ನವದೆಹಲಿಯಲ್ಲಿ ನಂದಿನಿ ಹಾಲಿನ ಹವಾ; ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಹಾಲು ಪೂರೈಕೆ, ಕೆಎಂಎಫ್ ನಂದಿನಿಗೆ ದೆಹಲಿಗರು ಫಿದಾ
KMF Nandini Milk: ನವದೆಹಲಿಯಲ್ಲಿ ನಂದಿನಿ ಹಾಲಿನ ಹವಾ ಜೋರಾಗಿದ್ದು, ನಿಧಾನವಾಗಿ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ವಿಸ್ತರಿಸತೊಡಗಿದೆ. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡುತ್ತಿರುವ ಕಾರಣ ಕೆಎಂಎಫ್ ನಂದಿನಿಗೆ ದೆಹಲಿಗರು ಫಿದಾ ಆಗಿರುವುದು ಕಂಡುಬಂದಿದೆ. ಇಲ್ಲಿದೆ ವರದಿಯ ವಿವರ.
KMF Nandini Milk: ಭಾರತದ ರಾಜಧಾನಿ ನವದೆಹಲಿಯಲ್ಲಿ ಕೆಎಂಎಫ್ ನಂದಿನಿ ಹಾಲಿನ ಹವಾ ಶುರುವಾಗಿದೆ. ಹಾಲು ಮಾರುಕಟ್ಟೆಯಲ್ಲಿ ಗುಜರಾತ್‌ನ ಅಮೂಲ್, ಮದರ್ ಡೇರಿ, ನಮಸ್ತೆ ಇಂಡಿಯಾ, ಮಧುಸೂದನ್ ಬ್ರ್ಯಾಂಡ್‌ನ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಪೈಪೋಟಿ ನೀಡಲು ಕೆಎಂಎಫ್ ಈಗಾಗಲೇ ನಂದಿನ ಬ್ರ್ಯಾಂಡ್ ಹಾಲು, ಹಾಲಿನ ಉತ್ಪನ್ನಗಳನ್ನು ಪೂರೈಕೆ ಮಾಡಲಾರಂಭಿಸಿದೆ. ಮೊದಲ ದಿನವೇ 10 ಸಾವಿರ ಲೀಟರ್ ನಂದಿನಿ ಸ್ಯಾಚೆಟ್ ಹಾಲು ಮಾರಾಟವಾಗಿದ್ದು, ಉತ್ತಮ ಆರಂಭವನ್ನು ಒದಗಿಸಿದೆ ಎಂದು ಕೆಎಂಎಫ್ ಮೂಲಗಳು ತಿಳಿಸಿದ್ದಾಗಿ ವಿಜಯ ಕರ್ನಾಟಕ ವರದಿ ಮಾಡಿದೆ. ವಾರದ ಹಿಂದೆ ನವದೆಹಲಿಗೆ ನಂದಿನಿ ಹಾಲು ಪೂರೈಕೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಕರ್ನಾಟಕದಲ್ಲಿ 16 ಹಾಲು ಉತ್ಪಾದಕರ ಒಕ್ಕೂಟಗಳಿದ್ದು 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಈ ಪೈಕಿ ಆಂಧ ಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ನಿತ್ಯವೂ ತಲಾ 2.5 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಇದೇ ರೀತಿ ಆರಂಭಿಕ ಹಂತದಲ್ಲಿ ದೆಹಲಿಗೂ 2.5 ಲಕ್ಷ ಲೀಟರ್ ಹಾಲು ಪೂರೈಕೆಯಾಗಲಿದ್ದು, ಮುಂದಿನ ಆರು ತಿಂಗಳ ಅವಧಿಯಲ್ಲಿ ಹಾಲು ಪೂರೈಕೆಯನ್ನು 5 ಲಕ್ಷ ಲೀಟರ್‌ಗೆ ಏರಿಸುವ ಯೋಜನೆ ಮತ್ತು ಗುರಿ ಇದೆ. ಮುಂದೆ ಹಾಲು ಮಾರುಕಟ್ಟೆಯನ್ನು ವಿಸ್ತರಿಸುವ ಯೋಜನೆಯೂ ಇದೆ ಎಂದು ಹೇಳಿದ್ದರು.
