ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್; ಶೇ 3ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ, ಪಿಂಚಣಿದಾರರಿಗೂ ಶುಭಸುದ್ದಿ
DA and DR hike: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಡಿಎ ಹಾಗೂ ಡಿಆರ್ ಹೆಚ್ಚಳದ ಘೋಷಣೆ ಮಾಡಿದ್ದಾರೆ. ದೀಪಾವಳಿ ಹಬ್ಬಕ್ಕೂ ಮುನ್ನ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಶುಭಸುದ್ದಿ ಸಿಕ್ಕಿದೆ. ಇದರಿಂದ ಸರಿಸುಮಾರು 49.18 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 64.89 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.

ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಶೇ.3 ರಷ್ಟು ತುಟ್ಟಿಭತ್ಯೆ (ಡಿಎ) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 3 ಪ್ರತಿಶತ ತುಟ್ಟಿಭತ್ಯೆ (DA) ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇದರೊಂದಿಗೆ ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ (ಡಿಆರ್) ದೀಪಾವಳಿ ಹಬ್ಬಕ್ಕೂ ಮುನ್ನ ಭರ್ಜರಿ ಬಹುಮಾನ ಸಿಕ್ಕಂತಾಗಿದೆ.
ಈ ಹಿಂದೆ ತುಟ್ಟಿಭತ್ಯೆ ಹೆಚ್ಚಳವಾದಾಗ, ಸರ್ಕಾರಿ ನೌಕರರು ಮೂಲ ವೇತನದ 50 ಪ್ರತಿಶತ ಡಿಎ ಪಡೆಯುತ್ತಿದ್ದರು. ಇದೀಗ ಈ ಪ್ರಮಾಣವು 53 ಪ್ರತಿಶತಕ್ಕೆ ಏರಿಕೆಯಾಗಿದೆ. ಈಗಾಗಲೇ ನವರಾತ್ರಿ, ದಸರಾ ಎಂದು ಸಾಲು ಸಾಲು ಹಬ್ಬಗಳು ಬಂದಿದ್ದು, ಮುಂದೆ ದೀಪಾವಳಿ ಸಂಭ್ರಮ ಇರಲಿದೆ. ಹಬ್ಬದ ಋತುವಿಗೂ ಮುಂಚಿತವಾಗಿ ಸರ್ಕಾರ ಆರ್ಥಿಕ ಪರಿಹಾರವನ್ನು ನೀಡಲು ಮುಂದಾಗಿದೆ. ಈ ನಿರ್ಧಾರದಿಂದ ಸರಿಸುಮಾರು 49.18 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 64.89 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.
ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಈ ಘೋಷಣೆ ಮಾಡಿದ್ದು, ಸುಮಾರು ಒಂದು ಕೋಟಿ ನೌಕರರಿಗೆ ಪ್ರಯೋಜನ ಸಿಗಲಿದೆ. ಏರುತ್ತಿರುವ ಹಣದುಬ್ಬರದ ಮಧ್ಯೆ ಈ ಹೆಚ್ಚಳವು ಸಕಾಲಿಕ ಪರಿಹಾರ ಕೊಡಲಿದೆ.
ಈ ಬಾರಿ ತಡವಾಗಿ ಹೆಚ್ಚಳ
ಸರ್ಕಾರವು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ DA ಪರಿಷ್ಕರಿಸುತ್ತದೆ. ಅದು ಜನವರಿ ಮತ್ತು ಜುಲೈನಲ್ಲಿ. ಆದರೆ ಈ ಬಾರಿ ಜುಲೈನಲ್ಲಿ ಮಾಡಬೇಕಾಗಿದ್ದ ವರ್ಷ ಪರಿಷ್ಕರಣೆ ವಿಳಂಬವಾಯಿತು. ಆದರೂ, ಈ ಹೆಚ್ಚಳ ಪ್ರಮಾಣವು ಕಳೆದ ಜುಲೈ 1ಕ್ಕೆ ಅನ್ವಯವಾಗಲಿದೆ. ಅಂದರೆ ನೌಕರರು ಮತ್ತು ಪಿಂಚಣಿದಾರರು ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಬಾಕಿಯನ್ನು (Arears) ಪಡೆಯುತ್ತಾರೆ. ತಿಂಗಳಿಗೆ18,000 ರೂಪಾಯಿ ಮೂಲ ವೇತನ ಹೊಂದಿರುವ ಸರ್ಕಾರಿ ಉದ್ಯೋಗಿಗೆ, ಈ ಹೆಚ್ಚಳದ ಪ್ರಕಾರ ಟೇಕ್-ಹೋಮ್ ವೇತನವು 540 ರೂ ಹೆಚ್ಚಳವಾಗುತ್ತದೆ.
7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. DA ಮತ್ತು DR ಹೆಚ್ಚಳದಿಂದ ಸರ್ಕಾರದ ಬೊಕ್ಕಸದ ಮೇಲೆ ವಾರ್ಷಿಕವಾಗಿ ಒಟ್ಟು 9,448.35 ಕೋಟಿ ರೂ ಆರ್ಥಿಕ ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ.