Stock market Today: ಭಾರತದ ಷೇರುಪೇಟೆಗೆ ಇಂದು ಶನಿವಾರ ರಜೆ ಇಲ್ಲ; ಬಜೆಟ್ ದಿನ ಸೆನ್ಸೆಕ್ಸ್, ನಿಫ್ಟಿಯಲ್ಲಿ ಷೇರುಗಳ ತಕಧಿಮಿತ
Stock market today: ಬಜೆಟ್ 2025 ಪ್ರಯುಕ್ತ ಭಾರತದ ಷೇರುಪೇಟೆ ಶನಿವಾರವೂ ತೆರೆದಿದೆ. ಹೂಡಿಕೆದಾರರು ಬಜೆಟ್ ಘೋಷಣೆಗಳಿಗೆ ತಕ್ಕಂತೆ ಷೇರು ಖರೀದಿ ಅಥವಾ ಮಾರಾಟದ ನಿರ್ಧಾರ ತೆಗೆದುಕೊಳ್ಳಲು ಇದರಿಂದ ಸಾಧ್ಯವಾಗಲಿದೆ. ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಷೇರುಪೇಟೆಯ ಏರಿಳಿತಗಳಿಗೆ ಕಾರಣವಾಗಲಿದೆ.

ಕೇಂದ್ರ ಬಜೆಟ್ 2025ರ ದಿನ ಭಾರತೀಯ ಷೇರುಪೇಟೆ ತೆರೆಯುವುದೇ? ತೆರೆಯುವುದಿಲ್ಲವೇ? ಎಂಬ ಗೊಂದಲದಲ್ಲಿದ್ದ ಷೇರು ಹೂಡಿಕೆದಾರರಿಗೆ ಖುಷಿಯಾಗಿದೆ. ಏಕೆಂದರೆ, ಸೆನ್ಸೆಕ್ಸ್ ಮತ್ತು ನಿಫ್ಟಿ ಇಂದು ಶನಿವಾರವಾದರೂ ಬಾಗಿಲು ತೆರೆದಿದೆ. ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಈ ಸಮಯದಲ್ಲಿ ಷೇರುಪೇಟೆ ತೆರೆಯಲಿದೆ. ಎನ್‌ಎಸ್‌ಇ, ಬಿಎಸ್‌ಇ ಈ ರೀತಿ ಶನಿವಾರವೂ ಬಾಗಿಲು ತೆರೆಯುವುದು ಇದು ಮೂರನೇ ಬಾರಿ. ಷೇರುಪೇಟೆಯ ಘೋಷಣೆಗಳಿಗೆ ತಕ್ಕಂತೆ ಷೇರುದಾರರು ತಮ್ಮ ಇಷ್ಟದ ಷೇರುಗಳಿಗೆ, ತಮ್ಮ ನೆಚ್ಚಿನ ವಲಯಗಳಿಗೆ ಹೂಡಿಕೆ ಮಾಡಬಹುದಾಗಿದೆ. ಭಾರತೀಯ ಷೇರುಪೇಟೆ ಬೆಳಗ್ಗೆ 9.15ರಿಂದ ಸಂಜೆ 3.30ರವರೆಗೆ ತೆರೆದಿರಲಿದೆ. ಕಮಾಡಿಟಿ ಮಾರುಕಟ್ಟೆಯು ಸಂಜೆ 5 ಗಂಟೆಯವರೆಗೆ ತೆರೆದಿರಲಿದೆ.
ಈ ಹಿಂದೆ ಎರಡು ಬಾರಿ ಇದೇ ರೀತಿ ಭಾರತೀಯ ಷೇರುಪೇಟೆ ಶನಿವಾರ ರಜೆ ದಿನದಂದು ಕಾರ್ಯನಿರ್ವಹಿಸಿತ್ತು. 2015 ಮತ್ತು 2020ರಲ್ಲಿಯೂ ರಜಾ ದಿನಗಳಂದು ಬಜೆಟ್ ಮಂಡಿಸಲಾಗಿತ್ತು. ಆ ಸಮಯದಲ್ಲಿಯೂ ಷೇರುಪೇಟೆ ತೆರೆದಿತ್ತು.
ಸಾಮಾನ್ಯವಾಗಿ ಶನಿವಾರ ಮತ್ತು ಭಾನುವಾರ ಭಾರತೀಯ ಷೇರುಪೇಟೆ ವಹಿವಾಟು ನಡೆಸುವುದಿಲ್ಲ. ಕೇಂದ್ರ ಬಜೆಟ್ ಎನ್ನುವುದು ಪ್ರಮುಖ ವಿದ್ಯಾಮಾನವಾಗಿರುವ ಕಾರಣ ಭಾರತೀಯ ಷೇರುಪೇಟೆ ಕಾರ್ಯನಿರ್ವಹಿಸಲಿದೆ.
ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2025-26 ಅನ್ನು ಮಂಡಿಸಲಿದ್ದಾರೆ. ಲೋಕಸಭೆಯಲ್ಲಿ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ.
ಶುಕ್ರವಾರ ಭಾರತೀಯ ಷೇರುಪೇಟೆ ಏರಿಕೆಯೊಂದಿಗೆ ವಹಿವಾಟು ಮುಗಿಸಿತ್ತು. ನಿಫ್ಟಿ 50 ಸೂಚ್ಯಂಕವು 23,500 ಅಂಕ ದಾಟಿತ್ತು. ಸೆನ್ಸೆಕ್ಸ್ 740.76 ಅಂಕ ಅಥವಾ ಶೇಕಡ 0.97ರಷ್ಟು ಏರಿಕೆ ಕಂಡು 77,500.57 ಅಂಕಕ್ಕೆ ವಹಿವಾಟು ಮುಗಿಸಿತ್ತು. ನಿಫ್ಟಿ 50 ಸೂಚ್ಯಂಕವವು 258.90 ಅಂಕಗಳು ಅಥವಾ ಶೇಕಡ 1.11 ರಷ್ಟು ಏರಿಕೆ ಕಂಡು 23,508.40ಕ್ಕೆ ವಹಿವಾಟು ಮುಗಿಸಿತ್ತು.