ನವದೆಹಲಿಯಲ್ಲಿ ನಂದಿನಿ ಹಾಲಿನ ಹವಾ; ದೆಹಲಿಯ ಹಾಲು ಮಾರುಕಟ್ಟೆ ಚಿತ್ರಣ ಹೀಗಿದೆ
ಸಹಕಾರ ಕ್ಷೇತ್ರದಿಂದ ಅತಿ ಹೆಚ್ಚು ಹಾಲು ಮಾರಾಟ ಮಾಡುತ್ತಿರುವ ದೇಶದ ಎರಡನೇ ಬ್ರ್ಯಾಂಡ್ ಕೆಎಂಎಫ್. ಪ್ರಸ್ತುತ ದೆಹಲಿಯ ಹಾಲು ಮಾರುಕಟ್ಟೆಗೆ ಗುಜರಾತ್‌ನ ಅಮುಲ್ 35 ಲಕ್ಷ ಲೀಟರ್, ಮದರ್ ಡೈರಿ 30 ಲಕ್ಷ ಲೀಟರ್ ಹಾಲು, ಮೊಸರು ಪೂರೈಕೆ ಮಾಡುತ್ತಿವೆ. ಇದೇ ರೀತಿ ಉತ್ತರ ಪ್ರದೇಶದ ನಮಸ್ತೆ ಇಂಡಿಯಾ, ಮಧುಸೂದನ್ ಕಂಪನಿಗಳು ತಲಾ 1.5 ಲಕ್ಷ ಲೀಟರ್ ಹಾಲು, ಮೊಸರುಗಳನ್ನು ಪೂರೈಸುತ್ತಿವೆ. ಸದ್ಯ ಆರಂಭಿಕ ಹಂತದಲ್ಲಿ 2.5 ಲಕ್ಷ ಲೀಟರ್‌ನೊಂದಿಗೆ ಹಾಲು, ಮೊಸರು ಪೂರೈಕೆ ಮಾಡುವ ಗುರಿ ಇಟ್ಟುಕೊಂಡಿದ್ದು, ಮುಂದೆ ಇದನ್ನು 5 ಲಕ್ಷ ಲೀಟರ್‌ಗೆ ಏರಿಕೆ ಮಾಡುವ ಕೆಎಂಎಫ್ ನಂದಿನಿ ಇರಿಸಿಕೊಂಡಿದೆ. ದೆಹಲಿಗೆ ಕೆಎಂಎಫ್ ಮತ್ತು ಮಂಡ್ಯ ಮನ್‌ಮುಲ್‌ನಿಂದಲೇ ಹಾಲು, ಮೊಸರು ಪೂರೈಕೆಯಾಗುತ್ತಿದೆ.
ನವದೆಹಲಿ ಮಾರುಕಟ್ಟೆಯಲ್ಲಿ ಕೆಎಂಎಫ್ ನಂದಿನಿ ಹಾಲು ಸ್ಯಾಚೆಟ್ ಮೂಲಕ 10 ಸಾವಿರ ಲೀಟರ್ ಮೊದಲ ದಿನವೇ ಮಾರಾಟವಾಗಿದೆ. ಹೋಟೆಲ್, ದರ್ಶಿನಿ, ಕ್ಯಾಂಟೀನ್‌ಗಳಿಗೆ ಎಂದು 6000 ಲೀಟರ್ ಸ್ಯಾಚೆಟ್ ಪೂರೈಕೆಯಾಗಿದೆ. ದೆಹಲಿಯಲ್ಲಿ ಅಮುಲ್, ಮದರ್ ಡೇರಿ ಹಾಲು, ಮೊಸರುಗಳಿಗೆ ಹೋಲಿಸಿದರೆ ಕೆಎಂಎಫ್ ನಂದಿನಿ ಹಾಲು, ಮೊಸರು ದರ ಕಡಿಮೆ. ಉತ್ತಮ ಗುಣಮಟ್ಟವನ್ನೂ ಹೊಂದಿರುವ ಕಾರಣ ದೆಹಲಿಗರ ಮನಗೆದ್ದಿದೆ. ಅಮುಲ್, ಮದರ್ ಡೇರಿ ಮತ್ತು ನಂದಿನಿ ಹಾಲುಗಳ ಬೇಡಿಕೆ ಸಮೀಕ್ಷೆ ನಡೆಸಿರುವ ಕೆಎಂಎಫ್, ಮುಂದಿನ ಕೆಲವೇ ತಿಂಗಳಲ್ಲಿ 70 ಸಾವಿರ ಲೀಟರ್ ಹಾಲು, ಮೊಸರು ಮಾರಾಟದ ಗುರಿ ಇರಿಸಿಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಒಂದೇ ತಿಂಗಳಲ್ಲಿ 50 ಸಾವಿರ ಲೀಟರ್ ಹಾಲು, ಮೊಸರು ಪೂರೈಕೆ ಮಾಡಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾಗಿ ವರದಿ ಹೇಳಿದೆ.
