Stock market India: ರಾತ್ರೋರಾತ್ರಿ ಷೇರುಪೇಟೆಯಲ್ಲಿ 7 ಬದಲಾವಣೆ, ಡೊನಾಲ್ಡ್‌ ಟ್ರಂಪ್ ಪ್ರಮಾಣ ವಚನದಿಂದ ಬಿಟ್‌ ಕಾಯಿನ್‌ ದರದ ತನಕ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Stock Market India: ರಾತ್ರೋರಾತ್ರಿ ಷೇರುಪೇಟೆಯಲ್ಲಿ 7 ಬದಲಾವಣೆ, ಡೊನಾಲ್ಡ್‌ ಟ್ರಂಪ್ ಪ್ರಮಾಣ ವಚನದಿಂದ ಬಿಟ್‌ ಕಾಯಿನ್‌ ದರದ ತನಕ

Stock market India: ರಾತ್ರೋರಾತ್ರಿ ಷೇರುಪೇಟೆಯಲ್ಲಿ 7 ಬದಲಾವಣೆ, ಡೊನಾಲ್ಡ್‌ ಟ್ರಂಪ್ ಪ್ರಮಾಣ ವಚನದಿಂದ ಬಿಟ್‌ ಕಾಯಿನ್‌ ದರದ ತನಕ

Stock market India: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅಧಿಕಾರ ಸ್ವೀಕಾರ, ಗಿಫ್ಟ್‌ ನಿಫ್ಟಿ ಏರಿಳಿತ, ಡಾಲರ್‌ ದರ ಇಳಿಕೆ, ಕಚ್ಚಾ ತೈಲ ದರ, ಕ್ರಿಪ್ಟೊಕರೆನ್ಸಿ ಸೇರಿದಂತೆ ಅನೇಕ ವಿಷಯಗಳು ಭಾರತ ಮತ್ತು ಜಾಗತಿಕ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿವೆ.

ಮುಂಬೈ ಷೇರುಪೇಟೆ  (PTI Photo)
ಮುಂಬೈ ಷೇರುಪೇಟೆ (PTI Photo) (PTI)

Indian stock market: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅಧಿಕಾರ ಸ್ವೀಕರಿಸಿದ ಬಳಿಕ ಜಾಗತಿಕ ಮಾರುಕಟ್ಟೆಯು ಸಕಾರಾತ್ಮಕ ಪ್ರತಿಕ್ರಿಯೆ ನೀಡಿರುವುದರಿಂದ ಭಾರತದ ಷೇರುಪೇಟೆ (ನಿಫ್ಟಿ 50 ಮತ್ತು ಸೆನ್ಸೆಕ್ಸ್‌) ಇಂದು ಸಕಾರಾತ್ಮಕವಾಗಿ ವಹಿವಾಟು ಆರಂಭಿಸುವ ಸೂಚನೆ ಇದೆ. ಈಗಾಗಲೇ ಏಷ್ಯಾ ಮಾರುಕಟ್ಟೆಗಳು ಏರಿಕೆ ಕಂಡಿವೆ. ಅಮೆರಿಕದ ಸ್ಟಾಕ್‌ ಫ್ಯೂಚರ್‌ಗಳು ಕೂಡ ಸಕಾರಾತ್ಮಕವಾಗಿದೆ.

