿಮಾ ಕ್ಷೇತ್ರದ ಎಫ್‌ಡಿಐ ಮಿತಿ ಏರಿಕೆ: ವಿಮಾ ಕ್ಷೇತ್ರದ ಎಫ್‌ಡಿಐ ಅನ್ನು ಶೇಕಡ 74 ರಿಂದ ಶೇಕಡ 100ಕ್ಕೆ ಹೆಚ್ಚಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
6) ಡೇ ಕೇರ್ ಕ್ಯಾನ್ಸರ್ ಕೇಂದ್ರ ಸ್ಥಾಪನೆ: ಮುಂದಿನ ಮೂರು ವರ್ಷದಲ್ಲಿ ದೇಶದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಈ ಪೈಕಿ 200 ಮುಂದಿನ ವರ್ಷವೇ ಸ್ಥಾಪನೆಯಾಗಲಿದೆ.
7) ಗಿಗ್ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ: ಪಿಎಂ ಜನ ಆರೋಗ್ಯ ಯೋಜನೆಯಲ್ಲಿ ಗಿಗ್ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಸಿಗಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
8) ವೈದ್ಯಕೀಯ ಕಾಲೇಜು, ಆಸ್ಪತ್ರೆ: ಮುಂದಿನ ಐದು ವರ್ಷಗಳಲ್ಲಿ 75,000 ಸ್ಥಾನಗಳನ್ನು ಸೇರಿಸುವ ದಿಕ್ಕಿನಲ್ಲಿ ಮುಂದಿನ ವರ್ಷ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಿಗೆ 10,000 ಹೆಚ್ಚುವರಿ ಸ್ಥಾನಗಳನ್ನು ಸೇರಿಸಲಾಗುವುದು ಎಂದು ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
9) ಭಾರತ ಆಹಾರ ಕೇಂದ್ರ: ಜಗತ್ತಿಗೆ ಆಹಾರ ಪೂರೈಸುವ ದೇಶವಾಗಿ ಭಾರತ ರೂಪುಗೊಳ್ಳಲಿದೆ. ಇದಕ್ಕೆ ಬೇಕಾದ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
10) ಬಿಹಾರದಲ್ಲಿ ಮಖಾನಾ ಬೋರ್ಡ್: ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸುತ್ತೇವೆ, ಇದು ಪೂರ್ವ ಭಾರತದಲ್ಲಿ ಆಹಾರ ಸಂಸ್ಕರಣೆಯನ್ನು ಹೆಚ್ಚಿಸುತ್ತದೆ. ಇದು ಯುವಕರಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ವಿತ್ತ ಸಚಿವರು ಹೇಳಿದರು.
ಸತತ 8ನೇ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಸಾಂಪ್ರದಾಯಿಕ ಬಹಿಖಾತಾ ಚೀಲದಲ್ಲಿ ಡಿಜಿಟಲ್ ಟ್ಯಾಬ್ಲೆಟ್ ಹಿಡಿದು ಸಂಸತ್‌ಗೆ ಆಗಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆ 1) ಕೇಂದ್ರ ಬಜೆಟ್ 2025-26 ಮಂಡಿಸಿದರು. ಇದು ಅವರು ಸತತ 8ನೇ ಬಾರಿಗೆ ಮಂಡಿಸಿದ ಬಜೆಟ್. 2021ರಲ್ಲಿ ಕೋವಿಡ್ ಸಂಕಷ್ಟದ ಕಾರಣ ಪೇಪರ್‌ಲೆಸ್ ಬಜೆಟ್ ಮಂಡಿಸುವ ಪರಿಪಾಠ ಶುರುಮಾಡಿದ್ದು ನಿರ್ಮಲಾ ಸೀತಾರಾಮನ್ ಅವರೇ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸತತ 14ನೇ ಬಜೆಟ್ ಇದಾಗಿದೆ. ಹಿಂದೆ ಎರಡು ಅವಧಿಗೆ 2014 ರಿಂದ 2024ರ ತನಕ ಬಿಜೆಪಿ ಬಹುಮತದೊಂದಿಗೆ ಸರ್ಕಾರ ರಚಿಸಿತ್ತು. ಈಗ ಮೈತ್ರಿ ಸರ್ಕಾರ ಕೇಂದ್ರದಲ್ಲಿ ಆಡಳಿತದಲ್ಲಿದೆ. ಹೀಗಾಗಿ ಈ ಸಲದ ಬಜೆಟ್‌ಗೆ ಹೆಚ್ಚಿನ ಮಹತ್ವ ಬಂದಿತ್ತು.

ವಿಭಾಗ