ಅಮುಲ್ ಮತ್ತು ಮದರ್ ಡೇರಿ ಎಮ್ಮೆ ಹಾಲು; ನಂದಿನಿ ಹಸುವಿನ ಹಾಲು
ನವದೆಹಲಿಯ ಮಾರುಕಟ್ಟೆಯಲ್ಲಿ ಹಸುವಿನ ಹಾಲಿಗೆ ಇರುವ ಬೇಡಿಕೆ ಗಮನಿಸಿ ಅದಕ್ಕೆ ಸ್ಪಂದಿಸಲು ಕೆಎಂಎಫ್ ನಿರ್ಧರಿಸಿದೆ. ದೆಹಲಿಯಲ್ಲಿ ಅಮುಲ್ ಮತ್ತು ಮದರ್ ಡೇರಿ ಎಮ್ಮೆ ಹಾಲು, ಮೊಸರು ಪೂರೈಸುತ್ತಿದೆ. ಆದ್ದರಿಂದ ನಂದಿನಿ ಹಸುವಿನ ಹಾಲು ಈಗ ಜನಮನ ಸೆಳೆಯತೊಡಗಿದೆ. ಕೆಎಂಎಫ್ ನಂದಿನಿ ಬ್ರ್ಯಾಂಡ್‌ನ ಹಸಿರು ಬಣ್ಣದ ಹಸುವಿನ ಹಾಲು, ಗುಲಾಬಿ ಬಣ್ಣದ ಸಮೃದ್ಧಿ ಪೂರ್ಣ ಕೆನೆ ತುಂಬಿದ ಹಾಲು, ನೀಲಿ ಬಣ್ಣದ ಸಂಪೂರ್ಣ ಎಂಬ ಟೋನ್ಡ್ ಹಾಲು ಪ್ಯಾಕೆಟ್‌ಗಳನ್ನು ದೆಹಲಿ ಮಾರುಕಟ್ಟೆ ಪೂರೈಸಲಾಗುತ್ತಿದೆ. ದೆಹಲಿ ಮಾರುಕಟ್ಟೆಯಲ್ಲಿ ಶುಭಂ ಹೆಸರಿನ ಕೇಸರಿ-ಬಿಳಿ ಬಣ್ಣದ ಪಾಕೆಟ್‌ನ 500 ಎಂಎಲ್ ಹಾಲಿಗೆ 30 ರೂ., ಒಂದು ಲೀಟರ್‌ಗೆ 61 ರೂಪಾಯಿಗೆ, ಸಮೃದ್ಧಿ ಹೆಸರಿನ ಗುಲಾಬಿ-ಬಿಳಿ ಬಣ್ಣದ ಪ್ಯಾಕೆಟ್‌ನ 500 ಎಂಎಲ್‌ಗೆ 33ರೂ., ಒಂದು ಲೀಟರ್‌ಗೆ 67ರೂ., 6 ಲೀಟರ್‌ಗೆ 402 ಹಾಗೂ ಸಂಪೂರ್ಣ ಹೆಸರಿನ ನೀಲಿ-ಬಿಳಿ ಬಣ್ಣದ ಪಾಕೆಟ್‌ನ 500 ಎಂಎಲ್‌ಗೆ 27 ರೂ., ಒಂದು ಲೀಟರ್‌ಗೆ 55 ರೂಪಾಯಿ ದರದಲ್ಲಿ ಮಾರಾಟ ಮಾಡುತ್ತಿದೆ. ನಾಲ್ಕು ಪ್ರಮಾಣದಲ್ಲಿ ಅಂದರೆ 160 ಎಂಎಲ್ ಹಾಲು 10 ರೂಪಾಯಿಗೆ, 500 ಎಂಎಲ್ ಹಾಲು 28 ರೂಪಾಯಿಗೆ, ಒಂದು ಲೀಟರ್ ಹಾಲು 56 ರೂಪಾಯಿಗೆ, 6 ಲೀಟರ್ ಹಾಲು 336 ರೂಪಾಯಿಗೆ ತಲುಪಿಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ವಿಭಾಗ