ಟಿಕೆಟ್ ಬುಕ್ಕಿಂಗ್ ಅವಧಿ ಇಳಿಕೆ: ಇನ್ನು 120 ದಿನ ಮುಂಚಿತವಾಗಿ ರೈಲು ಟಿಕೆಟ್ ಬುಕ್‌ ಮಾಡುವಂತೆ ಇಲ್ಲ, 60 ದಿನ ಮುಂಚಿತವಾಗಿ ಮಾಡಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಟಿಕೆಟ್ ಬುಕ್ಕಿಂಗ್ ಅವಧಿ ಇಳಿಕೆ: ಇನ್ನು 120 ದಿನ ಮುಂಚಿತವಾಗಿ ರೈಲು ಟಿಕೆಟ್ ಬುಕ್‌ ಮಾಡುವಂತೆ ಇಲ್ಲ, 60 ದಿನ ಮುಂಚಿತವಾಗಿ ಮಾಡಿ

ಟಿಕೆಟ್ ಬುಕ್ಕಿಂಗ್ ಅವಧಿ ಇಳಿಕೆ: ಇನ್ನು 120 ದಿನ ಮುಂಚಿತವಾಗಿ ರೈಲು ಟಿಕೆಟ್ ಬುಕ್‌ ಮಾಡುವಂತೆ ಇಲ್ಲ, 60 ದಿನ ಮುಂಚಿತವಾಗಿ ಮಾಡಿ

ರೈಲು ಟಿಕೆಟ್ ಬುಕ್ಕಿಂಗ್ ಅವಧಿ ಇಳಿಕೆ ಸಂಬಂಧ ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ. ಇದರಂತೆ, ಇನ್ನು 120 ದಿನ ಮುಂಚಿತವಾಗಿ ರೈಲು ಟಿಕೆಟ್ ಬುಕ್‌ ಮಾಡುವಂತೆ ಇಲ್ಲ, 60 ದಿನ ಮುಂಚಿತವಾಗಿ ಮಾಡಬಹುದಷ್ಟೆ. ಈ ನಿಯಮ ಯಾವಾಗದಿಂದ ಜಾರಿ, ಇದುವರೆಗೆ ಬುಕ್ ಆಗಿರುವ ಟಿಕೆಟ್‌ಗಳದ್ದು ಏನು ಕಥೆ ಎಂಬಿತ್ಯಾದಿ ವಿವರ ಇಲ್ಲಿದೆ.

ಟಿಕೆಟ್ ಬುಕ್ಕಿಂಗ್ ಅವಧಿ ಇಳಿಕೆಯಾಗಿದೆ. ಇನ್ನು 120 ದಿನ ಮುಂಚಿತವಾಗಿ ರೈಲು ಟಿಕೆಟ್ ಬುಕ್‌ ಮಾಡುವಂತೆ ಇಲ್ಲ, 60 ದಿನ ಮುಂಚಿತವಾಗಿ ಮಾಡಿ. (ಸಾಂಕೇತಿಕ ಚಿತ್ರ)
ಟಿಕೆಟ್ ಬುಕ್ಕಿಂಗ್ ಅವಧಿ ಇಳಿಕೆಯಾಗಿದೆ. ಇನ್ನು 120 ದಿನ ಮುಂಚಿತವಾಗಿ ರೈಲು ಟಿಕೆಟ್ ಬುಕ್‌ ಮಾಡುವಂತೆ ಇಲ್ಲ, 60 ದಿನ ಮುಂಚಿತವಾಗಿ ಮಾಡಿ. (ಸಾಂಕೇತಿಕ ಚಿತ್ರ)

ನವದೆಹಲಿ: ಪ್ಯಾಸೆಂಜರ್ ರೈಲುಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಅವಧಿಯನ್ನು ಈಗ ಇರುವ 120 ದಿನಗಳಿಂದ 60 ದಿನಗಳಿಗೆ ಇಳಿಸುವುದಾಗಿ ಭಾರತೀಯ ರೈಲ್ವೆ ಘೋಷಿಸಿದೆ. ಐಆರ್‌ಸಿಟಿಸಿ ಮೂಲಕ ರೈಲು ಟಿಕೆಟ್ ಬುಕ್ ಮಾಡುವಾಗ ಇನ್ನು 120 ದಿನ ಮೊದಲೇ ಟಿಕೆಟ್‌ ಬುಕ್ ಮಾಡಲಾಗದು. 60 ದಿನ ಮುಂಚಿತವಾಗಿ ಮಾತ್ರವೇ ಟಿಕೆಟ್ ಬುಕ್ ಮಾಡುವ ಅವಕಾಶ ಇರಲಿದೆ. ರೈಲ್ವೆ ಮಂಡಳಿಯ ಪ್ರಯಾಣಿಕ ಮಾರುಕಟ್ಟೆ ವಿಭಾಗದ ನಿರ್ದೇಶಕ ಸಂಜಯ್ ಮನೋಚಾ ಈ ವಿಷಯವನ್ನು ದೃಢಪಡಿಸಿದ್ದಾರೆ. ಈಗಾಗಲೇ ಟಿಕೆಟ್ ಬುಕ್‌ ಮಾಡಿದವರಿಗೆ ಮತ್ತು ವಿದೇಶಿ ಪ್ರವಾಸಿಗರಿಗೆ ಸಂಬಂಧಿಸಿದ ನಿಯಮದಲ್ಲಿ ಬದಲಾವಣೆಯ ಪರಿಣಾಮ ಏನು ಎಂಬಿತ್ಯಾದಿ ವಿವರಗಳನ್ನು ತಿಳಿಯೋಣ.

ವಿದೇಶಿ ಪ್ರವಾಸಿಗರಿಗೆ ನಿಯಮ ಅನ್ವಯವಾಗಲ್ಲ

"ಇದೇ ಅಕ್ಟೋಬರ್ 31 ರವರೆಗೆ 120 ದಿನಗಳ ಮುಂಗಡ ಮೀಸಲಾತಿ ಅವಧಿ ಪ್ರಕಾರ ಮಾಡಿದ ಎಲ್ಲಾ ಬುಕಿಂಗ್‌ಗಳು ಹಾಗೆಯೇ ಉಳಿಯುತ್ತವೆ. ಆದರೆ, 60 ದಿನಗಳ ಮುಂಗಡ ಮೀಸಲು ಅವಧಿ ಮೀರಿ ಮಾಡಿದ ಬುಕಿಂಗ್‌ಗಳನ್ನು ರದ್ದುಗೊಳಿಸಲು ಅನುಮತಿಸಲಾಗುತ್ತದೆ. ಮುಂಗಡ ಕಾಯ್ದಿರಿಸುವಿಕೆಗೆ ಕಡಿಮೆ ಮಿತಿಗಳು ಈಗಾಗಲೇ ಜಾರಿಯಲ್ಲಿರುವ ತಾಜ್ ಎಕ್ಸ್‌ಪ್ರೆಸ್, ಗೋಮತಿ ಎಕ್ಸ್‌ಪ್ರೆಸ್ ಮುಂತಾದ ಕೆಲವು ಹಗಲಿನ ಎಕ್ಸ್‌ಪ್ರೆಸ್ ರೈಲುಗಳ ಬುಕ್ಕಿಂಗ್‌ಗೆ ಅನ್ವಯವಾಗುವುದಿಲ್ಲ. ಅದೇ ರೀತಿ ವಿದೇಶಿ ಪ್ರವಾಸಿಗರಿಗೆ 365 ದಿನಗಳ ಮಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಂಜಯ್ ಮನೋಚಾ ಹೇಳಿದ್ದಾಗಿ ಇಂಡಿಯಾ ಟಿವಿ ವರದಿ ಮಾಡಿದೆ.

ನವೆಂಬರ್ 1 ರಿಂದ ಹೊಸ ನಿಯಮ ಜಾರಿಗೆ

ರೈಲು ಟಿಕೆಟ್ ಮುಂಗಡ ಬುಕ್ಕಿಂಗ್ ಅವಧಿ 60 ದಿನಕ್ಕೆ ಇಳಿಕೆ ಮಾಡಿದ ನಿಯಮ ನವೆಂಬರ್ 1 ರಿಂದ ಜಾರಿಗೆ ಬರಲಿದೆ. ಹಳೆ ನಿಯಮ ಮತ್ತು ಹೊಸ ನಿಯಮಗಳನ್ನು ಅರ್ಥ ಮಾಡಿಕೊಳ್ಳಲು ಈ ಉದಾಹರಣೆಯನ್ನು ಗಮನಿಸಬಹುದು.

ದೂರದ ಪ್ರಯಾಣಕ್ಕಾಗಿ ಅಥವಾ ಮದುವೆ, ಹಬ್ಬ, ಪರೀಕ್ಷೆ ಮುಂತಾದ ಯಾವುದೇ ವಿಶೇಷ ಉದ್ದೇಶಕ್ಕಾಗಿ ರೈಲಿನಲ್ಲಿ ಪ್ರಯಾಣಿಸುವವರು ದೃಢೀಕೃತ ಸೀಟು ಪಡೆಯಲು 4 ತಿಂಗಳ ಮುಂಚಿತವಾಗಿ ರೈಲುಗಳಲ್ಲಿ ಸೀಟುಗಳನ್ನು ಕಾಯ್ದಿರಿಸುತ್ತಿದ್ದರು. ಆದರೆ ಇನ್ನು ಮುಂದೆ ಹೊಸ ನಿಯಮ ಪ್ರಕಾರ ಇದು ಸಾಧ್ಯವಾಗುವುದಿಲ್ಲ. ರೈಲ್ವೆ ಪ್ರಯಾಣಿಕರು ಗರಿಷ್ಠ 2 ತಿಂಗಳ ಅಂದರೆ 60 ದಿನಗಳ ಮಿತಿಯೊಳಗೆ ಮಾತ್ರ ರೈಲು ಟಿಕೆಟ್ ಬುಕ್ ಮಾಡಬಹುದು.

ಉದಾಹರಣೆಗೆ, ಹಳೆಯ ನಿಯಮದ ಪ್ರಕಾರ, ನೀವು ಮೇ 1, 2025 ರಂದು ಚಲಿಸುವ ರೈಲಿಗೆ ಟಿಕೆಟ್ ಕಾಯ್ದಿರಿಸಬೇಕಾದರೆ, ನೀವು 120 ದಿನಗಳ ಮುಂಚಿತವಾಗಿ ಅಂದರೆ 2025ರ ಜನವರಿ 1 ರಂದು ಟಿಕೆಟ್ ಅನ್ನು ಬುಕ್ ಮಾಡಬಹುದಿತ್ತು. ಆದರೆ ಈಗ ಹೊಸ ನಿಯಮದ ಅನುಷ್ಠಾನದ ನಂತರ, ನೀವು 2025ರ ಮೇ 1 ರಂದು ಚಲಿಸುವ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಲು ಬಯಸಿದರೆ, ಈಗ ನೀವು ಗರಿಷ್ಠ 60 ದಿನಗಳ ಮುಂಚಿತವಾಗಿ ಅಂದರೆ ಮಾರ್ಚ್ 2 ರಂದು ಟಿಕೆಟ್ ಬುಕ್ ಮಾಡಬಹುದಾಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.