7th Pay Commission: ಇದೇ ತಿಂಗಳು 7ನೇ ವೇತನ ಆಯೋಗ ಜಾರಿ ಸಾಧ್ಯತೆ, ಚಾಲ್ತಿಯಲ್ಲಿದೆ ಬೇಸಿಕ್ ಪೇ ಹೆಚ್ಚಾಗಬಹುದೆಂಬ ಚರ್ಚೆ
Basic Pay Hike; ಕೇಂದ್ರ ನೌಕರರು ಜುಲೈ ತಿಂಗಳಲ್ಲಿ ಜಾರಿಯಾಗಬೇಕಾದ ಡಿಎ ಹೆಚ್ಚಳ ಕುರಿತು ಸದ್ಯವೇ ನಿರ್ಧಾರವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಅಂದರೆ, ಇದೇ ತಿಂಗಳು 7ನೇ ವೇತನ ಆಯೋಗ ಜಾರಿ ಸಾಧ್ಯತೆ ಇದೆ. ಹೀಗಾಗಿ, ಬೇಸಿಕ್ ಪೇ ಹೆಚ್ಚಾಗಬಹುದೆಂಬ ಚರ್ಚೆ ಚಾಲ್ತಿಯಲ್ಲಿದೆ.
ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಪ್ರತಿ ವರ್ಷವೂ ತುಟ್ಟಿ ಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ಅನ್ನು ನೀಡುತ್ತದೆ. ಇದನ್ನು ವರ್ಷಕ್ಕೆ ಎರಡು ಬಾರಿ ಅಂದರೆ ಜನವರಿ ಮತ್ತು ಜುಲೈನಿಂದ ಜಾರಿಗೆ ಬರುವಂತೆ ಪರಿಷ್ಕರಿಸುವುದು ವಾಡಿಕೆ. ಈ ಸಲ ಸೆಪ್ಟೆಂಬರ್ ಮೂರನೇ ವಾರದಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ (ಡಿಎ) ಶೇಕಡ 3 ರಿಂದ 4ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರವು 7ನೇ ವೇತನ ಆಯೋಗದ ಶಿಫಾರಸ್ಸಿನ ಪ್ರಕಾರವೇ ವರ್ಷಕ್ಕೆ ಎರಡು ಬಾರಿ ಡಿಎ ಹೆಚ್ಚಳ ಮಾಡುತ್ತಿದೆ. ಜನವರಿಯಲ್ಲಿ 4 ಪ್ರತಿಶತ ನೀಡಿದ ನಂತರ, ಡಿಎ ಶೇಕಡ 50ರ ಹಂತ ತಲುಪಿದೆ. ಈಗ ಜುಲೈ ತಿಂಗಳ ಡಿಎ ಸೆಪ್ಟೆಂಬರ್ ತಿಂಗಳಿನಿಂದ ಜಾರಿಯಾಗಲಿದೆ. ಆದಾಗ್ಯೂ, ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವು ಶೇಕಡಾ ಮೂರರಷ್ಟು ಇರಬಹುದು ಎಂಬ ಅಂದಾಜಿನಲ್ಲಿದ್ದಾರೆ ನೌಕರರು ಮತ್ತು ಪಿಂಚಣಿದಾರರು. ಈ ಸಲದ ತುಟ್ಟಿಭತ್ಯೆ ಜಾರಿಯಾದರೆ ಒಟ್ಟು ತುಟ್ಟಿ ಭತ್ಯೆ ಪ್ರಮಾಣ ಶೇ.53ಕ್ಕೆ ತಲುಪಲಿದೆ. ಜುಲೈ ತಿಂಗಳಲ್ಲಿ ಜಾರಿಯಾಗಬೇಕಾದ ಡಿಎ ಹೆಚ್ಚಳ ಕುರಿತು ಸೆಪ್ಟೆಂಬರ್‌ನಲ್ಲಿ ನಿರ್ಧಾರವಾಗುವ ನಿರೀಕ್ಷೆಯಿದೆ. ಇದು ಪೂರ್ವಾನ್ವಯವಾಗುವಂತೆ ಜಾರಿಯಾಗುತ್ತದೆ.
