ಬ್ಯಾಂಕುಗಳಿಗೆ ಇನ್ನು ಬ್ಯಾಂಕ್ ಡಾಟ್ ಇನ್, ಫಿನ್ ಡಾಟ್ ಇನ್ ಡೊಮೈನ್, ಸೈಬರ್ ಹಣಕಾಸು ವಂಚನೆ ತಡೆಗೆ ಆರ್‌ಬಿಐ ಹೊಸ ಉಪಕ್ರಮ
ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಹೆಸರಲ್ಲಿ ನಡೆಯುವ ಸೈಬರ್ ಹಣಕಾಸು ವಂಚನೆ ತಡೆಯುವುದಕ್ಕೆ ಆರ್‌ಬಿಐ ಮುಂದಾಗಿದೆ. ಬ್ಯಾಂಕುಗಳಿಗೆ ಇನ್ನು bank.in, ಹಾಗೂ ಇತರೆ ಹಣಕಾಸು ಸಂಸ್ಥೆಗಳಿಗೆ fin.in ಡೊಮೈನ್ ಬರಲಿದೆ.

ನವದೆಹಲಿ: ಸೈಬರ್ ಹಣಕಾಸು ವಂಚನೆ ತಡೆಯುವುದಕ್ಕಾಗಿ ಶೀಘ್ರದಲ್ಲೇ ಬ್ಯಾಂಕುಗಳಿಗೆ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ವಿಶೇಷವಾಗಿ ಬ್ಯಾಂಕ್ ಡಾಟ್ ಇನ್ ಮತ್ತು ಫಿನ್ ಡಾಟ್ ಇನ್ (bank.in, fin.in) ಡೊಮೈನ್‌ಗಳನ್ನು ಒದಗಿಸುವುದಕ್ಕೆ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಸಂಜೀವ್ ಮಲ್ಹೋತ್ರಾ ಶುಕ್ರವಾರ (ಫೆ 7) ಘೋಷಿಸಿದರು. ಈ ಪೈಕು ಬ್ಯಾಂಕುಗಳಿಗೆ bank.in ಮತ್ತು ಬ್ಯಾಂಕುಗಳಿಗೆ ಹೊರತಾದ ಹಣಕಾಸು ಸಂಸ್ಥೆಗಳಿಗೆ fin.in ಡೊಮೈನ್ ಒದಗಿಸಲು ಆರ್‌ಬಿಐ ಮುಂದಾಗಿದೆ. ಇದು ಸೈಬರ್ ಹಣಕಾಸು ವಂಚನೆ ತಡೆಯಲು ಮತ್ತು ಆನ್‌ಲೈನ್‌ನಲ್ಲಿ ಹೆಚ್ಚಿನ ಹಣಕಾಸು ಸುರಕ್ಷೆಯನ್ನುಖಾತರಿಪಡಿಸಲು ನೆರವಾಗಲಿದೆ ಎಂದು ಆರ್‌ಬಿಐ ಹೇಳಿದೆ.
ಬ್ಯಾಂಕುಗಳಿಗೆ ಇನ್ನು ಬ್ಯಾಂಕ್ ಡಾಟ್ ಇನ್, ಫಿನ್ ಡಾಟ್ ಇನ್ ಡೊಮೈನ್ ಹಂಚಿಕೆ
ಪ್ರಸಕ್ತ ಹಣಕಾಸು ವರ್ಷದ ಕೊನೆಯ ದ್ವೈಮಾಸಿಕ ವಿತ್ತೀಯ ನೀತಿಯ ನಿರ್ಧಾರಗಳನ್ನು ಪ್ರಕಟಿಸುವಾಗ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ವಿವರ ನೀಡಿದರು. bank.in ಗಾಗಿ ಇರುವ ನೋಂದಣಿ 2025ರ ಏಪ್ರಿಲ್‌ನಿಂದ ಆರಂಭವಾಗಲಿದೆ. ಅದೇ ರೀತಿ ಬ್ಯಾಂಕುಗಳಿಗೆ ಹೊರತಾದ ಹಣಕಾಸು ಸಂಸ್ಥೆಗಳಿಗೆ ಬೇಕಾದ fin.in ಡೊಮೈನ್ ನೋಂದಣಿ ಕೂಡ ಏಪ್ರಿಲ್‌ನಲ್ಲೇ ಶುರುವಾಗಲಿದೆ ಎಂದು ವಿವರಿಸಿದರು. ಈ ನಿರ್ಧಾರವು ಹಣಕಾಸು ವಲಯದಲ್ಲಿ ನಂಬಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ ಅವರು, ಡಿಜಿಟಲ್ ಪಾವತಿಗಳಲ್ಲಿ ವಂಚನೆಯ ನಿದರ್ಶನಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಈ ಸೈಬರ್ ಹಣಕಾಸು ವಂಚನೆಗಳನ್ನು ಎದುರಿಸಲು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಭಾರತೀಯ ಬ್ಯಾಂಕುಗಳಿಗಾಗಿ 'ಬ್ಯಾಂಕ್.ಇನ್' ಎಂಬ ವಿಶೇಷ ಇಂಟರ್ನೆಟ್ ಡೊಮೇನ್ ಅನ್ನು ಪರಿಚಯಿಸುತ್ತಿದೆ. ಈ ಉಪಕ್ರಮವು ಸೈಬರ್ ಭದ್ರತಾ ಬೆದರಿಕೆಗಳು ಮತ್ತು ಫಿಶಿಂಗ್ ಮತ್ತು ಸ್ಟ್ರೀಮ್‌ಲೈನ್ ಸುರಕ್ಷಿತ ಹಣಕಾಸು ಸೇವೆಗಳಂತಹ ದುರುದ್ದೇಶಪೂರಿತ ಚಟುವಟಿಕೆಗಳನ್ನು ಕಡಿಮೆ ಮಾಡಲಿದೆ ಎಂದು ಆರ್‌ಬಿಐ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
ಡೊಮೈನ್ ರಿಜಿಸ್ಟರ್ ಮಾಡಿಸುವ ಕೆಲಸವನ್ನು ದ ಇನ್‌ಸ್ಟಿಟ್ಯೂಟ್ ಫಾರ್ ಡೆವಲಪ್‌ಮೆಂಟ್ ಆಂಡ್ ರಿಸರ್ಚ್ ಇನ್ ಬ್ಯಾಂಕಿಂಗ್ ಟೆಕ್ನಾಲಜಿ ನೆರವೇರಿಸಲಿದೆ. ಇದುವೇ ಡೊಮೈನ್‌ಗಳಿಗಾಗಿ ವಿಶೇಷ ರಿಜಿಸ್ಟ್ರಾರ್ ಆಗಿ ಕೆಲಸ ಮಾಡಲಿದೆ. ಫಾರಿನ್ ಕಾರ್ಡ್ ನೋಟ್ ಪ್ರೆಸೆಂಟ್ ವಹಿವಾಟುಗಳಲ್ಲಿ ಹೆಚ್ಚುವರಿ ದೃಢೀಕರಣ ಅಂಶಗಳನ್ನು ಪರಿಚಯಿಸಲು ಆರ್‌ಬಿಐ ನಿರ್ಧರಿಸಿದೆ.
ರೆಪೋ ದರ ಇಳಿಕೆ ಮಾಡಿದ ಆರ್‌ಬಿಐ, ಜಿಡಿಪಿ ಬೆಳವಣಿಗೆ ಶೇಕಡ 6.7
ಮುಂಬರುವ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 6.7 ರಷ್ಟು ಏರಿಕೆಯಾಗಲಿದೆ ಎಂದು ರಿಸರ್ವ್ ಬ್ಯಾಂಕ್ ಇಂದು ಭವಿಷ್ಯ ನುಡಿದಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 6.4 ರಷ್ಟಿದೆ. ಕೇಂದ್ರ ಬಜೆಟ್ 2025-26ರಲ್ಲಿ ತೆರಿಗೆ ವಿನಾಯಿತಿ ಪ್ರಕಟಿಸಿದ್ದು, ಅದರ ಮೂಲಕ ಮನೆ ಬಳಕೆಯ ಖರ್ಚು ವೆಚ್ಚಗಳ ಸಾಮರ್ಥ್ಯ ದೃಢವಾಗಿ ಉಳಿಯುವ ನಿರೀಕ್ಷೆ ಇದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದರು. ಇದಕ್ಕೆ ಪೂರಕವಾಗಿ ಐದು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಸಲ ರೆಪೋ ದರಗಳನ್ನು ಇಳಿಕೆ ಮಾಡಲಾಗಿದೆ ಎಂದು ಆರ್‌ಬಿಐ ವಿತ್ತೀಯ ಸಮಿತಿಯ ನೀತಿಯನ್ನು ಪ್ರಕಟಿಸಿದರು.
ರಿಸರ್ವ್ ಬ್ಯಾಂಕಿನ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ಮಲ್ಹೋತ್ರಾ ಅಧ್ಯಕ್ಷತೆಯಲ್ಲಿ, ಮಾನದಂಡದ ಮರುಖರೀದಿ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ 6.25 ಪ್ರತಿಶತಕ್ಕೆ ಇಳಿಸಲು ಸರ್ವಾನುಮತದಿಂದ ಮತ ಚಲಾಯಿಸಿತು, ಇದು ಮೇ 2020 ರ ನಂತರದ ಮೊದಲ ಕಡಿತವಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ 6 ಸದಸ್ಯರ ವಿತ್ತೀಯ ನೀತಿ ಸಮಿತಿಯ ಎರಡು ದಿನಗಳ ದ್ವೈಮಾಸಿಕ ಸಭೆ ನಡೆಸಿದ್ದು, ರೆಪೋ ರೇಟ್ ಅನ್ನು 25 ಮೂಲಾಂಶ ತಗ್ಗಿಸುವ ತೀರ್ಮಾನ ತೆಗೆದುಕೊಂಡಿತು. ಇದರಂತೆ ಈಗ ರೆಪೋದರ ಶೇ 6.25 ಆಗಿದೆ. 2020ರ ಮೇ ತಿಂಗಳ ನಂತರದಲ್ಲಿ ರೆಪೋದರವನ್ನು ಸ್ಥಿರವಾಗಿ ಕಾಪಾಡಿಕೊಂಡುಬರಲಾಗಿತ್ತು.
