ಬೆಂಗಳೂರು ಕಚೇರಿಯಲ್ಲಿ 180 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಅಮೆರಿಕದ ಬೋಯಿಂಗ್, ಜಾಗತಿಕವಾಗಿ ಉದ್ಯೋಗ ಕಡಿತ ಕೈಗೊಂಡ ಕಂಪನಿ
Boeing Layoffs: ಅಮೆರಿಕದ ಬೋಯಿಂಗ್ ಕಂಪನಿ ತನ್ನ ಬೆಂಗಳೂರು ಕಚೇರಿಯ 180 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಇದು ಜಾಗತಿಕ ಉದ್ಯೋಗ ಕಡಿತ ಕ್ರಮದ ಭಾಗವಾಗಿ ನಡೆಸಿದ್ದಾಗಿ ಕಂಪನಿ ಮೂಲಗಳು ಹೇಳಿಕೊಂಡಿದೆ.

Boeing Layoffs: ಅಮೆರಿಕದ ಪ್ರಮುಖ ವಿಮಾನ ನಿರ್ಮಾಣ ಕಂಪನಿ ಬೋಯಿಂಗ್ ತನ್ನ ಜಾಗತಿಕ ಉದ್ಯೋಗ ಕಡಿತ ಭಾಗವಾಗಿ ಬೆಂಗಳೂರಿನ ಎಂಜಿನಿಯರಿಂಗ್ ಟೆಕ್ನಾಲಜಿ ಸೆಂಟರ್‌ನ 180 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಬೋಯಿಂಗ್ ಕಳೆದ ವರ್ಷವೇ ಜಾಗತಿಕ ಉದ್ಯೋಗಿ ಸಂಖ್ಯೆಯನ್ನು ಶೇಕಡ 10 ಕಡಿಮೆ ಮಾಡುವುದಾಗಿ ಘೋಷಿಸಿತ್ತು. ಅದರ ಭಾಗವಾಗಿ ಈ ಕ್ರಮವನ್ನು ಕಂಪನಿ ಜರುಗಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ಮೂಲಗಳು ನೀಡಿದ ಮಾಹಿತಿ ಆಧರಿಸಿ ವರದಿ ಮಾಡಿದೆ.
ಬೆಂಗಳೂರು ಕಚೇರಿಯಲ್ಲಿ 180 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಬೋಯಿಂಗ್
ಬೋಯಿಂಗ್ ಕಂಪನಿ ಜಾಗತಿಕವಾಗಿ ತನ್ನ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡುವುದಾಗಿ ಘೋಷಿಸಿತ್ತು. ಇದರ ಭಾಗವಾಗಿ ಈಗ ಬೆಂಗಳೂರಿನ ಎಂಜಿನಿಯರಿಂಗ್ ಟೆಕ್ನಾಲಜಿ ಸೆಂಟರ್‌ನ 180 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಭಾರತದಲ್ಲಿ ಬೋಯಿಂಗ್ ಕಂಪನಿ ಉದ್ಯೋಗಿಗಳ ಸಂಖ್ಯೆ 7000ದ ಆಸುಪಾಸಿನಲ್ಲಿದೆ. ಕಂಪನಿಯ ಭಾರತದಲ್ಲಿ ವಿಶೇಷವಾಗಿ ಬೆಂಗಳೂರಿನ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಟೆಕ್ನಾಲಜಿ ಸೆಂಟರ್‌ನ 180 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದೆ. ಡಿಸೆಂಬರ್ ಕೊನೆಯಲ್ಲಿ ಈ ಕ್ರಮ ತೆಗೆದುಕೊಂಡಿದ್ದು, ಅದರ ವಿವರ ಈಗ ಬಹಿರಂಗವಾಗಿದೆ, ಈ ವಿಚಾರವಾಗಿ ಬೋಯಿಂಗ್ ಅಧಿಕೃತ ಹೇಳಿಕೆ ಪ್ರಕಟಿಸಿಲ್ಲ.
ಉದ್ಯೋಗಿ ಸಂಖ್ಯೆ ಇಳಿಸಿದ್ದರಿಂದ ಕೆಲಸದ ಮೇಲೆ ಪರಿಣಾಮ ಇಲ್ಲ ಎಂದ ಕಂಪನಿ ಮೂಲಗಳು
ಉದ್ಯೋಗಿಗಳ ಸಂಖ್ಯೆ ಇಳಿಸುವ ಕ್ರಮವು ಕಂಪನಿಯ ವ್ಯೂಹಾತ್ಮಕ ಹೊಂದಾಣಿಕೆಯ ಭಾಗವಾಗಿ ಇರುವಂಥದ್ದು. ಕಂಪನಿ ಕೆಲಸದ ಮೇಲೆ ಕಡಿಮೆ ಪರಿಣಾಮ ಬೀರುವಂತಹ ಹುದ್ದೆಗಳನ್ನು ಪರಿಶೀಲಿಸಿ, ಅಂತಹ ಹುದ್ದೆಗಳಲ್ಲಿದ್ದವರನ್ನು ಮನೆಗೆ ಕಳುಹಿಸಲಾಗಿದೆ. ಇದರಿಂದಾಗಿ ಕಂಪನಿಯ ಕೆಲಸದ ಮೇಲೆ ಪರಿಣಾಮ ಉಂಟಾಗಲ್ಲ. ಗ್ರಾಹಕ ಸೇವೆ ಅಥವಾ ಆಡಳಿತ ವಿಭಾಗದಲ್ಲಿ ಕೂಡ ಈ ಹುದ್ದೆಗಳ ನಷ್ಟದಿಂದ ವ್ಯತಿರಿಕ್ತ ಪರಿಣಾಮ ಉಂಟಾಗಿಲ್ಲ ಎಂದು ಕಂಪನಿ ಮೂಲಗಳು ಸ್ಪಷ್ಟಪಡಿಸಿವೆ.
ಕೆಲವು ಹುದ್ದೆಗಳನ್ನು ರದ್ದುಗೊಳಿಸಿದ್ದು, ಇನ್ನು ಕೆಲವು ಹೊಸ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಭಾರತದಲ್ಲಿ ಉದ್ಯೋಗಿಗಳ ವಜಾಗೊಳಿಸುವಿಕೆ ಅಳೆದು ತೂಗಿ ತೆಗೆದುಕೊಂಡ ನಿರ್ಧಾರ. ಇದು ಗ್ರಾಹಕ ಸೇವೆ, ಸುರಕ್ಷಿತ ಹಾಗೂ ಗುಣಮಟ್ಟ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡೇ ಕೈಗೊಂಡ ನಿರ್ಧಾರ ಎಂದು ಮೂಲಗಳು ತಿಳಿಸಿವೆ.
ಅಮೆರಿಕದ ಬೋಯಿಂಗ್ ಕಂಪನಿಯ ಅಧೀನ ಕಂಪನಿಯಾಗಿರುವ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಸೆಂಟರ್ (ಬಿಐಇಟಿಸಿ) ಬೆಂಗಳೂರು ಹಾಗೂ ಚೆನ್ನೈನಲ್ಲಿ ಸಂಕೀರ್ಣ ಸುಧಾರಿತ ಏರೋಸ್ಪೇರ್ ಕೆಲಸಗಳನ್ನು ನಿರ್ವಹಿಸುತ್ತಿದೆ. ಬೆಂಗಳೂರಿನ ಬಿಐಇಟಿಸಿ ಕ್ಯಾಂಪಸ್ ಬೋಯಿಂಗ್ ಕಂಪನಿ ವಿದೇಶದಲ್ಲ ಹೊಂದಿರುವ ಪೂರ್ಣ ಪ್ರಮಾಣದ ಹೂಡಿಕೆಯದ್ದಾಗಿದೆ. ಭಾರತದ ಈ ಕ್ಯಾಂಪಸ್‌ನಿಂದಲೇ ಬೋಯಿಂಗ್ ತನ್ನ 300ಕ್ಕೂ ಹೆಚ್ಚು ಪೂರೈಕೆದಾರರಿಗೆ 1.25 ಶತಕೋಟಿ ಡಾಲರ್ ಮೌಲ್ಯದ ಸೇವೆಗಳನ್ನು ಒದಗಿಸುತ್ತಿರುವುದಾಗಿ ಹೇಳಿಕೊಂಡಿದೆ.