ತುಟ್ಟಿ ಭತ್ಯೆ ಬೇಸಿಕ್ ಪೇನಲ್ಲಿ ವಿಲೀನವಾಗುವುದೇ
ತುಟ್ಟಿ ಭತ್ಯೆ ಅಥವಾ ಡಿಎ 50 ಪ್ರತಿಶತವನ್ನು ಮೀರಿದ ಸಂದರ್ಭವಾದರೂ ತುಟ್ಟಿಭತ್ಯೆಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಲಾಗುವುದಿಲ್ಲ ಎಂಬುದು ಪರಿಣತರ ಅಭಿಪ್ರಾಯ. ಇದು 8ನೇ ವೇತನ ಆಯೋಗದ ರಚನೆಯ ತನಕವೂ ಮುಂದುವರಿಯುತ್ತದೆ. ವಿಲೀನದ ಬದಲಿಗೆ ಅಸ್ತಿತ್ವದಲ್ಲಿರುವ ಡಿಎ 50 ಪ್ರತಿಶತವನ್ನು ಮೀರಿದರೆ, ಎಚ್‌ಆರ್‌ಎ ಸೇರಿದಂತೆ ಭತ್ಯೆಗಳನ್ನು ಹೆಚ್ಚಿಸಲು ನಿಬಂಧನೆಗಳಿವೆ. ಡಿಎ ಬೇಸಿಕ್ ಪೇ ಜೊತೆಗೆ ವಿಲೀನವಾಗುವುದಿಲ್ಲ. 7ನೇ ವೇತನ ಆಯೋಗದಲ್ಲಿ ಅಂತಹ ಯಾವುದೇ ಪ್ರಸ್ತಾವನೆಗಳಿಲ್ಲ ಎಂದು ಹಲವರು ಹೇಳುತ್ತಿದ್ದಾರೆ.
ಆದಾಗ್ಯೂ, ಹಿಂದಿನ ಇತಿಹಾಸ ಗಮನಿಸುವುದಾದರೆ, 2004 ರಲ್ಲಿ, ತುಟ್ಟಿಭತ್ಯೆ ಅಥವಾ ಡಿಎ 50 ಪ್ರತಿಶತವನ್ನು ತಲುಪಿದಾಗ, ಅಂದು ಡಿಎ ಅನ್ನು ಮೂಲ ವೇತನಕ್ಕೆ ಸೇರಿಸಲಾಯಿತು. ತುಟ್ಟಿಭತ್ಯೆ ಎಂದು ಕರೆಯಲಾಯಿತು. ಆದರೆ ನಂತರದ ವೇತನ ಆಯೋಗವು ಅಂತಹ ಶಿಫಾರಸುಗಳಿಂದ ದೂರ ಉಳಿಯಿತು. ಹಾಗಾಗಿ ಈಗಿನ ನಿರ್ಧಾರವೂ ಕೇಂದ್ರ ಸರ್ಕಾರದ ಮೇಲೆಯೇ ಅವಲಂಬಿತವಾಗಿದೆ ಎನ್ನುತ್ತಾರೆ ತಜ್ಞರು.
ಇತ್ತೀಚೆಗೆ ನಡೆದ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಹೇಳಿದ ಪ್ರಕಾರ, ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಅಮಾನತುಗೊಳಿಸಲಾದ ಡಿಎ ಮತ್ತು ಡಿಆರ್‌ಗಾಗಿ ಸರ್ಕಾರವು 18 ತಿಂಗಳ ಬಾಕಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿಲ್ಲ. ಕೋವಿಡ್ ಸಮಯದಲ್ಲಿ ಏಕಾಕಿಯಾಗಿ ಹಿಡಿದಿಟ್ಟ ಕೇಂದ್ರ ಸರ್ಕಾರಿ ನೌಕರರು/ಪಿಂಚಣಿದಾರರ 18 ತಿಂಗಳ ಬಾಕಿ/ಪರಿಹಾರವನ್ನು ಬಿಡುಗಡೆ ಮಾಡಲು ಸರ್ಕಾರ ಪರಿಗಣಿಸುತ್ತಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದರು.