ಡೊನಾಲ್ಡ್‌ ಟ್ರಂಪ್‌ ಅವರು ಎರಡನೇ ಬಾರಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಪ್ಯಾರಿಸ್‌ ಹವಾಮಾನ ಒಪ್ಪಂದದಿಂದ ಅಮೆರಿಕವನ್ನು ಹೊರಗಿಡುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಬ್ಯಾಂಕಿಂಗ್‌ ಮತ್ತು ಲೋಹದ ಷೇರುಗಳ ನಾಗಾಲೋಟದಿಂದಾಗಿ ಸೋಮವಾರ ಭಾರತೀಯ ಷೇರುಪೇಟೆ ಏರಿಕೆ ಕಂಡಿತ್ತು. ನಿನ್ನೆ ಸೆನ್ಸೆಕ್ಸ್‌ 454.11 ಅಂಕ ಏರಿಕೆ ಕಂಡು 77,073.44 ಅಂಕಕ್ಕೆ ತಲುಪಿತ್ತು. ನಿಫ್ಟಿಯು 141.55 ಅಂಕ ಏರಿಕೆ ಕಂಡು 23,344.75 ಅಂಕ ತಲುಪಿತ್ತು.

"ಡೊನಾಲ್ಡ್‌ ಇಂದು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಏಷ್ಯಾ ಮತ್ತು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಕಂಡುಬಂದ ಆಶಾವಾದವು ಭಾರತದ ಷೇರುಪೇಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಬ್ಯಾಂಕಿಂಗ್ ಮತ್ತು ಟೆಲಿಕಾಂ ಷೇರುಗಳು ಚೇತರಿಕೆಯಲ್ಲಿ ಮುಂಚೂಣಿಯಲ್ಲಿವೆ. ಇದು ಕೇವಲ ಭಾವನಾತ್ಮಕ ಪ್ರಭಾವವಾಗಿದೆ. ಇದರೊಂದಿಗೆ ತೀವ್ರ ಚಂಚಲತೆಯ ಛಾಯೆ ಮುಂದುವರೆಯಲಿದೆ" ಎಂದು ಮೆಹ್ತಾ ಇಕ್ವಿಟೀಸ್ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ (ಸಂಶೋಧನೆ) ಪ್ರಶಾಂತ್ ತಾಪ್ಸೆ ಹೇಳಿದ್ದಾರೆ.

1. ಏಷ್ಯಾ ಮಾರುಕಟ್ಟೆಗಳು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳ ಬಗ್ಗೆ ಹೂಡಿಕೆದಾರರು ಸ್ಪಷ್ಟತೆಗಾಗಿ ಕಾಯುತ್ತಿದ್ದಾರೆ. ಈ ನಡುವೆ ಮಂಗಳವಾರ ಏಷ್ಯಾ ಮಾರುಕಟ್ಟೆಗಳು ಏರಿಕೆಯೊಂದಿಗೆ ವಹಿವಾಟು ಆರಂಭಿಸಿವೆ. ಜಪಾನ್‌ನ ನಿಕ್ಕಿ 225 ಅಂಕ ಅಂದರೆ, ಶೇ.0.52 ರಷ್ಟು ಏರಿಕೆ ಕಂಡರೆ, ಟಾಪಿಕ್ಸ್ ಶೇ.0.33 ರಷ್ಟು ಏರಿಕೆ ಕಂಡಿದೆ. ದಕ್ಷಿಣ ಕೊರಿಯಾದ ಕೋಸ್ಪಿ ಶೇ.0.97 ರಷ್ಟು ಏರಿಕೆ ಕಂಡಿದೆ. ಕೊಸ್ಡಾಕ್ ಶೇ.0.62 ರಷ್ಟು ಏರಿಕೆ ಕಂಡರೆ, ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕವು ಉತ್ತಮ ಏರಿಕೆ ದಾಖಲಿಸಿದೆ.

2. ಗಿಫ್ಟ್‌ ನಿಫ್ಟಿ- ಇಂದಿನ ವಹಿವಾಟು

ಗಿಫ್ಟ್ ನಿಫ್ಟಿ ಸುಮಾರು 23,410 ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು. ಇದು ನಿಫ್ಟಿ ಫ್ಯೂಚರ್‌ಗಳ ಹಿಂದಿನ ಮುಕ್ತಾಯಕ್ಕಿಂತ ಸುಮಾರು 10 ಪಾಯಿಂಟ್‌ ಏರಿಕೆಯಾಗಿದೆ. ಇದು ಭಾರತದ ಷೇರು ಮಾರುಕಟ್ಟೆಯ ಮಂದಗತಿಯ ಆರಂಭದ ಸೂಚನೆಯಾಗಿದೆ.