ಕೋವಿಡ್-19 ಅವಧಿಯಲ್ಲಿ ಕೇಂದ್ರ ಸರ್ಕಾರಿ ನೌಕರರು/ಪಿಂಚಣಿದಾರರಿಗೆ 2020ರ ಜನವರಿ 1, ಜುಲೈ 1 ಮತ್ತು 2021ರ ಜನವರಿ 1 ಹೀಗೆ ಮೂರು ಕಂತುಗಳ ಡಿಎ/ಡಿಆರ್ ಅನ್ನು ಸ್ಥಗಿತಗೊಳಿಸಿತ್ತು. ಸರ್ಕಾರದ ಹಣಕಾಸು ವ್ಯವಹಾರಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿತ್ತು.
8ನೇ ವೇತನ ಆಯೋಗ ರಚನೆ ಯಾವಾಗ?
ಕೇಂದ್ರ ಸರ್ಕಾರಿ ನೌಕರರ ಸಂಘಗಳು 8ನೇ ವೇತನ ಆಯೋಗ ರಚಿಸುವಂತೆ ಹಲವು ದಿನಗಳಿಂದ ಬೇಡಿಕೆ ಸಲ್ಲಿಸುತ್ತಿವೆ. ಆದರೆ ಇದುವರೆಗೂ 8ನೇ ವೇತನ ಆಯೋಗ ರಚನೆ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಮುಂದಿಟ್ಟಿಲ್ಲ. ಜುಲೈ 30 ರಂದು ರಾಜ್ಯಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ನೀಡಿದ ಲಿಖಿತ ಉತ್ತರದಲ್ಲಿ 2024ರ ಜೂನ್‌ನಲ್ಲಿ 8 ನೇ ಕೇಂದ್ರ ವೇತನ ಆಯೋಗ ರಚಿಸುವಂತೆ ಎರಡು ಪ್ರಾತಿನಿಧ್ಯಗಳನ್ನು ಸ್ವೀಕರಿಸಲಾಗಿದೆ. ಆದರೆ ಅಂತಹ ಯಾವುದೇ ಪ್ರಸ್ತಾವನೆಯು ಪ್ರಸ್ತುತ ಪರಿಗಣನೆಯಲ್ಲಿಲ್ಲ ಎಂದು ಹೇಳಿದ್ದರು.
7 ನೇ ವೇತನ ಆಯೋಗವನ್ನು 2014ರ ಫೆಬ್ರವರಿಯಲ್ಲಿ ರಚಿಸಲಾಯಿತು. ಇದರ ಶಿಫಾರಸುಗಳು 2016ರ ಜನವರಿ 1 ರಿಂದ ಜಾರಿಗೆ ಬಂದವು. ಸಾಮಾನ್ಯವಾಗಿ, ಕೇಂದ್ರ ಸರ್ಕಾರವು ಸರ್ಕಾರಿ ನೌಕರರ ವೇತನವನ್ನು ಪರಿಷ್ಕರಿಸಲು ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ಸ್ಥಾಪಿಸುತ್ತದೆ. ಆದರೆ ಈಗ 8ನೇ ವೇತನ ಆಯೋಗ ರಚನೆಯಾದರೆ 2026ರಲ್ಲೇ ಜಾರಿಯಾಗಬೇಕು ಎಂಬುದು ಕಾರ್ಮಿಕ ಸಂಘಟನೆಗಳ ಆಗ್ರಹ.