3. ವಾಲ್ ಸ್ಟ್ರೀಟ್

ನಿನ್ನೆ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ದಿನದ ಪ್ರಯುಕ್ತ ಷೇರು ಮಾರುಕಟ್ಟೆಗೆ ರಜೆ ಇತ್ತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ ನಂತರ ಯುಎಸ್ ಷೇರು ಫ್ಯೂಚರ್‌ಗಳು ಏರಿಕೆ ಕಂಡವು. ಎಸ್ & ಪಿ 500 ಶೇಕಡ 0.5 ಏರಿಕೆ ಕಂಡಿದೆ. ನಾಸ್ಡಾಕ್ 100 ಶೇಕಡ 0.6 ಏರಿಕೆ ಕಂಡಿವೆ. ಡೌ ಜೋನ್ಸ್ ಇಂಡಸ್ಟ್ರಿ ಸೂಚ್ಯಂಕ ಶೇಕಡ 0.5 ಏರಿಕೆ ಕಂಡಿವೆ.

4. ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರ

ಜನವರಿ 20 ಸೋಮವಾರದಂದು ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಮೆರಿಕನ್ನರಿಗೆ ಸಹಾಯ ಮಾಡುವ ಸಲುವಾಗಿ ಇತರ ದೇಶಗಳ ಮೇಲೆ ಸುಂಕಗಳು ಮತ್ತು ತೆರಿಗೆಗಳನ್ನು ವಿಧಿಸುವ ಭರವಸೆ ನೀಡಿದ್ದಾರೆ.

5. ಡಾಲರ್ ದರ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಸುಂಕಗಳನ್ನು ವಿಧಿಸುವುದನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ. ಇದರಿಂದ ಮಂಗಳವಾರ ಡಾಲರ್‌ ಮೌಲ್ಯ ಇಳಿಕೆ ಕಂಡಿದೆ.

6. ಇಂದಿನ ಬಿಟ್‌ಕಾಯಿನ್‌ ದರ

ಕ್ರಿಪ್ಟೋ ಪರವಾಗಿರುವ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಬಿಟ್‌ಕಾಯಿನ್ ಬೆಲೆಗಳು 109,000 ಡಾಲರ್‌ ಗಡಿಯನ್ನು ದಾಟಿ ಸಾರ್ವಕಾಲಿಕ ಗರಿಷ್ಠ ಮಟ್ಟ 109,114.88 ಡಾಲರ್‌ಗೆ ತಲುಪಿತ್ತು. ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಕಳೆದ 24 ಗಂಟೆಗಳಲ್ಲಿ ಶೇಕಡ 1.33ರಷ್ಟು ಏರಿಕೆ ಕಂಡಿದೆ.

7. ತೈಲ ದರ

ಇಂದು ಕಚ್ಚಾ ತೈಲ ಬೆಲೆಗಳು ಕಡಿಮೆ ದರದಲ್ಲಿ ವಹಿವಾಟು ನಡೆಸಿವೆ. ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ ದರ ಶೇಕಡ 0.32ರಷ್ಟು ಕುಸಿದು 79.89 ಡಾಲರ್‌ಗೆ ತಲುಪಿದೆ. ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲ ದರ ಶೇಕಡ 1.46ರಷ್ಟು ಕುಸಿದು 76.74 ಡಾಲರ್‌ಗೆ ತಲುಪಿದೆ. ಇದು ರಾತ್ರೋರಾತ್ರಿ ಷೇರುಪೇಟೆಯ ಮೇಲೆ ಪರಿಣಾಮ ಬೀರಿದ ಏಳು ಪ್ರಮುಖ ಬದಲಾವಣೆಗಳಾಗಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.